ಜಲಮೂಲಗಳ ಸಂರಕ್ಷಣೆ: ಪರಿಸರಸ್ನೇಹಿ, ಸುಸ್ಥಿರ ಮಾರ್ಗೋಪಾಯಗಳಿಗೆ ಇರಲಿ ಆದ್ಯತೆ


Team Udayavani, Mar 22, 2022, 11:40 AM IST

ಜಲಮೂಲಗಳ ಸಂರಕ್ಷಣೆ: ಪರಿಸರಸ್ನೇಹಿ, ಸುಸ್ಥಿರ ಮಾರ್ಗೋಪಾಯಗಳಿಗೆ ಇರಲಿ ಆದ್ಯತೆ

ನೀರಿನ ಮಹತ್ವ, ಮತ್ತದರ ಸಂರಕ್ಷಣೆಯತ್ತ ವಿಶ್ವದ ಜನರ ಗಮನ ಸೆಳೆಯುವ ಉದ್ದೇಶದಿಂದ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಂತರ್ಜಲ ವೃದ್ಧಿಯ ಆಶಯದೊಂದಿಗೆ ಈ ಬಾರಿಯ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತಿದೆ. ಭೂಮಿಯ ಮೇಲಣ ಸಕಲ ಜೀವರಾಶಿಯ ಪ್ರಾಣ ನೀರನ್ನೇ ಅವಲಂಬಿಸಿದೆ. ವರ್ಷಗಳುರುಳಿದಂತೆಯೇ ವಿಶ್ವದೆಲ್ಲೆಡೆ ನೀರಿನ ಅಭಾವ ಸಾರ್ವತ್ರಿಕವಾಗುತ್ತಿದೆ. ವಿವಿಧ ಕಾರಣಗಳಿಂದಾಗಿ ಅಂತರ್ಜಲ ಕಡಿಮೆಯಾಗುತ್ತಿದೆ. ಅಂತರ್ಜಲವನ್ನು ಹೆಚ್ಚಿಸದೇ ಹೋದಲ್ಲಿ ಇಡೀ ಭೂಮಿ ಬರಡಾಗಲಿದೆ. ಹೀಗಾಗಿ ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರದ ಯೋಚನಾಶೈಲಿ ಮತ್ತು ಆದ್ಯತೆ ಹಾಗೂ ಸಾರ್ವಜನಿಕರ ಹೊಣೆಗಾರಿಕೆಯ ಕುರಿತಂತೆ ಈ ಲೇಖನದಲ್ಲಿ ಬೆಳಕು ಚೆಲ್ಲಲಾಗಿದೆ.

ಜಾಗತಿಕ ತಾಪಮಾನ ಏರಿಕೆಯಿಂದ ಜಲಸಂಪ ನ್ಮೂಲದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲಿ ಗಣನೀ ಯವಾಗಿ ಏರುಪೇರಾಗುತ್ತಿದೆ. ಹಿಮನದಿಗಳು ಕರಗುವ ವೇಗ ಜಾಸ್ತಿಯಾಗಿದೆ. ಪ್ರಾಕೃತಿಕ ವಿಕೋಪಗಳು ಅಧಿಕ ವಾಗುತ್ತಿರುವುದನ್ನು ನಾವು ಕಾಣಬಹುದು. ಇವೆಲ್ಲದರ ಪರಿಣಾಮವಾಗಿ ನೀರಿನ ಮೂಲಗಳು ಕ್ಷೀಣಿಸುತ್ತಿದ್ದು ಜಗತ್ತಿಗೆ ಬಲುದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಂದಿನ ಜಲಸಂಕಷ್ಟಕ್ಕೆ ಹಲವು ಕಾರಣಗಳಿವೆ. ಮುಖ್ಯವಾಗಿ ನೀರಿಗಾಗಿ ನಾವು ಸರಕಾರದ ಕೇಂದ್ರೀಕೃತ ವ್ಯವಸ್ಥೆಯನ್ನು ಅವಲಂಬಿಸಿರುವುದು. ಅರಣ್ಯ ನಾಶದಿಂದ ಭೂಸವಕಳಿ ಉಂಟಾಗಿ ಜಲ ಸಂರಕ್ಷಣೆಯ ಸಾಂಪ್ರದಾಯಿಕ ರಚನೆಗಳು ತಮ್ಮ ಮಹತ್ವವನ್ನು ಕಳೆದುಕೊಂಡವು. ಬೃಹತ್‌ ಅಣೆಕಟ್ಟುಗಳ ನಿರ್ಮಾಣ, ಬಜೆಟ್‌ನಲ್ಲಿ ಕುಡಿಯುವ ನೀರು ಮತ್ತು ನೀರಾವರಿಗಾಗಿ ಕೋಟ್ಯಂತರ ರೂ.ಗಳನ್ನು ಮೀಸಲಿಟ್ಟು ಯೋಜನೆಗಳನ್ನು ಘೋಷಿಸಿದಾಕ್ಷಣ ನೀರಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ಆಡಳಿತ ವ್ಯವಸ್ಥೆ ತಿಳಿದಿರುವುದು ನೀರಿನ ಸಮಸ್ಯೆ ಬಿಗಡಾಯಿಸಲು ಬಲುಮುಖ್ಯ ಕಾರಣವಾಗಿದೆ. ಇವೆಲ್ಲದರ ಪರಿಣಾಮವಾಗಿ ನೀರಿನ ಸಮಸ್ಯೆಗೆ ಪರಿಸರ ಸ್ನೇಹಿ, ಸುಸ್ಥಿರ ಪರಿಹಾರಗಳ ಬಗ್ಗೆ ದೂರಗಾಮಿ ಯೋಜನೆಗಳನ್ನೇ ಮರೆತುಬಿಟ್ಟಿದ್ದೇವೆ. ಕೇವಲ ತಾತ್ಕಾಲಿಕ ಪರಿಹಾರಗಳನ್ನು ಮಾತ್ರ ಹುಡುಕುವ, ಯೋಚಿಸುವ ಮನೋಭಾವ ದೂರವಾಗಬೇಕು. ಪರಿಸರದ ಜತೆಜತೆಗೆ ನಾವು ಸಾಗುವಂತೆ ನೀರಿನ ಮೂಲಗಳನ್ನು ಉಳಿಸಿಕೊಳ್ಳಬೇಕು. ನೀರಿಲ್ಲದೇ ನಾವ್ಯಾರು ಇರಲು ಸಾಧ್ಯವೇ ಇಲ್ಲ ಎಂಬ ಕಟುಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು.

ಜಾಗೃತಿಯ ಮೊದಲ ಹಂತ
ನೀರಿನ ಬಳಕೆ ಮತ್ತು ಉಳಿಕೆ ಬಗ್ಗೆ ಜಾಗೃತಿ ಮನೆಯಿಂದಲೇ ಪ್ರಾರಂಭವಾಗಬೇಕು. ಮನೆಯ ಪ್ರತಿಯೊಂದು ಕೆಲಸದಲ್ಲೂ ಮಕ್ಕಳಿಗೆ ನೀರಿನ ಪಾಠ ಹೇಳಿಕೊಡಬೇಕು. ನೀರಿನ ಮಿತ ಬಳಕೆಯಲ್ಲಿ ಹಿರಿಯರ ಆಚರಣೆ ಕಿರಿಯರಿಗೆ ಅನುಸರಣೀಯವಾಗಿರಬೇಕು. ಸಾಧ್ಯವಾದಲ್ಲೆಲ್ಲ ನೀರಿನ ಕಡಿಮೆ ಬಳಕೆ, ಮರುಬಳಕೆಗೆ ಸದಾ ವಿಶೇಷ ಗಮನ ನೀಡಬೇಕು. “ನಾವು ಬಳಸುವ ಹನಿ ಹನಿ ನೀರು ಪ್ರಕೃತಿಯ ನಿರಂತರ ದುಡಿಮೆಯ ಬೆವರು’ ಎಂಬ ಸತ್ಯದ ಅರಿವನ್ನು ಮಕ್ಕಳಿಗೆ ಮನೆಯಲ್ಲಿ ತಿಳಿ ಹೇಳಬೇಕು. ಮುಂದೆ ಮಕ್ಕಳು ದೊಡ್ಡವರಾಗಿ ಅದನ್ನು ಆಚರಣೆಗೆ ತರಬಲ್ಲರು. ಜಲ ಸಂರಕ್ಷಣೆ, ಜಲಮೂಲಗಳ ರಕ್ಷಣೆ, ನೀರಿನ ಮಿತ ಬಳಕೆಯ ಕುರಿತು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ರಸಪ್ರಶ್ನೆ, ಚಿತ್ರಕಲೆ, ಜಲಜಾಗೃತಿ ಜಾಥಾ, ಅಧ್ಯಯನ ಪ್ರವಾಸ, ಕೆರೆ ವೀಕ್ಷಣೆ ಮೊದಲಾದ ಅಭಿಯಾನಗಳ ಮೂಲಕ ಮಕ್ಕಳಲ್ಲಿ ಜಲ ಸಂರಕ್ಷಣೆಯ ಅರಿವು ಸದಾ ಇರುವಂತೆ ಮಾಡಬೇಕು.

ನೀರಿನ ಮೂಲಗಳು ಉಳಿಯಲಿ
ಸಾರ್ವಜನಿಕ ಸಹಭಾಗಿತ್ವದಲ್ಲಿ ಜಲಸಂಪ ನ್ಮೂಲವನ್ನು ಪುನರುಜ್ಜೀವನಗೊಳಿಸಿದ ಸಾಕಷ್ಟು ಉದಾಹರಣೆಗಳು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಇವೆ. ಹಾಲಿ ಇರುವ ಕೆರೆಗಳ ಪುನರುಜ್ಜಿವನ, ಕಲ್ಯಾಣಿಗಳ ಸ್ವಚ್ಛತೆ, ಜಲ ಮೂಲಗಳಾದ ಬಾವಿ, ಕೆರೆ, ಮದಗದ ಹೂಳೆತ್ತುವಿಕೆ, ಜಲ ಮರುಪೂರಣ, ಹಳ್ಳ, ತೊರೆಗಳಿಗೆ ತಾತ್ಕಾಲಿಕ ಕಟ್ಟಗಳ ನಿರ್ಮಾಣ… ಹೀಗೆ ನಾನಾ ವಿಧದ ಕಾರ್ಯ ಗಳು ಸರಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಸಂಘ, ಸಂಸ್ಥೆಗಳ ಸಹಭಾಗಿತ್ವದಿಂದ ನಡೆದಿವೆ. ಈ ಎಲ್ಲ ಕಾಮಗಾರಿಗಳಿಂದಾಗಿ ಸ್ಥಳೀಯ ಪರಿಸರದ ನೀರಿನ ಅಭಾವವನ್ನು ನೀಗಿದ್ದೇ ಅಲ್ಲದೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗಿದೆ.

ಸೇವಾ ಕಾರ್ಯ ನಿರತರು, ಗ್ರಾಮ ವಿಕಾಸದ ಕಾರ್ಯಕರ್ತರು, ಸಂಘ-ಸಂಸ್ಥೆಗಳು, ದೇವಸ್ಥಾನ, ಭಜನ ಮಂದಿರಗಳ ಕಾರ್ಯಕರ್ತರು, ಕಾಲೇಜು ಗಳ ಎನ್‌ಸಿಸಿ, ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿ ಗಳು, ಯುವಕ-ಯುವತಿ ಮಂಡಲದ ಸದಸ್ಯರು ಸಕ್ರಿ ಯವಾಗಿ ಜಲಸಂರಕ್ಷಣೆಯ ಇಂತಹ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ನೀರಿನ ಮೂಲಗಳನ್ನು ಸಂರಕ್ಷಿಸುವ ಜತೆಗೆ ಅದನ್ನು ಉಳಿಸಿಕೊಂಡು ಹೋಗಲು ಸಾಧ್ಯವಿದೆ. ಒಮ್ಮೆ ಪುನರುಜ್ಜೀವನಗೊಳಿಸಿದ ಕೆರೆ, ಮದಗ, ಕಲ್ಯಾಣಿ, ತೊರೆ ಇತ್ಯಾದಿಗಳ ಸಮರ್ಪಕ ನಿರ್ವಹಣೆಯೂ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮರೆಯಬಾರದು.

ನಮ್ಮ ಗ್ರಾಮದ, ಊರಿನ, ಕೇರಿಯಲ್ಲಿರುವ ಜಲಮೂಲಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಬೇಕು. ಸಣ್ಣ ಮತ್ತು ದೊಡ್ಡ ಜಲ ಮೂಲಗಳು ಎಷ್ಟಿವೆ?, ಅವುಗಳಲ್ಲಿ ಯಾವುದು, ಯಾವ ಸ್ಥಿತಿಯಲ್ಲಿದೆ. ಸರಕಾರದಿಂದ ಪುನಶ್ಚೇತನಗೊಂಡಿರುವ ಕೆರೆಗಳು ಮತ್ತು ಪುನಶ್ಚೇತನವಾಗಬೇಕಾದ ನೀರಿನ ಮೂಲಗಳನ್ನು ಪತ್ತೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ಪೂರೈಕೆ ವ್ಯವಸ್ಥೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕು. ಮನೆಯ ಅಂಗಳ, ಶಾಲೆಯ ಜಗಲಿ ಸ್ವಚ್ಛತೆ, ಕಾರು, ಬೈಕ್‌ ಇತ್ಯಾದಿ ತೊಳೆಯಲು ಕುಡಿಯುವ ನೀರಿನ ಬಳಕೆಯನ್ನು ಕಡಿಮೆ ಮಾಡಬೇಕು. ಸಾರ್ವಜನಿಕ ಜಲಮೂಲಗಳಾದ ನದಿ-ಕೆರೆಗಳನ್ನು ಮಲಿನಗೊಳಿಸದಿರುವ ಪ್ರಜ್ಞೆಯನ್ನು ಜನರಲ್ಲಿ ಬೆಳೆಸುವುದು ಮತ್ತು ಮಲಿನವಾಗದಂತೆ ತಡೆಯುವ ಸಂಕಲ್ಪವನ್ನು ಪ್ರತಿಯೊಬ್ಬರೂ ಕೈಗೊಳ್ಳಬೇಕು. ಪಾತ್ರೆ, ಬಟ್ಟೆಬರೆಗಳನ್ನು, ತೊಳೆಯು ವಾಗ ನೀರಿನ ಬಳಕೆಯ ಮೇಲೆ ನಿಗಾ ವಹಿಸಬೇಕು. ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಸ್ನಾನ ಮಾಡುವಾಗ ನೀರಿನ ಮಿತ ಬಳಕೆಯತ್ತ ಗಮನಹರಿಸಬೇಕು ಮತ್ತು ಈ ನೀರಿನ ಮರು ಬಳಕೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಮನೆಯ ಸುತ್ತಲಿನ ಕೈತೋಟ, ಗಿಡ, ಮರಗಳಿಗೆ ಮರುಬಳಕೆಯ ನೀರು ಸಿಗುವ ವ್ಯವಸ್ಥೆ ರೂಪಿಸಬೇಕು.

ಸಾರ್ವಜನಿಕರ ಪಾತ್ರ
ಜಲ ಸಂರಕ್ಷಣೆ, ಜಲಮೂಲಗಳ ರಕ್ಷಣೆಯ ನಿಟ್ಟಿ ನಲ್ಲಿ ಸಾರ್ವಜನಿಕರ ಪಾತ್ರ ಅತೀ ಮಹತ್ವದ್ದಾಗಿದೆ. ಇಂಗುಗುಂಡಿ ರಚನೆ, ಛಾವಣಿ ನೀರಿನ ಸಂಗ್ರಹ, ತೆರೆದ ಮತ್ತು ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡುವುದು, ಮನೆ, ಶಾಲೆ, ದೇವಸ್ಥಾನಗಳಲ್ಲಿ ಮಳೆನೀರು ಕೊಯ್ಲಿನ ಮಾದರಿ ತಯಾರು ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಹಾಳಾದ ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ದುರಸ್ತಿ ಮಾಡಿಸಿ, ಜಲ ಮರುಪೂರಣ ಮಾಡಿ, ಅವುಗಳು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡುವುದು, ಊರಿನ ಜಲಮೂಲಗಳ ಅಧ್ಯಯನ ನಡೆಸಿ ಸಾಮೂಹಿಕ ಪ್ರಯತ್ನಗಳ ಮೂಲಕ ಕೆರೆ-ಕಟ್ಟೆ, ಕಲ್ಯಾಣಿಗಳನ್ನು ಸಂರಕ್ಷಿಸುವ ಕೆಲಸ ಸಾರ್ವಜನಿಕರಿಂದಾಗಬೇಕು.
ಕೃಷಿ ಮತ್ತು ದೈನಂದಿನ ಜೀವನದಲ್ಲಿ ಕಡಿಮೆ ರಾಸಾಯನಿಕಗಳ ಬಳಕೆ, ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಲಭ್ಯವಿರುವ ನೀರಿನ ಸದುಪಯೋಗ, ಲಭ್ಯವಿರುವ ಜಾಗಗಳಲ್ಲಿ ಗಿಡಗಳನ್ನು ನೆಟ್ಟು ಅರಣ್ಯ ಬೆಳೆಸಬೇಕು. ಮಳೆ ನೀರು ನದಿ ಅಥವಾ ಸಮುದ್ರಕ್ಕೆ ಸೇರುವುದನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗದಿದ್ದರೂ ಅಲ್ಲಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ, ನೀರನ್ನು ಭೂಮಿಗೆ ಇಂಗಿಸುವ ಮೂಲಕ ಅಂತರ್ಜಲದ ಮಟ್ಟ ಹೆಚ್ಚಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ನೀರಿನ ಉಳಿಕೆ, ನೀರಿನ ಗಳಿಕೆ ಎರಡೂ ಆಗಬೇಕು. ನೀರು ಉಳಿದರೇ ನಾವು ಉಳಿಯುತ್ತೇವೆ, ನಮ್ಮ ಪೀಳಿಗೆಯೂ ಉಳಿಯುತ್ತದೆ.

– ಪ್ರೊ| ಕೆ. ನಾರಾಯಣ ಶೆಣೈ, ಮಣಿಪಾಲ

ಟಾಪ್ ನ್ಯೂಸ್

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.