ಬ್ಯಾಂಕುಗಳೇಕೆ ದಿವಾಳಿಯಾಗುತ್ತಿವೆ?


Team Udayavani, Mar 10, 2020, 6:52 AM IST

ಬ್ಯಾಂಕುಗಳೇಕೆ ದಿವಾಳಿಯಾಗುತ್ತಿವೆ?

ಬ್ಯಾಂಕುಗಳು ದಿವಾಳಿಯಾಗಲು ವಸೂಲಾಗದ ಸಾಲ ಒಂದೇ ಕಾರಣವಲ್ಲ. ಆಡಳಿತದ ಚುಕ್ಕಾಣಿ ಹಿಡಿದಿರುವವರದ್ದೂ ತಪ್ಪಿದೆ. ಯೆಸ್‌ ಬ್ಯಾಂಕನ್ನೇ ತೆಗೆದುಕೊಂಡರೆ 2014ರಲ್ಲಿ 55,633ಕೋಟಿ ಇದ್ದ ಸಾಲ 2019ರ ಹೊತ್ತಿಗೆ 2,41,909 ಕೋಟಿಗೆ ಏರಿದಾಗ ಬ್ಯಾಂಕಿನ ನಿರ್ದೇಶಕರ ಮಂಡಳಿ, ರಿಸರ್ವ್‌ ಬ್ಯಾಂಕ್‌ ಅಸಲಿ ಕಾರಣ ಹುಡುಕುವ ಕೆಲಸ ಮಾಡಬೇಕಿತ್ತು.

ಭಾರತ ಬ್ಯಾಂಕುಗಳ ನಾಡು. ಇಲ್ಲಿರುವಷ್ಟು ಬ್ಯಾಂಕುಗಳು ಜಗತ್ತಿನ ಬೇರಾವುದೇ ದೇಶಗಳಲ್ಲಿಲ್ಲ. ಆದರೆ ಖಾಸಗಿ ವಲಯದ ಯೆಸ್‌ ಬ್ಯಾಂಕ್‌ ಹುಟ್ಟಿದ 14 ವರ್ಷಗಳಲ್ಲಿಯೇ ದಿವಾಳಿಯಂಚಿಗೆ ಹೋಗಿರುವುದು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಕೆಟ್ಟ ಸಾಲಗಳೊಟ್ಟಿಗೆ ಸುಮಾರು 45 ಸಾವಿರ ಕೋಟಿ ಬಾಧಿತ ಸಾಲ (Stressed Accounts) ಇದೆಯಂತೆ. ನವಯುಗದ ಬ್ಯಾಂಕ್‌ಗಳು ಏನೋ ಮಾಡಲು ಹೋಗಿ ತಾವೇ ಮುಗ್ಗರಿಸುತ್ತಿರುವುದು ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆಗೆ ಒಂದು ಆತಂಕಕಾರಿ ಬೆಳವಣಿಗೆಯಾಗಿ ಪರಿಣಮಿಸುತ್ತಿದೆ.

ಅದೇಕೆ ಬ್ಯಾಂಕುಗಳು ದಿವಾಳಿಯಾಗುತ್ತಿವೆ? ಈ ಒಂದು ಪ್ರಶ್ನೆಗೆ ಹಲವು ಆಯಾಮಗಳ ಉತ್ತರಗಳಿವೆ. ನಮ್ಮ ದೇಶದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಹೇಗಿದೆ ಎಂದರೆ ಮೇಲ್‌ಸ್ತರದಲ್ಲಿ ಆಡಳಿತ ಯಂತ್ರ, ಕೆಳಸ್ತರದಲ್ಲಿ ಹಣಕಾಸಿನ ನಿಜ ವ್ಯವಹಾರ ನಡೆಸುವ ಬ್ಯಾಂಕ್‌ ಶಾಖೆಗಳು. ಇವುಗಳೆಲ್ಲದಕ್ಕೂ ರಿಮೋಟ್‌ ಕಂಟ್ರೋಲ್‌ ಹಿಡಿದಿರುವ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರ. ಹೀಗಿದ್ದರೂ ಇತ್ತೀಚೆಗಿನ ವರ್ಷಗಳಲ್ಲಿ ಕೆಲವು ಬ್ಯಾಂಕುಗಳು, ಅದರಲ್ಲೂ ಖಾಸಗಿ ಮತ್ತು ಸಹಕಾರಿ ರಂಗದ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿ ಗೋತಾ ಹೊಡೆಯುತ್ತಿರುವುದು ನೋಡಿದರೆ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ

ಲೋಪಗಳಿರುವುದು ಸ್ಪಷ್ಟವಾಗುತ್ತದೆ. ಕಿಂಗ್‌ಫಿಶರ್‌, ಜೆಟ್‌ ಏರ್‌ವೆàಸ್‌, ಏರ್‌ ಇಂಡಿಯಾ, ಬಿಎಸ್‌ಎನ್‌ಎಲ್‌ ಕಂಪನಿಗಳ ನಂತರ ಈಗ ಈಗ ಬ್ಯಾಂಕ್‌ಗಳ ಸರಣಿ.

2001ರಲ್ಲಿ ಅನುತ್ಪಾದಕ ಆಸ್ತಿ ಲೆಕ್ಕಚಾರ ಪದ್ಧತಿ ಬ್ಯಾಂಕುಗಳಲ್ಲಿ ಬಂದ ಬಳಿಕ ಹಿಂದೆ “ಬುಕ್‌ ಪ್ರಾಫಿಟ್‌’ ತೋರಿಸುತ್ತಿದ್ದ ಘಟಾನುಘಟಿ ಬ್ಯಾಂಕುಗಳು ನಷ್ಟ ತೋರಿಸಲಾರಂಭಿಸಿದವು. ಒಂದು ಅಂದಾಜಿನ ಪ್ರಕಾರ ಕಳೆದೆರಡು ವರ್ಷಗಳಲ್ಲಿ ಕೇಂದ್ರ ಸರಕಾರ ಬಜೆಟ್‌ನಲ್ಲಿ ಸುಮಾರು 2.66 ಲಕ್ಷ ಕೋಟಿ ಮತ್ತು ಇತರ ಪೂರಕ ವ್ಯವಸ್ಥೆಗಳ ಮೂಲಕ ಪುನಶ್ಚೇತನ ಬಂಡವಾಳ ನೀಡಿ ಬೇಲ್‌ಔಟ್‌ ಮಾಡಿದೆ. ಒಂದೊಮ್ಮೆ ಸರಕಾರ ನೆರವಿಗೆ ಬರದಿದ್ದರೆ ಇನ್ನೂ ಕೆಲವು ಬ್ಯಾಂಕುಗಳು ಬಾಗಿಲು ಮುಚ್ಚುತ್ತಿದ್ದವು.

ಭಾರತದಲ್ಲಿ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿದ್ದು ಹೊಸತೇನಲ್ಲ. ಹಿಂದೆ 1993ರಲ್ಲಿ ನ್ಯೂ ಬ್ಯಾಂಕ್‌ ಆಫ್ ಇಂಡಿಯಾ ರೆಡ್‌ ಸಿಗ್ನಲ್‌ ತೋರಿಸಿದಾಗ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ನಲ್ಲಿ ವಿಲೀನಗೊಳಿಸಿತು. 2004ರಲ್ಲಿ ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕ್‌ ಮುಳುಗಿದಾಗ ಅದನ್ನು ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ ಜೊತೆಗೆ ವಿಲೀನಗೊಳಿಸಲಾಯಿತು. ಅನಂತರ ಪಿಎನ್‌ಬಿ, ಸ್ಟೇಟ್‌ ಬ್ಯಾಂಕ್‌ ಎನ್‌ ಪಿಎ ಸುಳಿಯಲ್ಲಿ ಸಿಕ್ಕಿ ತತ್ತರಿಸಿದಾಗ ಕೇಂದ್ರ ಸರಕಾರವೇ ಬೇಲ್‌ಔಟ್‌ ಮಾಡಿತ್ತು. ಆಮೇಲೆ ಪಂಜಾಬ್‌ ಮಹಾರಾಷ್ಟ್ರ ಮತ್ತು ಕೋ-ಅಪರೇಟಿವ್‌ ಬ್ಯಾಂಕ್‌, ನಂತರ ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಬ್ಯಾಂಕ್‌ನ ಸರದಿ ಆರಂಭವಾಯಿತು. ಈಗ ಯೆಸ್‌ ಬ್ಯಾಂಕ್‌ ಸರದಿ. ಇದು ಖಾಸಗಿ ಕ್ಷೇತ್ರದ 5ನೇ ದೊಡ್ಡ ಬ್ಯಾಂಕ್‌ ಮತ್ತು ಉಳಿತಾಯ ಖಾತೆಗೆ ಶೇಕಡಾ 6 ಬಡ್ಡಿ ಕೊಟ್ಟ ಹಿರಿಮೆಯ ಬ್ಯಾಂಕಿದು. ಅದಕ್ಕಾಗಿಯೇ ಗ್ರಾಹಕರು ಠೇವಣಿ ಇಡಲು ಮುಗಿಬೀಳುತ್ತಿದ್ದರು. ಸ್ಥಾಪಕ ಅಧ್ಯಕ್ಷರಾದ ರಾಣಾ ಕಪೂರ್‌ ಜನವರಿ 2019ರಲ್ಲಿ ಸಿಇಓ ಸ್ಥಾನದಿಂದ ಕೆಳಗಿಳಿಯುವವರೆಗೆ ಎಲ್ಲವೂ ಸರಿ ಇದೆ ಎಂಬಂತೆ ತೋರಿ ಸ ಲಾ ಗಿತ್ತು. ಆಮೇಲೆ ಯೆಸ್‌ ಬ್ಯಾಂಕ್‌ ಮೊದಲ ತ್ರೆçಮಾಸಿಕದಿಂದಲೇ ನಷ್ಟದತ್ತ ಮುಖ ಮಾಡತೊಡಗಿತು. ಹೊಸ ಹೂಡಿಕೆದಾರರನ್ನು ಹುಡುಕಲು ಬ್ಯಾಂಕ್‌ ಶುರು ಮಾಡಿತು. ಆದರೆ ಯಾರೂ ಮುಂದೆ ಬರಲಿಲ್ಲ. ಇಷ್ಟಾಗುವ ಹೊತ್ತಿಗೆ ರಿಸರ್ವ್‌ ಬ್ಯಾಂಕ್‌ ಲಿಕ್ವಿಡಿಟಿ ಪ್ರಾಬ್ಲಿಮ್‌ ಮತ್ತು ಆಡಳಿತ ಯಂತ್ರ ಕುಸಿದಿರುವುದು ಮನಗೊಂಡು ಸರಿಪಡಿಸಿಕೊಳ್ಳಲು ಎಚ್ಚರಿಸಿತ್ತು. ಆದರೆ ಅದ್ಯಾವುದೂ ಫ‌ಲಿಸಲೇ ಇಲ್ಲ. ಗ್ರಾಹಕರು ಹಣ ತೆಗೆಯುತ್ತಲೇ ಇದ್ದರು. ಬೇರೆ ದಾರಿ ಇಲ್ಲದೇ ಮಾರ್ಚ್‌ 5ರಂದು ರಿಸರ್ವ್‌ ಬ್ಯಾಂಕ್‌ 30 ದಿನಗಳ ಮಟ್ಟಿ ಗೆ ವ್ಯವಹಾರ ಸ್ಥಗಿತ (Moratorium) ಆದೇಶ ಹೊರಡಿಸಿತು. ಈಗ ಸ್ಟೇಟ್‌ ಬ್ಯಾಂಕ್‌ ಜತೆಗೂಡಿ ಪುನಶ್ಚೇತನ ಉಪಕ್ರಮಗಳು ನಡೆಯುತ್ತಿವೆ. ಈ ಆಟದಲ್ಲಿ ಬ್ಯಾಂಕ್‌ ಗ್ರಾಹಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಸದ್ಯ ಕೇಂದ್ರ ಸರಕಾರ ಮಧ್ಯಪ್ರವೇಶಿಸಿರುವುದು ಒಂದು ಸಮಾಧಾನಕರ ವಿಷಯ.

ಸಾಮಾನ್ಯವಾಗಿ ಬ್ಯಾಂಕುಗಳು ಸರಕಾರಿ, ಖಾಸಗಿ ಅಥವಾ ಸಹಕಾರಿ ರಂಗದ್ದೇ ಆಗಿರಲಿ ಅವುಗಳ ಕಾರ್ಯವೈಖರಿ ಹೆಚ್ಚು ಕಡಿಮೆ ಒಂದೇ. ಕೊಡುವುದು, ತೆಗೆದುಕೊಳ್ಳುವುದು ಎಂಬ ಲೇವಾದೇವಿ ಇದು. ಬ್ಯಾಂಕುಗಳಲ್ಲಿ ಗ್ರಾಹಕರಿಂದ ಪಡೆದ ಹಣ ಮತ್ತು ಸಗಟು ಠೇವಣಿ (Bulk Deposit) ಕೋಟಿಗಟ್ಟಲೆ ಇರುವುದರಿಂದ ಅದನ್ನು ಹಾಗೆ ಇಟ್ಟುಕೊಂಡರೆ ಲಾಭವಿಲ್ಲ. ಸಾಲಕೊಟ್ಟರೆ ಲಾಭ ಹೆಚ್ಚು ಬರುತ್ತದೆ. ಅದಕ್ಕಾಗಿ ಹೆಚ್ಚಿನ ಬ್ಯಾಂಕುಗಳು ಸಣ್ಣ ಸಾಲದ ಜೊತೆಗೆ ದೊಡ್ಡ ಸಾಲ ಕೊಡಲು ಮುಂದಾಗುತ್ತವೆ.

ಹೀಗೆ ದೊಡ್ಡ ಸಾಲ ಕೊಟ್ಟಾಗಲೇ ಆಗುವುದು ಸಮ ಸ್ಯೆ. ಈಗ ಯೆಸ್‌ ಬ್ಯಾಂಕಿಗೂ ಆದದ್ದೂ ಇದುವೇ. ಅನಿಲ್‌ ಅಂಬಾನಿ ಗ್ರೂಪ್‌, ಎಸ್ಸೆಲ್‌. ಐಎಲ್‌ಎಫ್ಎಸ್‌, ಡಿಹೆಚ್‌ಎಫ್ಎಲ್‌, ವೋಡಾ ಫೋನ್‌ ಐಡಿಯಾ ಇವುಗಳೆಲ್ಲಾ ಆರಂಭದಲ್ಲಿ ಒಳ್ಳೆಯ ಕಂಪೆನಿಗಳೇ. ಆದರೆ ಮುಂದೆ ಇವುಗಳು ಮುಳುಗುವಾಗ ಬ್ಯಾಂಕನ್ನೇ ಮುಳುಗಿಸಿದವು. ಇಂತಹ ದೊಡ್ಡ ಕಂಪೆನಿಗಳು ಸಾಮಾನ್ಯವಾಗಿ ಬೇರೆ ಇತರ ಬ್ಯಾಂಕ್‌ಗಳಿಂದ ಕೂಡ ಸಾಲ (Multiple) ಪಡೆದಿರುತ್ತವೆ. ಇದು ಯಾವ ಮಟ್ಟಕ್ಕೆ ಇದೆ ಎಂದರೆ 2018-19ರಲ್ಲಿ ಯೆಸ್‌ ಬ್ಯಾಂಕಿನ ಎನ್‌ಪಿಎ 3277 ಕೋಟಿ ರೂಪಾಯಿ. ಅದರಲ್ಲಿ ಐಎಲ್‌ಎಫ್ಎಸ್‌ ಸೆಕ್ಯೂರಿಟಿ ಒಂದರದ್ದೇ ಸುಮಾರು 2400 ಕೋಟಿ ಸಾಲ ಬಾಕಿ ಇತ್ತಂತೆ. ಕಳೆದೆರಡು ವರ್ಷಗಳಿಂದ ಗ್ರಾಹಕರು ಬ್ಯಾಂಕಿನಿಂದ ಹಣ ವಿತ್‌ಡ್ರಾ ಮಾಡಿದ್ದೇ ಹೊರತು ಹಣ ವಾಪಾಸು ಬ್ಯಾಂಕಿಗೆ ಬಂದದ್ದೇ ಇಲ್ಲ. ಹಂತ ಹಂತವಾಗಿ ವಿಶ್ವಾಸ ಕಳೆದುಕೊಂಡ ಯೆಸ್‌ ಬ್ಯಾಂಕ್‌ಗೆ ಮತ್ತೆ ಏಳಲು ಕಷ್ಟ ಆಯಿತು.

ಒಂದು ವಿಷಯ ಇಲ್ಲಿ ಸತ್ಯ. ಸಾಮಾನ್ಯವಾಗಿ ಎಲ್ಲಾ ಬ್ಯಾಂಕುಗಳು ದೊಡ್ಡ ಪಾರ್ಟಿಗಳನ್ನು ಅದು ಠೇವಣಿದಾರರಾಗಿರಲಿ ಅಥವಾ ಲೋನ್‌ ಪಾರ್ಟಿ ಆಗಿರಲಿ ಓಲೈಸುವುದು ಸಾಮಾನ್ಯ. ಒಳ್ಳೆಯ ಕಾರ್ಪೊರೇಟ್‌ ಕಂಪೆನಿ ಅಥವಾ ದೊಡ್ಡ ಉದ್ದಿಮೆದಾರ ಮಿಕಗಳಿಗೆ ಸಾಲ ನೀಡುವುದೆಂದರೆ ಪ್ರತಿ ಬ್ಯಾಂಕ್‌ ಹೆಮ್ಮೆ ಎಂದು ಭಾವಿಸಿ ಬಿಗಿಪಟ್ಟು, ನಿಯಮ ಸಡಿಲಿಸಿ ನೂರಾರು, ಸಾವಿರಾರು ಕೋಟಿ ರೂಪಾಯಿ ಕೊಡುತ್ತವೆ. ಇದಕ್ಕೆ ಪೂರಕವಾಗಿ ಕಂಪೆನಿಗಳು ಒಳ್ಳೆಯ ಪ್ರಾಜೆಕ್ಟ್ ರಿಪೋರ್ಟ್‌ ಮಾಡಿ, ಕೋಟಿಗಟ್ಟಲೆ ಲಾಭ ಸಹ ತೋರಿಸುತ್ತವೆ. ಇದರ ಜೊತೆಗೆ ಪ್ರಭಾವಿ ವ್ಯಕ್ತಿಗಳ ಶಿಫಾರಸು ಇರುತ್ತದೆ. ಕೆಲವೊಮ್ಮೆ ಮೇಲಿನಿಂದಲೇ ಕೆಳಗೆ ಸಾಲದ ಅರ್ಜಿಗಳು ಶಾಖೆಗಳಿಗೆ ಬರುವ ಬೇಕಾದಷ್ಟು ನಿದರ್ಶನಗಳಿವೆ.

ಹೀಗೆ ಕೊಟ್ಟ ಸಾಲ ಒಂದೆರಡು ವರ್ಷ ಸರಿ ಇರುತ್ತದೆ. ಉದ್ದೇಶ ಸರಿ ಇಲ್ಲದಿದ್ದಾಗ ತಾಪತ್ರಯ ಶುರುವಾಗುತ್ತದೆ. ಇದರಲ್ಲಿ ನೈಜ ಕಾರಣಗಳಿದ್ದರೆ ಸರಿ. ಆದರೆ ಎಷ್ಟೊ ಸಂದರ್ಭಗಳಲ್ಲಿ ಸಾಲ ಪಡೆದ ಕಂಪೆನಿ ಅಥವಾ ವ್ಯಕ್ತಿಗಳು ಸಾಲದ ಹಣವನ್ನು ಗುಟ್ಟಾಗಿ ಅನ್ಯ ಬಳಕೆಗೆ ಉಪಯೋಗಿಸುತ್ತಾರೆ. ಇದು ಒಂದು ತೆರನಾದರೆ, ಇನ್ನೊಂದು ರೂಪ ಆಡಂಬರವಾಗಿ ಐಷಾರಾಮಿ ಕಾರು, ಬಂಗಲೆ, ಚಿನ್ನ, ವಜ್ರ ವೈಢೂರ್ಯ, ವಿದೇಶ ಪ್ರಯಾಣ ಅಂತ ಭೋಗ ಭಾಗ್ಯಗಳಿಗೆ ಸಾಲದ ಹಣವನ್ನೇ ಖರ್ಚು ಮಾಡುವುದು ಇಲ್ಲವೇ ತಮ್ಮ ಅಘೋಷಿತ ಹಳೇ ಸಾಲ ತೀರಿಸಲು ಉಪಯೋಗಿಸುವುದು. ವಿಜಯ ಮಲ್ಯ, ನೀರವ್‌ ಮೋದಿ, ಚೋಕ್ಸಿ ಇವರೆಲ್ಲ ಇಂತಹ ಹೈ-ಪ್ರೊಫೈಲ್‌ ಸಾಲದ ವ್ಯಕ್ತಿಗಳು. ಒಬ್ಬರಂತೂ ಪ್ರಸಿದ್ಧ ದೇವಾಲಯದ ಬಾಗಿಲಿಗೆ ಚಿನ್ನದ ತಗಡಿನ ಹೊದಿಕೆ ಮಾಡಿ ಹೆಸರುವಾಸಿಯಾಗಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬಹುದು.

ಬ್ಯಾಂಕುಗಳು ದಿವಾಳಿಯಾಗಲು ವಸೂಲಾಗದ ಸಾಲ ಒಂದೇ ಕಾರಣವಲ್ಲ. ಆಡಳಿತದ ಚುಕ್ಕಾಣಿ ಹಿಡಿದಿರುವವರದ್ದೂ ತಪ್ಪಿದೆ. ಈಗ ಯೆಸ್‌ ಬ್ಯಾಂಕನ್ನೇ ತೆಗೆದುಕೊಂಡರೆ 2014ರಲ್ಲಿ 55,633ಕೋಟಿ ಇದ್ದ ಸಾಲ 2019ರ ಹೊತ್ತಿಗೆ 2,41,909 ಕೋಟಿಗೆ ಏರಿದಾಗ ಬ್ಯಾಂಕಿನ ನಿರ್ದೇಶಕರ ಮಂಡಳಿ, ರಿಸರ್ವ್‌ ಬ್ಯಾಂಕ್‌ ಅಸಲಿ ಕಾರಣ ಹುಡುಕುವ ಕೆಲಸ ಮಾಡಬೇಕಿತ್ತು. ಇಲ್ಲಿ ಇನ್ನೂ ಒಂದು ವಿಚಿತ್ರ ಸಂಗತಿ ಎಂದರೆ ಬ್ಯಾಂಕಿನ ಸಿ.ಇ.ಓ. ರಾಣಾ ಕಪೂರ್‌ರವರಿಗೆ ಬ್ಯಾಂಕ್‌ ಬಿಟ್ಟ ಮೇಲೂ 2014 ಮತ್ತು 2015ರ ವರ್ಷದ ಸಾಧನೆಗೆ ಪರ್ಫಾಮೆನ್ಸ್‌ ಬೋನಸ್‌ ಎಂದು 1.44 ಕೋ. ರೂ. ಮೇ 2019ರಲ್ಲಿ ರಿಸರ್ವ್‌ ಬ್ಯಾಂಕ್‌ ನಿರ್ದೇಶನದಂತೆ ಕೊಟ್ಟಿರುವುದು. ಲಂಗುಲಗಾಮಿಲ್ಲದೆ ಕಂಡ ಕಂಡವರಿಗೆ ಸಾಲ ಕೊಡುವುದು ಸಾಧನೆಯೇ? ರಿಸರ್ವ್‌ ಬ್ಯಾಂಕ್‌ ಇದನ್ನು ಪರಾಮರ್ಶಿಸುವುದು ಬೇಡವೇ? ವಂಚಕ ಕಂಪೆನಿಗಳಿಗೂ ಸಾಲ ನೀಡಿರುವುದು ಇಲ್ಲಿ ಇನ್ನೊಂದು ವಿಶೇಷ.

ಇನ್ನು ಬ್ಯಾಂಕುಗಳು ಅಧೋಗತಿಗೆ ಹೋಗಲು ಬ್ಯಾಂಕಿನ ಒಳಗಿನವರು ಮತ್ತು ಹೊರಗಿನವರು ಕಾರಣ. ಬ್ಯಾಂಕುಗಳು ಸಾಲ ನೀಡುವಾಗ ಸೂಕ್ಷ್ಮ ಮಾಹಿತಿ (Due diligence) ಸಂಗ್ರಹಿಸಬೇಕು. ಒಳ್ಳೆಯ ಸಾಲ ಪಡೆಯುವವರ ಆಯ್ಕೆ ಅಷ್ಟೇ ಅಗತ್ಯ. ಸಣ್ಣ ಸಾಲಕ್ಕೆ ಹತ್ತು ಸಲ ತಿರುಗಾಡಿಸುವ ಬ್ಯಾಂಕುಗಳು ದೊಡ್ಡ ಸಾಲ ನೀಡುವಾಗ ಲಂಗುಲಗಾಮಿಲ್ಲದೆ ಕೊಡಬಾರದು.

ಬ್ಯಾಂಕಿನಲ್ಲಿರುವ ಹಣ ಸಾರ್ವಜನಿಕರದ್ದು ಎಂಬ ಅರಿವು ಇರುವುದು ಮುಖ್ಯ.
ಸಾಮಾನ್ಯವಾಗಿ ಪ್ರತಿ ಬ್ಯಾಂಕ್‌ನಲ್ಲಿ ಸ್ವತಂತ್ರ ನಿರ್ದೇಶಕರು ಇರುತ್ತಾರೆ. ಇವರು ರಿಸರ್ವ್‌ ಬ್ಯಾಂಕ್‌ ಇಲ್ಲವೇ ಕೇಂದ್ರ ಸರಕಾರದಿಂದ ನಾಮ ನಿರ್ದೇಶಕರಾಗಿರುತ್ತಾರೆ. ಬ್ಯಾಂಕ್‌ ಬೋರ್ಡ್‌ನಲ್ಲಿ ಇವರಿಗೆ ತೂಕ ಜಾಸ್ತಿ. ಯಾವುದೇ ಬ್ಯಾಂಕ್‌ ಅಧೋಗತಿಗೆ ಹೋಗುತ್ತಿರುವಾಗ ಅವರು ಬ್ಯಾಂಕ್‌ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು. ಆಗ ಬ್ಯಾಂಕುಗಳು ಬರ್ಬಾದ್‌ ಆಗುವುದನ್ನು ತಪ್ಪಿಸಬಹುದು. ಯೆಸ್‌ ಬ್ಯಾಂಕ್‌ ಪ್ರಕರಣದಲ್ಲಿ ಬ್ಯಾಂಕ್‌ ನಿರ್ದೇಶಕ ಮಂಡಳಿ ಇಷ್ಟು ವರ್ಷ ಏನು ಮಾಡುತ್ತಿತ್ತು ಎನ್ನುವ ಪ್ರಶ್ನೆಗೆ ತುರ್ತಾಗಿ ಉತ್ತರ ಕಂಡುಕೊಳ್ಳುವ ಅಗತ್ಯವಿದೆ.

ರಿಸರ್ವ್‌ ಬ್ಯಾಂಕ್‌ ಹಾಗೂ ವಿತ್ತ ಸಚಿವಾಲಯ ಕೊನೆಯ ಕ್ಷಣದಲ್ಲಿ ರಂಗಕ್ಕಿಳಿಯುವ ಬದಲು ಮೊದಲೇ ಡ್ಯಾಮೇಜ್‌ ಕಂಟ್ರೋಲ್‌ ಪ್ರಕ್ರಿಯೆ ಶುರು ಮಾಡಬೇಕು. ನಮ್ಮ ದೇಶದಲ್ಲಿ ಬ್ಯಾಂಕುಗಳು ಭಾರಿ ನಂಬಿಗಸ್ಥ ಹಣಕಾಸಿನ ಸಂಸ್ಥೆಗಳು. ಜನರು ತಮ್ಮ ಗಳಿಕೆಯ ಉಳಿಕೆಯನ್ನು ಸುರಕ್ಷಿತವಾಗಿರುತ್ತದೆ ಎಂಬ ವಿಶ್ವಾಸದ ಮೇಲೆ ಬ್ಯಾಂಕಿನಲ್ಲಿಡುತ್ತಾರೆ.

ಇವತ್ತು ಅವರ ದುಡ್ಡನ್ನು ಅವರಿಗೇ ವಾಪಾಸು ತೆಗೆದುಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾದರೆ ಈ ಭರವಸೆಗಳು ಹುಸಿಯಾಗುತ್ತವೆ. ಯೆಸ್‌ ಬ್ಯಾಂಕ್‌ ಸಂಕಷ್ಟದಲ್ಲಿ ಸರಕಾರ ಮಧ್ಯಪ್ರವೇಶಿಸಿ ಬೇಲ್‌ಔಟ್‌ ಮಾಡುತ್ತಿದೆ. ಆದರೆ ಹೀಗೆ ಇದು ಪುನಾರಾವರ್ತನೆಯಾದರೆ ಭಾರತೀಯ ಬ್ಯಾಂಕಿಂಗ್‌ ಪದ್ಧತಿಯಲ್ಲಿ ಏನೋ ದೋಷ ಇದೆ ಎಂದು ಜನ ಭಾವಿಸುತ್ತಾರೆ.

– ನಾಗ ಶಿರೂರು

ಟಾಪ್ ನ್ಯೂಸ್

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

ಡೆಲ್ಲಿ-ಮುಂಬೈ ಮುಖಾಮುಖಿ; ಆರ್‌ಸಿಬಿ ಭವಿಷ್ಯ ನಿರ್ಧರಿಸಲಿದೆ

ಡೆಲ್ಲಿ-ಮುಂಬೈ ಮುಖಾಮುಖಿ; ಆರ್‌ಸಿಬಿ ಭವಿಷ್ಯ ನಿರ್ಧರಿಸಲಿದೆ

ಹಣ ಪಾವತಿಗೆ ನಗು ಸಾಕು! ಮಾಸ್ಟರ್‌ಕಾರ್ಡ್‌ನಿಂದ ಹೊಸ ಮಾಸ್ಟರ್‌ ಪ್ಲ್ಯಾನ್

ಹಣ ಪಾವತಿಗೆ ನಗು ಸಾಕು! ಮಾಸ್ಟರ್‌ಕಾರ್ಡ್‌ನಿಂದ ಹೊಸ ಮಾಸ್ಟರ್‌ ಪ್ಲ್ಯಾನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ಸಂಸ್ಕೃತವಿಲ್ಲದ ಭಾರತ ಭಾರತವೇ ಅಲ್ಲ; ಅದೊಂದು ನಿರ್ವಾತ

ಸಂಸ್ಕೃತವಿಲ್ಲದ ಭಾರತ ಭಾರತವೇ ಅಲ್ಲ; ಅದೊಂದು ನಿರ್ವಾತ

ಅಭಿವೃದ್ಧಿಶೀಲ ಭಾರತಕ್ಕೆ ಜನಸಂಖ್ಯೆಯೇ ಭಾರ

ಅಭಿವೃದ್ಧಿಶೀಲ ಭಾರತಕ್ಕೆ ಜನಸಂಖ್ಯೆಯೇ ಭಾರ

ಮಾತೃಭಾಷೆಯಲ್ಲಿ ಅಡಗಿದೆ ಶಿಕ್ಷಣದ ಆತ್ಮ

ಮಾತೃಭಾಷೆಯಲ್ಲಿ ಅಡಗಿದೆ ಶಿಕ್ಷಣದ ಆತ್ಮ

ಕೌಶಲಯುತ ಶಿಕ್ಷಣ ಇಂದಿನ ಅನಿವಾರ್ಯತೆ

ಕೌಶಲಯುತ ಶಿಕ್ಷಣ ಇಂದಿನ ಅನಿವಾರ್ಯತೆ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.