ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ


Team Udayavani, Oct 25, 2021, 5:50 AM IST

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

2023ರ ರಾಜ್ಯ ವಿಧಾನಸಭೆ ಚುನಾವಣೆಯ ಮಹಾಸಮರಕ್ಕೆ ಶಸ್ತ್ರಾಭ್ಯಾಸ ಎನ್ನುವ ರೀತಿಯಲ್ಲಿ ಹಾವೇರಿ ಜಿಲ್ಲೆ ಹಾನಗಲ್‌ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಅನಿರೀಕ್ಷಿತವಾಗಿ ಬಂದೆರಗಿದೆ. ಈ ಉಪ ಚುನಾವಣೆ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿದೆ. ವಿಶೇಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನೀನಾ, ನಾನಾ ಎಂಬಂತೆ ತೀವ್ರ ಪೈಪೋಟಿಗಿಳಿದಿವೆ. 2 ಕ್ಷೇತ್ರಗಳಲ್ಲಿ ಗೆಲುವಿನ ಮೂಲಕ ಬಲ ಹೆಚ್ಚಿಸಿಕೊಂಡು, 2023ರ ಸಮರಕ್ಕೆ ಸನ್ನದ್ಧವಾಗತೊಡಗಿವೆ.

ಜನರ ನಾಡಿ ಮಿಡಿತ ಏನೆಂಬುದನ್ನು ಅರಿಯಲು ಉತ್ತರ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಸಹಕಾರಿ ಆಗಲಿದೆ ಎಂಬುದು ರಾಜಕೀಯ ಪಕ್ಷಗಳ ಲೆಕ್ಕಾಚಾರ ವಾಗಿದೆಯಾದರೂ ಇದೇ ಮಾನದಂಡ ಆಗಲಾರದು ಎಂಬುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ.

ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತ ಪಕ್ಷಕ್ಕೆ ಜನಮನ್ನಣೆ ಇದೆ ಎಂಬುದನ್ನು ಸಾಬೀತು ಪಡಿಸುವ ಬಯಕೆ ಬಿಜೆಪಿಯದ್ದಾಗಿದೆ. ಎರಡರಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದರೂ ಸಾಕು ಆಡಳಿತ ಪಕ್ಷ ಬಿಜೆಪಿಗೆ ಟಕ್ಕರ್‌ ನೀಡಿ, ಸರಕಾರ ಜನಮನ್ನಣೆ ಕಳೆದುಕೊಳ್ಳುತ್ತಿದೆ ಎಂಬುದನ್ನು ಬಿಂಬಿಸಲು ಕಾಂಗ್ರೆಸ್‌ ಮುಂದಾಗಿದೆ. ತನ್ನ ಪ್ರತಿನಿಧಿತ್ವದ ಸಿಂದಗಿ ಕ್ಷೇತ್ರ ಉಳಿಸಿಕೊಳ್ಳುವ ಒತ್ತಡದಲ್ಲಿ ಜೆಡಿಎಸ್‌ ಇದೆ. ಆದರೆ, ಎಲ್ಲ ದೃಷ್ಟಿಯಿಂದಲೂ ಆಡಳಿತಾರೂಢ ಬಿಜೆಪಿಗೆ ಹಾನಗಲ್‌ ಕ್ಷೇತ್ರ ಅತ್ಯಂತ ಮಹತ್ವದ್ದಾಗಿದೆ.

ಬಿಜೆಪಿ ವಶದಲ್ಲಿದ್ದ ಹಾನಗಲ್‌ ಕ್ಷೇತ್ರ ಉಳಿಸಿಕೊಳ್ಳುವುದು ಒಂದು ಕಡೆಯ ಒತ್ತಡವಾದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಂತ ಜಿಲ್ಲೆಯಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕಿದೆ. ಸಿಎಂ ಆದ ಅನಂತರ ಎದುರಾದ ಮೊದಲ ಅಗ್ನಿಪರೀಕ್ಷೆ ಗೆಲ್ಲುವುದು ಬೊಮ್ಮಾಯಿ ಯವರ ಪಾಲಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಸಿಂದಗಿಯಲ್ಲಿ ಗೆದ್ದು, ಹಾನಗಲ್‌ನಲ್ಲೇನಾದರೂ ಬಿಜೆಪಿ ಸೋತರೆ ವಿಪಕ್ಷಗಳಿಗೆ ಬಹುದೊಡ್ಡ ಆಹಾರ ನೀಡಿದಂತಾ ಗುತ್ತದೆ. ಮುಖ್ಯಮಂತ್ರಿ ಯವರು ಪ್ರತಿನಿಧಿಸುವ ಜಿಲ್ಲೆಯಲ್ಲಿ, ತಮ್ಮದೇ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿಗೆ ಆಗಲಿಲ್ಲ ಎಂಬ ಟೀಕೆ, ವಾಗ್ಧಾಳಿಯನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಬಿಜೆಪಿ ಹಾನಗಲ್‌ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿದೆ. ಸಿಎಂ ಸೇರಿ ಇಡೀ ಸರಕಾರವೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದು, ಮತಬೇಟೆಯ ಕಾರ್ಯ ತಂತ್ರಕ್ಕೆ ಮುಂದಾಗಿದೆ.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಹಾನಗಲ್‌ ಕ್ಷೇತ್ರ: ಹಾನಗಲ್‌ ವಿಧಾನಸಭೆ ಕ್ಷೇತ್ರದ ಚುನಾವಣೆ ಇತಿಹಾಸ ಗಮನಿಸಿದರೆ, ಯಾರೊಬ್ಬರಿಗೂ ಏಕಸ್ವಾಮ್ಯ ರೀತಿಯಲ್ಲಿ ಅಧಿಕಾರ ನೀಡಿಲ್ಲ. ಎರಡಕ್ಕಿಂತ ಹೆಚ್ಚಿನ ಬಾರಿ ಯಾವುದೇ ಪಕ್ಷ ಸತತವಾಗಿ ಗೆಲುವು ಸಾಧಿಸಿದ್ದೂ ಇಲ್ಲ. 1957ರಲ್ಲಿ ನಡೆದ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕದೆ, ಪಕ್ಷೇತರ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಕ್ಷೇತ್ರ ಇದಾಗಿದೆ. 1957ರಿಂದ 2018ರ ವರೆಗಿನ ವಿಧಾನಸಭೆ ಚುನಾವಣೆಗಳ ಫಲಿತಾಂಶ ನೋಡಿದರೆ 6 ಬಾರಿ ಕಾಂಗ್ರೆಸ್‌ ಗೆದ್ದರೆ, ಮೂರು ಬಾರಿ ಬಿಜೆಪಿ, ಎರಡು ಬಾರಿ ಜನತಾ ಪರಿವಾರ, ಮೂರು ಬಾರಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಈ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಅವಧಿಗೆ ಶಾಸಕರಾಗಿ ಆಯ್ಕೆಯಾದ ಕೀರ್ತಿ ದಿ| ಸಿ. ಎಂ. ಉದಾಸಿ ಅವರಿಗೆ ಸಲ್ಲುತ್ತದೆ. ಪಕ್ಷೇತರರಾಗಿ, ಜನತಾ ಪಕ್ಷ, ಜನತಾದಳ, ಬಿಜೆಪಿ ಪಕ್ಷಗಳಿಂದ ಒಟ್ಟು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಹಾನಗಲ್‌ ಕ್ಷೇತ್ರದ ಮತದಾರರು ಉದಾಸಿಯವರನ್ನು ಹೊರತುಪಡಿಸಿದರೆ, ಯಾರೊಬ್ಬರಿಗೂ ಸತತವಾಗಿ ಎರಡು ಬಾರಿ ಶಾಸಕರಾಗುವ ಭಾಗ್ಯ ಕಲ್ಪಿಸಿಲ್ಲ. 1983ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷ ಅಧಿಕಾರ ಹಿಡಿದ ರಾಜಕೀಯ ಮನ್ವಂತರ ಕಾಲಘಟ್ಟವದು. ಆಗ ಉದಾಸಿಯವರು ಪಕ್ಷೇತರ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

1985ರಲ್ಲಿ ವಿಧಾನಸಭೆಗೆ ನಡೆದ ಮಧ್ಯಾಂತರ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಉದಾಸಿಯವರು, ಸತತ ಎರಡನೇ ಬಾರಿಗೆ ಶಾಸಕರಾಗಿ ದಾಖಲೆ ಬರೆದಿದ್ದರು. ಅನಂತರ 2004 ಹಾಗೂ 2008ರಲ್ಲಿಯೂ ಸತತವಾಗಿ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ತಮ್ಮದೇ ಹೆಸರಿನ ದಾಖಲೆ ಯನ್ನು ಸರಿಗಟ್ಟಿದ್ದರು. 2013ರಲ್ಲಿ ಹ್ಯಾಟ್ರಿಕ್‌ ಗೆಲುವುವಿನ ಚಿಂತನೆ ಹೊಂದಿದ್ದರಾದರೂ ಬಿಜೆಪಿ ಒಡೆದು ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಕೆಜೆಪಿ ಆಸ್ತಿತ್ವಕ್ಕೆ ಬಂದಿತ್ತು. ಯಡಿಯೂರಪ್ಪ ಅವರೊಂದಿಗೆ ಸಾಗಿ, ಕೆಜೆಪಿ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದರಾದರೂ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾಗಿತ್ತು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಯಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದ ಉದಾಸಿಯವರು 6‌ನೇ ಬಾರಿ ಶಾಸಕರಾಗಿದ್ದರು. ಕ್ಷೇತ್ರದಲ್ಲಿ ಮೂರನೇ ಬಾರಿಗೆ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದರು.

ಹಾನಗಲ್‌ ಕ್ಷೇತ್ರದಲ್ಲಿ ಸುದೀರ್ಘ‌ವಾಗಿ ಕಣದಲ್ಲಿದ್ದವರು, ಸಿ.ಎಂ.ಉದಾಸಿಯವರಿಗೆ ಹೆಚ್ಚಿನ ಬಾರಿ ರಾಜಕೀಯ ಎದುರಾಳಿಯಾದವರು ಕಾಂಗ್ರೆಸ್‌ನ ಮನೋಹರ ತಹಶೀ ಲ್ದಾರ. ಉದಾಸಿ ಅವರಿಗಿಂತ ಐದು ವರ್ಷ ಮೊದಲೇ ಶಾಸಕÃ ಾಗಿದ್ದವರು. 1978ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಶಾಸಕರಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1978ರಿಂದ 2018ರವರೆಗಿನ ಹತ್ತು ಚುನಾವಣೆಗಳಲ್ಲಿ ತಹಶೀಲ್ದಾರ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉದಾಸಿ ವಿರುದ್ಧ ಅತೀ ಹೆಚ್ಚಿನ ಬಾರಿ ಕಣದಲ್ಲಿ ಮುಖಾ ಮುಖೀಯಾದವರು. ಉದಾಸಿ ಅವರ ವಿರುದ್ಧವೇ ಏಳು ಬಾರಿ ಸ್ಪರ್ಧೆಗಿಳಿದು, ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 1978ರಿಂದ 2013ರ ವರೆಗೂ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದ ಬಂದಿದ್ದ ಮನೋಹರ ತಹಶೀಲ್ದಾರ ಅವರಿಗೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡದೆ, ಶ್ರೀನಿವಾಸ ಮಾನೆ ಅವರನ್ನು ಕಣಕ್ಕಿಳಿಸಿತ್ತು.

ಉದಾಸಿಯವರ ನಿಧನದಿಂದ ಹಾನಗಲ್‌ ಕ್ಷೇತ್ರ ಮೊದಲ ಬಾರಿಗೆ ಉಪ ಚುನಾವಣೆ ಎದುರಿಸುತ್ತಿದೆ. ಬಿಜೆಪಿಯಿಂದ ಉದಾಸಿಯವರ ಆಪ್ತರಲ್ಲೊಬ್ಬರಾದ ಶಿವರಾಜ ಸಜ್ಜನರ ಕಣಕ್ಕಿಳಿದಿದ್ದರೆ, ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ, ಜೆಡಿಎಸ್‌ನಿಂದ ನಿಯಾಜ್‌ ಶೇಖ್‌ ಸೇರಿದಂತೆ 13 ಮಂದಿ ಕಣದಲ್ಲಿದ್ದಾರೆ.

ಸಿಂದಗಿ ಕ್ಷೇತ್ರ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ನಿಧನದಿಂದ ಉಪ ಚುನಾವಣೆ ಎದುರಾಗಿದೆ. 1957ರಿಂದ 2018ರ ವರೆಗಿನ ಚುನಾವಣೆ ಇತಿಹಾಸ ಗಮನಿಸಿದರೆ, ಕ್ಷೇತ್ರದಲ್ಲಿ ಕಾಂಗ್ರೆಸ್‌ ಏಳು ಬಾರಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಹಾಗೂ ಜನತಾ ಪರಿವಾರ ತಲಾ ಮೂರು ಬಾರಿ ಗೆಲುವು ಸಾಧಿಸಿವೆ. ಸಿಂದಗಿ ಕ್ಷೇತ್ರದ ಮತದಾರರು ಪ್ರಮುಖ ಪಕ್ಷಗಳಿಗೆ ಅಧಿಕಾರದ ಅವಕಾಶ ನೀಡಿದ್ದಾರೆ. ಆದರೆ, ಸತತವಾಗಿ ಎರಡು ಬಾರಿಗೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಿದ್ದಾರೆ. 2004ರಿಂದ 2013ರ ವರೆಗೆ ಸತತವಾಗಿ ಮೂರು ಬಾರಿ ಕ್ಷೇತ್ರದಲ್ಲಿ ಬಿಜೆಪಿ ಹಿಡಿತ ಸಾಧಿಸಿತ್ತಾದರೂ 2018ರಲ್ಲಿ ಜೆಡಿಎಸ್‌, ಬಿಜೆಪಿಯಿಂದ ಕ್ಷೇತ್ರವನ್ನು ಕಿತ್ತುಕೊಂಡಿತ್ತು.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಿ.ಎಂ.ದೇಸಾಯಿ ಅವರು 1962 ಹಾಗೂ 1967ರಲ್ಲಿ ಸತತವಾಗಿ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ಬಿಟ್ಟರೆ, ಸುಮಾರು 41 ವರ್ಷಗಳ ನಂತರದಲ್ಲಿ ಬಿಜೆಪಿಯ ರಮೇಶ ಭೂಸನೂರು ಅವರು 2008 ಹಾಗೂ 2013ರಲ್ಲಿ ಸತತವಾಗಿ ಎರಡು ಬಾರಿ ಶಾಸಕರಾಗುವ ಮೂಲಕ ಹೊಸ ದಾಖಲೆ ಬರೆದಿದ್ದರು. ವಿಶೇಷವೆಂದರೆ ಕ್ಷೇತ್ರದಲ್ಲಿ 2004, 2008, 2013ರಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್‌ ಸಾಧನೆ ತೋರಿತ್ತು. ಇನ್ನು ಜನತಾ ಪರಿವಾರ ಕ್ಷೇತ್ರದಲ್ಲಿ ಗೆಲುವು ಕಂಡ ಸುಮಾರು 24 ವರ್ಷಗಳ ಅನಂತರದಲ್ಲಿ ಗೆಲುವು ಕಾಣುವಂತಾಗಿತ್ತು. 1999ರಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್‌ ಇದುವರೆಗೂ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ.

ಮನಗೂಳಿ ಅವರು ಸಿಂದಗಿ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಚುನಾವಣೆ ಕಣದಲ್ಲಿದ್ದರು. ಐದು ಬಾರಿ ಸ್ಪರ್ಧಿಸಿದ್ದರೂ, ಎರಡು ಬಾರಿ ಮಾತ್ರ ಮತದಾರರು ಅವರ ಕೈ ಹಿಡಿದಿದ್ದರು. 1989ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರಾದರೂ ಸೋಲು ಕಂಡಿದ್ದರು. ಅನಂತರ 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿತ್ತು. ಇದಾದ ಅನಂತರ 2004, 2008, 2013, 2018ರಲ್ಲಿ ಜೆಡಿಎಸ್‌ನಿಂದ ಸತತ 4 ಚುನಾವಣೆಯಲ್ಲಿ ಸ್ಪರ್ಧೆಗಿಳಿದರೂ, ಗೆಲುವು ದಕ್ಕಿದ್ದು 2018ರಲ್ಲಿ ಮಾತ್ರ.

ಮನಗೂಳಿ ಅವರ ನಿಧನ ಅನಂತರ ಅವರ ಪುತ್ರ ಅಶೋಕ ಮನಗೂಳಿ ಅವರು ಕಾಂಗ್ರೆಸ್‌ ಸೇರಿ ಉಪ ಚುನಾವಣೆಗೆ ಆ ಪಕ್ಷದ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಮಾಜಿ ಶಾಸಕ ರಮೇಶ ಭೂಸನೂರ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ ನಜಿಯಾ ಅಂಗಡಿ ಅವರನ್ನು ಕಣಕ್ಕಿಳಿಸಿದೆ.

-ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Mod

2024 Election; ಲೋಕಸಭೆ ಚುನಾವಣೆಗೆ ಮುನ್ನುಡಿಯೇ ಈ ಫ‌ಲಿತಾಂಶ?

Jaishankar

Foreign policy; ಬದಲಾದ ವಿದೇಶಾಂಗ ನೀತಿಯ ಪರಿಭಾಷೆ

ED

Chhattisgarh ‘ಮಹಾದೇವ’ ಅಸ್ತ್ರಕ್ಕೆ ಬಲಿಯಾಗುವವರು ಯಾರು?

1-qwewew

Congress ಅಸಮಾಧಾನದ ಜ್ವಾಲೆ: ಸಮ್ಮಿಶ್ರ ವೈಖರಿಯಲ್ಲಿ ಸರಕಾರ‌?

1-VR-AG

ರಾಜಸ್ಥಾನದ ರಾಜಪಟ್ಟದ ಮೇಲೆ ಎಲ್ಲರ ಕಣ್ಣು; ‘ಕೈ’ ಹಿಡಿಯುತ್ತಾ ಗ್ಯಾರಂಟಿ?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.