ಕೀಳರಿಮೆ ಕಳಚಿ ಬೆಳೆದ ದಲಿತ ಉದ್ಯಮಿಗಳು

Team Udayavani, Oct 24, 2019, 5:25 AM IST

ತಾಯಿಯೊಂದಿಗೆ ಉದ್ಯಮಿ ಅಶೋಕ್‌ ಖಾಡೆ

ಅಂದು ಉದ್ಯಮಿ ಅಶೋಕ್‌ ಖಾಡೆ, ಮಂದಿರದ ಜೀರ್ಣೋದ್ಧಾರಕ್ಕಾಗಿ 1 ಕೋಟಿ ರೂಪಾಯಿ ಚೆಕ್‌ ಕೊಟ್ಟು, ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದರು: “”ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಕ್ಕಿಲ್ಲ. “ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ’ ಎಂದು ಬೋರ್ಡ್‌ ಹಾಕುವಿರಾ?”

ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ನನ್ನ ಮಗ ವಿಶಾಲ್‌, ಈಚೆಗೆ Dalit Millionaires ಎಂಬ ಇಂಗ್ಲಿಷ್‌ ಪುಸ್ತಕ ತಂದು ಇದನ್ನು ಓದಲೇಬೇಕು ಎಂದು ನನಗೆ ಆಜ್ಞೆಯನ್ನೇ ಮಾಡಿದ. ಬಡತನ, ಜಾತಿ ಕೀಳರಿಮೆ, ಉಳ್ಳವರ ದರ್ಪ, ಅಧಿಕಾರಿಗಳ ಕಿರುಕುಳ ಎಲ್ಲವನ್ನೂ ಧೈರ್ಯವಾಗಿ ಗೆದ್ದು ಮುಂದೆ ಬಂದ 15 ಯುವ ಉದ್ಯಮಿಗಳ ಸಾಹಸದ ಕಥೆಗಳು ಈ ಪುಸ್ತಕದಲ್ಲಿವೆ. ಈ ಕೃತಿಯ ಪ್ರತಿಯೊಂದು ಲೇಖನ ಹೊಸ ಜಗತ್ತನ್ನು ತೆರೆದಿಡುತ್ತದೆ. ಇನ್ಫೋಸಿಸ್‌ನ ನಂದನ್‌ ನಿಲೇಕಣಿ ಈ ಪುಸ್ತಕ ಮೆಚ್ಚಿ ಒಂದು ಟಿಪ್ಪಣಿ ಕೂಡ ಬರೆದಿದ್ದಾರೆ ಎಂದು ವಿಶಾಲ್‌ ವಿವರಿಸಿದ. ಅವನ ಮಾತು ಕೇಳಿ ತುಂಬ ಸಂತೋಷವಾಯಿತು. ಎಲ್ಲ ಒತ್ತಡಗಳನ್ನು ಪಕ್ಕಕ್ಕೆ ಸರಿಸಿ ಬಹಳ ಆಸಕ್ತಿಯಿಂದ ಓದಿದೆ.

ಮಹಾರಾಷ್ಟ್ರದ ಪತ್ರಿಕಾ ರಂಗ-ಟಿವಿ ಮಾಧ್ಯಮದ ಪ್ರಮುಖ ಮಿಲಿಂದ್‌ ಖಾಂಡೇಕರ್‌ ಈ ಕೃತಿಯ ಲೇಖಕರು. ದಸರಾ ಹಬ್ಬದ ನಡುವೆ ಓದಿ ಮುಗಿಸಿದೆ. ನಿಜಕ್ಕೂ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಅನುಭವವಾಯಿತು. ದಲಿತ ವರ್ಗಕ್ಕೆ ಸೇರಿದ 13 ಪುರುಷರು ಮತ್ತು ಇಬ್ಬರು ಹೆಣ್ಣು ಮಕ್ಕಳು ದೊಡ್ಡ ಉದ್ಯೋಗಪತಿಗಳಾಗಿ ಬೆಳೆದ ಸಾಹಸದ ಕಥೆಗಳು ಈ ಕೃತಿಯಲ್ಲಿವೆ.

ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಈ 15 ಉದ್ಯಮಿಗಳು ಈಗ 55 ರಿಂದ 70 ವರ್ಷ ವಯಸ್ಸಿನ ಗಡಿಯಲ್ಲಿದ್ದಾರೆ. ಇವರೆಲ್ಲ 70-80ರ ದಶಕದಲ್ಲಿ ಉದ್ದಿಮೆಗಳನ್ನು ಕಟ್ಟುವ ಕನಸು ಕಾಣತೊಡಗಿದವರು. ಆ ಅವಧಿಯಲ್ಲಿ ಸಾಮಾಜಿಕ ಕಟ್ಟಳೆಗಳು ಇನ್ನೂ ಬಿಗಿಯಾಗಿದ್ದವು. ಅಂಥ ಸೂಕ್ಷ್ಮ ಪರಿಸ್ಥಿತಿ ಎದುರಿಸಿ ಇವರೆಲ್ಲ ಬೆಳೆದಿದ್ದಾರೆ.

ಮುಂಬೈಯಲ್ಲಿ ಬಹು ದೊಡ್ಡ ಉದ್ಯಮಿಯಾಗಿ ಬೆಳೆದ ಡಾ|ಅಶೋಕ್‌ ಖಾಡೆ ಕುರಿತ ಮೊದಲ ಲೇಖನವನ್ನು ಎಲ್ಲ ಯುವಕರು ಓದಲೇಬೇಕು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ್‌ನಲ್ಲಿ ಪೆಡ್ಡ ಎಂಬ ಒಂದು ಹಳ್ಳಿಯಿದೆ. ಇದು ಅಶೋಕ್‌ ಖಾಡೆಯವರ ಹುಟ್ಟೂರು. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಈ ಊರಿನಲ್ಲಿ ಅರ್ಧಕ್ಕೂ ಹೆಚ್ಚು ಕನ್ನಡ ಭಾಷಿ ಕ‌ರಿದ್ದಾರೆ. ಈ ಗ್ರಾಮದ ಮಧ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಕಟ್ಟಿದ ಸಿದ್ದೇಶ್ವರ ದೇವಾಲಯವಿದೆ. ಬಾಗಲಕೋಟೆ ಜಿಲ್ಲೆಯ ನಮ್ಮ ಬೀಳಗಿ ಪಟ್ಟಣದ ಸಿದ್ದೇಶ್ವರ ಗುಡಿಯ ಮಾದರಿಯಲ್ಲಿಯೇ ಪೆಡ್ಡ ಗ್ರಾಮದ ಗುಡಿ ನಿರ್ಮಿಸಿರುವುದು ಒಂದು ವಿಶೇಷ. ಈ ಗುಡಿಯ ಕಟ್ಟಡ ತುಂಬ ಶಿಥಿಲಗೊಂಡಿದ್ದರಿಂದ ಜೀರ್ಣೋದ್ಧಾರ ಕೈಗೊಳ್ಳಲು ಗ್ರಾಮಸ್ಥರು ನಿರ್ಧರಿಸಿದರು. ಈ ಗ್ರಾಮದಲ್ಲಿಯೇ ಹುಟ್ಟಿ ಬೆಳೆದ ಅಶೋಕ್‌ ಖಾಡೆ ದೊಡ್ಡ ಉದ್ಯಮಿಯಾಗಿ ಬೆಳೆದವರು. ಮುಂಬೈ ನಗರದಲ್ಲಿ ವಾರ್ಷಿಕ 1600 ಕೋಟಿ ರೂ. ವ್ಯವಹಾರ ನಡೆಸುವ ಬೃಹತ್‌ ಸಂಸ್ಥೆಯನ್ನು ಅವರು ಕಟ್ಟಿದ್ದಾರೆ. ಅವರು ಸ್ಥಾಪಿಸಿದ Das Offshore Engineering Company ಸಂಸ್ಥೆಯಲ್ಲಿ 4,500 ಜನ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ದೇಶ ವಿದೇಶಗಳಲ್ಲಿ ತೈಲ ಬಾವಿ ತೋಡುವುದು, ಮೇಲು ಸೇತುವೆ ನಿರ್ಮಾಣ, ಕಟ್ಟಡ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡುತ್ತಿದೆ. ಅವರಿಂದ ಗುಡಿಯ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ. ದೇಣಿಗೆ ಕೇಳಲು ಜೀರ್ಣೋದ್ಧಾರ ಸಮಿತಿಯ ಕೆಲವು ಹಿರಿಯರು ಮುಂಬೈಗೆ ತೆರಳಿದ್ದರು.

ತಮ್ಮ ಹುಟ್ಟೂರಿನಿಂದ ಆಗಮಿಸಿದ ಹಿರಿಯರನ್ನು ಉದ್ಯಮಿ ಅಶೋಕ್‌ ಖಾಡೆ ತುಂಬ ಪ್ರೀತಿ , ಗೌರವದಿಂದ ಸ್ವಾಗತಿಸಿದರು. ಸ್ವತಃ ಉಪಹಾರ, ಟೀ ಕೊಟ್ಟು ಅತಿಥಿ ಸತ್ಕಾರ ಮಾಡಿದರು. ಎಲ್ಲ ಶಿಷ್ಟಾಚಾರ ಮುಗಿದ ಮೇಲೆ ಹಿರಿಯರು ತಾವು ಬಂದ ಉದ್ದೇಶ ವಿವರಿಸಿ “ದೇವಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ. ದೇಣಿಗೆ ನೀಡಬೇಕು’ ಎಂದು ಮನವಿ ಸಲ್ಲಿಸಿದರು.

ಅಶೋಕ್‌ ತಮ್ಮ ಚೆಕ್‌ಬುಕ್‌ ತಂದು 1 ಕೋಟಿ ರೂ. ಚೆಕ್‌ ಬರೆದು ಹಿರಿಯರ ಕೈಗೆ ನೀಡಿದರು! ಹತ್ತು ಲಕ್ಷ ರೂ. ಕೇಳಿದರೆ ಐದು ಲಕ್ಷವಾದರೂ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಹಿರಿಯರಿಗೆ ತುಂಬ ಅಚ್ಚರಿಯಾಯಿತು. “”ಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡಿ ಚೆನ್ನಾಗಿ ಕಟ್ಟಬೇಕು. ಇನ್ನೂ ಹೆಚ್ಚಿಗೆ ಹಣ ಬೇಕಾದರೆ ನಾನು ಕೊಡಲು ಸಿದ್ಧ” ಎಂದು ಅಶೋಕ್‌ ಹೇಳಿದರು. ಸ್ವಲ್ಪ ತಡೆದು “”ನನ್ನದೊಂದು ಸಲಹೆ ಇದೆ. ನೀವು ಹಿರಿಯರು ಪಾಲಿಸಬೇಕು” ಎಂದು ಅಶೋಕ್‌ ಕೇಳಿಕೊಂಡರು.

“”ಖಂಡಿತವಾಗಿ ಪಾಲಿಸುತ್ತೇವೆ. ಹೇಳಿ, ಏನು ನಿಮ್ಮ ಸಲಹೆ?” ಎಂದು ಎಲ್ಲ ಹಿರಿಯರು ಒಂದೇ ಧ್ವನಿಯಲ್ಲಿ ಕೇಳಿದರು. ಅಶೋಕ್‌ ಒಂದು ಕ್ಷಣ ಮೌನವಾಗಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ನಿಧಾನವಾಗಿ ಹೇಳಿದರು-“”ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಕ್ಕಿಲ್ಲ. “ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ’ ಎಂದು ಬೋರ್ಡ್‌ ಹಾಕಿರಿ. ಹಾಗೆಯೇ ಎಲ್ಲರ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿರಿ” ಎಂದರು ಅಶೋಕ್‌.
ದೇವಸ್ಥಾನ ಜೀರ್ಣೋದ್ಧಾರ ಕೆಲಸ ಸಕಾಲಕ್ಕೆ ಮುಗಿಯಿತು. ಈಗ ಗುಡಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಲಭ್ಯವಾಗಿದೆ. ಊರ ಹಿರಿಯರೆಲ್ಲ ಸೇರಿ ಅಶೋಕ್‌ ಅವರನ್ನು ಗ್ರಾಮಕ್ಕೆ ಆಮಂತ್ರಿಸಿ ಗುಡಿಯಲ್ಲಿಯೇ ಸನ್ಮಾನಿಸಿದರು.

ವಿದ್ಯಾರ್ಥಿಯಾಗಿದ್ದಾಗ ಗುಡಿ ಪ್ರವೇಶ ನಿರಾಕರಿಸಿದವರೇ ಈಗ ಗುಡಿಯ ಒಳಗಡೆ ಕರೆದು ಸನ್ಮಾನಿಸಿದ್ದಕ್ಕೆ ಅಶೋಕ್‌ ಅವರಿಗೆ ಬಹಳ ಸಂತೋಷವಾಯಿತು. ಅಶೋಕ್‌ ಅವರು ಗ್ರಾಮದ ನೂರಾರು ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಗ್ರಾಮದಲ್ಲಿ ಅಸ್ಪೃಶ್ಯತೆಯ ಆಚರಣೆ ಪೂರ್ಣ ತೊಡೆದು ಹಾಕಲಾಗಿದೆ.

ತಮ್ಮ ಗಳಿಕೆಯ ಸಂಪತ್ತನ್ನು ಸಾಮಾಜಿಕ ಕ್ರಾಂತಿ ಹಾಗೂ ಬದಲಾವಣೆಗೆ ಅಶೋಕ್‌ ಅವರು ಬಳಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅಶೋಕ್‌ ಅವರ ತಂದೆ ಮೋಚಿಯಾಗಿ ಕೆಲಸ ಮಾಡಿ ಬದುಕು ಸಾಗಿಸಿದರು. ಒಂದು ಮರದ ಕೆಳಗೆ ಕುಳಿತು ಅವರು ಕೆಲಸ ಮಾಡುತ್ತಿದ್ದರು. ಅಶೋಕ್‌ ಅವರು ಇಂದಿಗೂ ಆ ಮರವನ್ನು ಸ್ಮರಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌ ಅವರ ತಂದೆ ಕೂಡ ಮೋಚಿಯಾಗಿ ಕೆಲಸ ಮಾಡುತ್ತಿದ್ದರು.

ಅಪಮಾನ ಮಾಡುವ ಉದ್ದೇಶದಿಂದ ಅಮೆರಿಕೆಯ ಲೋಕಸಭೆಯಲ್ಲಿ ಕೆಲವು ಸದಸ್ಯರು “ಲಿಂಕನ್‌ ಮೋಚಿಯ ಮಗ’ ಎಂದು ಹೀಯಾಳಿಸಿ ಮಾತನಾಡಿದರು. ಲಿಂಕನ್‌ ಸ್ವಲ್ಪವೂ ವಿಚಲಿತರಾಗದೆ “”ಹೌದು ನಾನು ಮೋಚಿಯ ಮಗ. ನನ್ನ ತಂದೆ ಅತ್ಯಂತ ಶ್ರದ್ಧೆಯಿಂದ ಕಲಾತ್ಮಕವಾಗಿ ಚಪ್ಪಲಿ ಹೊಲಿಯುತ್ತಿದ್ದರು. ಇದು ನನಗೆ ಹೆಮ್ಮೆಯ ಸಂಗತಿ!” ಎಂದು ಉತ್ತರಿಸಿದರು. ವಿರೋಧಿಸಿದವರ ಧ್ವನಿ ಅಡಗಿತು.

ದಲಿತ ಸಮಾಜಕ್ಕೆ ಸೇರಿದ ಇನ್ನೊಬ್ಬ ಉದ್ಯಮಿ ಭಿಂಗರದೇವಯ್ಯ ಅವರು “ಖಂಡೋಬಾ ಪ್ರಸನ್ನ ಸಹಕಾರಿ ಸಕ್ಕರೆ ಕಾರ್ಖಾನೆ’ ಕಟ್ಟಿದ ಕತೆಯನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಭಿಂಗರದೇವಯ್ಯಗೆ ಕಾರ್ಖಾನೆ ಕಟ್ಟುವುದಕ್ಕೆ ಮೊದಲು ಅನುಮತಿ ನಿರಾಕರಿಸಲಾಗುತ್ತದೆ. ಅವರು ಅರ್ಜಿಯನ್ನು ಹಿಡಿದುಕೊಂಡು ಅಧಿಕಾರಿಗಳ ಬಳಿ ಹೋದರೆ ಯಾರೂ ಮುಖ ಎತ್ತಿ ನೋಡಲಿಲ್ಲ. ದಲಿತ ಎನ್ನುವ ಕಾರಣಕ್ಕೆ ಅವರ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಒಪ್ಪಿಗೆ ಸಿಗದ ಕಾರಣ ದೇವಯ್ಯ, ಸಕ್ಕರೆ ಕಾರ್ಖಾನೆಯ ಬದಲಾಗಿ ಒಂದು ಸಣ್ಣ ಡಿಸ್ಟಿಲರಿ ಕಟ್ಟಿದರು. ಈ ಸಾಧನೆಯನ್ನು ಗಮನಿಸಿದ ಸರ್ಕಾರಿ ಅಧಿಕಾರಿಗಳು ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೆ ಅನುಮತಿ ನೀಡಿದರು. ಭಿಂಗರದೇವಯ್ಯ ಅವರು ಈಗ ಮಹಾರಾಷ್ಟ್ರದ ನಂಬರ್‌ 1 ಕೈಗಾರಿಕಾ ಉದ್ಯಮಿ ಯಾಗಿ ಬೆಳೆದಿದ್ದಾರೆ. ಕಾರ್ಖಾನೆಯ ಸುತ್ತಮುತ್ತಲಿನ ಬಡಮಕ್ಕಳಿಗೆ ಶಿಕ್ಷಣಕ್ಕೆ ಉದಾರವಾಗಿ ನೆರವು ನೀಡುತ್ತಿದ್ದಾರೆ. 40 ದಲಿತ ಯುವತಿಯರನ್ನು ದತ್ತು ಪಡೆದು ಸ್ನಾತಕೋತ್ತರದವರೆಗೆ ಓದಿಸಿದ್ದಾರೆ!

ಕಲ್ಪನಾ ಸರೋಜ್‌ ಮತ್ತು ಸಾವಿತ್ರಿಬೇನ್‌ ಪರಮಾರ ಎಂಬ ಇಬ್ಬರು ಮಹಿಳೆಯರು ಮುಂಬೈ ನಗರದ ಪ್ರಮುಖ ಉದ್ಯಮಿಗಳಾಗಿ ಬೆಳೆದಿರುವ ಕಥೆ ನನ್ನ ಮನಸ್ಸನ್ನು ಆಳವಾಗಿ ತಾಕಿದೆ.

ಕಲ್ಪನಾ ಅಂಕೋಲಾದವರು. ತಮ್ಮ 13ನೆಯ ವಯಸ್ಸಿಗೆ ವಿವಾಹವಾಗಿ ಮುಂಬೈಗೆ ತೆರಳಿದರು. ಕೌಟುಂಬಿಕ ಕಿರುಕುಳ ತಾಳಲಾರದೆ ವಿಚ್ಛೇದನ ಪಡೆದರು. ಮುಂದೆ ದಿನಕ್ಕೆ 2 ರೂ ಪಗಾರ ಪಡೆದು ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದರು. ನಂತರದ ವರ್ಷಗಳಲ್ಲಿ ಹಣ ಕೂಡಿಟ್ಟು ಮುಂಬೈ ನಗರದ ಕಲ್ಯಾಣದಲ್ಲಿ 2.50 ಲಕ್ಷ ರೂ. ಕೊಟ್ಟು ಒಂದು ಸಣ್ಣ ನಿವೇಶನ ಖರೀದಿಸಿದರು. ಸಹೋದರನ‌ ನೆರವಿನಿಂದ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕಟ್ಟಡ ನಿರ್ಮಿಸಿದರು. ವಿಚಿತ್ರ ಎಂದರೆ ಅದು 4.5 ಕೋಟಿಗೆ ಮಾರಾಟ ವಾಯಿತು. ಇದೇ ಅವರ ಟರ್ನಿಂಗ್‌ ಪಾಯಿಂಟ್‌ ಆಯಿತು. ಅವರಿಗೆ ಮುಂಬೈ ನಗರದ ಭೂಗತ ಪಾತಕಿಗಳು ಕಿರುಕುಳ ಕೊಡತೊಡಗಿದರು. ಕಲ್ಪನಾ ನೇರವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ರಕ್ಷಣೆಗೆ ಮನವಿ ಮಾಡಿದರು. ನಂತರ ಅವರು “ಕಮಾನಿ ಟ್ಯೂಟ್ಸ್‌’ ಕಂಪನಿ ಕಟ್ಟಿದ್ದು. ಅಹಮ್ಮದನಗರ ಜಿಲ್ಲೆಯಲ್ಲಿ ಎರಡು ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿದ್ದಾರೆ. ಹೆಚ್ಚಿನ ಶೇರ್‌ ಹಣವನ್ನೂ ಅವರೇ ಹೂಡಿದ್ದಾರೆ. ಅವರಿಗೆ 2013ರಲ್ಲಿ ಪದಶ್ರೀ ಪ್ರಶಸ್ತಿ ಬಂದಿದೆ.

ಸಾವಿತ್ರಿಬೇನ್‌ ಪರಮಾ ಕಥೆ, ಮನೆಗೆಲಸ ಮಾಡಿ ಬದುಕುವವರಿಗೆ ಒಂದು ಸ್ಫೂರ್ತಿಯ ಸಂದೇಶವಾಗಿದೆ. ಪರಮಾರವರ ಪತಿ ಅಹಮದಾಬಾದ್‌ನಲ್ಲಿ ಸಣ್ಣ ವಾಹನ ಚಾಲಕರಾಗಿ ದುಡಿಯುತ್ತಿದ್ದರು. ಅಲ್ಪ ಸಂಬಳದಲ್ಲಿಯೇ ಸಾವಿತ್ರಿ ಬೇನ್‌ ಕುಟುಂಬವನ್ನು ಸಲಹುತ್ತಿದ್ದರು. ಅವರ ಅಕ್ಕ ಉರುವಲ ಕಟ್ಟಿಗೆ ಮತ್ತು ಕಲ್ಲಿದ್ದಲು ವ್ಯಾಪಾರ ಮಾಡುತ್ತಿದ್ದರು. ಸಾವಿತ್ರಿ ಬೇನ್‌ ಅವರಿಂದ ಕಟ್ಟಿಗೆ ಮತ್ತು ಕಲ್ಲಿದ್ದಲು ಕೈಗಡ ಪಡೆದು ಮಾರಾಟ ಮಾಡತೊಡಗಿದರು. ಬ್ಯಾಂಕಿನಿಂದ ಸಾಲ ಪಡೆದು ಕಲ್ಲಿದ್ದಲು ಮಾರಾಟ ಪ್ರಮಾಣವನ್ನು ವಿಸ್ತರಿಸಿದರು. ಇವರ ಪರಿಶ್ರಮವನ್ನು ಗಮನಿಸಿದ ದಲಿತ ವರ್ಗಕ್ಕೆ ಸೇರಿದ ಕೆಲವು ಹಿರಿಯರು ಕಲ್ಲಿದ್ದಲು ಆಮದು ಮತ್ತು ರಫ್ತು ವ್ಯವಹಾರ ಮಾಡಲು ಸಲಹೆ ಮಾಡಿದರು. ಬ್ಯಾಂಕಿನವರು ಸಾಲ ನೀಡಲು ನಿರಾಕರಿಸಿದರು. ಖಾಸಗಿ ವ್ಯಕ್ತಿಗಳ ಬಳಿ ಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆದು ವ್ಯವಹಾರ ಅಭಿವೃದ್ಧಿ ಪಡಿಸಿದರು. ಈ ಉದ್ಯಮ ಎಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದರೆ ಇಂದು ಅವರ ಬಳಿ 200 ಯುವಕರು ದುಡಿಯುತ್ತಿದ್ದಾರೆ. ಈಚೆಗೆ ಅವರು ಸೆರಾಮಿಕ್ಸ್‌ ಕಾರ್ಖಾನೆ ಸ್ಥಾಪಿಸಿದ್ದಾರೆ. ಈ ಕಾರ್ಖಾನೆಯ ಉದ್ಘಾಟನೆ ಸಂದರ್ಭದಲ್ಲಿ “ನೀವು ಉದ್ಯಮಿಯಾಗಿ ಬೆಳೆಯುವುದಕ್ಕೆ ಯಾರು ಸ್ಫೂರ್ತಿ ?’ ಎಂದು ಕೇಳಿದಾಗ 72 ವರ್ಷದ ಈ ಅಜ್ಜಿ ಬಾಯ್ತುಂಬ ನಗುತ್ತ ಹೇಳಿದರು- “ನನಗೆ ನಾನೇ ಸ್ಫೂರ್ತಿ. ಹೊರಗೆ ಸ್ಫೂರ್ತಿ ಯನ್ನು ಹುಡುಕಿದರೆ ಸಿಗುವುದಿಲ್ಲ. ಅದು ಅಂತರಂಗದ ಆಸ್ತಿ’. ಈ ಮಾತು ಉದ್ಯಮಿಯಾಗ ಬಯಸುವವರಿಗೆಲ್ಲ ಅನ್ವಯಿಸುತ್ತದೆ.

ರತಿಲಾಲ ಮಕ್ವಾನ್‌, ಮಲ್ಕಿತ್‌ ಚಾಂದ, ಭಗವಾನ ಗಾವಿ, ಹರ್ಷ ಭಾಸ್ಕರ್‌, ದೇವಜಿಭಾಯಿ ಮಕ್ವಾನ್‌, ಹರಿಕೃಷ್ಣ ಪಿಪ್ಪಲ್‌, ಅತುಲ್‌ ಪಾಸ್ವಾನ್‌ ದೇವಕಿನಂದನ, ಜೆ.ಎಸ್‌. ಫ‌ಲಿಯಾ, ಶರತ್‌ಬಾಬು ಮತ್ತು ಸಂಜಯ ಕ್ಷೀರಸಾಗರ…ಹೀಗೆ ಉದ್ಯಮಿಗಳಾಗಿ ಬೆಳೆದವರ ಕಥೆಗಳು ತುಂಬ ರೋಚಕವಾಗಿವೆ.

ದಲಿತ ವರ್ಗದ ಉದ್ಯಮಿಗಳೆಲ್ಲ ಸೇರಿ ದಲಿತ ಇಂಡಿಯನ್‌ ಚೇಂಬರ್‌ ಆಫ್ ಕಾಮರ್ಸ್‌ ಸಂಸ್ಥೆ ಕಟ್ಟಿರುವುದು ಒಂದು ಉತ್ತಮ ಬೆಳವಣಿಗೆ. ಈ ಸಂಸ್ಥೆ ದೇಶದ ದಲಿತ ವರ್ಗದ ಯುವಕರು ಉದ್ಯಮಿಗಳಾಗಿ ಬೆಳೆಯುವುದಕ್ಕೆ ನೆರವಾಗುತ್ತಿದೆ. ಬ್ಯಾಂಕ್‌ಗಳನ್ನು, ಶಿಕ್ಷಣ ಸಂಸ್ಥೆಗಳನ್ನು, ದವಾಖಾನೆಗಳನ್ನು ದಲಿತ ಉದ್ಯಮಿಗಳು ಕಟ್ಟಿದ್ದಾರೆ. ಇವುಗಳ ಮೂಲಕ ಜಾತಿ ಮತ್ತು ಧರ್ಮದ ಪರಿಗಣನೆ ಇಲ್ಲದೆ ಎಲ್ಲರಿಗೂ ನೆರವಾಗುತ್ತಿದ್ದಾರೆ.

ಕೈಗಾರಿಕೆಗಳು ಜಾತ್ಯತೀತ ಸಂಸ್ಥೆಗಳು. ಕೌಶಲ್ಯ ಇದ್ದವರಿಗೆ ಕಾರ್ಖಾನೆಗಳ ಬಾಗಿಲುಗಳು ಸದಾ ತೆರೆದಿರುತ್ತವೆ. ಈ ಕೃತಿಯಲ್ಲಿ ಮೂಡಿ ಬಂದ ನಾಯಕರೆಲ್ಲ ಹುಟ್ಟಿನಿಂದ ಶ್ರೀಮಂತರಲ್ಲ. ಆದರೆ ಅವರಿಗೆ ಕನಸುಗಳಿದ್ದವು. ಹಣ ಒಂದೇ ಬಂಡವಾಳ ಅಲ್ಲ. ಅದಮ್ಯ ಉತ್ಸಾಹ, ಸಾಧಿಸುವ ಹಂಬಲ, ಕನಸುಗಳು ಬಹಳ ಮುಖ್ಯ ಎಂಬುದನ್ನು ಈ ಕೃತಿ ಸ್ಪಷ್ಟವಾಗಿ ಹೇಳುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇವರೆ ಲ್ಲರು ತಾವು ಗಳಿಸಿದ ಸಂಪತ್ತನ್ನು ಸಮಾಜದ ಉನ್ನತಿಗೆ ಬಳಸುತ್ತಿರುವುದು ಪ್ರೇರಣಾದಾಯಕ ಸಂಗತಿ.

-ಮುರುಗೇಶ ಆರ್‌ ನಿರಾಣಿ
ಶಾಸಕರು, ಅಧ್ಯಕ್ಷರು ನಿರಾಣಿ ಉದ್ಯಮ ಸಮೂಹ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನು ಮುಂದೆ ರಸ್ತೆ ಶುಲ್ಕ ಕಟ್ಟಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ. ಡಿ. 1ರಿಂದ ಬಹುತೇಕ ಎಲ್ಲ ಟೋಲ್‌ಗ‌ಳಲ್ಲಿ"ಫಾಸ್ಟ್ಯಾಗ್‌'...

  • ಥಿಯೇಟರ್‌ಗಳಲ್ಲಿ ಸಾಮೂಹಿಕ ವೀಕ್ಷಣೆಯ ವಿಷಯವಾಗಿದ್ದ ಮನೋರಂಜನೆಯನ್ನು ಮನೆಯೊಳಗೆ ಸಾಂಸಾರಿಕ ವೀಕ್ಷಣೆಯ ಮಟ್ಟಕ್ಕೆ ಕರೆತಂದದ್ದು ದೂರದರ್ಶನ ಅಥವಾ ಟೆಲಿವಿಷನ್‌....

  • ಕಲ್ಯಾಣ ಕರ್ನಾಟಕಕ್ಕೆ ಸುವರ್ಣ ಕಾಲ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ಬಳಿಕ ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ ಕಲಬುರಗಿಯಲ್ಲಿ ಉದ್ಘಾಟನೆಗೆ...

  • ಬೆಲೆ ಏರಿಕೆ, ಜೀವನ ಮಟ್ಟ, ಕನಿಷ್ಠ ಸಂಬಳ/ಕೂಲಿ ತಲಾ ಆದಾಯ ಇವೆಲ್ಲಾ ಒಂದನ್ನೊಂದು ಹೊಸೆದು ನಿಂತ ಬಳ್ಳಿಗಳಂತೆ. ಹಲವಾರು ಬಾರಿ ಇವುಗಳ ಪರಸ್ಪರ ಹಾವು ಏಣಿ ಆಟದ ಕರಾಮತ್ತು...

  • ಅಧಿವೇಶನಗಳು ನಡೆದು ಬಂದ ಹಾದಿ ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ...

ಹೊಸ ಸೇರ್ಪಡೆ