ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ


ಅರಕೆರೆ ಜಯರಾಮ್‌, Feb 22, 2020, 7:30 AM IST

kala-43

21ನೇ ಶತಮಾನದ ಬ್ರಿಟನ್‌ನಲ್ಲಿ ಸಚಿವರ ಆಯ್ಕೆಗೆ ತ್ವಚೆಯ ಬಣ್ಣಕ್ಕಿಂತ ಪ್ರತಿಭೆಯೇ ಮುಖ್ಯ ಮಾನದಂಡವಾಗಿದೆ. ಒಂದು ದಿನ ಭಾರತೀಯ ಮೂಲದವರೊಬ್ಬರು ಬ್ರಿಟನ್‌ನ ಪ್ರಧಾನಮಂತ್ರಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಅಲ್ಲಿನ ಕಾನೂನು  ಪ್ರಧಾನಮಂತ್ರಿಯಾಗಬೇಕಾದರೆ ಹುಟ್ಟಿನಿಂದಲೇ ಬ್ರಿಟಿಶ್‌ ಪ್ರಜೆಯಾಗಿರಬೇಕೆಂದು ಹೇಳುತ್ತದೆ.

ಭಾರತೀಯ ಮೂಲದವರೊಬ್ಬರು ಬ್ರಿಟನ್‌ನ ವಿತ್ತ ಸಚಿವರಾಗಿ ಆಯ್ಕೆಯಾಗಿರುವುದು ನಾವು ಸಂಭ್ರಮಿಸಬೇಕಾದ ವಿಷಯವೇ. ಕರ್ನಾಟಕದ ಸಂಬಂಧವನ್ನೂ ಹೊಂದಿರುವ 39 ವರ್ಷ ವಯಸ್ಸಿನ ರಿಷಿ ಸುನಕ್‌ ಅವರು ಬ್ರಿಟನ್‌ನ “ಚಾನ್ಸಲರ್‌ ಆಫ್ ಎಕ್ಸ್‌ಚೆಕ್ಕರ್‌’ ಆಗಿ ಆಯ್ಕೆಯಾಗಿದ್ದಾರೆ. ಅವರು ಇನ್ಫೊಸಿಸ್‌ನ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿಯವರ ಅಳಿಯ.

ರಿಷಿ ಸುನಕ್‌ರ ಕುಟುಂಬದರು ಮೂಲತಃ ಪಂಜಾಬಿನವರು. ಪೂರ್ವ ಆಫ್ರಿಕದಿಂದ ಈ ಕುಟುಂಬ ಬ್ರಿಟನ್‌ಗೆ ವಲಸೆ ಹೋಗಿತ್ತು. ವೈದ್ಯರಾಗಿದ್ದ ಅವರ ತಂದೆ ಕುಟುಂಬವನ್ನು ಮೊದಲು ಪೂರ್ವ ಆಫ್ರಿಕಕ್ಕೆ ಕರೆದೊಯ್ದು ಅಲ್ಲಿಂದ ಬ್ರಿಟನ್‌ಗೆ ವಲಸೆ ಹೋಗಿದ್ದಾರೆ. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಪಾಕಿಸ್ಥಾನ ಮೂಲದ ಸಾಜಿದ್‌ ಜಾವಿದ್‌ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಿಷಿ ಸುನಕ್‌ ಅವರನ್ನು ಆರಿಸಿದ್ದಾರೆ.

ಯುನೈಟೆಡ್‌ ಕಿಂಗ್‌ಡಮ್‌ನ ಕೆಲವು ಪ್ರಭಾವಿ ಖಾತೆಗಳಲ್ಲಿ ಚಾನ್ಸಲರ್‌ ಆಫ್ ಎಕ್ಸ್‌ಚೆಕ್ಕರ್‌ ಕೂಡ ಒಂದು. ಪ್ರಧಾನಮಂತ್ರಿಯ ಬಳಿಕ ಅತಿ ಹೆಚ್ಚಿನ ಅಧಿಕಾರವನ್ನು ಹೊಂದಿರುವ ಇಲಾಖೆ ಇದು. ವಿದೇಶಾಂಗ ಸಚಿವರು, ಗೃಹ ಸಚಿವರೆಲ್ಲ ವಿತ್ತ ಸಚಿವರ ಅನಂತರದ ಸಾಲಿನಲ್ಲಿ ಬರುತ್ತಾರೆ. ಇನ್ನೊಂದು ಹೆಮ್ಮೆಯ ವಿಚಾರವೆಂದರೆ ಬ್ರಿಟನ್‌ನ ಗೃಹ ಸಚಿವೆ ಪ್ರೀತಿ ಸುಶೀಲ್‌ ಪಟೇಲ್‌ (ಜನನ 1972) ಕೂಡ ಭಾರತ ಸಂಜಾತೆ. ಅವರು ಗುಜರಾತಿನಿಂದ ಉಗಾಂಡ ಹಾಗೂ ಅಲ್ಲಿಂದ ಬ್ರಿಟನ್‌ಗೆ ವಲಸೆ ಹೋದ ಪರಿವಾರದ ಸದಸ್ಯೆ. ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್‌ ಭಾರತೀಯರ ಮೇಲೆ ದೌರ್ಜನ್ಯ ಎಸಗಲು ತೊಡಗಿದಾಗ ಪ್ರೀತಿ ಪಟೇಲ್‌ ಕುಟುಂಬ ಬ್ರಿಟನ್‌ಗೆ ವಲಸೆ ಹೋಗಿತ್ತು. ಆದರೆ ಪ್ರೀತಿ ಪಟೇಲ್‌ ತನ್ನನ್ನು ಬ್ರಿಟನ್‌ ಪ್ರಜೆಯೆಂದೇ ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದಾರೆ. “ನಾನು ಪ್ರಥಮವಾಗಿ ಹಾಗೂ ಎಂದೆಂದಿಗೂ ಬ್ರಿಟನ್‌ ಪ್ರಜೆ’ ಎನ್ನುವುದು ಅವರ ಹೇಳಿಕೆ. ಭಾರತೀಯ ಮೂಲದವರು ಎಂಬ ಕಾರಣಕ್ಕೆ ತನ್ನನ್ನು “ಅಲ್ಪಸಂಖ್ಯಾಕ ಜನಾಂಗ’ದವರು ಎಂದು ಅವಮಾನಿಸುವುದು ಅಥವಾ ಪ್ರತ್ಯೇಕಿಸುವುದು ಸರಿಯಲ್ಲ ಎನ್ನುವುದು ಅವರ ವಾದ. ರಿಷಿ ಸುನಕ್‌ ಎಷ್ಟು “ಬ್ರಿಟಿಶ್‌ಮಯ’ವಾಗಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ಅವರಿಗೆ ಈ ಹುದ್ದೆ ಸಿಕ್ಕಿರುವುದು ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ನಿಕಟವಾಗಿರುವುದರಿಂದ ಎನ್ನುವುದು ನಿರ್ವಿವಾದ. ಹಾಗೆಂದು ಇದು ಅವರ ಪ್ರತಿಭೆಯನ್ನು ಹೀಗಳೆಯುವ ಪ್ರಯತ್ನವಲ್ಲ. ವೃತ್ತಿಯಿಂದ ಬ್ಯಾಂಕರ್‌ ಆಗಿರುವ ಸುನಕ್‌ ಕನ್ಸರ್ವೇಟಿವ್‌ ಪಾರ್ಟಿಯ “ಉದಯೋನ್ಮುಖ ತಾರೆ’. ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅವರು ತಾನು ಹಿಂದೂ ಎಂದು ಸಾರಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಇವರಿಬ್ಬರಲ್ಲದೆ ಬ್ರಿಟನ್‌ನಲ್ಲಿ ಇನ್ನೋರ್ವ ಭಾರತೀಯ ಮೂಲದ ಸಚಿವರಿದ್ದಾರೆ. ಅವರು ವಾಣಿಜ್ಯ, ಇಂಧನ ಮತ್ತು ಕೈಗಾರಿಕಾ ಕಾರ್ಯತಂತ್ರ ಖಾತೆಯ ಸಚಿವರಾಗಿರುವ ಅಲೋಕ್‌ ಶರ್ಮ.  ಇತಿಹಾಸವನ್ನು ಗಮನಿಸಿದರೆ ಬ್ರಿಟನ್‌ನ ಉನ್ನತ ಹುದ್ದೆಗಳ ಆಯ್ಕೆಯಲ್ಲಿ ಪಾಕಿಸ್ಥಾನದ ಕೈಮೇಲಾಗಿದೆ ಎನ್ನುವುದು ನಿಜ. ಜಾವಿದ್‌ ಉತ್ತಮ ಸಾಧಕ. ಬಡ ಕುಟುಂಬದಿಂದ ಬಂದ ಅವರ ತಂದೆ ಬ್ರಿಟನ್‌ನಲ್ಲಿ ಬಸ್‌ ಚಾಲಕರಾಗಿದ್ದರು. ತಾನು ನೇಮಿಸಿದ ಮಹಿಳಾ ಅಧಿಕಾರಿಯೊಬ್ಬರನ್ನು ಕಿತ್ತು ಹಾಕಿರುವುದನ್ನು ಪ್ರತಿಭಟಿಸಿ ಜಾವಿದ್‌ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸುನಕ್‌ ಜಗತ್ತಿನ ಅತಿ ಹಳೆಯ ಸರಕಾರಿ ಇಲಾಖೆಯೊಂದರ ಮುಖ್ಯಸ್ಥರಾಗಿದ್ದಾರೆ. “ಸೆಕೆಂಡ್‌ ಲಾರ್ಡ್‌ ಆಫ್ ಟ್ರೆಶರಿ’ ಎನ್ನುವುದು ಅವರು ಮುನ್ನಡೆಸುತ್ತಿರುವ ವಿತ್ತ ಇಲಾಖೆಗೆ ಇರುವ ಇನ್ನೊಂದು ಹೆಸರು. ಚಾನ್ಸಲರ್‌ ಆಫ್ ಎಕ್ಸ್‌ಚೆಕ್ಕರ್‌ ಎನ್ನುವುದು ನಮ್ಮ ದೇಶದ ವಿತ್ತ ಸಚಿವರಿಗೆ ಸಮಾನವಾಗಿರುವ ಹುದ್ದೆ. ಈ ಇಲಾಖೆಗೆ 800 ವರ್ಷಗಳ ಇತಿಹಾವಿದೆ. ಹಾಗೇ ನೋಡಿದರೆ ಪ್ರಧಾನಿ ಹುದ್ದೆಗಿಂತಲೂ ಚಾನ್ಸಲರ್‌ ಆಫ್ ಎಕ್ಸ್‌ಚೆಕ್ಕರ್‌ ಹುದ್ದೆ ಹಳೆಯದು. 1129ರಲ್ಲಿ ಪ್ರಥಮ ಕಿಂಗ್‌ ಹೆನ್ರಿ ಈ ಇಲಾಖೆಯನ್ನು ಸೃಷ್ಟಿಸಿದರು. ಇಷ್ಟರ ತನಕ ಈ ಇಲಾಖೆಯ ಸಚಿವರಾದವರ ದಾಖಲೆಗಳನ್ನು ಬ್ರಿಟನ್‌ ಕಾಪಿಟ್ಟುಕೊಂಡು ಬಂದಿರುವುದೊಂದು ಅದ್ಭುತ. ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದರೂ ಸರಕಾರಿ ಇಲಾಖೆಯ ಸಂಪ್ರದಾಯ ಮತ್ತು ಆಚಾರವಿಚಾರಗಳನ್ನು ಕಾಪಿಟ್ಟುಕೊಳ್ಳುವ ವಿಚಾರದಲ್ಲಿ ನಾವು ಬ್ರಿಟನ್‌ನಿಂದ ಕಲಿಯುವುದು ಬಹಳಷ್ಟಿದೆ. ಬ್ರಿಟನ್‌ ಅಲಿಖೀತ ಸಂವಿಧಾನ ಹೊಂದಿದೆ ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬ್ರಿಟನ್‌ ಸಂಸತ್ತು ಕಾರ್ಯ ನಿರ್ವಹಿಸುತ್ತಿರುವುದು ಶತಮಾನಗಳಷ್ಟು ಪುರಾತನ ಕಟ್ಟಡದಲ್ಲಿ. ನಮ್ಮ ಸಂಸತ್ತು ಇರುವ ಕಟ್ಟಡಕ್ಕೆ ಬರಿ 89 ವರ್ಷಗಳಷ್ಟೆ ಆಗಿದ್ದರೂ ನರೇಂದ್ರ ಮೋದಿ ಸರಕಾರ ಹೊಸ ಕಟ್ಟಡ ನಿರ್ಮಿಸುವ ಚಿಂತನೆಯಲ್ಲಿದೆ. ಇದು ಬೇರೆಯದ್ದೇ ಕತೆ. ಕರ್ನಾಟಕದಲ್ಲಿ ವಿಧಾನ ಸೌಧದಿಂದ ತೃಪ್ತರಾಗದೆ ಪಕ್ಕದಲ್ಲೇ ವಿಕಾಸ ಸೌಧವನ್ನು ನಿರ್ಮಿಸಿಕೊಂಡಿದ್ದೇವೆ. ನಮ್ಮ ಕೆಲವು ಉಚ್ಚ ನ್ಯಾಯಾಲಯಗಳು (ಬಾಂಬೆ, ಕಲ್ಕತ್ತ, ಮದ್ರಾಸ್‌ ಮತ್ತು ಅಲಹಬಾದ್‌) ಈಗಲೂ ಹಳೇ ಕಟ್ಟಡಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದು ನ್ಯಾಯಾಂಗ ಹೆಮ್ಮೆಪಡಬೇಕಾದ ವಿಚಾರ. ಅದಾಗ್ಯೂ ಈ ಪೈಕಿ ಕೆಲವು ನ್ಯಾಯಾಲಯಗಳಿಗೆ ವಿಸ್ತರಣಾ ಕಟ್ಟಡಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಕೆಲ ವರ್ಷಗಳ ಹಿಂದೆ ಕರ್ನಾಟಕ ಹೈಕೋರ್ಟಿನ ಒಂದು ಭಾಗವಾಗಿರುವ “ಅಟ್ಟಾರ ಕಚೇರಿ”ಯನ್ನು ಕೆಡವಿ ಹೈಕೋರ್ಟ್‌ಗೆ ಹೊಸ ಕಟ್ಟಡ ಕಟ್ಟುವ ಪ್ರಯತ್ನವಾಗಿತ್ತು. ಬೆಂಗಳೂರಿನ ಕೆಲವು ಗಣ್ಯ ನಾಗರಿಕರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನನುಸರಿಸಿ ಹೈಕೋರ್ಟ್‌ ಅನಂತರ ಈ ನಿರ್ಧಾರದಿಂದ ಹಿಂದೆ ಸರಿಯಿತು.

ಬ್ರಿಟನ್‌ನ ಕೆಲವು ಶ್ರೇಷ್ಠ ರಾಜಕಾರಣಿಗಳು ಮತ್ತು ಮುತ್ಸದ್ದಿಗಳು ಅಲಂಕರಿಸಿದ್ದ ಹುದ್ದೆಯನ್ನು ಈಗ ಸುನಕ್‌ ಅಲಂಕರಿಸಿದ್ದಾರೆ. ಈ ಪೈಕಿ ಸರ್‌ ವಿನ್ಸ್‌ಸ್ಟನ್‌ ಚರ್ಚಿಲ್‌ ಹೆಸರು ಅಜರಾಮರವಾಗಿದೆ. ಆದರೆ ರಾಬರ್ಟ್‌ ವಲೊಲ್‌, ವಿಲ್ಲಿಯಂ ಪಿಟ್‌ ದ ಯಂಗರ್‌, ರಾಬರ್ಟ್‌ ಪೀಲ್‌, ಬೆಂಜಾಮಿನ್‌ ಡಿಸರೆಲಿ, ವಿಲ್ಲಿಯಂ ಗ್ಲ್ಯಾಡ್‌ಸ್ಟೋನ್‌, ಎಚ್‌. ಎಚ್‌. ಅಸ್ಕಿತ್‌, ಲಾಯ್ಡ ಜಾರ್ಜ್‌, ಬೊನರ್‌ ಲಾ, ಸರ್‌ ಸ್ಟಾನ್ಲಿ ಬಾಲ್ಡ್‌ವಿನ್‌, ಆಸ್ಟೆನ್‌ ಮತ್ತು ನೆವಿಲ್‌ ಚೇಂಬರ್‌ಲೈನ್ಸ್‌, ಸರ್‌ ಹಫ್ ಡಲ್ಟನ್‌, ಸರ್‌ ಸ್ಟಾಫ‌ರ್ಡ್‌ ಕ್ರಿಪ್ಸ್‌, ಆರ್‌. ಎ. ಬಟ್ಲರ್‌, ಹರೊಲ್ಡ್‌ ಮ್ಯಾಕ್‌ಮಿಲನ್‌, ಸೆಲ್ವಿನ್‌ ಲಾಯ್ಡ, ರೆಜಿನಾಲ್ಡ್‌ ಮೌಡ್ಲಿಂಗ್‌ನಂಥ ಖ್ಯಾತನಾಮರಿದ್ದಾರೆ. 24ನೇ ವರ್ಷದಲ್ಲಿ ಇಂಗ್ಲಂಡ್‌ನ‌ ಪ್ರಧಾನಮಂತ್ರಿಯಾದ ಕಾರಣಕ್ಕೆ ವಿಲ್ಲಿಯಂ ಪಿಟ್ಸ್‌ ಹೆಸರಿನ ಮುಂದೆ ದ ಯಂಗರ್‌ ಎಂಬ ಉಪಾಧಿ ಸೇರಿಕೊಂಡಿತು. 45ನೇ ವರ್ಷದಲ್ಲಿ ಅವರು ವಿತ್ತ ಸಚಿವರಾದರು. ಬಾಲ್ಡ್‌ವಿನ್‌ ತನ್ನ ಅಧಿಕಾರವಧಿಯಲ್ಲಿ ಪ್ರಧಾನಿ ಮತ್ತು ಚಾನ್ಸಲರ್‌ ಆಫ್ ಎಕ್ಸ್‌ಚೆಕ್ಕರ್‌ ಎರಡೂ ಹುದ್ದೆಯನ್ನು ನಿಭಾಯಿಸಿದ್ದರು. ಇಬ್ಬರು ಚೇಂಬರ್‌ಲೈನ್ಸ್‌ಗಳು ತಂದೆ ಮತ್ತು ಮಗ.

ಬ್ರಿಟನ್‌ ಈಗಲೂ ಸಚಿವಾಲಯಗಳಿಗೆ ಪುರಾತನ ಶ್ರೇಷ್ಠ ಹೆಸರುಗಳನ್ನೇ ಇಟ್ಟುಕೊಂಡಿದೆ. ನೌಕಾಪಡೆಯ ಮುಖ್ಯಸ್ಥನನ್ನು ಅಲ್ಲಿ ಫ‌ಸ್ಟ್‌ ಲಾರ್ಡ್‌ ಆಫ್ ಅಡ್ಮಿರಾಲ್ಟಿ ಎಂದು ಕರೆಯುತ್ತಾರೆ. ಬ್ರಿಟನ್‌ ರಾಜಮನೆತನದ ಸೇವೆಯಲ್ಲಿರುವ ಲಾರ್ಡ್‌ ಪ್ರೈವಿ ಸೀಲ್‌ನಂಥ ಹುದ್ದೆಗಳೂ ಈಗಲೂ ಮುಂದುವರಿದಿವೆ. ಬ್ರಿಟನ್‌ ಈಗ ಯಾವುದೇ ಸಾಮ್ರಾಜ್ಯವನ್ನು ಹೊಂದಿರದಿದ್ದರೂ ನಮ್ಮ ಪದ್ಮ ಪ್ರಶಸ್ತಿಗಳಂತೆ ಮೆಂಬರ್‌ ಆಫ್ ಆರ್ಡರ್‌ ಆಫ್ ದ ಬ್ರಿಟಿಶ್‌ ಎಂಪಾಯರ್‌, ನೈಟ್‌ವುಡ್‌ನಂಥ ಪ್ರಶಸ್ತಿಗಳನ್ನು ತನ್ನ ಹಿಂದಿನ ವಸಾಹತಿನ ಸಾಧಕರಿಗೆ ನೀಡುವ ಪರಂಪರೆಯನ್ನು ಪಾಲಿಸಿಕೊಂಡು ಬಂದಿದೆ. ವೆಸ್ಟ್‌ ಇಂಡೀಸ್‌ ಇಂಥ ವಸಾಹುತಗಳಲ್ಲಿ ಒಂದು. ಲಾರ್ಡ್‌ ಲಿಯರಿ ಕಾನ್‌ಸ್ಟಂಟಿನ್‌, ಸರ್‌ ಫ್ರಾಂಕ್‌ ವೊರೆಲ್‌, ಸರ್‌ ಎವರ್‌ಟನ್‌ ವೀಕೆಸ್‌, ಸರ್‌ ಕ್ಲೈಡ್‌ ವಾಲ್‌ಕಟ್‌, ಸರ್‌ ಗ್ಯಾರ್‌ಫೀಲ್ಡ್‌ ಸೋಬರ್, ಸರ್‌ ವಿವಿಯನ್‌ ರಿಚರ್ಡ್ಸ್‌, ಸರ್‌ ಕ್ಲೈವ್‌ ಲಾಯ್ಡ ಇವರೆಲ್ಲ ಬ್ರಿಟನ್‌ನ ಪರಮೋಚ್ಚ ಪ್ರಶಸ್ತಿಗೆ ಪಾತ್ರರಾಗಿರುವ ಹಿಂದಿನ ವಸಾಹತುಗಳ ಸಾಧಕ ಜನರು. ಬ್ರಿಟನ್‌ ಈಗಲೂ ತನ್ನನ್ನು “ಗ್ರೇಟ್‌ ಬ್ರಿಟನ್‌’ ಎಂದೇ ಕರೆದುಕೊಳ್ಳುತ್ತಿದೆ. ಈಗಲೂ ಕೆನಡ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ನ‌ ಗವರ್ನರ್‌ ಜನರಲ್‌ಗಳನ್ನು ಬ್ರಿಟನ್‌ ರಾಣಿ ಆಯ್ಕೆ ಮಾಡುವ ಪರಂಪರೆ ಮುಂದುವರಿದುಕೊಂಡು ಬಂದಿದೆ. ಕೊನೆಯ ಲಾರ್ಡ್‌ ಅಥವಾ ಬ್ರಿಟಿಶ್‌ ಹೌಸ್‌ ಆಫ್ ಲಾರ್ಡ್ಸ್‌ನ ಭಾರತೀಯ ಸದಸ್ಯರಾಗಿದ್ದವರು ಸರ್‌ ಅರುಣ್‌ ಕುಮಾರ್‌ ಸಿನ್ಹ. ಇವರು ಹೌಸ್‌ ಆಫ್ ಲಾರ್ಡ್ಸ್‌ನ ನ್ಯಾಯಾಂಗ ಸಮಿತಿಯ ಪ್ರವಿ ಕೌನ್ಸಿಲರ್‌ ಆಗಿದ್ದ ರಾಯಪುರದ ವಕೀಲ ಸತ್ಯೆಂದ್ರ ಪ್ರಸನ್ನ ಸಿನ್ಹ ಅವರ ಪುತ್ರ. ಲಾರ್ಡ್‌ ಸಿನ್ಹ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಜಮೀನುದಾರರಾಗಿದ್ದರು. ಪ್ರಸ್ತುತ ಬ್ರಿಟನ್‌ನಲ್ಲಿ ಒಬ್ಬನೇ ಒಬ್ಬ ಭಾರತೀಯ ಲಾರ್ಡ್‌ ಇದ್ದಾರೆ, ಅವರೇ ಲಾರ್ಡ್‌ ಮೇಘನಾದ ದೇಸಾಯಿ. ಆದರೆ ಅವರು ಬ್ರಿಟನ್‌ ಪ್ರಜೆ.

ರಿಷಿ ಸುನಕ್‌ ಮತ್ತು ಪ್ರೀತಿ ಪಟೇಲ್‌ ಅವರ ಆಯ್ಕೆಯನ್ನು ರಾಜಕೀಯ ಆಯಾಮದಲ್ಲಿ ವಿಶ್ಲೇಷಿಸುವುದಾದರೆ ಅವರಿಬ್ಬರೂ ಕನ್ಸರ್ವೇಟಿವ್‌ ಪಾರ್ಟಿಯ ಸದಸ್ಯರು. ಕನ್ಸರ್ವೇಟಿವ್‌ಗಳು ಭಾರತಕ್ಕೆ ಸ್ವಾತಂತ್ರ್ಯ ನೀಡುವ ನಿರ್ಧಾರದ ಪರವಾಗಿರಲಿಲ್ಲ. ವಿನ್ಸ್‌ಸ್ಟನ್‌ ಚರ್ಚಿಲ್‌ ಭಾರತದ ಪಾಲಿಗೆ ಅತಿ ಕೆಟ್ಟ ನಾಯಕರಾಗಿದ್ದರು. 19ನೇ ಶತಮಾನದಲ್ಲಿ ಚರ್ಚಿಲ್‌ ಬೆಂಗಳೂರಿನಲ್ಲಿ ಕೆಲ ಸಮಯ ವಾಸವಾಗಿದ್ದುದನ್ನು ಮತ್ತು ಒಂದು ಕ್ಲಬ್‌ಗ ಅವರಿಂದ ದುಡ್ಡು ಬಾಕಿಯಿರುವುದನ್ನು ಕೆಲವರು ಈಗಲೂ ಹೆಮ್ಮೆಯಿಂದ ಹೇಳಿಕೊಳ್ಳುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಎರಡನೇ ವಿಶ್ವ ಯುದ್ಧ ಮುಗಿದ ಬಳಿಕ ಬ್ರಿಟನ್‌ನಲ್ಲಿ ಲೇಬರ್‌ ಪಾರ್ಟಿ ಅಧಿಕಾರಕ್ಕೆ ಬಂದು ಕ್ಲೆಮೆಂಟ್‌ ಅಟ್ಲಿ ಪ್ರಧಾನಿಯಾದ ಬಳಿಕವಷ್ಟೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟನ್‌ನಲ್ಲಿ ನೆಲೆಯಾದ ಅನೇಕ ಭಾರತೀಯರು ಲೇಬರ್‌ ಪಾರ್ಟಿಯ ಬೆಂಬಲಿಗರಾಗಿದ್ದರು. ಆದರೆ ಈಗ ಲೇಬರ್‌ ಪಾರ್ಟಿ ಕೂಡ ಸಂಪ್ರದಾಯವಾದಿ ಆಗಿದೆ ಎನ್ನಲಾಗುತ್ತಿದೆ. ಬ್ರಿಟಿಶರು ತಮ್ಮ ವರ್ಣ ಭೇದ ನೀತಿಯನ್ನೂ ತೊರೆದಿದ್ದಾರೆ. ವೈಸ್‌ರಾಯ್‌ ಮಿಂಟೊ ಅವರ ಕಾರ್ಯಕಾರಿ ಸಮಿತಿಗೆ ಭಾರತೀಯರೊಬ್ಬರನ್ನು ನೇಮಿಸುವ ಪ್ರಸಂಗ ಬಂದಾಗ ಸರ್‌ ಅಶುತೋಶ್‌ ಮುಖರ್ಜಿ ಬದಲಾಗಿ ಲಾರ್ಡ್‌ ಸಿನ್ಹ ಅವಕಾಶ ಪಡೆದಿದ್ದರು. ಇದಕ್ಕೆ ಕಾರಣವೇನು ಗೊತ್ತೇ? ಸಿನ್ಹ ಬ್ರಿಟಿಶರಂತೆ ಶ್ವೇತ ವರ್ಣದವರಾಗಿದ್ದರು! 21ನೇ ಶತಮಾನದ ಬ್ರಿಟನ್‌ನಲ್ಲಿ ಸಚಿವರ ಆಯ್ಕೆಗೆ ತ್ವಚೆಯ ಬಣ್ಣಕ್ಕಿಂತ ಪ್ರತಿಭೆಯೇ ಮುಖ್ಯ ಮಾನದಂಡವಾಗಿದೆ. ಒಂದು ದಿನ ಭಾರತೀಯ ಮೂಲದವರೊಬ್ಬರು ಬ್ರಿಟನ್‌ನ ಪ್ರಧಾನಮಂತ್ರಿಯಾದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಅಲ್ಲಿನ ಕಾನೂನು ಪ್ರಧಾನಮಂತ್ರಿಯಾಗಬೇಕಾದರೆ ಹುಟ್ಟಿನಿಂದಲೇ ಬ್ರಿಟಿಶ್‌ ಪ್ರಜೆಯಾಗಿರಬೇಕೆಂದು ಹೇಳುತ್ತದೆ. ಹೀಗಾಗಿ ಸೋನಿಯಾ ಗಾಂಧಿಯಂಥವರು ಭಾರತದಲ್ಲಿ ಪ್ರಧಾನಮಂತ್ರಿಯಾಗಬಹುದೇನೋ, ಬ್ರಿಟನ್‌ನಲ್ಲಿ ಸಾಧ್ಯವಿಲ್ಲ.

ವೃತ್ತಿಯಿಂದ ಬ್ಯಾಂಕರ್‌ ಆಗಿರುವ ಸುನಕ್‌ ಕನ್ಸರ್ವೇಟಿವ್‌ ಪಾರ್ಟಿಯ “ಉದಯೋನ್ಮುಖ ತಾರೆ’ ಎನ್ನುವುದರಲ್ಲಿ ಅನುಮಾನವಿಲ್ಲ.

ಬ್ರಿಟನ್‌ನ ಕೆಲವು ಶ್ರೇಷ್ಠ ರಾಜಕಾರಣಿಗಳು ಮತ್ತು ಮುತ್ಸದ್ದಿಗಳು ಅಲಂಕರಿಸಿದ್ದ ಹುದ್ದೆಯನ್ನು ಈಗ ಸುನಕ್‌ ಅಲಂಕರಿಸಿದ್ದಾರೆ.

ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅವರು ತಾನು ಹಿಂದೂ ಎಂದು ಸಾರಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಟಾಪ್ ನ್ಯೂಸ್

3-bus

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

KAIVA movie review

KAIVA movie review; ಮುಗ್ಧ ಪ್ರೇಮಿಯ ರೆಡ್‌ ಅಲರ್ಟ್‌

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

2-surathkal

Surathkal: ಟೋಲ್ ಗೇಟ್ ಗೆ ಟ್ರಕ್ ಡಿಕ್ಕಿ

Karni Sena chief’s case: 2 shooters, 1 associate arrested

Chandigarh; ತಡರಾತ್ರಿ ಕಾರ್ಯಾಚರಣೆ: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಆರೋಪಿಗಳ ಬಂಧನ

1-Sundy

Daily Horoscope: ಅವಿವಾಹಿತರಿಗೆ ಆಪ್ತರ ಸಹಾಯದಿಂದ ಶೀಘ್ರ ವಿವಾಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

kat-13

ಕೊರೊನಾ ವೈರಸ್‌- ಅಸ್ವಾಭಾವಿಕ ಆಹಾರ ಪದ್ಧತಿಯ ಕೊಡುಗೆ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

3-bus

KSRTC: ಧರ್ಮಸ್ಥಳಕ್ಕೆ ಬಸ್ ಇಲ್ಲದೆ ಪ್ರಯಾಣಿಕರ ಪರದಾಟ; ರಾ. ಹೆದ್ದಾರಿ ತಡೆದು ಪ್ರತಿಭಟನೆ

KAIVA movie review

KAIVA movie review; ಮುಗ್ಧ ಪ್ರೇಮಿಯ ರೆಡ್‌ ಅಲರ್ಟ್‌

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Bhojipura; ಟ್ರಕ್ ಗೆ ಡಿಕ್ಕಿ ಹೊಡೆದ ಕಾರು; ಸುಟ್ಟು ಕರಕಲಾದ ಮಗು ಸೇರಿ ಎಂಟು ಜನರು

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

Legends League Cricket; ಕಪ್ ಗೆದ್ದ ಮಣಿಪಾಲ್ ಟೈಗರ್ಸ್; ನಿರಾಸೆ ಅನುಭವಿಸಿದ ಹೈದರಾಬಾದ್

2-surathkal

Surathkal: ಟೋಲ್ ಗೇಟ್ ಗೆ ಟ್ರಕ್ ಡಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.