ದೇಶದ ಪ್ರಗತಿಯ ಭಾಗೀದಾರ, ಪ್ರಾಮಾಣಿಕ ತೆರಿಗೆ ಪಾವತಿದಾರ 


Team Udayavani, Sep 15, 2018, 5:14 PM IST

money.jpg

ಹಿಂದೆಂದಿಗಿಂತಲೂ ಸರ್ವ ಶಕ್ತಿಶಾಲಿಯಾದ ಇಂದಿನ ಸರಕಾರದಿಂದ ನಾಗರಿಕರ ಅಪೇಕ್ಷೆಗಳು ನೂರಾರು. ರೈತರ ಸಾಲ ಮನ್ನಾ ಆಗಲಿ, ಕೃಷಿಕರಿಗೆ ಉಚಿತ ವಿದ್ಯುತ್‌, ಬಡವರಿಗೆ ಪುಕ್ಕಟೆ ಧವಸ-ಧಾನ್ಯ ಸಿಗಲಿ ಎಂದೆಲ್ಲಾ ಬೇಡಿಕೆಗಳು. ಇಂಧನ ಬೆಲೆಯೇರಿಕೆ ಏಕೆ? ರಸ್ತೆ-ರೈಲು ಅಭಿವೃದ್ಧಿ ಏಕಿಲ್ಲ? ಎಂದೆಲ್ಲಾ ಪ್ರತಿಭಟನೆ ನಡೆಯುತ್ತದೆ. ನೌಕರರು ವೇತನ ಹೆಚ್ಚಳಕ್ಕಾಗಿ ಮುಷ್ಕರ ಹೂಡುತ್ತಾರೆ, ಉದ್ಯಮಿಗಳು ಮೂಲ ಸೌಕರ್ಯವಿಲ್ಲ ಎಂದು ಅಸಹನೆ ವ್ಯಕ್ತಪಡಿಸುತ್ತಾರೆ. ಚುನಾವಣೆಗೆ ಮೊದಲು ನೂರಾರು ಆಶ್ವಾಸನೆ ನೀಡಿದ್ದ ಮುಖ್ಯಮಂತ್ರಿ-ಪ್ರಧಾನ ಮಂತ್ರಿಗಳು ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ತಮ್ಮ ಬಳಿ ದುಡ್ಡಿನ ಮರವಿಲ್ಲ ಎಂದು ಅಲವತ್ತುಕೊಳ್ಳುತ್ತಾರೆ. ಕಲ್ಯಾಣ ರಾಜ್ಯಗಳ (welfare states) ಸರಕಾರಗಳ ಮುಂದೆ ಸೀಮಿತ ಸಂಪನ್ಮೂಲಗಳು ಮತ್ತು ಅಗಣಿತ ಬೇಡಿಕೆಗಳು. ಪ್ರಜಾಪ್ರಭುತ್ವದ ಸರಕಾರಗಳ ದೊಡ್ಡ ಸಮಸ್ಯೆ
ಎಂದರೆ ಸಂಪನ್ಮೂಲ ಕ್ರೋಢೀಕರಣ. ರೈಲು ಸೇವೆ ಅಭಿವೃದ್ಧಿಯೂ ಆಗಬೇಕು ಆಧುನೀಕರಣವೂ ಆಗಬೇಕು ಆದರೆ ಟಿಕೆಟ್‌ ದರ ಪರಿಷಷ್ಕರಣೆ ಆಗಬಾರದು. ಚುನಾವಣಾ ವರ್ಷದಲ್ಲಂತೂ ಹೊಸ ಹೊಸ ಯೋಜನೆಗಳು ಜಾರಿಗೆ ಬರಲೇಬೇಕು, ಹೊಸ ಸುಂಕ ಹೇರಿ ಸಂಕಷ್ಟಕ್ಕೆ
ಸಿಲುಕಲೂಬಾರದು ಎಂಬ ಮನೋಧರ್ಮ ನಮ್ಮದು.

ಸರಕಾರಕ್ಕೆ ಸಲ್ಲಬೇಕಾದ ತೆರಿಗೆ ತಪ್ಪಿಸಿಕೊಳ್ಳಲು ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಮಾಡುವುದರಲ್ಲಿ ನಮಗೆ ಬಹಳ ಸಂತೋಷವಾಗುತ್ತದೆ. ಹೀಗೆ ಮಾಡಿ ಅಷ್ಟು ತೆರಿಗೆ ಉಳಿಸಿದೆ, ಹಾಗೆ ಮಾಡಿದರೆ ಚಿಕ್ಕಾಸೂ ತೆರಿಗೆ ಕಟ್ಟಬೇಕಾಗಿಲ್ಲ ಎಂದು ಅರ್ಥಶಾಸ್ತ್ರ ಪರಿಣತಿಯ ತಮ್ಮ ಜ್ಞಾನ ಪ್ರದರ್ಶಿಸುತ್ತಾ ಬೀಗುತ್ತೇವೆ. ಹೋಗಲಿ ಬಿಡೋ, ದೊಡ್ಡ ತಿಮಿಂಗಲಗಳೇ ಬಲೆಗೆ ಸಿಗದಿರುವಾಗ ನನ್ನ ನಿನ್ನಂತಹ ಸಾಮಾನ್ಯ
ಮೀನುಗಳನ್ನು ಹಿಡಿಯಲು ಆದಾಯ ತೆರಿಗೆ ಇಲಾಖೆಯ ಬಳಿ ಅಷ್ಟೊಂದು ಸಮಯ ಎಲ್ಲಿದೆ ಬಿಡೋ. ನೀನೇನೂ ಟ್ಯಾಕ್ಸ್‌ ರಿಟರ್ನ್ ಸಲ್ಲಿಸಬೇಕಾಗಿಲ್ಲ ಎಂದು ಅಮಾಯಕರಿಗೆ ಪುಕ್ಕಟೆ ಸಲಹೆ ಕೊಡುತ್ತೇವೆ.

ಜಿಎಸ್‌ಟಿ ಬಂದು ಗಂಡಾಂತರವಾಗಿದೆ. ಏನು ಮಾಡಿದರೂ ಟ್ಯಾಕ್ಸ್‌ ತಪ್ಪಿಸಿಕೊಳ್ಳುವುದು ಕಷ್ಟವಾಗಿದೆ. ಬ್ಯಾಂಕಿಗೆ ನಗದು ಕಟ್ಟುವುದೂ ಕಷ್ಟಕರವಾಗಿದೆ. ಟ್ರಾನ್ಸಾಕ್ಷನ್‌ ((transaction) ಅಷ್ಟು ಲಕ್ಷ ದಾಟಿದರೆ ಇಷ್ಟು ಟ್ಯಾಕ್ಸ್‌ ಕಟ್ಟಬೇಕಾಗುತ್ತದೆ ಎಂದು ಇದುವರೆಗೆ ಟ್ಯಾಕ್ಸ್‌ ಕಟ್ಟುವ ಗೊಡವೆಗೆ ಹೋಗದ ಹಲವಾರು ಟ್ಯಾಕ್ಸಿಗಳ ಮಾಲಕ ಬೇಗುದಿ ತೋಡಿಕೊಳ್ಳುತ್ತಾನೆ. ಪಾನ್‌ ಕಾರ್ಡ್‌ ಕೊಟ್ಟರೆ ನನಗೆ ಟ್ಯಾಕ್ಸ್‌ ತೊಂದರೆ ಬಾರದು ತಾನೇ? ಈಗಷ್ಟೇ ಹುಟ್ಟಿದ ಪಾಪುವಿನ ಹೆಸರಲ್ಲಿ ಜಂಟಿ ಖಾತೆ ತೆರೆದು ಅಷ್ಟು ಲಕ್ಷವಿಟ್ಟರೆ ಅದರ ಬಡ್ಡಿ ತನ್ನ ಆದಾಯಕ್ಕೆ ಸೇರುತ್ತದೋ? ಎಂದು ಬ್ಯಾಂಕ್‌ ಅಧಿಕಾರಿಯ ಬಳಿ ಪುಕ್ಕಟೆ ಸಲಹೆ ಕೇಳುತ್ತೇವೆ. ಸಮಾಜದಲ್ಲಿ ತನ್ನ ಹೆಸರು ಮೇಲಕ್ಕೇರಲಿ ಎಂದು ಭರ್ಜರಿ ಚಂದಾ ನೀಡುವ, ಪುಣ್ಯ ಪ್ರಾಪ್ತಿಯಾಗಲಿ ಎಂದು ಲಕ್ಷಾಂತರ ರೂ. ನೀರಿನಂತೆ ಖರ್ಚು ಮಾಡುವ ನಾವು ಸರಕಾರದ ಬೊಕ್ಕಸಕ್ಕೆ ಹಣ ಕೊಡುವುದೆಂದರೆ ಹಣವನ್ನು ಹಾಳು ಮಾಡಿದಂತೆ ಎನ್ನುವ ಮಾನಸಿಕತೆಯನ್ನು ಬೆಳೆಸಿಕೊಂಡಿದ್ದೇವೆ. 

ಸರಕಾರದ ದೊಡ್ಡ ಮೊತ್ತದ ನೋಟುಗಳ ಏಕಾಏಕಿ ಅಪನಗದೀಕರಣ ಸರಿಯೋ ತಪ್ಪೋ, ಅದರಿಂದ ಆರ್ಥಿಕತೆಗೆ ಪ್ರಯೋಜನವಾಗಿದೆಯೋ ಇಲ್ಲವೋ ಎನ್ನುವ ಚರ್ಚೆ ಇನ್ನೂ ನಡೆಯುತ್ತಿದೆ. ಕಪ್ಪು ಹಣದ ಖದೀಮರ ಬಳಿ ಇರಬಹುದೆಂದು ಅಂದಾಜಿಸಲಾದ ಸುಮಾರು ಎರಡು-ಮೂರು ಲಕ್ಷ ಕೋಟಿ ರೂ. ಮೌಲ್ಯದ ನಗದು ಹಣ ವಿನಿಮಯಕ್ಕಾಗಿ ಬ್ಯಾಂಕ್‌ಗಳಿಗೆ ಮರಳಿ ಬಾರದೇ ಉಳಿಯಬಹುದು ಎನ್ನುವ ಆಶಾವಾದ ಹುಸಿಯಾದ ಹಿನ್ನೆಲೆಯಲ್ಲಿ ಅಪನಗದೀಕರಣ ಅಯಶಸ್ವಿ ಎನ್ನುವುದು ವಿರೋಧಿಗಳ ವಾದ. ನಗದು ರಹಿತ ಅರ್ಥವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದೆ ಎನ್ನುವ ಇನ್ನೊಂದು ವಾದವೂ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಗಮನಾರ್ಹ ಬೆಳವಣಿಗೆ ಎಂದರೆ ತೆರಿಗೆ ವ್ಯಾಪ್ತಿ ಹೆಚ್ಚಾಗಿದೆ
ಎನ್ನುವುದಂತೂ ಒಂದು ಸಕಾರಾತ್ಮಕ ಪರಿಣಾಮ ಎನ್ನುವುದರಲ್ಲಿ ಸಂದೇಹವಿಲ್ಲ.

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಕೆಗೆ ಕೊನೆಯ ದಿನವಾದ ಆಗಸ್ಟ್‌ 31ರವರೆಗಿನ ಅಂಕಿ ಅಂಶಗಳ ಪ್ರಕಾರ ಈ ಬಾರಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆಯಲ್ಲಿ ಕಳೆದ ಬಾರಿಗಿಂತ ಶೇ.71 ವೃದ್ಧಿಯಾಗಿದೆ. ಕಳೆದ ವರ್ಷ ಈ ಸಂಖ್ಯೆ 3.17 ಕೋಟಿಯಾಗಿದ್ದರೆ ಈ ಬಾರಿ ಅಭೂತಪೂರ್ವ 5.42 ಕೋಟಿಗೆ ತಲುಪಿದೆ. ಹಿಂದಿನ ಯುಪಿಎ ಸರಕಾರವಿರಲಿ ಅಥವಾ ಈಗಿನ ಎನ್‌ಡಿಎ ಸರಕಾರವಾಗಲಿ ತೆರಿಗೆ ಜಾಲ ದೊಡ್ಡದಾಗಬೇಕು ಎನ್ನುವ ವಿಚಾರದಲ್ಲಿ ಅಭಿಪ್ರಾಯ ಭೇದ ಇಲ್ಲ. ಕಳೆದ ವರ್ಷ ಆದಾಯ ತೆರಿಗೆ ಅಧಿಕಾರಿಗಳನ್ನುದ್ದೇಶಿಸಿ ಪ್ರಧಾನ ಮಂತ್ರಿ ಮೋದಿಯವರು ತೆರಿಗೆ ವ್ಯಾಪ್ತಿಗೆ ಇನ್ನಷ್ಟು ಉಳ್ಳವರನ್ನು ತನ್ನಿ ಎನ್ನುವ ಆಶಯದ ನುಡಿ ಯಾಡಿದ್ದರು. ಟ್ಯಾಕ್ಸ್‌ ನೀಡುವುದು ಹೆಮ್ಮೆಯ ವಿಷಯ
ಎನ್ನುವ ಭಾವನೆ ನಮ್ಮ ಸಮಾಜದಲ್ಲಿ ಮೂಡಬೇಕಾಗಿದೆ. ಸರಕಾರದ ನಿರ್ಣಯದಿಂದ ತೆರಿಗೆ ತಪ್ಪಿಸುವುದು ಕಷ್ಟ ಎನ್ನುವ ಭಾವನೆ ನಿಧಾನವಾಗಿ ಜನರಲ್ಲಿ ಮೂಡುತ್ತಿದೆ.

ಪಾನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಜೋಡಣೆಯ ವಿರುದ್ಧ ಅನೇಕರು ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎನ್ನುವ ನೆಲೆಯಲ್ಲಿ ಕೋರ್ಟು ಮೆಟ್ಟಿಲೇರಿದ್ದರು. ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿಯಲ್ಲಿ ಅಗಾಧ ಸಾಧನೆ ಮಾಡುತ್ತಿರುವ ಸರ್ವಾಧಿಕಾರಿ ನಾಯಕತ್ವದ ಕಮ್ಯುನಿಸ್ಟ್‌ ಚೀನಾದೊಂದಿಗೆ ಭಾರತದ ಸಾಧನೆಯನ್ನು ತುಲನೆ ಮಾಡುವ ಮೊದಲು ಚೀನಾದ ಕಠಿಣ ಕಾನೂನುಗಳು, ಸರಕಾರದ ವಿಪುಲ ಸಂಪನ್ಮೂಲ ಕ್ರೋಢೀಕರಣ ಶಕ್ತಿಯನ್ನು ಏಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ ? ತೆರಿಗೆ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ, ಪ್ರಾಮಾಣಿಕ ತೆರಿಗೆದಾರರನ್ನು ಪ್ರೋತ್ಸಾಹಿಸುವ ಇಚ್ಛಾಶಕ್ತಿ ತೋರಿಸುವುದರಿಂದ ಜನರ ಅವಕೃಪೆಗೆ ಪಾತ್ರರಾಗಬೇಕಾಗುತ್ತ ದೆಂದು ನಮ್ಮ ರಾಜಕಾರಣಿಗಳು ಯೋಚಿಸುತ್ತಾರೆ. ವಿರೋಧಿಗಳು ಅಂತಹ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ದೇಶದ ಹೊರಗಿನ ಕಪ್ಪು ಹಣ ವಾಪಾಸು ತರುವುದು ಒತ್ತಟ್ಟಿಗಿರಲಿ, ದೇಶದೊಳಗೆ ಬೆಳೆಯುತ್ತಿರುವ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೆಲಸವೇ ಅಷ್ಟೊಂದು ಸುಲಭವಲ್ಲ. ನಮ್ಮ ತೆರಿಗೆ ವ್ಯವಸ್ಥೆ ಸರಿ ಯಾದರೆ ಅಚ್ಛೇ ದಿನ ತನ್ನಿಂದ ತಾನಾಗಿಯೇ ಬರುತ್ತದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರ ತಡೆಯಲು ಪರಿಣಾಮಕಾರಿ ತೆರಿಗೆ ವ್ಯವಸ್ಥೆ ಸ್ಥಾಪಿಸಲ್ಪಡುವುದು ಅನಿವಾರ್ಯ. ಸರಕಾರದ ಅಂತಹ ಪ್ರಯತ್ನಗಳನ್ನು ವೈಯಕ್ತಿಕ ಲಾಭ ನಷ್ಟದ ಕುರಿತಾಗಿ ಚಿಂತಿಸದೆ ಪ್ರಬಲವಾಗಿ ಸಮರ್ಥಿಸುವ ಪ್ರಜ್ಞಾವಂತಿಕೆ ನಮ್ಮಲ್ಲಿ ಬೆಳೆಯಬೇಕಾಗಿದೆ. ನಕ್ಸಲ್ ಉಗ್ರವಾದದಂತಹ ಸಮಸ್ಯೆಗಳು ರಾಷ್ಟ್ರದ ಏಕತೆಗೆ ಭಂಗ ತರುತ್ತಿರುವಾಗ ಸುಸಜ್ಜಿತ ಮತ್ತು ಅತ್ಯಾಧುನಿಕ ಪೊಲೀಸ್‌ ವ್ಯವಸ್ಥೆ ನಮಗೆ ಬೇಕಾಗಿದೆ. ದೈತ್ಯ ಸೈನ್ಯ ಶಕ್ತಿಯಾಗಿ ಬೆಳೆಯುತ್ತಿರುವ ಚೀನಾದ ಉಪಟಳ, ಪಾಕಿಸ್ತಾನದ ಕಿರುಕುಳಕ್ಕೆ ಎದಿರೇಟು ನೀಡಬಲ್ಲ ಜಾಗತಿಕ ಮಿಲಿಟರಿ ಶಕ್ತಿಯಾಗಿ ದೇಶ ಗುರುತಿಸಿಕೊಳ್ಳಬೇಕಾದರೆ ಸಾಮರ್ಥ್ಯವುಳ್ಳವರು ಪ್ರಾಮಾಣಿಕವಾಗಿ ತೆರಿಗೆ ನೀಡಲೇಬೇಕು.

ಆದಾಯದ ಮೂಲವನ್ನು ಮುಚ್ಚಿಡದೆ ಅಧಿಕೃತವಾಗಿ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸುವ ಮೂಲಕ ಘೋಷಿಸಿ ಕೊಂಡರೆ ನಮ್ಮ ಆರ್ಥಿಕ ವಹಿವಾಟುಗಳು ಕಾನೂನು ಬದ್ಧವಾಗುತ್ತವೆ. ಒಂದೆರಡು ಸಾವಿರ ಟ್ಯಾಕ್ಸ್‌ ನೀಡುವುದರಿಂದ ಹಿಂಜರಿಯುವುದು ಸರಿಯಲ್ಲ. ನಿಮ್ಮ ಆದಾಯದ ಪಕ್ಕಾ ದಾಖಲೆ ಸೃಷ್ಟಿಯಾದಂತಾಗುತ್ತದೆ. ಮನೆ ಸಾಲ, ವ್ಯಾಪಾರ ವಹಿವಾಟಿಗಾಗಿ ಸಾಲ ಸೌಲಭ್ಯ ಪಡೆಯಲು ರಹದಾರಿ ಸಿಕ್ಕಂತಾಗುತ್ತದೆ. ಸರಿಯಾದ ತೆರಿಗೆ ನೀಡುವುದರಿಂದ ಎಲ್ಲಿ ಸಿಕ್ಕಿ ಬೀಳುತ್ತೇವೋ ಎನ್ನುವ ಭಯ ಕಾಡದೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ. ತೆರಿಗೆ
ನೀಡುವುದೆಂದರೆ ಹಣ ವ್ಯರ್ಥ ಮಾಡಿದಂತೆ ಎನ್ನುವ ನಮ್ಮ ಮನೋಧರ್ಮ ಬದಲಾಗಬೇಕಾಗಿದೆ. ಪ್ರಾಮಾಣಿಕ ತೆರಿಗೆ ನೀಡುವವರು ದೇಶದ ಪ್ರಗತಿಯ ಭಾಗೀದಾರರು. ದೇಶ ಸೇವೆ ಮಾಡಲು ಪಾಕಿಸ್ಥಾನ-ಚೀನಾ ಗಡಿಗೆ ಹೋಗಬೇಕಾಗಿಲ್ಲ. ಸರಿಯಾದ ತೆರಿಗೆ ನೀಡುವುದರ ಮೂಲಕ ರಾಷ್ಟ ಕಟ್ಟುವ ಕೆಲಸ ಮಾಡಬಹುದು.

*ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

naval

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

mattimood

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

1-sadsdsad

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸುರು ಜಲಜನಕ: ಭವಿಷ್ಯದ ಇಂಧನ

ಹಸುರು ಜಲಜನಕ: ಭವಿಷ್ಯದ ಇಂಧನ

ವಿಶ್ವದ ಅಶಾಂತಿಗೆ ಪಾಕಿಸ್ಥಾನದ ಮಹತ್ವದ ಕೊಡುಗೆ!

ವಿಶ್ವದ ಅಶಾಂತಿಗೆ ಪಾಕಿಸ್ಥಾನದ ಮಹತ್ವದ ಕೊಡುಗೆ!

ಮನವ ಶೋಧಿಸಬೇಕು ನಿತ್ಯ

ಮನವ ಶೋಧಿಸಬೇಕು ನಿತ್ಯ

ನಾವು ಡಿಜಿಟಲ್‌ ಬ್ಯಾಂಕಿಂಗ್‌ಗೆ ಕಾಲಿಟ್ಟಿದ್ದೇವಷ್ಟೇ…

ನಾವು ಡಿಜಿಟಲ್‌ ಬ್ಯಾಂಕಿಂಗ್‌ಗೆ ಕಾಲಿಟ್ಟಿದ್ದೇವಷ್ಟೇ…

“ಕಲಿಕಾ ಹಬ್ಬ’ ಎಂಬ ನಿತ್ಯೋತ್ಸವ…!

“ಕಲಿಕಾ ಹಬ್ಬ’ ಎಂಬ ನಿತ್ಯೋತ್ಸವ…!

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

naval

ಡೈರೆಕ್ಟರ್ ಜನರಲ್ ನೇವಲ್ ಆಪರೇಷನ್ಸ್ ಆಗಿ ಅತುಲ್ ಆನಂದ ಅಧಿಕಾರ ಸ್ವೀಕಾರ

mattimood

ಕಲಬುರಗಿ ಗ್ರಾಮೀಣ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ