Udayavani | Jul 31, 2011
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ವಿದ್ಯಮಾನಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯೊಂದಿಗೆ ಮತ್ತೂಂದು ತಿರುವು ಪಡೆದುಕೊಂಡಿದ್ದು, ಪರ್ಯಾಯ ವ್ಯವಸ್ಥೆಯ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.
ಬಿಜೆಪಿ ಹೈಕಮಾಂಡ್‌ಗೆ ಕೊಟ್ಟ ಮಾತಿನಂತೆ ಬಿ.ಎಸ್. ಯಡಿಯೂರಪ್ಪ ಭಾನುವಾರ ಮಧ್ಯಾಹ್ನ 4 ಗಂಟೆಗೆ ತಮ್ಮ ಬೆಂಬಲಿಗರ ಜತೆ ರಾಜಭವನಕ್ಕೆ ನಡಿಗೆಯ ಮೂಲಕ ಆಗಮಿಸಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ತಕ್ಷಣವೇ ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು ಪರ್ಯಾಯ ವ್ಯವಸ್ಥೆಯಾಗುವ ತನಕ ತಮ್ಮ ಸಂಪುಟದ ಜತೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಸೂಚಿಸಿದರಲ್ಲದೇ, ಆ ಕುರಿತ ಅಧಿಸೂಚನೆಯನ್ನು ಯಡಿಯೂರಪ್ಪ ಗುಂಪು ರಾಜಭವನದಿಂದ ಹೊರ ಬರುವ ವೇಳೆಗೆ ಹೊರಡಿಸಿದರು. ಇದರಿಂದಾಗಿ ಯಡಿಯೂರಪ್ಪ ಈಗ ಹಂಗಾಮಿ ಮುಖ್ಯಮಂತ್ರಿಯಾದರು.
ಆಷಾಡಮಾಸ ಶನಿವಾರದ ಅಮಾವಾಸ್ಯೆಯೊಂದಿಗೆ ಮುಕ್ತಾಯವಾಗಿ ಆರಂಭವಾದ ಶ್ರಾವಣ ಮಾಸದ ಮೊದಲ ದಿನ ಯಡಿಯೂರಪ್ಪ ತಮ್ಮ ರಾಜೀನಾಮೆಯನ್ನು ಬಿಜೆಪಿ ಹೈಕಮಾಂಡ್‌ಗೆ ಮಾತು ಕೊಟ್ಟ ರೀತಿಯಲ್ಲಿಯೇ ಸಲ್ಲಿಸಿದರು. ಪಕ್ಷದ ಹೈಕಮಾಂಡ್‌ಗೆ ಹಾಕಿದ್ದ ಯಾವುದೇ ಷರತುಗಳು ಈಡೇರದಿದ್ದರೂ ರಾಜೀನಾಮೆ ನೀಡಿರುವುದರಿಂದಾಗಿ ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆ ಏನಾಗಿರುತ್ತದೆ ಎಂಬುದು ಈಗ ಕುತೂಹಲದ ಸಂಗತಿ.
ಯಡಿಯೂರಪ್ಪ ಇಂದು ಮಧ್ಯಾಹ್ನ 2.30ಕ್ಕೆ ರಾಜೀನಾಮೆ ಸಲ್ಲಿಸಬೇಕಾಗಿತ್ತು. ಆದರೆ ತಮ್ಮ ಷರತ್ತುಗಳಿಗೆ ಹೈಕಮಾಂಡ್ ಮಣಿದು ಉತ್ತರಾಧಿಕಾರಿಯನ್ನು ಘೋಷಿಸಲಿದೆ ಎಂಬ ನಿರೀಕ್ಷೆಯಲ್ಲಿಯೇ ಇದ್ದುದರಿಂದ 4 ಗಂಟೆಯ ತನಕ ರಾಜಭವನದತ್ತ ಬರಲಿಲ್ಲ. ಆದರೆ ಹೈಕಮಾಂಡ್ ಮೊದಲು ರಾಜೀನಾಮೆ ನೀಡಿ ನಂತರ ಮಾತನಾಡುವಂತೆ ಬಿಗಿ ಪಟ್ಟು ಹಿಡಿದಿದ್ದರಿಂದ ಯಡಿಯೂರಪ್ಪ 3.45ರ ನಂತರ ರಾಜಭವನದತ್ತ ಹೆಜ್ಜೆ ಹಾಕಿದರು.
ಮಧ್ಯಾಹ್ನ 4 ಗಂಟೆಯ ವೇಳೆಗೆ ರಾಜಭವನಕ್ಕೆ 70ಕ್ಕೂ ಹೆಚ್ಚು ಶಾಸಕರ ಜತೆ ಆಗಮಿಸಿದ ಯಡಿಯೂರಪ್ಪ ಕೇವಲ 10 ನಿಮಿಷದಲ್ಲಿ ರಾಜೀನಾಮೆ ನೀಡಿ ಹೊರ ಬಂದರು. ನಂತರ ರಾಜಭವನದ ಎದುರು ಪತ್ರಿಕಾ ಹೇಳಿಕೆಯನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಓದಿ ಅಲ್ಲಿಂದ ತೆರಳಿದರು.
ಮುಂದಿನ ಮುಖ್ಯಮಂತ್ರಿ ರೇಸ್‌ನಲ್ಲಿ ಒಬ್ಬರಾದ ಸಂಸದ ಡಿ.ವಿ. ಸದಾನಂದಗೌಡ, ಸಚಿವರಾದ ಡಾ. ವಿ.ಎಸ್. ಆಚಾರ್ಯ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಎಂ.ಪಿ. ರೇಣುಕಾಚಾರ್ಯ, ಕೃಷ್ಣಪಾಲೇಮಾರ್, ಸಿ.ಸಿ. ಪಾಟೀಲ್, ರೇವೂನಾಯಕ ಬೆಳಮಗಿ, ಸಿ.ಎಂ. ಉದಾಸಿ, ಉಮೇಶ್‌ಕತ್ತಿ, ವಿ. ಸೋಮಣ್ಣ, ಶಾಸಕರಾದ ಎಂ. ಶ್ರೀನಿವಾಸ, ಮಾಡಾಳ್ ವಿರೂಪಾಕ್ಷಪ್ಪ, ಎಸ್.ಆರ್. ವಿಶ್ವನಾಥ್, ಬೇಳೂರು ಗೋಪಾಲಕೃಷ್ಣ, ನೆಹರೂ ಓಲೇಕಾರ್, ಹೇಮಚಂದ್ರ ಸಾಗರ್, ಹಾಲಪ್ಪ, ಸಂಸದ ಜಿ.ವಿ. ಸಿದ್ದೇಶ್ವರ್ ಹಾಗೂ ಇತರರು ಯಡಿಯೂರಪ್ಪರ ಜತೆಗಿದ್ದರು.