Udayavni Special

ಫೋಟೋಗ್ರಾಫ‌ರ್‌ ಆಗುತ್ತೇನೆ ಎಂದವರು ಸಿಎಂ ಆದಾಗ!


Team Udayavani, Nov 29, 2019, 5:45 AM IST

dd-45

ಅಂದು ಶಿವಸೇನೆಯ ಯಾವೊಬ್ಬ ಕಾರ್ಯಕರ್ತರಿಗೂ ಮುಂದೊಂದು ದಿನ ರಾಜ್‌ ಠಾಕ್ರೆ ಪಕ್ಷ ತೊರೆಯುತ್ತಾರೆ, ಅದಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ರಾಜಕೀಯ ದಲ್ಲಿ ಲೆಕ್ಕಕ್ಕೇ ಇಲ್ಲದಂತಿದ್ದ, ಕ್ಯಾಮೆರಾ ಹಿಡಿದುಕೊಂಡು ತನ್ನ ಲೋಕದಲ್ಲಿ ತಾನು ಮುಳುಗಿದ್ದ ಉದ್ಧವ್‌ ಠಾಕ್ರೆ ಎಂಬ ನಾಚಿಕೆ ಸ್ವಭಾವದ ಯುವಕ ಶಿವಸೇನೆಯ ನೊಗ ಹೊರುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ!

ಒಂದು ದಿನ ಆಟವಾಡುತ್ತಿರುವಾಗ ಉದ್ಧವ್‌ ಎಡವಿ ಬಿದ್ದರಂತೆ. ಇದನ್ನು ನೋಡಿದ ರಾಜ್‌ ಮತ್ತು ಅವರ ಗೆಳೆಯರು ಬಿದ್ದೂ ಬಿದ್ದು ನಕ್ಕರಂತೆ.

ರಮೇಶ್‌ ಕಿಣಿ ಹತ್ಯೆಯ ಪ್ರಕರಣದಲ್ಲಿ ರಾಜ್‌ ಠಾಕ್ರೆಯವರ ಹೆಸರು ಕೇಳಿಬಂದಿತ್ತು. ಮಾಟುಂಗದ ನಿವಾಸಿಯಾಗಿದ್ದ ರಮೇಶ್‌ ಕಿಣಿಯವರ ದೇಹ ಪುಣೆಯಲ್ಲಿ ಸಿಕ್ಕಿತ್ತು.

ಅದು 90ರ ದಶಕ. ಬಾಳಾ ಠಾಕ್ರೆ ನೇತೃತ್ವದಲ್ಲಿ ಮರಾಠಿ, ಮರಾಠಾ ಹಾಗೂ ಹಿಂದುತ್ವದ ಅಸ್ಮಿತೆಯ ಅಶ್ವವೇರಿ ಮುನ್ನುಗ್ಗುತ್ತಿತ್ತು ಶಿವಸೇನೆ. ಆ ಸಮಯದಲ್ಲೇ ಬಾಳಾ ಠಾಕ್ರೆಯವರ ನಂತರ ಆ ಪಕ್ಷದ ನೊಗ ಹೊರುವ ಬೃಹತ್‌ ಜವಾಬ್ದಾರಿ ಯಾರದ್ದಾಗುತ್ತದೆ ಎಂಬ ಪ್ರಶ್ನೆಯೂ ಹರಿದಾಡಲಾರಂಭಿಸಿತ್ತು. “ಬಾಳಾ ಸಾಹೇಬ್‌ ಜಾಗವನ್ನು ತುಂಬಲು ಫೈರ್‌ ಬ್ರ್ಯಾಂಡ್‌ “ರಾಜ್‌ ಠಾಕ್ರೆ’ಯನ್ನು ಬಿಟ್ಟರೆ ಮತ್ತ್ಯಾರಿಗೆ ಸಾಧ್ಯವಿದೆ?’ ಎಂಬ ಉತ್ತರವೇ ಎದುರಾಗುತ್ತಿತ್ತು. ರಾಜ್‌ ಠಾಕ್ರೆಯಂತೂ ಮಾತಿನಲ್ಲಿ, ಗತ್ತಿನಲ್ಲಿ ಬಾಳಾ ಠಾಕ್ರೆಯನ್ನು ಎಷ್ಟು ಹೋಲುತ್ತಿದ್ದರೆಂದರೆ, ಶಿವಸೇನೆಯ ಯಾವೊಬ್ಬ ಕೇಡರ್‌ಗೂ ಕೂಡ ಮುಂದೊಂದು ದಿನ ರಾಜ್‌ ಠಾಕ್ರೆ ತಮ್ಮ ಪಕ್ಷ ತೊರೆದುಹೋಗುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ ರಾಜಕೀಯ ಪರಿದೃಶ್ಯದಲ್ಲಿ ಲೆಕ್ಕಕ್ಕೇ ಇಲ್ಲದಂತಿದ್ದ, ಕ್ಯಾಮೆರಾ ಹಿಡಿದುಕೊಂಡು ತನ್ನ ಲೋಕದಲ್ಲಿ ತಾನು ಮುಳುಗಿದ್ದ ಉದ್ಧವ್‌ ಠಾಕ್ರೆ ಎಂಬ ನಾಚಿಕೆಯ ಯುವಕ ಶಿವಸೇನೆಯ ನೊಗ ಹೊರುತ್ತಾರೆ ಎಂಬ ಕಲ್ಪನೆಯೂ ಇರಲಿಲ್ಲ!

“ಬಾಳಾ ಠಾಕ್ರೆಯ ನಂತರ ರಾಜ್‌ ಠಾಕ್ರೆ’ ಎಂಬ ಮಾತು ಎಷ್ಟು ಪ್ರಚಲಿತದಲ್ಲಿ ಬಂತು ಎಂದರೆ, ರಾಜ್‌ ಕೂಡ ಅದನ್ನು ಗಟ್ಟಿಯಾಗಿಯೇ ನಂಬಿದ್ದರು. ಆ ಸಮಯದಲ್ಲಷ್ಟೇ ಅಲ್ಲ, ಬಾಲ್ಯದಿಂದಲೇ ರಾಜ್‌ ಠಾಕ್ರೆ ತನ್ನ ದೊಡ್ಡಪ್ಪ ಬಾಳಾ ಠಾಕ್ರೆಯನ್ನು ಅನುಕರಿಸುತ್ತಾ, ಅನುಸರಿಸುತ್ತಾ ಬೆಳೆದವರು (ರಾಜ್‌ ಕೂಡ ಕಾಟೂìನಿಸ್ಟ್‌ ಆಗಿದ್ದವರು. ಅವರ ಧ್ವನಿಯೂ ಬಾಳಾ ಠಾಕ್ರೆಯವರನ್ನು ಹೋಲುತ್ತದೆ).

ಆ ಸಮಯದಲ್ಲಿ ರಾಜ್‌ ಠಾಕ್ರೆಗೆ ಶಿವಸೇನೆಯಲ್ಲಿ ಪ್ರತಿಸ್ಪರ್ಧಿಯೇ ಇಲ್ಲವಾಗಿತ್ತು. ಅತ್ತ, ಉದ್ಧವ್‌ ಠಾಕ್ರೆ ರಾಜಕೀಯಕ್ಕೂ ತಮಗೂ ಸಂಬಂಧವೇ ಇಲ್ಲದಂತೆ ಬದುಕುತ್ತಿದ್ದರು. ಜೆಜೆ ಇನ್ಸ್‌ಟಿಟ್ಯೂಟ್‌ ಆಫ್ ಅಪ್ಲೆ„ಡ್‌ ಆರ್ಟ್ಸ್ ಕಾಲೇಜಿನಲ್ಲಿ ಪದವಿ ಪಡೆದು, ಪೂರ್ಣಾವಧಿ ಫೋಟೋಗ್ರಾಫ‌ರ್‌ ಆಗಿಯೇ ಬದುಕು ಸವೆಸುತ್ತೇನೆ ಎಂದು ನಿರ್ಧರಿಸಿದ್ದ ಉದ್ಧವ್‌ ಜಗತ್ತಿನಾದ್ಯಂತ ಭೂದೃಶ್ಯಗಳನ್ನು, ವನ್ಯ ಮೃಗಗಳನ್ನು, ಅಪ್ಪ ಬಾಳಾ ಠಾಕ್ರೆಯ ರ್ಯಾಲಿಗಳಲ್ಲಿನ ಜನಸಾಗರವನ್ನು, ರಾಜ್‌ ಠಾಕ್ರೆಯ ಆಕ್ರಮಣಶೀಲ ಭಂಗಿಗಳನ್ನು ಕ್ಯಾಮೆರಾದಲ್ಲಿ ಸೆರೆ

ಹಿಡಿಯುತ್ತ ಸಮಯ ಕಳೆಯುತ್ತಿದ್ದರು. ಆದಾಗ್ಯೂ ಅವರು 1985ರಲ್ಲಿ ಮುಂಬಯಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಪರ ಪ್ರಚಾರ ಮಾಡಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದರಾದರೂ, ಸಕ್ರಿಯ ರಾಜಕಾರಣಕ್ಕೆ ಧುಮುಕಲು ಹಿಂದೇಟು ಹಾಕುತ್ತಲೇ ಬಂದರು. ಆದಾಗ್ಯೂ ಬಾಳಾ ಠಾಕ್ರೆಯವರಿಗೆ ಉದ್ಧವ್‌, ಮೂರನೆಯ ಮಗ. ಮೊದಲ ಮಗ ಬಿಂದುಮಾಧವ್‌ ಠಾಕ್ರೆ ಸಿನೆಮಾ ವಿತರಣೆ, ಪ್ರೊಡಕ್ಷನ್‌ನಲ್ಲೇ ಕಳೆದುಹೋಗಿದ್ದರು, ಎರಡನೆಯ ಮಗ ಜೈದೇವ ಠಾಕ್ರೆಗೂ ಬಾಳಾ ಠಾಕ್ರೆಗೂ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ಹೀಗಾಗಿ ಮೂರನೆಯ ಮಗನಾದರೂ ರಾಜಕೀಯಕ್ಕೆ ಬರಬೇಕು ಎಂಬ ಇಚ್ಛೆ ಅವರಿಗೆ ಆರಂಭವಾಯಿತು ಎನ್ನಲಾಗುತ್ತದೆ.

ದಿ ಠಾಕ್ರೆ ಕಸಿನ್ಸ್‌ ಪುಸ್ತಕದ ಲೇಖಕ ಧವಲ್‌ ಕುಲ್ಕರ್ಣಿ ಉದ್ಧವ್‌ ಠಾಕ್ರೆಯವರ ರಾಜಕೀಯದ ಆರಂಭಿಕ ದಿನಗಳ ಬಗ್ಗೆ ಹೀಗೆ ಹೇಳುತ್ತಾರೆ, “”ಅದು 1991. ನಾಗಪುರದಲ್ಲಿ ನಿರುದ್ಯೋಗದ ವಿರುದ್ಧ ರಾಜ್‌ ಠಾಕ್ರೆ ನೇತೃತ್ವದಲ್ಲಿ ರ್ಯಾಲಿಯೊಂದು ಆಯೋಜಿತವಾಗಿತ್ತು. ಎಲ್ಲಾ ತಯ್ನಾರಿ ಪೂರ್ಣಗೊಂಡು, ರಾಜ್‌ ಠಾಕ್ರೆಯೊಬ್ಬರೇ ಭಾಷಣ ಮಾಡಲಿದ್ದಾರೆ ಎಂದೂ ನಿರ್ಧರಿತವಾಗಿತ್ತು. ಆದರೆ ರ್ಯಾಲಿಗೂ ಮುನ್ನಾ ದಿನ ರಾಜ್‌ ಠಾಕ್ರೆಗೆ ಮಾತೋಶ್ರಿಯಿಂದ(ಬಾಳಾ ಠಾಕ್ರೆ ನಿವಾಸ) ಒಂದು ಕರೆ ಬಂತು. “ರಾಜ್‌, ನಿನ್ನ ಜತೆಗೆ ನಿನ್ನ ಅಣ್ಣ ಉದ್ಧವ್‌ ಭಾಷಣ ಮಾಡುತ್ತಾನೆ’ ಎಂಬ ಆದೇಶ ಅತ್ತಲಿಂದ ಬಂತು! ರಾಜ್‌ ಠಾಕ್ರೆ
ಇದರಿಂದ ಕೆರಳಿ ಕೆಂಡವಾದರು…ನಂತರದಿಂದ ಉದ್ಧವ್‌ ಮತ್ತು ರಾಜ್‌ ನಡುವೆ
ಮತಭೇದ ಬೆಳೆಯುತ್ತ ಹೋಯಿತು.”

ಅಂದು ಉದ್ಧವ್‌ ಠಾಕ್ರೆ ಮಾಡಿದ್ದ ಭಾಷಣದಿಂದ ಜನರಿಗೆ ಒಂದು ಅಂಶ ಸ್ಪಷ್ಟವಾಗಿತ್ತು- ಏನೆಂದರೆ, ಉದ್ಧವ್‌ ತನ್ನ ತಂದೆ ಮತ್ತು ರಾಜ್‌ ಠಾಕ್ರೆಗಿಂತ ಸಂಪೂರ್ಣ ಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಬಾಳಾ ಠಾಕ್ರೆ ಅಥವಾ ರಾಜ್‌ರಂಥ ಫೈಯರ್‌ ಬ್ರ್ಯಾಂಡ್‌ ಅಲ್ಲ ಹಾಗೂ ಅವರಿಬ್ಬರಲ್ಲಿರುವಂಥ ಭಾಷಾ ಪಾಂಡಿತ್ಯವಾಗಲಿ, ಹಾಸ್ಯಪ್ರಜ್ಞೆಯಾಗಲಿ, ಸಾಮಾಜಿಕ-ರಾಜಕೀಯದ ವಿಷಯದಲ್ಲಿ ಆಳವಾಗಲಿ ಇಲ್ಲ ಎನ್ನುವುದು!

1995-96ರ ನಡುವಿನ ಕೆಲ ಘಟನಾವಳಿಗಳು ಶಿವಸೇನೆಯ ದಿಕ್ಕು ಬದಲಾಗಲು ಕಾರಣವಾದವು. 1995ರವರೆಗೂ ಬಾಳಾ ಠಾಕ್ರೆಯವರ ಜತೆಯೇ ವಾಸಿಸುತ್ತಿದ್ದ ಅವರ ಎರಡನೆಯ ಮಗ ಜೈದೇವ್‌ ಠಾಕ್ರೆ, ಅದೇ ವರ್ಷ ತಮ್ಮ ಪತ್ನಿ ಸ್ಮಿತಾಗೆ ವಿಚ್ಛೇದನ ನೀಡಿ, ಮತ್ತೂಂದು ಮದುವೆಯಾಗಿ, ಮನೆ ತೊರೆದುಬಿಟ್ಟರು. ಈ ಘಟನೆಯಿಂದಾಗಿ ಬಾಳಾ ಠಾಕ್ರೆ ಬಹಳ ಆಘಾತಕ್ಕೀಡಾದರು ಮತ್ತು ಜೈದೇವ್‌ರ ಬಗ್ಗೆ ಅವರಿಗಿದ್ದ ಅಸಮಾಧಾನ ವಿಪರೀತವಾಗಿ, ಅವರೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು. ಇನ್ನು ಅದೇ ವರ್ಷವೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು ಹಾಗೂ ಅದೇ ವರ್ಷ ಬಾಳಾ ಠಾಕ್ರೆಯವರ ಮಡದಿ ಮೀನಾ ಮೃತಪಟ್ಟರು!

ಇದು ಸಾಲದೆಂಬಂತೆ, ಮರು ವರ್ಷವೇ, ಅಂದರೆ, 1996ರಲ್ಲಿ ಬಾಳಾ ಠಾಕ್ರೆಯವರ ಹಿರಿಯ ಮಗ ಬಿಂದುಮಾಧವ ರಸ್ತೆ ಅಪಘಾತವೊಂದರಲ್ಲಿ ಅಕಾಲ ಮೃತ್ಯುವಿಗೀಡಾದರು! ಈ ಘಟನೆಯ ನಂತರವಂತೂ ಬಾಳಾ ಠಾಕ್ರೆ ಕುಸಿದುಬಿಟ್ಟರು. ಪರಿವಾರಕ್ಕೆ ಬಂದ ಈ ವಿಪತ್ತಿನ ಸಮಯದಲ್ಲಿ ಅಪ್ಪನಿಗೆ ಸಮಾಧಾನ ಹೇಳಲು ಜೈದೇವ ಠಾಕ್ರೆ ಕೂಡ ಮನೆಗೆ ಬಂದರು. ಬಾಳಾ ಠಾಕ್ರೆ ಕೂಡ ಜೈದೇವರನ್ನು ಕ್ಷಮಿಸಿ, ಇನ್ಮುಂದೆ ಇವನೂ ನಮ್ಮ ಜತೆಗಿರುತ್ತಾನೆ ಎಂದೇ ಭಾವಿಸಿದರು. ಆದರೆ ಕೆಲವೇ ದಿನಗಳಲ್ಲಿ ಜೈದೇವ, ಮತ್ತೆ ಮನೆ ಬಿಟ್ಟು ಹೋಗಿಬಿಟ್ಟರು. ಆ ನೋವಿನ ಸಮಯದಲ್ಲಿ ಬಾಳಾ ಠಾಕ್ರೆಗೆ ಹೆಗಲಾದ ಏಕೈಕ ವ್ಯಕ್ತಿ ಉದ್ಧವ್‌ ಠಾಕ್ರೆ. ಆ ಸಮಯದಲ್ಲಿ ರಾಜ್‌ ಠಾಕ್ರೆಗೂ ಬಾಳಾ ಠಾಕ್ರೆ ಜತೆ ನಿಲ್ಲಲಾಗಲಿಲ್ಲ. ಏಕೆಂದರೆ, ಅದೇ ವರ್ಷವೇ ಪುಣೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ರಾಜ್‌ ಠಾಕ್ರೆ ಹೆಸರು ತಳಕು ಹಾಕಿಕೊಂಡುಬಿಟ್ಟಿತ್ತು!

ಆಗ ರಮೇಶ್‌ ಕಿಣಿ ಎನ್ನುವವರ ಹತ್ಯೆಯ ಪ್ರಕರಣದಲ್ಲಿ ರಾಜ್‌ ಠಾಕ್ರೆಯವರ ಹೆಸರು ಕೇಳಿಬಂದಿತ್ತು. ಸೆಂಟ್ರಲ್‌ ಮುಂಬೈಯಿಯ ನಿವಾಸಿಯಾಗಿದ್ದ ರಮೇಶ್‌ ಕಿಣಿಯವರ ದೇಹವು ಪುಣೆ ಥಿಯೇಟರ್‌ನಲ್ಲಿ ಸಿಕ್ಕಿತ್ತು. “”ನನ್ನ ಪತಿಯ ಸಾವಿಗೆ ರಾಜ್‌ ಠಾಕ್ರೆ ಮತ್ತವರ ಗೆಳೆಯರೇ ಕಾರಣ. ಏಕೆಂದರೆ, ನಾವಿರುವ ಮನೆಯನ್ನು ಖಾಲಿ ಮಾಡಿಸಲು ರಾಜ್‌ ಠಾಕೆಯ ಗೆಳೆಯ ಪ್ರಯತ್ನಿಸುತ್ತಿದ್ದ, ನಾವು ಅದಕ್ಕೆ ಒಪ್ಪಿರಲಿಲ್ಲ. ರಾಜ್‌ ಠಾಕ್ರೆ ನನ್ನ ಮನೆಯವರನ್ನು ಅನೇಕ ಬಾರಿ ಕಚೇರಿಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರು’ ಎಂದು ರಮೇಶ್‌ ಕಿಣಿಯ ಪತ್ನಿ ಆರೋಪಿಸಿದ್ದರು.

ಈ ಸಮಯದಲ್ಲಿ ಬಿಜೆಪಿ- ಶಿವಸೇನೆಯ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ವರ್ಷವಾಗಿತ್ತು. ರಾಜ್‌ ಠಾಕ್ರೆ ವಿರುದ್ಧದ ಈ ಪ್ರಕರಣವು ಶಿವಸೇನೆ-ಬಿಜೆಪಿ ಸರ್ಕಾರವನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಮೊದಲೇ ವೈಯಕ್ತಿಕ ಬದುಕಿನಲ್ಲಾದ ಹಾನಿಯಿಂದ ತತ್ತರಿಸಿದ್ದ ಬಾಳಾ ಠಾಕ್ರೆ ಇದರಿಂದ ಕೆರಳಿ ಕೆಂಡವಾದರು. ಈ ಪ್ರಕರಣದಿಂದ ರಾಜ್‌ ಠಾಕ್ರೆ ದೋಷಮುಕ್ತರಾದದ್ದು ನಿಜವೇ ಆದರೂ, ನಂತರದ ಕೆಲವು ವರ್ಷಗಳಲ್ಲಿ ಅವರು ರಾಜಕೀಯವಾಗಿ ತಣ್ಣಗಾಗಿಬಿಟ್ಟರು(ರಾಜ್‌ ಠಾಕ್ರೆಯವರನ್ನು ಖುಲಾಸೆಗೊಳಿಸಲು ಬಾಳಾ ಠಾಕ್ರೆ ಬಹಳ ಶ್ರಮಪಟ್ಟರು ಎನ್ನಲಾಗುತ್ತದೆ). ಈ ಪ್ರಕರಣವನ್ನೇ ನೆಪವಾಗಿಟ್ಟುಕೊಂಡ ಪಕ್ಷದಲ್ಲಿನ ಕೆಲವರು, ಉದ್ಧವ್‌ರನ್ನು ಶಿವಸೇನೆಯಲ್ಲಿ ಮುಂದೆ ತರಬೇಕೆಂದು ಬಾಳಾ ಠಾಕ್ರೆಯವರಿಗೆ ಸಲಹೆ ನೀಡಲಾರಂಭಿಸಿದರು. ಇತ್ತ ಉದ್ಧವ್‌ ಠಾಕ್ರೆಯವರ ಪತ್ನಿ ರಶ್ಮಿಯವರೂ ಕೂಡ ತಮ್ಮ ಪತಿಗೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗುವಂತೆ ಒತ್ತಾಯಿಸಿದರು ಎನ್ನಲಾಗುತ್ತದೆ.

ಪರಿಣಾಮವಾಗಿ ಮರುವರ್ಷದಿಂದಲೇ, ಅಂದರೆ 1997ರ ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಉದ್ಧವ್‌ ಠಾಕ್ರೆ ಸಕ್ರಿಯ ಪಾತ್ರ ವಹಿಸಿದರು. ತದನಂತರ 2002ರಲ್ಲಿ ನಡೆದ ಮಹಾನಗರ ಪಾಲಿಕೆಯ ಚುನಾವಣೆಯ ಪೂರ್ಣ ಜವಾಬ್ದಾರಿಯನ್ನೂ ಉದ್ಧವ್‌ರಿಗೇ ಕೊಡಲಾಯಿತು. ಆ ಸಮಯದಲ್ಲೇ ಉದ್ಧವ್‌ ಠಾಕ್ರೆಯೇ ಬಾಳಾಠಾಕ್ರೆಯ ಉತ್ತರಾಧಿಕಾರಿ ಆಗುತ್ತಾರೆ ಎನ್ನುವುದಕ್ಕೆ ಸುಳಿವು ಸಿಗಲಾರಂಭಿಸಿತ್ತು. ಈ ಸುಳಿವು ರಾಜ್‌ ಠಾಕ್ರೆಗೂ ಸಿಕ್ಕಿತ್ತು. ಏಕೆಂದರೆ 2002ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜ್‌ ಠಾಕ್ರೆಬೆಂಬಲಿಗರನ್ನೆಲ್ಲ ಶಿವಸೇನೆ ಮೂಲೆಗುಂಪಾಗಿಸಿತ್ತು. ಆದರೂ ರಾಜ್‌ ಠಾಕ್ರೆ, ದೊಡ್ಡಪ್ಪ ಬಾಳಾ ಸಾಹೇಬ್‌ ಮೇಲಿನ ಗೌರವದಿಂದ ಸುಮ್ಮನೇ ಇದ್ದರು.

ಶಿವಸೇನೆಯಲ್ಲಿ ನಿಜಕ್ಕೂ ಗೇಮ್‌ ಚೇಂಜ್‌ ಆಗಿದ್ದು 2003ರಲ್ಲಿ ಮಹಾಬಳೇಶ್ವರದಲ್ಲಿ ನಡೆದ ಪಕ್ಷದ ಸಮ್ಮೇಳನದಲ್ಲಿ. ಸಮ್ಮೇಳನದ ಕೊನೆಯ ದಿನ ಬಾಳಾ ಠಾಕ್ರೆ ಅನುಪಸ್ಥಿತಿಯಲ್ಲಿ ಉದ್ಧವ್‌ ಠಾಕ್ರೆಯವರ ಹೆಸರನ್ನು “ಕಾರ್ಯಕಾರಿ ಅಧ್ಯಕ್ಷ’ರನ್ನಾಗಿ ಘೋಷಿಸಲಾಯಿತು. ಗಮನಿಸಬೇಕಾದ ಅಂಶವೆಂದರೆ, ಅದಕ್ಕಿಂತ ಮುಂಚೆ ಅಂಥದ್ದೊಂದು ಹುದ್ದೆಯೇ ಶಿವಸೇನೆಯಲ್ಲಿ ಇರಲಿಲ್ಲ! ಹೆಚ್ಚು ಚಕಿತಗೊಳಿಸುವ ಸಂಗತಿಯೆಂದರೆ, ಉದ್ಧವ್‌ರ ಹೆಸರನ್ನು ಘೋಷಿಸುವ ಜವಾಬ್ದಾರಿಯನ್ನು ಬಾಳಾ ಠಾಕ್ರೆಯವರು ವಹಿಸಿದ್ದು ರಾಜ್‌ ಠಾಕ್ರೆಗೆ! (ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ರಾಜ್‌ ಠಾಕ್ರೆ ಉದ್ಧವ್‌ರ ಹೆಸರನ್ನು ಘೋಷಿಸುವ ಮೂಲಕ ತಮ್ಮ ನಡುವೆ ವೈಮನಸ್ಯವಿಲ್ಲ ಎನ್ನುವುದನ್ನು ರುಜುವಾತು ಮಾಡಬೇಕಿತ್ತು!) ದೊಡ್ಡಪ್ಪನ ಮಾತಿಗೆ ಮರುಮಾತನಾಡದ ರಾಜ್‌ ಠಾಕ್ರೆ, ಉದ್ಧವ್‌ರ ಹೆಸರನ್ನು ಘೋಷಿಸಿದರಾದರೂ, ಅವರಿಗೆ ಉದ್ಧವ್‌ ಮೇಲಿನ ಮುನಿಸು ದುಪ್ಪಟ್ಟಾಯಿತು.

ಆರಂಭಿಕ ಸಮಯದಲ್ಲಿ ಪಕ್ಷದಲ್ಲಿ ಹೊಂದಿಕೊಳ್ಳಲು ಉದ್ಧವ್‌ ಹೆಣಗಾಡಲಾರಂಭಿಸಿದರೂ ಕೆಲವೇ ದಿನಗಳಲ್ಲೇ ರಾಜಕೀಯ ಪಟ್ಟುಗಳನ್ನು ಕಲಿಯತೊಡಗಿದರು, ಉತ್ತಮ ಭಾಷಣಕಾರನಾಗದಿದ್ದರೂ, ಉತ್ತಮ ಆಡಳಿತಗಾರನ ಗುಣಗಳು ಅವರಲ್ಲಿದ್ದವು. ನಿಧಾನಕ್ಕೆ ಅವರು ಪಕ್ಷವನ್ನು ಮರುಸಂಘಟಿಸಲಾರಂಭಿಸಿದರು, ತಮಗೆ ಬೇಕಾದವರನ್ನು ಪ್ರಮುಖ ಸ್ಥಾನಗಳಲ್ಲಿ ತಂದು ಕೂರಿಸಲಾರಂಭಿಸಿದರು, ಶಿವಸೇನೆಯನ್ನು ಕೇವಲ ಮರಾಠಿ ಜನರಿಗಷ್ಟೇ ಸೀಮಿತವಾಗಿಸದೇ ಎಲ್ಲರ ಬಳಿ ಕೊಂಡೊಯ್ಯುವ ಮಾತನಾಡಲಾರಂಭಿಸಿದರು, ಮಾಧ್ಯಮಗಳ ಎದುರು ಪಕ್ಷದ ಪಾಲಿಸಿಗಳನ್ನು ವಿವರಿಸತೊಡಗಿದರು.

ಒಟ್ಟಲ್ಲಿ ಉದ್ಧವ್‌ ನಿಧಾನಕ್ಕೆ ಪಕ್ಷದ ಕಾರ್ಯವೈಖರಿ ಮತ್ತು ಚಹರೆಯನ್ನೇ ಬದಲಿಸುತ್ತಾ ಹೋದರು. ಆದರೆ ಈ ಬದಲಾವಣೆಗಳಿಗೆಲ್ಲ ಪಕ್ಷದಲ್ಲಿನ ಹಿರಿಯ ನಾಯಕರಿಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಷ್ಟರಲ್ಲಾಗಲೇ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಪ್ರಮುಖ ನಾಯಕ ನಾರಾಯಣ ರಾಣೆ, ಉದ್ಧವ್‌ರ ಕಾರ್ಯವೈಖರಿಯನ್ನು ದೂಷಿಸುತ್ತಾ ಶಿವಸೇನೆಯಿಂದ ಹೊರನಡೆದುಬಿಟ್ಟರು. ಹೊರ ಹೋಗಿದ್ದಷ್ಟೇ ಅಲ್ಲದೇ, ತಮ್ಮೊಂದಿಗೆ 13 ಸಚಿವರನ್ನೂ ಕೊಂಡೊಯ್ದರು! ತದನಂತರ ನಡೆದ ಉಪಚುನಾವಣೆಯಲ್ಲಿ ರಾಣೆಯೊಂದಿಗಿದ್ದ 13 ನಾಯಕರಲ್ಲಿ ಹತ್ತು ಮಂದಿ ಗೆದ್ದುಬಿಟ್ಟರು. ಇದಾದ 7 ತಿಂಗಳಲ್ಲೇ ರಾಜ್‌ ಠಾಕ್ರೆಯೂ ಬಹಿರಂಗವಾಗಿಯೇ ಶಿವಸೇನೆಯ ಮೇಲೆ ಮುನಿಸು ತೋರಿಸಿ ಪಕ್ಷದಿಂದ ಹೊರನಡೆದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯನ್ನು ಸ್ಥಾಪಿಸಿದರು.

ಪಕ್ಷದಿಂದ ಹೊರಬಿದ್ದ ರಾಜ್‌ ಠಾಕ್ರೆ ಜೋರಾಗಿಯೇ ಮರಾಠಾ ಮಾನುಸ್‌ ಮಂತ್ರವನ್ನು ಜಪಿಸುತ್ತಾ ಶಿವಸೇನೆಯ ವಿರುದ್ಧ ಪರೋಕ್ಷ ಸಮರ ಸಾರಿದರು. 2006ರಿಂದ-2009ರವರೆಗೆ ಶಿವಸೇನೆ ವರ್ಸಸ್‌ ರಾಜ್‌ ಠಾಕ್ರೆ ಗದ್ದಲದ ಪರಿಣಾಮವು 2009ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಶಿವಸೇನೆಯ ಈ ಒದ್ದಾಟದ ಫ‌ಲವಾಗಿ, ಮತ್ತೆ ಕಾಂಗ್ರೆಸ್‌-ಎನ್‌ಸಿಪಿ ಜೋಡಿಯು ಅನಾಯಾಸವಾಗಿ ಗೆದ್ದು, ಅಧಿಕಾರವನ್ನು ಉಳಿಸಿಕೊಂಡಿತು. 2009ರ ನಂತರ ಉದ್ಧವ್‌ ಪಕ್ಷವನ್ನು ಗಟ್ಟಿಗೊಳಿಸಲು ಆರಂಭಿಸಿದರು, ಪಕ್ಷದೊಳಗಿನ ಅಸಮಾಧಾನಗಳನ್ನೆಲ್ಲ ಬಗೆಹರಿಸಿದರು. ಶಿವಸೇನೆ ಚೇತರಿಸಿಕೊಳ್ಳಲಾರಂಭಿಸಿತು.

17 ನವೆಂಬರ್‌, 2012. ಶಿವಸೇನೆಗೆ ಬಹುದೊಡ್ಡ ಹೊಡೆತ ಬಿದ್ದ ದಿನವಿದು. ಶಿವಸೇನೆ ಸ್ಥಾಪಕ ಬಾಳಾ ಸಾಹೇಬ್‌ ಠಾಕ್ರೆಯವರು, ಹೃದಯಾಘಾತದಿಂದ ನಿಧನರಾದರು.

ಉದ್ಧವ್‌ ಠಾಕ್ರೆ, ಆಗ ಏಕಾಂಗಿಯಾದರಾದರೂ, ಜನರ ಅನುಕಂಪದ ಬೃಹತ್‌ ಬೆಂಬಲ ಅವರಿಗೆ ದಕ್ಕಿತ್ತು. ಅಲ್ಲಿಯವರೆಗೂ ಪಕ್ಷದಲ್ಲಿ ನಿಜವಾದ ಮಾಸ್ಟರ್‌ ಯಾರೂ ಎನ್ನುವ ವಿಚಾರದಲ್ಲಿ ಶಿವಸೈನಿಕರಿಗೂ ಗೊಂದಲವಿದ್ದೇ ಇತ್ತು. ಆದಾಗ್ಯೂ 2012ರ ಫೆಬ್ರವರಿಯಲ್ಲಿ ನ‚ಡೆದ ಬೃಹನ್‌ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯು ಭರ್ಜರಿ ಗೆಲುವು ಸಾಧಿಸಿತ್ತಾದರೂ, ಜನರು ಈ ಗೆಲುವಿನ ಸಂಪೂರ್ಣ ಕ್ರೆಡಿಟ್‌ ಅನ್ನು ಉದ್ಧವ್‌ಗೆ ಕೊಟ್ಟಿರಲಿಲ್ಲ. ಆದರೆ ಬಾಳಾ ಠಾಕ್ರೆಯ ನಿಧನಾ ನಂತರದ ದಿನಗಳಲ್ಲಿ ಚಿತ್ರಣ ಸಂಪೂರ್ಣ ಬದಲಾಯಿತು. ಉದ್ಧವ್‌ರ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಸಕಾರಾತ್ಮಕ ಭಾವನೆ ಸೃಷ್ಟಿಯಾಗಲಾರಂಭಿಸಿತು…ಇನ್ನೇನು ಮಹಾರಾಷ್ಟ್ರದಲ್ಲಿ ಉದ್ಧವ್‌ರದ್ದೇ ನಾಯಕತ್ವ ಎಂಬಂಥ ವಾತಾವರಣ ಸೃಷ್ಟಿಯಾಗುತ್ತಿರುವ ವೇಳೆಯಲ್ಲೇ ಎದುರಾಯಿತು, 2014ರ ಲೋಕಸಭಾ ಚುನಾವಣೆ!

2014ರ ಲೋಕಸಭಾ ಚುನಾವಣೆಯ ನಂತರ ಮಹಾರಾಷ್ಟ್ರ ರಾಜಕಾರಣದ ಚಿತ್ರಣವೇ ಸಂಪೂರ್ಣ ಬದಲಾಯಿತು. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯ ದಿಗ್ವಿಜಯ, ತದನಂತರದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿಯ ಅದ್ಭುತ ಸಾಧನೆಯ ಹಿಂದೆ ಕೆಲಸ ಮಾಡಿದ ಮೋದಿ ಅಲೆಯ ಮುಂದೆ ಉದ್ಧವ್‌ ಠಾಕ್ರೆಯ ಹೊಸ ಇಮೇಜು ಮುಚ್ಚಿಹೋಗಿದ್ದು ಸುಳ್ಳಲ್ಲ!

2014ರಿಂದ ಶಿವಸೇನೆ ಅಕ್ಷರಶಃ ಬಿಜೆಪಿಯ ಬಿ-ಟೀಂ ಆಗಿ ಬದಲಾಗಿಬಿಟ್ಟಿತು! ಆಗಷ್ಟೇ ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸಲಾರಂಭಿಸಿದ್ದ ಉದ್ಧವ್‌ ಠಾಕ್ರೆ ಅವರಿಗೆ ದೇವೇಂದ್ರ ಫ‌ಡ್ನವೀಸ್‌ರ ಜನಪ್ರಿಯತೆಯು ಹೊಸ ಸಾವಾಲಾಗಿ ಪರಿಣಮಿಸಿತು.

ಅವೆಲ್ಲದರ ಪರಿಣಾಮವನ್ನೇ ನಾವೀಗ ನೋಡುತ್ತಿದ್ದೇವೆ…
ಅಧಿಕಾರದಾಸೆಯು ಉದ್ಧವ್‌ರನ್ನು ಹಿಂದುತ್ವ ತೊರೆದು ಎನ್‌ಸಿಪಿ ಜತೆ ಸೇರುವಂತೆ ಮಾಡಿದೆ ಎನ್ನುವುದು ನಿಜ. ಆದರೆ, ಇದೇ ವೇಳೆಯಲ್ಲೇ ಹಿಂದುತ್ವದ ವಿಷಯ ಬಂದಾಗ, ತನಗೆ ಬಿಜೆಪಿಯನ್ನು ಮೀರಿಸಲು ಸಾಧ್ಯವೇ ಆಗದು ಎನ್ನುವುದು ಉದ್ಧವ್‌ರಿಗೆ ಸ್ಪಷ್ಟವಾಗಿ ಅರಿವಾಗಿದೆ. ಈ ಕಾರಣಕ್ಕಾಗಿಯೇ, ಉದ್ಧವ್‌ ಈಗ ಹಿಂದುತ್ವದ ಕೈಬಿಟ್ಟು, ಮತ್ತೆ ಮರಾಠಾ ಅಸ್ಮಿತೆಯ ರಾಜಕಾರಣದತ್ತ ವಾಲಲು ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತದೆ.

ಶಿವಸೇನೆಯ ಪ್ರಮುಖ ಅಜೆಂಡಾ ಆಗಿದ್ದ ಮರಾಠಾ ಅಸ್ಮಿತೆಯೊಂದೇ ಭವಿಷ್ಯದಲ್ಲಿ ಶಿವಸೇನೆಯ ಕೈ ಹಿಡಿಯಬಹುದು ಎನ್ನಲಾಗುತ್ತದೆ. ಆದರೆ, ಎನ್‌ಸಿಪಿ-ಕಾಂಗ್ರೆಸ್‌ ಜೊತೆಗಿನ ಈ ಅತಂತ್ರ ಮೈತ್ರಿಯು ಉದ್ಧವ್‌ರ ಈ ಕನಸಿಗೆ ಸಹಕರಿಸಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಒಟ್ಟಲ್ಲಿ ಉದ್ಧವ್‌ ಅಂತೂ ಬಹಳ ದೊಡ್ಡ ರಿಸ್ಕ್ ಅನ್ನೇ ತೆಗೆದುಕೊಂಡಿದ್ದಾರೆ…

ಇಲ್ಲಿ ಒಂದು ಘಟನೆಯನ್ನು ಹೇಳಲೇಬೇಕು. 90ರ ದಶಕದಲ್ಲಿ ರಾಜ್‌ ಠಾಕ್ರೆ ನಿಯಮಿತವಾಗಿ ಬ್ಯಾಡ್ಮಿಂಟನ್‌ ಆಡಲು ದಾದರ್‌ಗೆ ಹೋಗುತ್ತಿದ್ದರಂತೆ. ಬ್ಯಾಡ್ಮಿಂಟನ್‌ನಲ್ಲಿ ಪಳಗಿ ಫಿಟ್‌ ಆಗಿದ್ದ ರಾಜ್‌, ನಂತರದಲ್ಲಿ ಉದ್ಧವ್‌ರನ್ನೂ ಆಟವಾಡಲು ಜತೆಗೆ ಕರೆದೊಯ್ಯಲಾರಂಭಿಸಿದರಂತೆ. ಒಂದು ದಿನ ಆಟವಾಡುತ್ತಿರುವಾಗ ಉದ್ಧವ್‌ ಠಾಕ್ರೆ ರಾಜ್‌ ಹೊಡೆದ ಶಟಲ್‌ ಅನ್ನು ಹಿಂದಿರುಗಿಸಲು ಹೋಗಿ ಎಡವಿ ಬಿದ್ದರಂತೆ. ಇದನ್ನು ನೋಡಿದ ರಾಜ್‌ ಮತ್ತು ಅವರ ಗೆಳೆಯರು ಬಿದ್ದೂ ಬಿದ್ದು ನಕ್ಕರಂತೆ. ಈ ಘಟನೆಯ ನಂತರ ಉದ್ಧವ್‌ ಅಲ್ಲಿಗೆ ಹೋಗುವುದನ್ನೇ ಬಿಟ್ಟುಬಿಟ್ಟರಂತೆ!

ಬಹುಶಃ ಉದ್ಧವ್‌ ಅವಮಾನದಿಂದಾಗಿ ಬ್ಯಾಡ್ಮಿಂಟನ್‌ ಆಡುವುದನ್ನೇ ಬಿಟ್ಟುಬಿಟ್ಟಿರಬೇಕು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಉದ್ಧವ್‌ ಪ್ರಾಕ್ಟೀಸ್‌ ಮಾಡುವುದಕ್ಕೆ ಬೇರೆಯದ್ದೇ ಬ್ಯಾಡ್ಮಿಂಟನ್‌ ಕೋರ್ಟ್‌ ಬುಕ್‌ ಮಾಡಿದ್ದರು! ಅಷ್ಟೇ ಅಲ್ಲದೇ, ರಾಜ್‌ ಠಾಕ್ರೆಗೆ ಕಲಿಸಿಕೊಡುತ್ತಿದ್ದ ಕೋಚ್‌ರನ್ನೇ ತಮ್ಮ ಕೋಚಿಂಗ್‌ಗೂ ಕರೆಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಉದ್ಧವ್‌ರ ಆಟದಲ್ಲಿ ಎಷ್ಟು ಸುಧಾರಣೆ ಕಂಡುಬಂದಿತೆಂದರೆ, ಒಬ್ಬ ಅನುಭವಿ ಆಟಗಾರನಿಗೂ ಬೆವರಿಳಿಸುವಂಥ ಆಟಗಾರನಾದರು ಎಂದು ಅವರ ಕೋಚ್‌
ಹೇಳುತ್ತಾರೆ.

ಈಗ ರಾಜಕೀಯ ಕೋರ್ಟ್‌ನಲ್ಲೂ ಹೊಸ ಮೈದಾನಕ್ಕೆ ತೆರಳಿದ್ದಾರೆ ಉದ್ಧವ್‌. ಹೊಸ ಕೋರ್ಟ್‌ನಲ್ಲಿ ಅವರು ಸದೃಢ ರಾಜಕಾರಣಿಯಾಗಿ ಪಳಗುತ್ತಾರೋ ಅಥವಾ ಹೊರಬಿದ್ದು ರಾಜ್‌ ಠಾಕ್ರೆಯವರಂತೆ ಏಕಾಂಗಿಯಾಗಿ ಹೋಗುತ್ತಾರೋ ನೋಡಬೇಕಿದೆ. ಏಕೆಂದರೆ, ಪವಾರ್‌ ಉದ್ಧವ್‌ರನ್ನು ಅದ್ಭುತ ಆಟಗಾರನನ್ನಾಗಿ ಮಾಡಬಲ್ಲ ಕೋಚ್‌ ಅಲ್ಲವಲ್ಲ!

 ಆಚಾರ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

ಸ್ವತಂತ್ರ ಭಾರತದ ಮೊದಲ ಇ-ಅಧಿವೇಶನಕ್ಕೆ ವೇದಿಕೆ ಸಿದ್ಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RAJANITI

ಇತಿಹಾಸ ಕಲಿಸಿದ ಪಾಠವನ್ನು ಮರೆಯುತ್ತಿರುವ ಕಾಂಗ್ರೆಸ್‌

kejriwal

ಕೇಜ್ರಿ ಕಮಾಲ್‌: ಸಾಫ್ಟ್ ಹಿಂದುತ್ವದ ತಂತ್ರ, ಅಭಿವೃದ್ಧಿ-ಸಬ್ಸಿಡಿ ಮಂತ್ರ

jarkand

ಕಮಲದ ತೆಕ್ಕೆಯಿಂದ ಜಾರಿತೇಕೆ ಜಾರ್ಖಂಡ?

anarha

ಅನರ್ಹರಿಗೆ ಅರ್ಹತಾ ಪ್ರಮಾಣಪತ್ರ ನೀಡಿದ ಫ‌ಲಿತಾಂಶ

mm-23

ಅಚ್ಚರಿ ಮೂಡಿಸಿದ “ಮಹಾ’ ಬದಲಾವಣೆ!

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಕಾರ್ಯಕ್ರಮ ಮುಖ್ಯಸ್ಥರಾಗಿ ಡಾ| ಬಸು ಅಧಿಕಾರ ಸ್ವೀಕಾರ

ಕಾರ್ಯಕ್ರಮ ಮುಖ್ಯಸ್ಥರಾಗಿ ಡಾ| ಬಸು ಅಧಿಕಾರ ಸ್ವೀಕಾರ

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

ದಿಲ್ಲಿಯಲ್ಲಿ ಚಿಕಿತ್ಸೆಗೆ ರೈಲ್ವೇ ವಾರ್ಡ್‌

ಮಹಾರಾಷ್ಟ್ರ, ದಿಲ್ಲಿಯಲ್ಲಿ ಸೋಂಕು ಭಾರೀ ಏರಿಕೆ

ಮಹಾರಾಷ್ಟ್ರ, ದಿಲ್ಲಿಯಲ್ಲಿ ಸೋಂಕು ಭಾರೀ ಏರಿಕೆ

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಐಸಿಯುನಲ್ಲಿ ಮುಂಬಯಿ !

ಐಸಿಯುನಲ್ಲಿ ಮುಂಬಯಿ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.