Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಸ್ತಂತು ಸಂಸಾರ
      • ಅಶೋಕ್‌ ಕುಮಾರ್‌ ಎ. | Jul 10, 2011

        ಜಿಯೋಕ್ಯಾಷಿಂಗ್‌

        ಅಂತರ್ಜಾಲಿಗರು ಹೊರಜಗತ್ತಿನಿಂದ ದೂರವುಳಿಯದೆ ಆಡಬಹುದಾದ ಆಟವೇ ಜಿಯೋಕ್ಯಾಶಿಂಗ್‌. ಇದರಲ್ಲಿ ಉತ್ಸಾಹಿಗಳು ಸಣ್ಣ ಉಡುಗೊರೆಯನ್ನು ಒಂದು ಪ್ಲಾಸ್ಟಿಕ್‌ ಡಬ್ಬದಲ್ಲಿ ತುಂಬಿ, ಅವಿತಿಡುತ್ತಾರೆ. ಇದರ ಜತೆಗೆ ಈ ಸ್ಥಳದ, ಅಕ್ಷಾಂಶ-ರೇಖಾಂಶಗಳ ಮಾಹಿತಿಯೂ ಇರುತ್ತದೆ. ಈ ಸ್ಥಾನದ ಮಾಹಿತಿಯನ್ನು ಆನ್‌ಲೈನಿನ ನಿಗದಿತ ತಾಣದಲ್ಲೂ ದಾಖಲಿಸುತ್ತಾರೆ. ಜಿಪಿಎಸ್‌ ಸಾಧನದ ಮೂಲಕ ಈ ಸ್ಥಾನದ ಮಾಹಿತಿಯನ್ನವರು ಕಂಡು ಕೊಳ್ಳುತ್ತಾರೆ. ಇಲ್ಲಿ ಅವಿತಿರಿಸುವ ಡಬ್ಬವೇ ಜಿಯೋ ಕ್ಯಾಷ್‌. ಆಟದಲ್ಲಿ ಭಾಗವಹಿಸಲಿಚ್ಛಿಸುವವರು, ಅಂತರ್ಜಾಲದಲ್ಲಿ ನೋಂದಾಯಿಸಿಕೊಂಡು, ತಾವಿರುವ ಜಾಗದ ಸಮೀಪವಿರುವ ಜಿಯೋಕ್ಯಾಷ್‌ಗಳ ಸ್ಥಾನವನ್ನರಿತುಕೊಂಡು, ಅವುಗಳನ್ನು ಹುಡುಕ ಬಹುದು. ಈ ಹುಡುಕಾಟಕ್ಕೆ ಅವರ ಸ್ಮಾರ್ಟ್‌ ಫೋನುಗಳ ಜಿಪಿಎಸ್‌ ಸೌಲಭ್ಯ ಸಹಾಯ ಮಾಡುತ್ತದೆ ಎನ್ನುವುದು ಸ್ಪಷ್ಟ. ಅವನ್ನು ಪತ್ತೆ ಮಾಡಿದರೆ, ಅದನ್ನು ಡಬ್ಬದಲ್ಲಿರುವ ಕಾಗದದಲ್ಲಿ ಬರೆದಿಡುವ ಜತೆಗೆ, ಆನ್‌ಲೈನಿನಲ್ಲೂ ದಾಖಲಿಸಬೇಕು.ಉಡುಗೊರೆಯನ್ನು ಪಡೆಯುವುದು ಬಿಡುವುದು ಆಟಗಾರರಿಗೆ ಬಿಟ್ಟದ್ದು. ಬೇರೆ ಉಡುಗೊರೆಯನ್ನು ಇಡಲೂಬಹುದು. ಮಂಗಳೂರಿನ ಉದಯವಾಣಿ ಓದುಗ ಲಕ್ಷ್ಮೀನಾರಾಯಣ ಕಾಮತ್‌ ಅಮ್ಮೆಂಬಳ ಅವರು ಜಿಯೋಕ್ಯಾಷಿಂಗ್‌ ಉತ್ಸಾಹಿ. ಓದುಗರು geocaching.com ನೋಡಿ, ಇದರಲ್ಲಿ ಭಾಗವಹಿಸಲು ಕೋರಿದ್ದಾರೆ.


        ಚಾಟಿಂಗ್‌ ಫೇಸ್‌ಬುಕ್‌ ಉತ್ತರ

        ಕಳೆದವಾರ ಗೂಗಲ್‌ ಪ್ಲಸ್‌ ಸಾಮಾಜಿಕ ಜಾಲ ತಾಣವನ್ನು ಆರಂಭಿಸಿ, ಫೇಸ್‌ಬುಕ್‌ಗೆ ಸವಾಲೊಡ್ಡಲು ಮತ್ತೂಂದು ಪ್ರಯತ್ನ ಆರಂಭಿಸಿತು. ಈ ಸವಾಲಿನ ಬೆನ್ನ ಹಿಂದೆಯೇ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ವಿಡಿಯೋ ಚಾಟಿಂಗ್‌ ಸೇವೆ ಒದಗಿಸಲಾರಂಭಿದೆ. ಇದನ್ನು ಸ್ಕೈಪ್‌ ಕಂಪೆನಿಯ ಸಹಭಾಗಿತ್ವದಲ್ಲಿ ನೀಡು ತ್ತಿದೆ. ಹೀಗಾಗಿ ಸ್ಕೈಪ್‌ ಬಳಕೆದಾರರು ಫೇಸ್‌ಬುಕ್‌ ಸದಸ್ಯರಾಗಿಲ್ಲವಾದರೆ ಈಗ ಹೊಸತಾಗಿ ಸೇರುವ ಸಾಧ್ಯತೆಯೂ ಇದೆ. ಫೇಸ್‌ಬುಕ್‌ ತನ್ನ ಬಳಕೆದಾರರನ್ನು ತನ್ನ ತಾಣದಲ್ಲಿ ಹೆಚ್ಚು ಹೊತ್ತು ನಿಲ್ಲುವಂತೆ ಮಾಡುವ, ಆಟ, ಮನೋರಂಜನೆ ಸೇವೆಗಳನ್ನು ಒದಗಿಸಿ, ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲೂ ಶಕ್ತವಾಗುತ್ತಿದೆ. ಗೂಗಲ್‌ ಪ್ಲಸ್‌ನಲ್ಲಿಯೂ ವಿಡಿಯೋ ಚಾಟಿಂಗ್‌ ಸೌಕರ್ಯವಿದೆ. ಮಾತ್ರ ವಲ್ಲ, ಅದು ಫೇಸ್‌ಬುಕ್‌ನ ವಿಡಿಯೋ ಚಾಟ್‌ಗಿಂತ ಹೆಚ್ಚು ಅನುಕೂಲಕರವೂ ಹೌದು- ಹೇಗೆನ್ನುತ್ತೀರಾ? ಅಲ್ಲಿ ಹತ್ತು ಮಂದಿ ಏಕಕಾಲದಲ್ಲಿ ವಿಡಿಯೋ ಚಾಟಿಂಗ್‌ ಮಾಡಬಹುದು. ಗೂಗಲ್‌ ಪ್ಲಸ್‌ ಅದಕ್ಕೆ ಹ್ಯಾಂಗೌಟ್‌ ಎಂಬ ಹೆಸರನ್ನೂ ನೀಡಿದೆ. ಫೇಸ್‌ಬುಕ್‌ನ ವಿಡಿಯೋ ಚಾಟಿಂಗ್‌ನಲ್ಲಿ ಸದ್ಯಕ್ಕಂತೂ ಈರ್ವರೇ ಮಾತನಾಡಲು ಬರುತ್ತದೆ. ಸ್ಕೈಪ್‌ ಕಂಪೆನಿಗೂ ಈ ಪಾಲುದಾರಿಕೆಯಿಂದ ಲಾಭವಿದೆ. ಅಂದ ಹಾಗೆ ಮೈಕ್ರೋಸಾಫ್ಟ್ ಸ್ಕೈಪನ್ನು ಖರೀದಿಸುವುದರಲ್ಲಿದೆ. ಫೇಸ್‌ಬುಕ್‌ನಲ್ಲೂ ಮೈಕ್ರೋ ಸಾಫ್ಟ್ ಪಾಲುದಾರಿಕೆ ಹೊಂದಿದೆ.

        ಮೈಕ್ರೋಸಾಫ್ಟ್, ನೋಕಿಯಾದ ಜತೆ ಹೊಸತಾಗಿ ಒಪ್ಪಂದ ಮಾಡಿ ತನ್ನ ಆಪರೇಟಿಂಗ್‌ ವ್ಯವಸ್ಥೆಯನ್ನು ನೋಕಿಯಾ ಫೋನ್‌ ಸೆಟ್‌ಗಳಲ್ಲಿ ಬಳಸಲು ಉಪಾಯ ಮಾಡಿದೆ. ಇವೆಲ್ಲವೂ ಈ ಕಂಪೆನಿಗಳ ಪರಸ್ಪರ ಸಹಕಾರ, ಸಹಭಾಗಿತ್ವಕ್ಕೆ ಕಾರಣವಾಗಲಿದೆ. ಗೂಗಲ್‌ ಈ ಅತಿರಥ-ಮಹಾರಥರುಗಳ ಒಗ್ಗಟ್ಟಿನ ಬಲದ ಮುಂದೆ ಸ್ಪರ್ಧಿಸಿ ಏಗುವಷ್ಟು ಪ್ರಬಲವಾಗಿದೆಯೇ ಎನ್ನುವುದು ಕುತೂಹಲದ ವಿಷಯ.

        ಫೇಸ್‌ಬುಕ್‌ ಹಿಂದಿಕ್ಕಲು ಗೂಗಲ್‌ ಪ್ಲಸ್‌ ಏನು ಮಾಡಬಹುದು?

        ಅಂದಹಾಗೆ ಗೂಗಲ್‌ ಪ್ಲಸ್‌ ಸಂಗೀತದ ಮೂಲಕವೇ ಜನಾಕರ್ಷಣೆ ಹೆಚ್ಚಿಸಿಕೊಳ್ಳಬಹುದು ಎಂಬ ಸಲಹೆಗಳು ಬರುತ್ತಿವೆ. ಗೂಗಲ್‌ ಪ್ಲಸ್‌ನ ಹ್ಯಾಂಗೌಟ್‌ ಸಂವಾದದಲ್ಲಿ  ಸಂಗೀತದ ಆಲ್ಬಮು ಗಳನ್ನು ಜತೆಗೇ ಆಲಿಸುವ ಸವಲತ್ತನ್ನು ನೀಡಲು ಹೆಚ್ಚು ಕಷ್ಟವಿಲ್ಲ. ಹೇಗೂ ಯುಟ್ಯೂಬಿನ ಅಪಾರ ಸಂಗೀತ ಮುದ್ರಿಕೆಗಳ ದೊಡ್ಡ ಸಂಗ್ರಹ ಗೂಗಲ್‌ನಲ್ಲಿದೆ. ಹ್ಯಾಂಗೌಟ್‌ನ್ನು ಬಳಸುವವರು, ಜತೆಗೂಡಿ ಸಂಗೀತ ರಚಿಸಿ, ಯುಟ್ಯೂಬ್‌ಗ ಅಪ್‌ಲೋಡ್‌ ಮಾಡುವ ಸೌಕರ್ಯ ನೀಡಲೂ ಬಹುದು. ಗೂಗಲ್‌ನ ಆಂಡ್ರಾಯಿಡ್‌ ಅಪ್ಲಿಕೇಶನ್‌ಗಳ ಮೂಲಕ ಗೂಗಲ್‌ ಪ್ಲಸ್‌ನ್ನು ಸ್ಮಾರ್ಟ್‌ಫೋನುಗಳಲ್ಲಿ ಹೆಚ್ಚು ಜನಪ್ರಿಯ ವಾಗಿಸಿ, ಫೇಸ್‌ಬುಕ್‌ಗೆ  ಸವಾಲೆಸೆಯಬಹುದು. ಇಲ್ಲಂತೂ ಫೇಸ್‌ಬುಕ್‌ ಹಿನ್ನಡೆಯಲ್ಲಿದೆ. ಗೂಗಲ್‌ ಮ್ಯೂಸಿಕ್‌ ಬೀಟಾ ಎನ್ನುವ ಸೇವೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಗೂಗಲ್‌, ಅದನ್ನು ಗೂಗಲ್‌ ಪ್ಲಸ್‌ನಲ್ಲಿ ನವೀನ ಸೇವೆಗಳನ್ನು ಶುರು ಮಾಡಲು ಬಳಸುವ ಸಾಧ್ಯತೆಗಳ ಕಡೆಗೂ ಗಮನ ಹರಿಸಬಹುದು.

        ಕಾಣಲಾಗದವರಿಗೆ ಕನ್ನಡಕ

        ದೃಷ್ಟಿದೋಷ ಇರುವವರಿಗೆ ಸಹಾಯ ಮಾಡುವ ಕನ್ನಡಕ ಬಂದಿದೆ. ಇದರಲ್ಲಿ ಕನ್ನಡಕಕ್ಕೆ ಕ್ಯಾಮರಾ ಮತ್ತು ಮೈಕ್ರೋಕಂಪ್ಯೂಟರ್‌ ಅಳವಡಿಸಲಾಗಿದೆ. ಕನ್ನಡಕದ ಒಳಭಾಗದಲ್ಲಿ ನೂರಾರು ಎಲ್‌ಇಡಿ ದೀಪಗಳಿವೆ. ಅಡೆತಡೆಗಳಿದ್ದರೆ ದೀಪಗಳು ಪ್ರಖರವಾಗಿ ಬೆಳಗಿ ವ್ಯಕ್ತಿಗೆ ಸೂಚನೆ ಸಿಗುತ್ತದೆ.

        ತುಷಾರ: ವಾರ್ಷಿಕ  ಚಂದಾ ಗೆಲ್ಲಿ!

        ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ, ತುಷಾರ ಮಾಸಪತ್ರಿಕೆಯ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ನಿವೃತ್ತ ಬ್ಯಾಂಕ್‌ ಅಧಿಕಾರಿ ಎ. ಎಸ್‌. ಕಲ್ಲೂರಾಯ,ಅಂಬಲಪಾಡಿ.
        * ಫೇಸ್‌ಬುಕ್‌ ಅಥವಾ ಗೂಗಲ್‌ಪ್ಲಸ್‌ ತಾಣದಲ್ಲಿ ಉದಯವಾಣಿಯ ಬಗ್ಗೆ ವಿಶೇಷವನ್ನೇನಾದರೂ ತಮ್ಮ ಬಳಗದ ಜತೆ ಹಂಚಿಕೊಳ್ಳಿ. ಇದರ ಮಾಹಿತಿ ನೀಡಿ. ಅತ್ಯುತ್ತಮವಾದದ್ದಕ್ಕೆ ಬಹುಮಾನ.

        (ಉತ್ತರ nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ: Nಖ39 ನಮೂದಿಸಿ.)
        ಕಳೆದ ವಾರದ ಬಹುಮಾನಿತ ಉತ್ತರ:

        * ಆನ್‌ಲೈನ್‌ ಮೌಲ್ಯಮಾಪನ ಅಳವಡಿಸಿ, ಸುದ್ದಿ ಯಲ್ಲಿರುವ ವಿಶ್ವವಿದ್ಯಾಲಯ ಬೆಂಗಳೂರು ವಿವಿ.

        * ಹೊಸ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ, ಮೌಲ್ಯಮಾಪಕರಿಗೆ ಕಳುಹಿಸಲಾಗು ತ್ತದೆ. ಅಂಕಗಳನ್ನು ನೀಡುವಾಗ, ಪ್ರಶ್ನೆಗೆ ನೀಡಿದ ಅಂಕವು ನಿಗದಿತ ಅಂಕವನ್ನು ಮೀರದಂತೆ ಪರೀಕ್ಷಿಸುವ ವ್ಯವಸ್ಥೆಯಿದೆ. ಅಂಕಗಳನ್ನು ಕಂಪ್ಯೂಟರೇ ಕೂಡಿಸಿ ಉತ್ತರಪತ್ರಿಕೆಯಲ್ಲಿ ದಾಖಲಿಸುತ್ತದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು) ಕೂಡ ಇದೇ ರೀತಿ ಮೌಲ್ಯಮಾಪನ ಮಾಡಿಸುತ್ತಿದೆ. ಉತ್ತರಿಸಿ, ಬಹುಮಾನ ಪಡೆದವರು ಪ್ರಶಾಂತ್‌. ಅಭಿನಂದನೆಗಳು.

        ಪ್ರತಿಕ್ರಿಯಿಸಿ: feedback@manipalmedia.com


      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009-2010 Udayavani.All rights reserved.
      • Designed & Hosted By 4cplus