ವಾಜಪೇಯಿ ಶ್ಲಾಘನೆಯಲ್ಲಿ ವ್ಯಂಗ್ಯದ ಒಗ್ಗರಣೆ ಏಕೆ?


Team Udayavani, Aug 22, 2018, 6:00 AM IST

10.jpg

ಹೊಂದಿದ್ದ ವಾಜಪೇಯಿ ಸ್ವಾತಂತ್ರ್ಯಾ ನಂತರದಲ್ಲಿ ಸಲೀಸಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಬಹುದಿತ್ತು; ಆ ಮೂಲಕ ಮಧ್ಯ ಪ್ರದೇಶ/ಉತ್ತರ ಪ್ರದೇಶದ/ ದಿಲ್ಲಿ ಮಟ್ಟದ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚಬಹುದಿತ್ತು. ಆದರೆ ಅವರು ಕಷ್ಟಕರವಾದ ಹಾದಿ ಹಿಡಿದರು. 

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದವರ ಪೈಕಿ ಹೆಚ್ಚಿನವರು ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೇನೋ ಹೌದು. ಆದರೆ ಅವರ ಶ್ಲಾಘನೆಯಲ್ಲಿ ವ್ಯಂಗ್ಯವೆಂಬುದು ವೇಷ ಮರೆಸಿಕೊಂಡು ಮೆರೆದಾಡಿದೆ. ಕೆಲ ಬಿಜೆಪಿಯೇತರ ನಾಯಕರು ಮತ್ತಿತರರು ವಾಜಪೇಯಿ ಅವರನ್ನು “ತಪ್ಪು (ಕೆಟ್ಟ) ಪಕ್ಷದಲ್ಲಿರುವ ಉತ್ತಮ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ. ಇಂಥ ವರ್ಣನೆಯ ಮೂಲಕ ಅವರಿಗೆ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಬಿಜೆಪಿಯ ಮೇಲೆ ಟೀಕಾ ಪ್ರಹಾರ ಮಾಡಬೇಕಾಗಿತ್ತಲ್ಲದೆ ಮತ್ತೇನಲ್ಲ. 

ಇಂಥ ವರ್ಣನೆ ನಮ್ಮ ರಾಜಕೀಯ ವಲಯದ ಇನ್ನೂ ಕೆಲವು ವ್ಯಕ್ತಿಗಳಿಗೂ ಅನ್ವಯವಾಗುವಂಥದು. ಹಿಂದೊಮ್ಮೆ ನಮ್ಮ ಲೋಕಸಭಾ ಸ್ಪೀಕರ್‌ ಆಗಿದ್ದ ಸೋಮನಾಥ ಚಟರ್ಜಿಯವರ ಬಗೆಗೂ ಇದೇ ಮಾತನ್ನು ಹೇಳಬಹುದಾಗಿದೆ. ಅವರೊಬ್ಬ ಶ್ರೀಮಂತ ವ್ಯಕ್ತಿಯಾಗಿದ್ದರು. ಸಮಾಜದ ಕೆಳವರ್ಗವನ್ನು ಪ್ರತಿನಿಧಿಸುವ ಪಕ್ಷ ತಾನೆಂದು ಪ್ರತಿಪಾದಿಸುವ ಸಿಪಿಐಎಂನ “ಕುಲೀನ’ ಸದಸ್ಯರಾಗಿದ್ದರು. ಇಷ್ಟೇ ಅಲ್ಲ, ಅವರ ಬದುಕಿನ ಕೆಲವು ವಿರೋಧಾಭಾಸಗಳನ್ನು ಅವಗಣಿಸುವ ಹಾಗಿಲ್ಲ. ಅವರು ಹಿಂದೂ ಮಹಾಸಭಾದ ನಾಯಕ ನಿರ್ಮಲ್‌ ಕುಮಾರ್‌ ಚಟರ್ಜಿಯವರ ಪುತ್ರ. ನಿರ್ಮಲ್‌ ಕುಮಾರ್‌ ಅವರು ಡಾ| ಶ್ಯಾಮ ಪ್ರಸಾದ್‌ ಮುಖರ್ಜಿಯವರ ನಿಕಟವರ್ತಿಯಾಗಿದ್ದವರು. ಮೊದಲಿಗೆ ಸಂವಿಧಾನಸಭೆಯ, ಆಮೇಲೆ ಲೋಕಸಭೆಯ ಗಣ್ಯ ಸದಸ್ಯರಾಗಿದ್ದವರು. ಸೋಮನಾಥ ಚಟರ್ಜಿ ಅವರನ್ನು ಸಿಪಿಐ-ಎಂನಿಂದ ಉಚ್ಚಾಟಿಸಲಾಯಿತೆಂಬುದು ಬೇರೆ ಮಾತು. ಅವರು (ಸೋಮನಾಥ ಚಟರ್ಜಿ) ಕೋಲ್ಕತ್ತದ ಓರ್ವ ಗಣ್ಯ ಲಾಯರ್‌ (ಬ್ಯಾರಿಸ್ಟರ್‌) ಆಗಿದ್ದವರು. ಇದೇ ಮಾತನ್ನು ಬಂಗಾಲದ ಉಚ್ಚ ಶ್ರೀಮಂತ ವರ್ಗಕ್ಕೆ ಸೇರಿದ್ದ, ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ ಜ್ಯೋತಿಬಸು ಅವರ ಬಗೆಗೂ ಹೇಳಬಹುದು. ಇಂದು ಸಿಪಿಎಂ ಊಳಿಗಮಾನ್ಯ ವ್ಯವಸ್ಥೆಯಲ್ಲಿರುವ ಆಡ್ಯರು, ಬಂಡವಾಳ ಶಾಹಿಗಳು, ಕ್ರಾಂತಿಕಾರಿಗಳು ಮುಂತಾದವರ ಮನೆಯಾಗಿದೆ. ಈ ಪಕ್ಷದ ಸತತ ಪತನ ಪ್ರಕ್ರಿಯೆಗೆ ಇದೂ ಒಂದು ಕಾರಣ.
ಪ್ರಥಮ ಕಾಂಗ್ರೆಸೇತರ ಪ್ರಧಾನಿ ವಾಜಪೇಯಿ “ಕೆಟ್ಟ ಪಕ್ಷದಲ್ಲಿರುವ ಉತ್ತಮ ವ್ಯಕ್ತಿ’ ಎಂಬ ವಾದ ತಲೆಯೆತ್ತಿದ್ದು ಅವರು ಪ್ರಧಾನಿಯಾಗಿದ್ದ ದಿನಗಳಲ್ಲಿ. ಅವರು ಆರೆಸ್ಸೆಸ್‌, ಜನಸಂಘ ಹಾಗೂ ಬಿಜೆಪಿಯೊಂದಿಗಿನ ತನ್ನ ಸುದೀರ್ಘ‌ ಒಡನಾಟವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಅವರ ವ್ಯಕ್ತಿತ್ವದ ವೈಶಿಷ್ಟéವೆಂದರೆ ಅವರು ನಿಜವಾದ ಅರ್ಥದಲ್ಲಿ ದೇಶದ ಪ್ರಥಮ ಕಾಂಗ್ರೆಸೇತರ ಪ್ರಧಾನಿಯಾಗಿದ್ದರು. ಅವರಿಗಿಂತ ಪೂರ್ವದಲ್ಲಿ ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ, ಚರಣ್‌ಸಿಂಗ್‌, ವಿ.ಪಿ. ಸಿಂಗ್‌, ಚಂದ್ರಶೇಖರ್‌, ಎಚ್‌.ಡಿ. ದೇವೇಗೌಡ ಹಾಗೂ ಐ.ಕೆ. ಗುಜ್ರಾಲ್‌ ಇವರೆಲ್ಲರೂ ಮೂಲತಃ ಕಾಂಗ್ರೆಸಿಗರೇ. ಡಾ| ಸುಬ್ರಹ್ಮಣ್ಯ ಸ್ವಾಮಿ ಅವರು ತಮ್ಮ “ಬಿಜೆಪಿ ಪೂರ್ವ’ ಅವತಾರದಲ್ಲಿ ವಾಜಪೇಯಿಯವರನ್ನು 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಳ್ಳದ ಮನುಷ್ಯನೆಂದು ಟೀಕಿಸಿದ್ದಕ್ಕೆ, ಹಾಗೂ ಅವರನ್ನು “ಬ್ರಿಟಿಷ್‌ಪರ’ ವ್ಯಕ್ತಿಯೆಂದು ಬಣ್ಣಿಸಿದ್ದಕ್ಕೆ ಇದೂ ಒಂದು ಕಾರಣ. ಕ್ವಿಟ್‌ ಇಂಡಿಯಾ ಚಳವಳಿ, ಕಾಂಗ್ರೆಸ್‌ ಪ್ರಾಯೋಜಿತ ಕಾರ್ಯಕ್ರಮವಾಗಿತ್ತು. ಆ ಕಾಲದಲ್ಲಿ ಕಾಂಗ್ರೆಸ್‌ನೊಳಗೇ ಕೆಲ ಟೀಕಾಕಾರರಿದ್ದರು. ಸಿ. ರಾಜಗೋಪಾಲಾಚಾರಿ ಇಂಥ ಓರ್ವ ಅತ್ಯಂತ ತೀಕ್ಷ್ಣ ಟೀಕಾ ಕಾರ ರಾಗಿದ್ದರು. ಹೀಗಾಗಿ ಕಾಂಗ್ರೆಸೇತರ ನಾಯಕರು ಈ ಚಳವಳಿ ಯಲ್ಲಿ ಪಾಲ್ಗೊಳ್ಳುವ ಬಗ್ಗೆ ನಿರೀಕ್ಷೆಯಿರಿಸಿಕೊಳ್ಳುವ ಹಾಗಿರಲಿಲ್ಲ.

ಅತ್ಯಂತ ಪ್ರಬಲ ರಾಜಕೀಯ ವ್ಯಕ್ತಿತ್ವದ ಲಕ್ಷಣಗಳನ್ನು ಹೊಂದಿದ್ದ ವಾಜಪೇಯಿ ಸ್ವಾತಂತ್ರ್ಯೋತ್ತರದಲ್ಲಿ ಸಲೀಸಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಬಹುದಿತ್ತು; ಆ ಮೂಲಕ ಮಧ್ಯ ಪ್ರದೇಶ ಅಥವಾ ಉತ್ತರ ಪ್ರದೇಶದ, ಅಥವಾ ದಿಲ್ಲಿ ಮಟ್ಟದ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿ ಮಿಂಚಬಹುದಿತ್ತು. ಆದರೆ ಅವರು ಆಯ್ದುಕೊಂಡದ್ದು ಕಷ್ಟಕರವಾದ ಹಾದಿಯನ್ನು. ರಾಜಾಜಿ, ಜೆ.ಬಿ. ಕೃಪಲಾನಿ, ರಾಮ ಮನೋಹರ ಲೋಹಿಯಾ, ಫಿರೋಜ್‌ ಗಾಂಧಿ, ಎಂ.ಆರ್‌. ಮಸಾನಿ ಹಾಗೂ ಎನ್‌.ಜಿ. ರಂಗಾ ಇವರುಗಳೊಂದಿಗೆ ವಾಜಪೇಯಿಯವರು ದೇಶದಲ್ಲಿ ನಡೆದ ಕಾಂಗ್ರೆಸ್‌ ವಿರೋಧಿ ಆಂದೋಲನಕ್ಕೆ ಭದ್ರ ಬುನಾದಿಯನ್ನು ಹಾಕಿದರು. 1957ರಲ್ಲಿ ತಮ್ಮ 32ನೆಯ ವಯಸ್ಸಿನಲ್ಲಿ ಅವರು ಲೋಕಸಭೆಯನ್ನು ಪ್ರವೇಶಿಸಿದ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ ಹಾಗೂ ಜವಾಹರಲಾಲ್‌ ನೆಹರೂ ಅವರ ಅದೃಷ್ಟ ಥಳಥಳ ಹೊಳೆಯುತ್ತಿತ್ತು. ಕಾಂಗ್ರೆಸ್‌ ಹಾಗೂ ನೆಹರೂ ಅವರನ್ನು ಟೀಕಿಸುವುದೆಂದರೆ ಅದು ದೇಶದ್ರೋಹವೆಂದು ಪರಿಗಣಿಸ ಲಾಗುತ್ತಿತ್ತು; ಅಥವಾ ಇಂಥ ಟೀಕಾಕಾರರನ್ನು ಗೇಲಿ ಮಾಡಲಾ ಗುತ್ತಿತ್ತು. ಡಾ| ಲೋಹಿಯಾ ಅವರು ನೆಹರೂ ಹಾಗೂ ವಿಪಕ್ಷೀಯರಾದ ಎಸ್‌.ಎ. ಡಾಂಗೆ, ಪ್ರೊ| ಹಿರೇನ್‌ ಮುಖರ್ಜಿ ಹಾಗೂ ಭೂಪೇಶ್‌ ಗುಪ್ತಾರಂಥವರ ಬಹುದೊಡ್ಡ ಟೀಕಾಕಾರ ರೆಂದು ಪರಿಗಣಿತರಾಗಿದ್ದರು. ಜನಸಂಘದಲ್ಲಿ ಆಗ ಇದ್ದವರು ನಾಲ್ವರೇ ಸದಸ್ಯರು; ಇವರಿಗೆ ಕೇವಲ ಒಬ್ಬ ಪಕ್ಷೇತರ ಸದಸ್ಯರ (ಪ್ರಕಾಶ್‌ ವೀರ್‌ ಶಾಸ್ತ್ರಿ) ಬೆಂಬಲವಿತ್ತು. ಇಂಗ್ಲಿಷ್‌ ವಿರೋಧ ಹಾಗೂ ಹಿಂದೂಗಳ ಹಕ್ಕುಗಳ ಪ್ರತಿಪಾದನೆಯಂಥ ವಿಷಯಗಳಲ್ಲಿ ಶಾಸ್ತ್ರಿಯವರು ವಾಜಪೇಯಿಯವರಂತೆ ಸೌಮ್ಯ ವ್ಯಕ್ತಿಯಾಗಿರಲಿಲ್ಲ. ಅವರು ಯಾವುದೇ ರಾಜಿಗೆ ಸಿದ್ಧವಿಲ್ಲದ ಮನೋಭಾವದವರಾಗಿದ್ದರು.

ಜನತಾ ಪಾರ್ಟಿಯ ಸರಕಾರ ಹಾಗೂ ಚರಣ್‌ಸಿಂಗ್‌ ಸರಕಾರಗಳು ಪತನಗೊಂಡ ಬಳಿಕ ವಾಜಪೇಯಿ ಜನಸಂಘ ಮತ್ತದರ ಪರಿವಾರಕ್ಕೆ ನಿಷ್ಠರಾಗಿ ಉಳಿದುಕೊಂಡರು. ಬಿಜೆಪಿಗೆ ಸೇರ್ಪಡೆಗೊಂಡರು. ಜೆಡಿ(ಯು), ಜೆಡಿ (ಎಸ್‌), ಸಮಾಜವಾದಿ ಪಾರ್ಟಿ, ಇಂಡಿಯನ್‌ ನ್ಯಾಶನಲ್‌ ಲೋಕದಳ ಅಥವಾ ಉಮಾಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿಯಂಥ (ಜನತಾಪಾರ್ಟಿಯಿಂದ ಸಿಡಿದು ರೂಪುಗೊಂಡ) ಪಕ್ಷಗಳ ಪೈಕಿ ಯಾವುದನ್ನೂ ಸೇರಿಕೊಳ್ಳಲಿಲ್ಲ.

ಇಷ್ಟಕ್ಕೂ “ಸರಿಯಾದ ಪಕ್ಷ ಅಥವಾ ಉತ್ತಮ ಪಕ್ಷ’ ಎಂದರೇನು? ಕೆಲವರ ಪ್ರಕಾರ, ಕಾಂಗ್ರೆಸ್‌. ಒಂದು ವೇಳೆ ವಾಜಪೇಯಿ ಇಂಥ “ಒಳ್ಳೆಯ’ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರೆ ಏನಾಗುತ್ತಿತ್ತು? ಅವರು ನಿಶ್ಚಿತವಾಗಿಯೂ ಪ್ರಧಾನಿ ಹುದ್ದೆ ಗೇರುತ್ತಿರಲಿಲ್ಲ. ಜವಾಹರಲಾಲ್‌ ನೆಹರೂ ಅವರು 1957ರಲ್ಲಿ ಯು.ಎನ್‌. ದೇಬರ್‌ ಅವರನ್ನು ಕಾಂಗ್ರೆಸ್‌ನ ಅಧ್ಯಕ್ಷಪೀಠದಿಂದ ಕೆಳಗಿಳಿಸಿ ಅವರ ಜಾಗದಲ್ಲಿ ತಮ್ಮ ಪುತ್ರಿ ಇಂದಿರಾ  ಗಾಂಧಿ ಯವರನ್ನು ಕೂರಿಸುವಾಗಲೇ ಈಕೆ ತಮ್ಮ ಅನುವಂಶೀಯ ಉತ್ತರಾಧಿಕಾರಿಯೆಂದು ಘೋಷಿಸಿದಂತಾಯಿತು. ಅಂದಿನ ದಿನಗಳಲ್ಲಿ ಜನಸಂಘ ಇಂದಿನ ಬಿಜೆಪಿಯಂತಲ್ಲದೆ ಒಂದು ಸಂಪ್ರದಾಯ ಬದ್ಧ ಪಕ್ಷವಾಗಿತ್ತು; ತನ್ನ ನಾಯಕರ ಪೈಕಿ ಯಾರೇ ಆಗಲಿ, ನೆಹರೂ ಹಾಗೂ ಕಾಂಗ್ರೆಸನ್ನು ಶ್ಲಾ ಸುವುದನ್ನು ಅದು ಬಯಸುತ್ತಿರಲಿಲ್ಲ. ಇದೇ ಅಪರಾಧಕ್ಕಾಗಿ ಆ ಪಕ್ಷ ತನ್ನ ಆರಂಭಿಕ ವರ್ಷಗಳ ಅಧ್ಯಕ್ಷರಲ್ಲೊಬ್ಬರಾಗಿದ್ದ ಪಂಡಿತ್‌ ಮೌಳೀಶಂಕರ್‌ ಶರ್ಮಾ ಅವರನ್ನು ಉಚ್ಚಾಟಿಸಿತ್ತು. ಇಂದು ಬಿಜೆಪಿಯಲ್ಲಿನ ತಾರಾಮಣಿಗಳೆಲ್ಲ ಉನ್ನತ ಹುದ್ದೆಗಳ ಹಾದಿಯಲ್ಲಿದ್ದಾರೆ; ಹಾಗಾಗಿ ಬಿಜೆಪಿಗೆ ಇಂದು ಸೇರ್ಪಡೆಗೊಳ್ಳುವುದೊಂದು ಫ್ಯಾಶನ್‌ ಆಗಿಬಿಟ್ಟಿದೆ. ಹಿಂದೆ ಮುಖ ತಿರುವಿ ನಡೆದಿದ್ದವರನ್ನು ಬಿಜೆಪಿ ಖುದ್ದಾಗಿ ಬರಮಾಡಿಕೊಳ್ಳುತ್ತಿದೆ; ಹೀಗೆ ಮರಳಿ ಬಂದವರನ್ನು ರಾಜ್ಯಪಾಲರನ್ನಾಗಿ, ಸಚಿವರನ್ನಾಗಿ ನೇಮಿಸುತ್ತಿದೆ; ನಿಡುಗಾಲದ ನಿಷ್ಠಾವಂತರನ್ನು ರಾಜಾರೋಷವಾಗಿ ಅವಗಣಿಸುತ್ತಿದೆ.

ನೆನಪಿಡಬೇಕಾದ ಅಂಶವೊಂದಿದೆ. ಅದೆಂದರೆ, ವಾಜಪೇಯಿ ಯವರು ಅಯೋಧ್ಯಾ ಚಳವಳಿಯನ್ನಾಗಲಿ, ವಿವಾದಿತ ಬಾಬ್ರಿ ಮಸೀದಿ ಕಟ್ಟಡ ನೆಲಸಮ ಘಟನೆಯನ್ನಾಗಲಿ ಕನಿಷ್ಠ ಪಕ್ಷ ಸಾರ್ವಜನಿಕವಾಗಿಯಾದರೂ ತನಗೆ ಸಂಬಂಧವಿಲ್ಲದ ವಿಷಯ ಗಳೆಂದು ತಳ್ಳಿ ಹಾಕಿಲ್ಲ. ಓರ್ವ ಪ್ರಧಾನಿಯಾಗಿ, ಗೋದ್ರೋತ್ತರ ಕೋಮುಗಲಭೆಗಳ ಹಿನ್ನೆಲೆಯಲ್ಲಿ ಗುಜರಾತಿನಲ್ಲಿದ್ದ ನರೇಂದ್ರ ಮೋದಿ ಸರಕಾರವನ್ನು ವಜಾಗೊಳಿಸಬೇಕೆಂಬ ಪ್ರಬಲ ಒತ್ತಾಯ ಗಳನ್ನು ಸಹಿಸಿಕೊಂಡರು; ಕೇವಲ “ರಾಜಧರ್ಮವನ್ನು ಪಾಲಿಸಿ’ ಎಂದು ಮೋದಿಯವರಿಗೆ ಸೂಚಿಸಿದರು. ಹಿಂದೂಗಳ ದಾಳಿ ಗಳಿಂದ ಮುಸ್ಲಿಮರನ್ನು ರಕ್ಷಿಸುವಲ್ಲಿ ಮೋದಿ ಇನ್ನಷ್ಟು ಪ್ರಯತ್ನ ಮಾಡಬಹುದಿತ್ತು ಎಂಬುದೇ ಬಹುಶಃ ಇದರ ಅರ್ಥ.

ಇನ್ನು, ವಾಜಪೇಯಿ ಅವರ ನಾಯಕತ್ವವನ್ನು ಎಂದೂ ಪ್ರಶ್ನಿಸದೆ ಉಳಿದಿರುವುದಕ್ಕಾಗಿ ಎಲ್‌.ಕೆ. ಆಡ್ವಾಣಿಯವರನ್ನು ಅಭಿನಂದಿ ಸಲೇಬೇಕಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ “ನನ್ನ ಹಿರಿಯ ನಾಯಕರಾದ’ ವಾಜಪೇಯಿಯವರೇ ಪ್ರಧಾನಿ ಯಾಗುತ್ತಾರೆ ಎಂದವರು ಹೇಳುತ್ತಲೇ ಬಂದವರು. ಸರಕಾರ ನಡೆಸುವುದಕ್ಕೆ ಅಗತ್ಯವುಳ್ಳ ಎಲ್ಲ ಯೋಗ್ಯತೆ – ಸಾಮರ್ಥ್ಯ ಆಡ್ವಾಣಿಯವರಲ್ಲಿತ್ತು.

ವಾಜಪೇಯಿ ರಾಜಕೀಯ ವ್ಯವಹಾರ ಚತುರರು. ಹೊಂದಾಣಿಕೆಯ, ಇತರರನ್ನೂ ಒಳಗೊಳಿಸಿಕೊಳ್ಳುವ ಗುಣವಿದ್ದ ವರು. ಬಹುಶಃ ಅವರು ಪ್ರಧಾನ ಮಂತ್ರಿಯಾದ ಸಂದರ್ಭವೂ ಇಂಥ ನಿಲುವಿಗೆ ಕಾರಣವಾಗಿದ್ದಿರಬಹುದು. 1999-2014 ಅವಧಿಯಲ್ಲಿ ಅವರು ಸಮ್ಮಿಶ್ರ ಸರಕಾರದ ಚುಕ್ಕಾಣಿ ಹಿಡಿದಿದ್ದ ಸಂದರ್ಭದಲ್ಲಿ ಆ ಮೈತ್ರಿಕೂಟ ಒಂದಕ್ಕೊಂದು ಸಾದೃಶ್ಯವಿಲ್ಲದ 20 ಪಕ್ಷಗಳ ಕೂಟವಾಗಿತ್ತು. ಇಂದಿನ ಮೋದಿಯವರ ನೇತೃತ್ವ ದಡಿಯ ಎನ್‌ಡಿಎ, ತನ್ನ ಮಿತ್ರ ಘಟಕಗಳನ್ನು ಕಳೆದುಕೊಳ್ಳುತ್ತ ಬಂದಿದೆ. 1999ರ ಮೇ ತಿಂಗಳಲ್ಲಿ ವಾಜಪೇಯಿ ಪ್ರಧಾನಿ ಪದದಿಂದ ನಿರ್ಗಮಿಸಿದ್ದು ದುರದೃಷ್ಟದ ಸಂಗತಿ. ಅಂದು ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಲೋಕಸಭಾ ಸ್ಪೀಕರ್‌ ಆಗಿದ್ದ ಟಿಎಂಸಿ ಬಾಲಯೋಗಿ, ಒರಿಸ್ಸಾದ ಕಾಂಗ್ರೆಸ್‌ ಮುಖ್ಯಮಂತ್ರಿ (ಈಗ ಎಲ್ಲರೂ ಮರೆತುಬಿಟ್ಟಿರುವ) ಗಿರಿಧರ ಗೋಮಾಂಗೋ ಅವರಿಗೆ ಮತದಾನ ಮಾಡಲು ಅವಕಾಶವಿತ್ತುದು ಒಂದು ತಪ್ಪು ನಡೆಯಾಗಿತ್ತು. ವಾಜಪೇಯಿ ಸರಕಾರ ಕೇವಲ ಒಂದೇ ಒಂದು ಮತದಿಂದ ಸೋಲು ಕಂಡಿತು. 

ಅಂದ ಹಾಗೆ, ಓರ್ವ ಪ್ರಧಾನಿಯಾಗಿ ವಾಜಪೇಯಿಯವರ ಕಾರ್ಯಶೈಲಿ ಕುರಿತಂತೆ ಟೀಕೆಗಳು ಕೇಳಿ ಬಂದಿರುವುದುಂಟು. ಹಾಗೆ ಟೀಕಿಸಿದವರು ವಿವೇಚನೆಯಿಲ್ಲದೆ ಟೀಕಿಸಿದರು ಎನ್ನುವ ಹಾಗಿಲ್ಲ. ತಮ್ಮ ಮುಖ್ಯ ಕಾರ್ಯದರ್ಶಿಯಾಗಿದ್ದ (ಈಗಿಲ್ಲದ) ಬ್ರಜೇಶ್‌ ಮಿಶ್ರಾ ಎಲ್ಲ ರೀತಿಯಲ್ಲೂ ಪ್ರಬಲರಾಗಲು ಅವಕಾಶ ವಿತ್ತಿದ್ದರು ವಾಜಪೇಯಿ. ಮಧ್ಯ ಪ್ರದೇಶದ ಮಾಜಿ ಕಾಂಗ್ರೆಸ್‌ ಮುಖ್ಯಮಂತ್ರಿಯಾಗಿದ್ದ ದ್ವಾರಕಾ ಪ್ರಸಾದ್‌ ಮಿಶ್ರಾ ಅವರ ಪುತ್ರನಾಗಿದ್ದ ಬೃಜೇಶ್‌ ಮಿಶ್ರಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರರೂ ಆಗಿದ್ದರು. ಅನೇಕ ಸಚಿವರು ಅವರೊಂದಿಗೆ “ಸುರಳೀತ’ ಸಂಬಂಧ ಹೊಂದಿರಲಿಲ್ಲ. ವಾಜಪೇಯಿ ಆಳ್ವಿಕೆಯ ದಿನಗಳ ಇನ್ನೊಂದು “ಪ್ರಬಲ ಶಕ್ತಿ ಕೇಂದ್ರ’ವಾಗಿದ್ದವರೆಂದರೆ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್‌ ಅಧಿಕಾರಿ ಎನ್‌.ಕೆ. ಸಿಂಗ್‌.

ರಾಜಕೀಯದಲ್ಲಿ ಹೇಗೋ, ತಮ್ಮ ಖಾಸಗಿ ಬದುಕಿನಲ್ಲೂ ವಾಜಪೇಯಿಯವರು ಹೊಂದಾಣಿಕೆ ಬಯಸದ ಬಿಗಿ ನಿಲುವಿನ ವರಾಗಿರಲಿಲ್ಲ ಎಂಬ ಅಂಶವನ್ನು ಅವರ ಬಗೆಗೆ ಬಂದಿರುವ ಬರಹಗಳಲ್ಲಿ ಗುರುತಿಸಬಹುದಾಗಿದೆ. ಮೊನ್ನೆ ಅವರ ಚಿತೆಗೆ ಒಬ್ಬ ಹೆಣ್ಣು ಮಗಳು ಸ್ಪರ್ಶ ಮಾಡಿರುವ ಘಟನೆ, ಅವರ ಈ ನಮ್ಯ ವ್ಯಕ್ತಿತ್ವದ ಪ್ರತೀಕವಾಗಿರಲೂಬಹುದು. ನಮಿತಾ ಕೌಲ್‌ ಭಟ್ಟಾಚಾರ್ಯ ಎಂಬ ಹೆಣ್ಣು ಮಗಳು ವಾಜಪೇಯಿ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಾಗ ಅನೇಕರು ಆಸಕ್ತಿಯಿಂದ ವೀಕ್ಷಿಸಿದರು. ಸಂಪ್ರದಾಯದ ಪ್ರಕಾರ, ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಬೇಕಾದವರು ಆತನ ಮಗ ಅಥವಾ ಯಾರಾದರೂ (ಪುರುಷ) ಸಂಬಂಧಿಕರಲ್ಲೊಬ್ಬರು. ಆದರೆ ಆಧುನಿಕತೆಯ ಗಾಳಿ ಪ್ರಬಲವಾಗಿ ಬೀಸುತ್ತಿರುವ ಈ ದಿನಗಳಲ್ಲಿ ಈ “ನಿಷೇಧ’ವನ್ನು ಕೆಲ ಮಹಿಳೆಯರು ಮುರಿಯಲು ಮುಂದಾಗಿದ್ದಾರೆ. ವಾಜಪೇಯಿ ಅವರಿಗೆ ಸ್ವಂತ ಸೋದರ ಸಂಬಂಧಿಕರಿದ್ದಾರೆ, ಅಥವಾ ಇತರ ಪುರುಷ ಬಂಧು-ಬಾಂಧವ ರಿದ್ದಾರೆ. ನಮಿತಾ ಕೌಲ್‌ ಅವರು ವಾಜಪೇಯವರ ಮನೆವಾರ್ತೆಯನ್ನು ದೀರ್ಘ‌ಕಾಲದಿಂದ ನಿರ್ವಹಿಸುತ್ತ ಬಂದಿದ್ದ (ಈಗ ಬದುಕಿಲ್ಲದ) ರಾಜಕುಮಾರಿ ಕೌಲ್‌ ಅವರ ಪುತ್ರಿ. ರಾಜಕುಮಾರಿ ಅವರು ದಿಲ್ಲಿ ನಿವಾಸಿಯಾಗಿದ್ದ ವಿದ್ವಾಂಸ, ಪ್ರೊ| ಬಿ.ಎಂ. ಕೌಲ್‌ ಅವರ ಪತ್ನಿ. ಅವಿವಾಹಿತರಾಗಿದ್ದ ವಾಜಪೇಯಿ ತಮ್ಮ ಮನೆವಾರ್ತೆಯ ನಿರ್ವಹಣೆಯ ಹೊಣೆಯನ್ನು ಕಾಶ್ಮೀರಿ ಬ್ರಾಹ್ಮಣ ಕುಟುಂಬಕ್ಕೆ ಒಪ್ಪಿಸಿದ್ದರು. 

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

malpeKasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

Kasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

1-adsddsad

T20 World Cup;106 ರನ್‌ ಮಾಡಿಯೂ ಗೆಲುವು: ಬಾಂಗ್ಲಾಕ್ಕೆ ಸೂಪರ್‌-8 ಟಿಕೆಟ್‌

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

1-sl

T20 World Cup; ಲಂಕೆಗೆ ಕೊನೆಯಲ್ಲೊಂದು ಸಮಾಧಾನ

1-sdsddsa

Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ

1-asdsdsad

Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

football

Team India ಫುಟ್‌ಬಾಲ್‌ ಕೋಚ್‌ ಸ್ಟಿಮ್ಯಾಕ್‌ಗೆ ಗೇಟ್‌ಪಾಸ್‌

mಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ; ಮಸೀದಿಗಳಲ್ಲಿ ಪ್ರಾರ್ಥನೆ

ಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ

malpeKasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

Kasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

1-adsddsad

T20 World Cup;106 ರನ್‌ ಮಾಡಿಯೂ ಗೆಲುವು: ಬಾಂಗ್ಲಾಕ್ಕೆ ಸೂಪರ್‌-8 ಟಿಕೆಟ್‌

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.