
ರಷ್ಯಾ-ಉಕ್ರೇನ್ ನಡುವಣ ಯುದ್ಧ ಶೀಘ್ರ ಕೊನೆಗಾಣಲಿ
Team Udayavani, Jun 7, 2023, 6:00 AM IST

ರಷ್ಯಾ ಮತ್ತು ಉಕ್ರೇನ್ ನಡುವಣ ಸಂಘರ್ಷ ತಾರಕಕ್ಕೇರಿದ್ದು ದಕ್ಷಿಣ ಉಕ್ರೇನ್‌ನ ಕಖೋವಾದಲ್ಲಿರುವ ಬೃಹತ್ ಅಣೆಕಟ್ಟೆಯ ಮೇಲೆ ದಾಳಿ ನಡೆಸಲಾಗಿದೆ. ಇದರ ಪರಿಣಾಮ ಅಣೆಕಟ್ಟೆಯ ಪಾರ್ಶ್ವದ ಗೋಡೆಯೊಂದು ಕುಸಿದಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಹದ ಭೀತಿ ತಲೆದೋರಿದೆ. ಈ ಅಣೆಕಟ್ಟೆಯ ನೀರನ್ನೇ ಆಶ್ರಯಿಸಿರುವ ಜಲವಿದ್ಯುತ್ ಸ್ಥಾವರವೂ ಅಪಾಯದಲ್ಲಿದ್ದು ಈ ದುಷ್ಕೃತ್ಯದ ಸಂಬಂಧ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತವಾಗಿವೆ. ಸೋವಿಯತ್ ಯೂನಿಯನ್ ಕಾಲದಲ್ಲಿ ಇಲ್ಲಿನ ಡ್ನಿಪ್ರೊ ನದಿಗೆ ಅಡ್ಡಲಾಗಿ ಈ ಬೃಹತ್ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಉಕ್ರೇನ್ ವಿರುದ್ಧ ಸೇನಾ ಆಕ್ರಮಣ ಆರಂಭಿಸಿದ ಆರಂಭದಲ್ಲಿಯೇ ರಷ್ಯಾ ಈ ಅಣೆಕಟ್ಟು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಇದೇ ವೇಳೆ ಈ ಅಣೆಕಟ್ಟೆಯಿಂದಲೇ ಯುರೋಪ್‌ನ ಅತೀ ದೊಡ್ಡ ಝಪೋರ್‌ಝಿಯಾ ಪರಮಾಣು ಸ್ಥಾವರಕ್ಕೆ ನೀರು ಪೂರೈಕೆಯಾಗುತ್ತಿತ್ತು. ಸದ್ಯ ಪರಮಾಣು ಸ್ಥಾವರಕ್ಕೆ ಯಾವುದೇ ಅಪಾಯ ಎದುರಾಗಿಲ್ಲವಾದರೂ ಪರಿಸ್ಥಿತಿಯ ಮೇಲೆ ನಿಗಾ ಇರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ತಿಳಿಸಿದೆ.
ಉಕ್ರೇನ್ ಮಾತ್ರವಲ್ಲದೆ ರಷ್ಯಾದ ಹಲವಾರು ಭಾಗಗಳಿಗೆ ಈ ಅಣೆಕಟ್ಟೆಯಿಂದಲೇ ನೀರು ಪೂರೈಕೆಯಾಗುತ್ತಿತ್ತು. ಪ್ರವಾಹ ಭೀತಿಯಲ್ಲಿರುವ ಪ್ರದೇಶಗಳು ರಷ್ಯಾ ಮತ್ತು ಉಕ್ರೇನ್ ಈ ಎರಡೂ ದೇಶಗಳ ನಿಯಂತ್ರಣದಲ್ಲಿರುವ ಹಿನ್ನೆಲೆಯಲ್ಲಿ ಇತ್ತಂಡಗಳೂ ಸಂತ್ರಸ್ತರ ರಕ್ಷಣ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದೇ ವೇಳೆ ಜಲ ವಿದ್ಯುತ್ ಸ್ಥಾವರ ಮತ್ತು ಸಮೀಪದಲ್ಲಿರುವ ವಿವಿಧ ಕೈಗಾರಿಕೆಗಳು ದಾಸ್ತಾನು ಇರಿಸಿದ್ದ ನೂರಾರು ಟನ್‌ಗಳಷ್ಟು ತೈಲ ನೀರುಪಾಲಾಗಿದ್ದು ಜಲಚರಗಳ ಪ್ರಾಣಕ್ಕೂ ಕುತ್ತು ಬಂದೊದಗಿದೆ. ಕಳೆದ 16 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ನಡುವಣ ಯುದ್ಧ ಮತ್ತೆ ಭೀಕರ ಸ್ವರೂಪವನ್ನು ಪಡೆದುಕೊಂಡಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆರೋಪ-ಪ್ರತ್ಯಾರೋಪಗಳೇನೇ ಇರಲಿ, ಯುದ್ಧದ ಭಾಗವಾಗಿ ಈ ದಾಳಿ ನಡೆದಿರುವುದಂತೂ ಸ್ಪಷ್ಟ.
ಯುದ್ಧಾರಂಭದಿಂದಲೂ ರಷ್ಯಾ ಜಾಗತಿಕವಾಗಿ ತನ್ನ ಪ್ರಾಬಲ್ಯವನ್ನು ತೋರ್ಪಡಿಸುವ ಇರಾದೆಯನ್ನು ಪ್ರದರ್ಶಿಸುತ್ತ ಬಂದಿದ್ದರೆ ನ್ಯಾಟೋ ರಾಷ್ಟ್ರಗಳ ಬೆಂಬಲದೊಂದಿಗೆ ಉಕ್ರೇನ್ ರಷ್ಯಾಕ್ಕೆ ಸಡ್ಡು ಹೊಡೆದು ನಿಂತಿದೆ. ಆದರೆ ರಷ್ಯಾ ಮಾತ್ರ ವಿಶ್ವಸಂಸ್ಥೆ, ಯುರೋಪಿಯನ್ ರಾಷ್ಟ್ರಗಳ ಯಾವುದೇ ನಿರ್ಬಂಧ, ಷರತ್ತು ಮತ್ತು ಬೆದರಿಕೆಗಳಿಗೆ ಮಣಿಯದೆ ಉಕ್ರೇನ್ ವಿರುದ್ಧದ ಯುದ್ಧವನ್ನು ಮುಂದುವರಿಸಿದೆ. ಇದೇ ವೇಳೆ ಉಕ್ರೇನ್ ಕೂಡ ಅಮೆರಿಕ ಆದಿಯಾಗಿ ಯುರೋಪಿಯನ್ ರಾಷ್ಟ್ರಗಳ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲದೊಂದಿಗೆ ರಷ್ಯಾ ವಿರುದ್ಧ ಪ್ರತಿದಾಳಿಯನ್ನು ನಡೆಸುತ್ತಲೇ ಬಂದಿದೆ. ಪರಿಸ್ಥಿತಿ ಇದೇ ತೆರನಾಗಿ ಮುಂದುವರಿದದ್ದೇ ಆದಲ್ಲಿ ಭಾರೀ ಅನಾಹುತ ಸಂಭವಿಸಲಿರುವುದಂತೂ ನಿಶ್ಚಿತ.
ರಷ್ಯಾ-ಉಕ್ರೇನ್ ನಡುವೆ ತಲೆದೋರಿರುವ ಸಮಸ್ಯೆಗೆ ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಡಿ ಇಡಬೇಕಾಗಿದೆಯಾದರೂ ಈ ಇಚ್ಛಾಶಕ್ತಿಯನ್ನು ಅದು ಪ್ರದರ್ಶಿಸುತ್ತಿಲ್ಲ. ಇಂದಿನ ಪರಮಾಣು ಯುಗದಲ್ಲೂ ವರ್ಷ ಕಾಲ ಯುದ್ಧ ಮುಂದುವರಿದಿದೆ ಎಂದಾದರೆ ಇದು ಬಲುದೊಡ್ಡ ವಿನಾಶಕ್ಕೆ ನಾಂದಿ ಹಾಡಿದಂತೆಯೇ. ಇನ್ನಾದರೂ ಜಾಗತಿಕ ಸಮುದಾಯ ಮತ್ತು ವಿಶ್ವಸಂಸ್ಥೆ ಎಚ್ಚೆತ್ತುಕೊಂಡು ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿದ್ದೇ ಆದಲ್ಲಿ ಈ ಯುದ್ಧಕ್ಕೆ ಅಂತ್ಯ ಹಾಡುವುದು ಕಷ್ಟಸಾಧ್ಯವೇನಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

BJP ಜತೆಗಿಲ್ಲ ಮೈತ್ರಿ: ಫಡ್ನವೀಸ್ ಮಾತು ಸುಳ್ಳು- NCP ಸಂಸ್ಥಾಪಕ ಶರದ್ ಪವಾರ್ ಘೋಷಣೆ

Karnataka: ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ? – ಸಚಿವ ಸಂಪುಟದಲ್ಲಿ ಇಂದು ಚರ್ಚೆ ಸಾಧ್ಯತೆ

Indo-Canada: ಭಾರತದ ಜತೆಗೆ ಉತ್ತಮ ಬಾಂಧವ್ಯ ಬೇಕು ಎಂದ ಟ್ರೂಡ್ನೂ

Kannada Actor ದೊಡ್ಡಣ್ಣರವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Karnataka: ಶೀಘ್ರ ಗೃಹ ಆರೋಗ್ಯ-ಆಶಾಕಿರಣ ಯೋಜನೆ ಜಾರಿ: ದಿನೇಶ ಗುಂಡೂರಾವ್