Udayavani | Jul 31, 2011
ಯಡ್ಡಿ-ಅನಂತ್ ಕಗ್ಗಂಟು
ಸದಾನಂದ ಗೌಡ V/ ಜಗದೀಶ್ ಶೆಟ್ಟರ್
- ಮುಂದಿನ ಸಿಎಂಗೆ ಉಭಯ ಬಣಗಳ ಬಿಗಿಪಟ್ಟು
- ಸದಾನಂದಗೌಡರಿಗೆ ಯಡ್ಡಿ ಬಣ ಹಠ
- ಶೆಟ್ಟರ್‌ಗೆ ಅನಂತ್ ಬಣದ ಪಣ
- 2 ಡಿಸಿಎಂ ಸ್ಥಾನ ನೀಡಿದರೂ ಬೇಡವೆಂದ ಅನಂತ್ ಬಣ
- ಸದಾನಂದಗೌಡ ಪರ ಹೈಕಮಾಂಡ್ ಒಲವು
- ಮಂಗಳವಾರ ಒಮ್ಮತದ ಅಭ್ಯರ್ಥಿ ಆಯ್ಕೆ ಸಂಭವ
- ಮುಂದಿನ ಸಿಎಂ ಆಯ್ಕೆ ದೆಹಲಿಗೆ ಸ್ಥಳಾಂತರ
- ಈಗ ಕಾಯುವ ಸರದಿ ಯಡಿಯೂರಪ್ಪನವರದು
ಬೆಂಗಳೂರು: ಹಾಗೂ ಹೀಗೂ ಕಷ್ಟಪಟ್ಟು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ್ದೇನೊ ಆಯಿತು. ಆದರೆ, ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾತ್ರ ಅದಕ್ಕಿಂತ ಕಗ್ಗಂಟಾಗಿ ಪರಿಣಮಿಸಿದೆ.
ಮುಂದಿನ ಮುಖ್ಯಮಂತ್ರಿ ತಾವು ಸೂಚಿಸುವವರನ್ನೇ ಮಾಡಬೇಕು ಎಂದು ಉಭಯ ಬಣಗಳು ಬಿಗಿಪಟ್ಟು ಹಿಡಿದಿರುವುದರಿಂದ ಭಾನುವಾರ ರಾತ್ರಿ ನಡೆದ ಸಂಧಾನ ಮಾತುಕತೆ ವಿಫಲವಾಗಿದ್ದು, ಇದೀಗ ಮುಖ್ಯಮಂತ್ರಿ ಆಯ್ಕೆಯ ವಿಷಯ ದೆಹಲಿಗೆ ಸ್ಥಳಾಂತರಗೊಂಡಿದೆ. ತಮ್ಮ ರಾಜೀನಾಮೆಗೆ 3 ದಿನ ದೇಶವನ್ನೇ ತುದಿಗಾಲಲ್ಲಿ ನಿಲ್ಲಿಸಿದ ಯಡಿಯೂರಪ್ಪ ಈಗ 3 ದಿನ ಕಾಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿ ಬಿಕ್ಕಟ್ಟು ನಿವಾರಿಸಲು ಪ್ರಯತ್ನಿಸಿದ ಪಕ್ಷದ ವರಿಷ್ಠ ನಾಯಕರಾದ ಅರುಣ್ ಜೇಟಿ ಮತ್ತು ರಾಜನಾಥ್ ಸಿಂಗ್ ಅವರು ನೂತನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸಲಾಗದೇ ಕೊನೆಗೆ ಕೈಚೆಲ್ಲಿ ಭಾನುವಾರ ರಾತ್ರಿ ದೆಹಲಿಗೆ ತೆರಳಿದರು.
ಈ ಬಗ್ಗೆ ಸೋಮವಾರ ಜೇಟಿÉ ಮತ್ತು ರಾಜನಾಥ್ ಸಿಂಗ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸೇರಿದಂತೆ ಲಾಲ್‌ಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್ ಮತ್ತಿತರ ಹಿರಿಯ ನಾಯಕರೊಂದಿಗೆ ಚರ್ಚಿಸಿ ಒಂದು ಸ್ಪಷ್ಟ ತೀರ್ಮಾನದೊಂದಿಗೆ ಮಂಗಳವಾರ ಮತ್ತೆ ವಾಪಸಾಗಲಿದ್ದಾರೆ. ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದು ಅಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.
ಸದಾನಂದಗೌಡರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಯಡಿಯೂರಪ್ಪ ಬಣ ಹಿಡಿದ ಪಟ್ಟಿಗೆ, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಅನಂತಕುಮಾರ್ ಬಣ ಬಿಗಿಪಟ್ಟು ಹಿಡಿದಿದೆ.
ಭಾನುವಾರ ಸಂಜೆಯಿಂದ ರಾತ್ರಿವರೆಗೆ ನಡೆದ ಮಾತುಕತೆ ವೇಳೆ ಉಭಯ ಬಣಗಳೂ ತಮ್ಮ ಬೇಡಿಕೆಯಿಂದ ಹಿಂದೆ ಸರಿಯಲು ನಿರಾಕರಿಸಿದ್ದರಿಂದ ವರಿಷ್ಠ ನಾಯಕರು ಅನಿವಾರ್ಯವಾಗಿ ದೆಹಲಿಯಲ್ಲೇ ಸಮಾಲೋಚನೆ ಮುಂದುವರೆಸುವ ನಿರ್ಧಾರ ಕೈಗೊಳ್ಳಬೇಕಾಯಿತು.
ಆದರೆ, ಭಾನುವಾರ ನಡೆದ ಸಭೆಯ ಧಾಟಿಯನ್ನು ಗಮನಿಸಿದರೆ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡುವುದು ಅಷ್ಟು ಸುಲಭವಾಗಿಲ್ಲ. ಹಾಗೊಂದು ವೇಳೆ ಒಂದು ಬಣದ ಮನವೊಲಿಸಿ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಅದು ಹೆಚ್ಚು ದಿನ ಸುಸೂತ್ರವಾಗಿ ನಡೆಯುವುದು ಅನುಮಾನ.
ಯಡಿಯೂರಪ್ಪ ವರ್ಸಸ್ ಅನಂತಕುಮಾರ್
ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ನಡುವಿನ ಪುರಾತನ ರಾಜಕೀಯ ದ್ವೇಷವೇ ಪ್ರಮುಖವಾಗಿ ಕೆಲಸ ಮಾಡುತ್ತಿದೆ.
ಸದಾನಂದಗೌಡರನ್ನು ಸಿಎಂ ಮಾಡುವ ಮೂಲಕ ಸರ್ಕಾರವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಅನಂತ್ ಮತ್ತಿತರ ತಮ್ಮ ವಿರೋಧಿಗಳನ್ನು ಹಣಿಯುವುದು ಯಡಿಯೂರಪ್ಪ ಅವರ ತಂತ್ರ. ಆದರೆ, ಶೆಟ್ಟರ್ ಅವರನ್ನು ಸಿಎಂ ಆಗಿಸುವ ಮೂಲಕ ಯಡಿಯೂರಪ್ಪ ಅವರ ಪ್ರಮುಖ ಶಕ್ತಿಯಾಗಿರುವ ಲಿಂಗಾಯತ ಸಮುದಾಯದ ಬೆಂಬಲವನ್ನು ಕಸಿದುಕೊಳ್ಳುವುದು ಅನಂತಕುಮಾರ್ ಪ್ರತಿತಂತ್ರ.
ಹೀಗೆ ಈ ತಂತ್ರ ಮತ್ತು ಪ್ರತಿತಂತ್ರಗಳ ನಡುವೆ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡುವ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಅನಂತ್ ಬಣಕ್ಕೆ 2 ಡಿಸಿಎಂ ಸ್ಥಾನ - ಹೈಕಮಾಂಡ್
ಭಾನುವಾರ ರಾಜಭವನಕ್ಕೆ ತೆರಳಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಯಡಿಯೂರಪ್ಪ ಅವರು ನೇರವಾಗಿ ತೆರಳಿದ್ದು ಅಶೋಕಾ ಹೋಟೆಲ್‌ನಲ್ಲಿದ್ದ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುವುದಕ್ಕಾಗಿ. ಅಲ್ಲಿ ಅನಂತ್ ಬಣದ ನಾಯಕರೂ ಇದ್ದುದರಿಂದ ವರಿಷ್ಠರ ಸಮ್ಮುಖದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ತೀವ್ರ ಚರ್ಚೆ ನಡೆಯಿತು. ಒಂದು ಹಂತದಲ್ಲಿ ವಾಕ್ಸಮರವೂ ನಡೆಯಿತು ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜಿನಾಮೆ ನೀಡುವ ಮೊದಲು ಎರಡು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟಿದ್ದರು. ಅದರಲ್ಲಿ ಒಂದು ತಾವು ಸೂಚಿಸುವವರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿಸಬೇಕು. ಮತ್ತೂಂದು ತಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು ಎಂಬುದು.
ಆದರೆ, ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆಯನ್ನು ಅವರು ಹೇಳಿದಂತೆ ಮಾಡಲು ಸಿದ್ಧವಾಯಿತು.
ಆ ಪ್ರಕಾರವೇ ಯಡಿಯೂರಪ್ಪ ಬಣ ತಮಗೊಪ್ಪುವ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿಸುವಂತೆ ಪಟ್ಟು ಹಿಡಿದಿದೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅನಂತ್ ಬಣ ಶೆಟ್ಟರ್ ಅವರ ಹೆಸರನ್ನೇ ಮುಂದಿಟ್ಟಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸುವುದರಿಂದ ಅದೇ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರ ಪ್ರಭಾವವನ್ನು ಕುಗ್ಗಿಸಬಹುದು ಎಂಬ ಲೆಕ್ಕಾಚಾರವೂ ಅಡಗಿದೆ.
ಅನಂತ್ ಕುಮಾರ್ ಹಾಗೂ ಈಶ್ವರಪ್ಪ ಬಣಗಳ ಪ್ರತಿರೋಧ ಸಾಕಷ್ಟಿದ್ದರೂ, ಹೈಕಮಾಂಡ್ ಮುಂದಿನ ಮುಖ್ಯಮಂತ್ರಿಯನ್ನಾಗಿ ಸದಾನಂದಗೌಡರನ್ನೇ ಆಯ್ಕೆ ಮಾಡಲು ಒಲವು ತೋರಿದೆ ಎನ್ನಲಾಗಿದೆ.
ಈ ನಡುವೆ ಅನಂತ್ ಬಣವನ್ನು ಸಮಾಧಾನಪಡಿಸುವ ಸಲುವಾಗಿ ಎರಡು ಡಿಸಿಎಂ ಸ್ಥಾನಗಳನ್ನು ನೀಡುವ ಬಗ್ಗೆಯೂ ಹೈಕಮಾಂಡ್ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅದಕ್ಕೂ ಅನಂತ್ ಬಣ ಸದ್ಯಕ್ಕೆ ಒಪ್ಪಿಲ್ಲ.
-ರಾಜ್ಯಪಾಲರ ತೂಗುಗತ್ತಿ ಭಯ-
ಹಾಗೆಂದು ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವುದನ್ನು ಹೆಚ್ಚು ದಿನಗಳ ಕಾಲ ಮುಂದೂಡುವ ಅವಕಾಶವೂ ಬಿಜೆಪಿಗಿಲ್ಲದಂತಾಗಿದೆ.
ರಾಜ್ಯಪಾಲರು ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ ಅವರು ಏನಾದರೂ ಬ್ರಹ್ಮಾಸ್ತ್ರ ಪ್ರಯೋಗಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಹೀಗಾಗಿ ರಾಜ್ಯಪಾಲರ ತೂಗುಗತ್ತಿ ಬೀಸುವ ಮೊದಲೇ ಮುಂದಿನ ಮುಖ್ಯಮಂತ್ರಿಯ ಆಯ್ಕೆಯನ್ನು ಸುಗಮವಾಗಿ ಮುಗಿಸುವ ಧಾವಂತದಲ್ಲಿ ಬಿಜೆಪಿ ಹೈಕಮಾಂಡ್ ಇದೆ.