ಉಡುಪಿ ಮೂಲದ ವಾಮನಮೂರ್ತಿ, ಖ್ಯಾತಹಾಸ್ಯ ನಟ ವಾದಿರಾಜ ಬಗ್ಗೆ ಗೊತ್ತಾ?

Team Udayavani, Mar 14, 2019, 9:29 AM IST

ಕನ್ನಡ ಚಿತ್ರರಂಗದಲ್ಲಿ 1960, 70, 80ರ ದಶಕದಲ್ಲಿ ಹಾಸ್ಯ ದಿಗ್ಗಜರ ದಂಡೇ ಇದ್ದಿತ್ತು. ಅದರಲ್ಲಿ ನರಸಿಂಹರಾಜು, ಬಾಲಕೃಷ್ಣ, ದಿನೇಶ್, ಮುಸುರಿ ಕೃಷ್ಣಮೂರ್ತಿ, ಧೀರೇಂದ್ರ ಗೋಪಾಲ್, ದ್ವಾರಕೀಶ್, ಉಮೇಶ್ ಸೇರಿದಂತೆ ಹಲವು ಅದ್ಭುತ ಹಾಸ್ಯ ನಟರು ಸೇರಿದ್ದಾರೆ. ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ ಎಂದೇ ದ್ವಾರಕೀಶ್ ಖ್ಯಾತರಾಗಿದ್ದಾರೆ. ಆದರೆ ದ್ವಾರಕೀಶ್ ಕ್ಕಿಂತ ಮೊದಲೇ ಕನ್ನಡದಲ್ಲಿ ಹಾಸ್ಯನಟರಾಗಿ ವಾಮನಮೂರ್ತಿ ಪಿ.ವಾದಿರಾಜ ಅವರು ಪ್ರೇಕ್ಷಕರ ಮನಗೆದ್ದಿದ್ದರು. ಈ ವಾದಿರಾಜ ಬೇರಾರು ಅಲ್ಲ ಉಡುಪಿ ಜಿಲ್ಲೆಯ ಪಣಿಯಾಡಿಯವರು! ಅಂದಿನ ಖ್ಯಾತ ನಟಿ ಹರಿಣಿಯ ಅಣ್ಣ…

ಉಡುಪಿಯ (ದಕ್ಷಿಣ ಕನ್ನಡ ಜಿಲ್ಲೆ) ಪಣಿಯಾಡಿ ಎಂಬಲ್ಲಿ 1927 ಜನವರಿ 3ರಂದು ವಾದಿರಾಜ ಜನಿಸಿದ್ದರು. ತಂದೆ ಯುಎಸ್ ಪಣಿಯಾಡಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ತುಂಬ ಸರಳ ಮತ್ತು ಶಿಸ್ತಿನ ಸಿಪಾಯಿಯಾಗಿದ್ದವರು ವಾದಿರಾಜ. ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಾಗಿಯೇ ಹೆಚ್ಚು ಮಿಂಚಿದ್ದರು. ಅಷ್ಟೇ ಅಲ್ಲ ಖ್ಯಾತ ನಿರ್ಮಾಪಕರೂ ಕೂಡಾ ಆಗಿದ್ದರು.

ಅವಿವಾಹಿತ ವಾದಿರಾಜ್ ಅದ್ಭುತ ಹಾಸ್ಯ ನಟರಾಗಿ, ನಿರ್ದೇಶಕರಾಗಿ ಮಿಂಚಿದ್ದರು!

ಡಾ.ರಾಜ್ ಕುಮಾರ್ ಜೊತೆ ಸಿನಿಮಾದಲ್ಲಿ ನಟಿಸಿದ್ದ ವಾದಿರಾಜ ಅವರು 1954ರಲ್ಲಿ ಬಿಡುಗಡೆಯಾದ ಕೋಕಿಲವಾಣಿ ಎಂಬ ಚಿತ್ರದ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡಿದ್ದರು. 1959ರಲ್ಲಿ ಧರ್ಮ ವಿಜಯ,  ಸ್ವರ್ಣ ಗೌರಿ, ನಾ ಮೆಚ್ಚಿದ ಹುಡುಗ, ನವ ಜೀವನ, ನಮ್ಮ ಮಕ್ಕಳು, ನಮ್ಮಮ್ಮನ ಸೊಸೆ, ಅದೇ ಕಣ್ಣು, ಸೀತೆಯಲ್ಲ ಸಾವಿತ್ರಿ, ದಂಗೆ ಎದ್ದ ಮಕ್ಕಳು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಬಾಲಿವುಡ್ ನಲ್ಲಿ ಖ್ಯಾತರಾಗಿದ್ದ ಅಂದಿನ ಶ್ರೇಷ್ಠ ನಿರ್ಮಾಪಕರಾದ ವಿ.ಶಾಂತಾರಾಮ್ ಅವರ ಸಿನಿಮಾಗಳಿಂದ ವಾದಿರಾಜ ಅವರು ಪ್ರಭಾವಿತರಾಗಿದ್ದರು. ಅದರ ಫಲಶ್ರುತಿ ಎಂಬಂತೆ ನಿರ್ಮಾಣವಾದ ಸಿನಿಮಾವೇ “ ನಂದಾ ದೀಪಾ”! ನಂದಾದೀಪ ಕಥೆ ಹಾಗೂ ಸಿನಿಮಾ ನಿರ್ಮಾಣ ಮಾಡಿದ್ದು ವಾದಿರಾಜ್. ಶ್ರೀ ಭಾರತಿ ಚಿತ್ರಾ ಸ್ಟುಡಿಯೋ ಹೌಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಿಸಿದ್ದರು. ಇದರಲ್ಲಿ ಸಹ ನಿರ್ಮಾಪಕರಾಗಿದ್ದವರು ಸ್ವತಃ ವಾದಿರಾಜ್ ಅವರ ಸಹೋದರ ಜವಾಹರ್. ಎಂಆರ್ ವಿಠಲ್ ಸಿನಿಮಾದ ನಿರ್ದೇಶಕರು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್, ಹರಿಣಿ(ತಂಗಿ), ಲೀಲಾವತಿ, ಉದಯ್ ಕುಮಾರ್ ನಟಿಸಿದ್ದರು. ಆ ಕಾಲದಲ್ಲಿ ರಾಜ್, ಹರಿಣಿ ಜೋಡಿ ಜನಪ್ರಿಯವಾಗಿತ್ತು.

ನಂದಾ ಸಿನಿಮಾ ಬಿಡುಗಡೆಗೊಂಡ ಬಳಿಕ ಪ್ರೇಕ್ಷಕರ ಮನಗೆದ್ದಿತ್ತು. ಜೊತೆಗೆ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಗೂ ಭಾಜನವಾಗಿತ್ತು. ಈ ಯಶಸ್ಸಿನ ಯಾತ್ರೆ ಇಲ್ಲಿಗೆ ನಿಲ್ಲೋದಿಲ್ಲ. 1964ರಲ್ಲಿ ನವಜೀವನ ಹಾಗೂ ನಾಂದಿ ಸಿನಿಮಾವನ್ನು ವಾದಿರಾಜ ಹಾಗೂ ಜವಾಹರ್ ಅವರು ನಿರ್ಮಾಣ ಮಾಡಿದ್ದರು. ದಿ.ಎನ್.ಲಕ್ಷ್ಮಿನಾರಾಯಣ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಕೂಡಾ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಮೈಲಿಗಲ್ಲನ್ನೇ ನೆಟ್ಟಿತ್ತು. ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಮೊತ್ತ ಮೊದಲ ಸಿನಿಮಾ ನಾಂದಿ ಎಂಬ ಹೆಗ್ಗಳಿಗೂ ಪಾತ್ರವಾಗಿತ್ತು.

1967ರಲ್ಲಿ ಶ್ರೀಭಾರತಿ ಪ್ರೊಡಕ್ಷನ್ ಹೌಸ್ ಹೆಸರನ್ನು ಬದಲಾಯಿಸಿ ವಿಜಯ ಭಾರತಿ ಪ್ರೊಡಕ್ಷನ್ ಹೌಸ್ ಎಂಬುದಾಗಿ ಮಾಡಿದ್ದರು. ಇಲ್ಲಿ ಪ್ರೇಮಕ್ಕೂ ಪರ್ಮಿಟ್ಟೇ, ನಮ್ಮ ಮಕ್ಕಳು, ಸೀತಾ, ನಮ್ಮಮ್ಮನ ಸೊಸೆ, ನಾ ಮೆಚ್ಚಿದ ಹುಡುಗ ಸೇರಿದಂತೆ ಹಲವಾರು ಸಿನಿಮಾವನ್ನು ವಾದಿರಾಜ ಹಾಗೂ ಜವಾಹರ್ ನಿರ್ಮಿಸಿದ್ದರು. ಈ ಜೋಡಿ ನಿರ್ಮಾಣ ಮಾಡಿದ್ದ ಇನ್ನೊಂದು ಮುಖ ಎಂಬ ಮಕ್ಕಳ ಚಿತ್ರ ಹಾಗೂ ದಂಗೆ ಎದ್ದ ಮಕ್ಕಳು ಸಿನಿಮಾ ರಜತ ಕಮಲ ಪ್ರಶಸ್ತಿ ಪಡೆದಿತ್ತು.

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ವಾದಿರಾಜ ಅವರಿಗೆ ಸಿನಿಮಾ ನಟನೆ ಹಾಗೂ ನಿರ್ಮಾಣವೇ ಬದುಕಾಗಿಬಿಟ್ಟಿತ್ತು. ಅವರು ಕೊನೆಯವರೆಗೂ ಅವಿವಾಹಿತರಾಗಿದ್ದರು.

ಆ ಕಾಲದಲ್ಲಿಯೇ ಆ್ಯನಿಮೇಷನ್ ಸಿನಿಮಾ ಮಾಡೋ ಕನಸು ಕಂಡಿದ್ದರು!

ಸದಾ ಹೊಸತನಗಳ ಬಗ್ಗೆ ಹುಡುಕಾಟ ನಡೆಸುತ್ತಿದ್ದ ವಾದಿರಾಜ ಅವರು ತಮ್ಮ ನಿರ್ಮಾಣದ ಸಿನಿಮಾಗಳ ಮೂಲಕ ಹಲವು ಹೊಸ ಮುಖಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದರು. ಅದರಲ್ಲಿ ಚಂದ್ರಶೇಖರ್ ಕೂಡಾ ಒಬ್ಬರು. ಬಳಿಕ ಪುಟ್ಟಣ್ಣ ಕಣಗಾಲ್ ಅವರ ಎಡಕಲ್ಲುಗುಡ್ಡದ ಮೇಲೆ ಸಿನಿಮಾದಲ್ಲಿ ಚಂದ್ರಶೇಖರ್ ನಟಿಸಿದ ಮೇಲೆ ಹೆಚ್ಚು ಜನಪ್ರಿಯರಾಗಿದ್ದರು. ವಾದಿರಾಜ ಅವರು ತಮ್ಮ ಸಿನಿಮಾದಲ್ಲಿ ಹಾಡು ಮತ್ತು ಸಂಗೀತಕ್ಕೆ ವಿಶೇಷ ಒತ್ತನ್ನು ನೀಡುತ್ತಿದ್ದರು. ಅದಕ್ಕೆ ಉತ್ತಮ ಉದಾಹರಣೆ..ಬರೆದೇ ನೀನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ ಎಂಬ ಹಾಡು ಸಾಕ್ಷಿಯಾಗಿದೆ. ಇದು ವಾದಿರಾಜ ನಿರ್ಮಾಣದ ಸೀತಾ ಸಿನಿಮಾದ ಮನಮೋಹಕ ಹಾಡಾಗಿದೆ!

ವಾದಿರಾಜ ಅವರು ಭಾರತದ ಕಥೆಯನ್ನೊಳಗೊಂಡ ಆ್ಯನಿಮೇಟೆಡ್ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಅವರ ಕನಸು ಕೊನೆಗೂ ಕೈಗೂಡಲಿಲ್ಲ. ಅದೇ ರೀತಿ ಗುರುಪ್ರಸಾದ್ ನಿರ್ದೇಶನದ ಮಠ ಸಿನಿಮಾದಲ್ಲಿ ವಾದಿರಾಜ ಅವರು ನಟಿಸಬೇಕೆಂದು ಕೋರಿಕೊಂಡಿದ್ದರು. ಆದರೆ ಅದಕ್ಕೆ ಅವಕಾಶವಾಗಲಿಲ್ಲ. 2004ರ ಫೆಬ್ರುವರಿ 6ರಂದು ವಾದಿರಾಜ ಅವರು ಇಹಲೋಕ ತ್ಯಜಿಸಿದ್ದರು.

ಪಣಿಯಾಡಿ ವಾದಿರಾಜ ಅವರು ನಟರಾಗಿ, ನಿರ್ಮಾಪಕರಾಗಿ, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 2001-02ರವರೆಗೆ ರಾಜ್ಯ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿದ್ದರು. ಕನ್ನಡ ಚಿತ್ರರಂಗದಲ್ಲಿನ ಅವರ ಸೇವೆಯನ್ನು ಪರಿಗಣಿಸಿ 1998ರಲ್ಲಿ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇಂದಿಗೂ ವಾಮನಮೂರ್ತಿಯ ನಟನೆ ಹಾಗೂ ಸಿನಿಮಾಗಳು ಸಿನಿಪ್ರಿಯರ ಮನದಲ್ಲಿ ಅಜರಾಮರವಾಗಿದೆ.

*ನಾಗೇಂದ್ರ ತ್ರಾಸಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ