
ಬದಲಾದ ಭಾರತ ಕ್ರಿಕೆಟ್ ಮನೋಭಾವ
Team Udayavani, Jan 19, 2021, 6:50 AM IST

ಆಸ್ಟ್ರೇಲಿಯ ಪ್ರವಾಸದಲ್ಲಿ ಗಾಯಗೊಂಡ ಭಾರತೀಯರ ಸಂಖ್ಯೆ 11ರಷ್ಟಿದೆ. ಒಂದು ಪ್ರವಾಸದಲ್ಲಿ ಈ ಪ್ರಮಾಣದಲ್ಲಿ ಭಾರತೀಯರು ಹಿಂದೆಂದೂ ಗಾಯಗೊಂಡಿರಲಿಲ್ಲ. ಯಾವುದೇ ಪಂದ್ಯದಲ್ಲೂ ಅದೇ ತಂಡ ಆಡಿದ ನಿದರ್ಶನಗಳೇ ಇಲ್ಲ. ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಹೊತ್ತಿಗಂತೂ ಭಾರತದ ಬೌಲಿಂಗ್ ಪಡೆ ಸಂಪೂರ್ಣ ಅನನುಭವಿಗಳಿಂದ ಕೂಡಿದೆ. ಬ್ಯಾಟಿಂಗ್‌ನಲ್ಲಿ ಸ್ವತಃ ನಾಯಕ ವಿರಾಟ್ ಕೊಹ್ಲಿಯ ನೆರವಿಲ್ಲ. ಹಾಗಂತ ತಂಡ ಹೋರಾಟ ಬಿಟ್ಟುಕೊಟ್ಟಿಲ್ಲ.
ಇಂಥ ದ್ದೊಂದು ಹಠ, ಹೋರಾಟದ ಸ್ವಭಾವ ಭಾರತ ಕ್ರಿಕೆಟ್ ತಂಡದಲ್ಲಿ ಆರಂಭವಾಗಿದ್ದು ಗಂಗೂಲಿ ನಾಯಕರಾದ ಬಳಿಕ. ಪದೇಪದೇ ಅವರ ನಾಯಕತ್ವದಲ್ಲಿ ಅಂತಹ ಪಂದ್ಯಗಳು ನಡೆದರೂ, 3 ಪಂದ್ಯಗಳನ್ನು ಮಾತ್ರ ತಪ್ಪದೇ ಉಲ್ಲೇಖೀಸಬೇಕಾಗುತ್ತದೆ. ಈ ಪಂದ್ಯಗಳಲ್ಲಿನ ಜಯಗಳನ್ನು, ಮನೋಭಾವದ ಬದಲಾವಣೆಯ ದೃಷ್ಟಿಯಿಂದ ಹೇಳುವುದಾದರೆ ವಿಶ್ವಕಪ್ ಜಯಕ್ಕಿಂತ ಮಹತ್ವದ್ದು ಎನ್ನಬಹುದು. ಮೊದಲನೆಯ ಉದಾಹರಣೆ: 2001, ಮಾ.15ರಂದು ಆಸ್ಟ್ರೇಲಿಯ ವಿರುದ್ಧ ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ಗಳಿಸಿದ 171 ರನ್ ಜಯ. ಫಾಲೋಆನ್‌ಗೊಳಗಾದ ತಂಡವೊಂದು ಜಯಗಳಿಸಿದ ಕೇವಲ 3ನೇ ಉದಾಹರಣೆ. ಆಗ ಆಸ್ಟ್ರೇಲಿಯ ವಿಶ್ವದ ಅತ್ಯಂತ ಬಲಿಷ್ಠ ತಂಡವೆಂಬ ಹೆಗ್ಗಳಿಕೆ ಹೊಂದಿತ್ತು. ಅದರ ಮನೋಬಲವನ್ನು ಕುಗ್ಗಿಸಿದ್ದು ಭಾರತದ ಈ ಅತ್ಯಮೋಘ ಪ್ರತೀ ಹೋರಾಟ. ಅಲ್ಲಿ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದು ವಿವಿಎಸ್ ಲಕ್ಷ್ಮಣ್, ರಾಹುಲ್ ದ್ರಾವಿಡ್, ಹರ್ಭಜನ್ ಸಿಂಗ್. ಅದಾದ ಅನಂತರ 2003, ಡಿ.16ರಂದು ಮತ್ತೆ ಆಸ್ಟ್ರೇಲಿಯ ವಿರುದ್ಧ ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ 4 ವಿಕೆಟ್‌ಗಳ ಗೆಲುವು ಸಾಧಿಸಿತು. ಇಲ್ಲೂ ಮಿಂಚಿದ್ದು ಲಕ್ಷ್ಮಣ್ ಮತ್ತು ದ್ರಾವಿಡ್! ಇನ್ನೊಂದು ಜಯ ಏಕದಿನದಲ್ಲಿ ದಾಖಲಾಯಿತು. ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ 326 ರನ್‌ಗಳ ಗುರಿಯನ್ನು 8 ವಿಕೆಟ್ ಕಳೆದುಕೊಂಡು ಭಾರತ ತಲುಪಿತು. ಆಗ ಇದೊಂದು ವಿಶ್ವದಾಖಲೆಯ ರನ್ ಬೆನ್ನತ್ತುವಿಕೆ. ಮುಂದೆ ಧೋನಿ ನಾಯಕರಾದರು. ಅವರ ನಾಯಕತ್ವದಲ್ಲಿ ಎರಡು ವಿಶ್ವಕಪ್, ಒಂದು ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಒಲಿಯಿತು. ಟ್ರೋಫಿಗಳ ಲೆಕ್ಕಾಚಾರದಲ್ಲಿ ಇವು ಬಹಳ ಅದ್ಭುತಗಳೆನಿಸಿದರೂ, ಗಂಗೂಲಿ ನಾಯಕತ್ವದಲ್ಲಿ ದಾಖಲಾದ ಸ್ಮರಣಾರ್ಹ ಜಯಗಳಿಗೆ ಸಮವೆನಿಸಿಕೊಳ್ಳಲಿಲ್ಲ.
ಪ್ರಸ್ತುತ ವಿರಾಟ್ ಕೊಹ್ಲಿ ಕೈಯಲ್ಲಿ ಭಾರತ ತಂಡವಿದೆ. ತಂಡ ಅತ್ಯುತ್ತಮ ಆಟವನ್ನೇ ಮುಂದುವರಿಸಿದ್ದರೂ, ಪ್ರಮುಖ ಕೂಟಗಳಲ್ಲಿ ಗೆಲ್ಲುತ್ತಿಲ್ಲ. ಅದೊಂದು ಬೇಸರ ಎಲ್ಲರಿಗಿದೆ. ಅದೇನೇ ಇರಲಿ ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಲ್ಲಿ ಬದಲಾದ ಭಾರತ ತಂಡದ ಮನೋಭಾವ ಸ್ಪಷ್ಟವಾಗಿ ಗೋಚರಿಸಿದೆ. ಭಾರತದ ಮೊದಲ ಇನಿಂಗ್ಸ್ ವೇಳೆ ವಾಷಿಂಗ್ಟನ್ ಸುಂದರ್-ಶಾದೂìಲ್ ಠಾಕೂರ್ 7ನೇ ವಿಕೆಟ್‌ಗೆ 123 ರನ್ ಜತೆಯಾಟವಾಡಿದರು. ಒಬ್ಬರು ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಆಟಗಾರನಾದರೆ, ಇನ್ನೊಬ್ಬರು ಕೇವಲ 2ನೇ ಟೆಸ್ಟ್ ಆಡುತ್ತಿದ್ದಾರೆ. ಅಲ್ಲದೇ ಇಬ್ಬರೂ ಬೌಲರ್‌ಗಳು! ಆಸ್ಟ್ರೇಲಿಯದ ಎರಡನೇ ಇನಿಂಗ್ಸ್ ವೇಳೆ ಮತ್ತೆ ಅನನುಭವಿ ವೇಗಿ ಮೊಹಮ್ಮದ್ ಸಿರಾಜ್ ಮಿಂಚಿ 5 ವಿಕೆಟ್ ಪಡೆದರೆ, ಶಾರ್ದೂಲ್ 4 ವಿಕೆಟ್ ಪಡೆದಿದ್ದಾರೆ.
ಫಲಿತಾಂಶ ಏನಾಗುತ್ತದೆ ಎನ್ನುವುದು ಇಂದು ತಿಳಿಯಲಿದೆಯಾದರೂ, ಟೀಂ ಇಂಡಿಯಾದ ಒಟ್ಟೂ ಹೋರಾಟ, ಭಾರತದ ಬದಲಾದ ಮನೋಭಾವ, ಗುಣಮಟ್ಟವನ್ನು ಸೂಚಿಸುತ್ತದೆ.
ಟಾಪ್ ನ್ಯೂಸ್
