ಕ್ರಿಕೆಟ್ ಚೆಂಡಿಗೂ ಬಂತು ‘ಸ್ಮಾರ್ಟ್’ ತಂತ್ರಜ್ಞಾನ ; ಏನಿದರ ಸ್ಪೆಷಾಲಿಟಿ ಗೊತ್ತೇ?
Team Udayavani, Mar 13, 2020, 5:55 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಟೂರ್ನಿ ಆರಂಭವಾಗುತ್ತಧ್ದೋ ಇಲ್ಲವೊ ಆದರೆ ರಾಜಸ್ಥಾನ್ ರಾಯಲ್ಸ್ ತಂಡ ಈಗಾಗಲೇ ಪೂರ್ವಸಿದ್ಧತಾ ಶಿಬಿರ ಆರಂಭಿಸಿದೆ.
ಆದರೆ ಈ ಬಾರಿ ಶಿಬಿರದಲ್ಲಿ ಒಂದು ವಿಶೇಷ ಇದೆ.ಇಲ್ಲಿ ಬಳಸುವುದು ಸಾಮಾನ್ಯ ಚೆಂಡಲ್ಲ, ಸ್ಮಾರ್ಟ್ ಬಾಲ್’ ಪ್ರಯೋಗ ಇಲ್ಲಿ ನಡೆಯುತ್ತಿದೆ. ಸಲಹೆಗಾರ ಸ್ಟೆಫಾನಿ ಈ ಚೆಂಡಿನ ಮೂಲಕ ಬೌಲರ್‌ಗಳ ಸಾಮರ್ಥ್ಯ ವೃದ್ಧಿಗೆ ಮುನ್ನುಡಿ ಬರೆದಿದ್ದಾರೆ.
ಅಂದ ಹಾಗೆ ಈ ಸ್ಮಾರ್ಟ್ ಚೆಂಡು ಸಿದ್ಧವಾಗಿರುವುದು ‘ಸಿಲಿಕಾನ್ ಸಿಟಿ’ ಬೆಂಗಳೂರಿನಲ್ಲಿ. ಇಲ್ಲಿಯ ಸೀ ಹೌಸ್ ಟೆಕ್ನಾಲಜೀಸ್ ಸಂಸ್ಥಾಪಕ ದೇವ್ ಬೆಹೆರಾ ಅವರ ಕನಸಿನ ಕೂಸು ಈ ಸ್ಮಾರ್ಟ್ ಬಾಲ್ ಕ್ರಿಕೆಟ್‌ನಲ್ಲಿ ಬಳಕೆಯಾಗುವ ಚೆಂಡಿನಲ್ಲಿ ಪುಟ್ಟದೊಂದು ಮೆಮೊರಿ ಚಿಪ್, ಬ್ಯಾಟರಿ ಮತ್ತು ಸೂಕ್ಷ್ಮ ಸಂವೇದಕಗಳನ್ನು ಅಳವಡಿಸಲಾಗಿದೆ. ಅದಕ್ಕೆ ಪೂರಕವಾಗಿ ಸಿದ್ಧಗೊಳಿಸಲಾಗಿರುವ ಅಪ್ಲಿಕೇಷನ್ (ಆ್ಯಪ್) ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡಿಟ್ಟುಕೊಂಡರೆ, ಚೆಂಡಿನ ಪ್ರತಿಯೊಂದು ಚಲನವಲನವೂ ನೋಂದಣಿಯಾಗುತ್ತದೆ.
ಸ್ವಿಂಗ್, ಸ್ಪಿನ್, ಸ್ಪೀಡ್ ಆ್ಯಂಗಲ್ ಮತ್ತು ಬ್ಯಾಟ್ಸ್‌ಮನ್‌ಗಳು ಪ್ರಯೋಗಿಸಿದ ಹೊಡೆತದ ತೀವ್ರತೆಗಳ ಕುರಿತ ಮಾಹಿತಿಗಳು ಈ ಆ್ಯಪ್‌ನಲ್ಲಿ ದಾಖಲಾಗುತ್ತವೆ. ಅವುಗಳನ್ನು ಅವಲೋಕಿಸಿ ಬೌಲಿಂಗ್‌ನಲ್ಲಿ ಬದಲಾವಣೆ ಮಾಡುವ ಅವಕಾಶಗಳು ವಿಫುಲವಾಗಿವೆ.
ಕ್ರಿಕೆಟ್‌ನಲ್ಲಿ ಇವತ್ತು ಸ್ಪರ್ಧಾತ್ಮಕತೆ ಮುಗಿಲು ಮುಟ್ಟಿದೆ. ದಿನನಿತ್ಯ ಒಂದಿಲ್ಲೊಂದು ವಿನೂತನ ಪ್ರಯೋಗ ಇದ್ದೇ ಇರುತ್ತದೆ. ಕ್ರಿಕೆಟ್ ಧರ್ಮವೇ ಆಗಿರುವ ಈ ದೇಶದಲ್ಲಿ ಲಕ್ಷಾಂತರ ಹುಡುಗರು ಪ್ರತಿದಿನ ಬ್ಯಾಟ್, ಚೆಂಡು ಹಿಡಿದು ಮೈದಾನಕ್ಕೆ ಲಗ್ಗೆ ಇಡುತ್ತಾರೆ. ಎಲ್ಲರಿಗೂ ಅಂತಾರಾಷ್ಟ್ರಿಯ ತಾರೆ ಆಗುವ ಕನಸು. ತಮ್ಮ ಬಳಿ ಬಂದ ಹುಡುಗರಿಗೆ ಕನಿಷ್ಟ ಐಪಿಎಲ್ ಅರ್ಹರನ್ನಾಗಿ ಮಾಡಬೇಕೆಂಬ ಛಲ ಕೋಚ್‌ಗಳದ್ದು.
ಸ್ಟೀಪನ್‌ಜೋನ್ಸ್ ಅಕಾಡೆಮಿ, ಗ್ಯಾರಿ ಕರ್ಸ್ಟನ್ ಕ್ರಿಕೆಟ್ ಅಕಾಡೆಮಿ, ಪಡುಕೋಣೆ ಅಕಾಡೆಮಿಗಳಲ್ಲಿ ಈ ಚೆಂಡು ಪ್ರಯೋಗವಾಗಿದೆ. ಚೆಂಡು ಉತ್ಪಾದಕರೊಂದಿಗೆ ಒಪ್ಪಂದ ಮಾಡಿಕೊಂಡು ಈ ಸೆನ್ಸಾರ್ ಅಳವಡಿಸಲಾಗುತ್ತಿದೆ. ಇವತ್ತು ಕೋಚಿಂಗ್ ಕೂಡ ಸೂಪರ್ ಸ್ಪೆಶಾಲಿಟಿ ಆಗುತ್ತಿದೆ. ಬೌಲರ್‌ಗಳ ಸಾಮರ್ಥ್ಯ ವೃದ್ಧಿಗೆ ಅನುಕೂಲವಾಗುತ್ತದೆ.
ಸೌರಾಷ್ಟ್ರದ ಅಭಿಷೇಕ್ ಭಟ್ (ಈಚೆಗೆ ಕೆಪಿಎಲ್‌ನಲ್ಲಿ ಆಡಿದ್ದರು) ಅವರು ತಮ್ಮ ಎಸೆತದ ವೇಗವನ್ನು ಪ್ರತಿ ಗಂಟೆಗೆ 120 ಕಿ.ಮೀ. ನಿಂದ 130ರವರೆಗೆ ವೃದ್ಧಿಸಿಕೊಳ್ಳಲು ಈ ಚೆಂಡಿನಲ್ಲಿ ತರಬೇತಿ ಪಡೆದಿದ್ದರು. ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರೂ ಈ ಉತ್ಪನ್ನದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿ ಭವಿಷ್ಯದಲ್ಲಿ ಎಲ್ಲ ಕ್ರೀಡಾ ಪ್ರಕಾರಗಳಲ್ಲಿಯೂ ಈ ಚಿಪ್ ಬಳಕೆಯಾಗುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಕೇವಲ ಕ್ರಿಕೆಟ್ ಮಾತ್ರವಲ್ಲದೆ ಈ ಉಪಕರಣವನ್ನು ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್, ಇನ್ನಿತರ ಕ್ರೀಡೆಗಳಲ್ಲೂ ಉಪಯೋಗಿಸಿಸಬಹುದಾಗಿದೆ. ಒಟ್ಟಾರೆಯಾಗಿ ಈ ಸಾಧನ ಎಲ್ಲ ಕ್ರೀಡೆಗಳಲ್ಲು ಬಳಕೆಗೆ ಬಂದರೆ ಪಲಿತಾಂಶ ನಿರ್ಧರಿಸಲು ಸಹಕಾರಿಯಾಗುತ್ತದೆ.
– ಅಭಿ