ಈ ವಾರ ತೆರೆಗೆ 4 ಚಿತ್ರ
Team Udayavani, Mar 26, 2021, 9:52 AM IST
ಅನಘ-“ದೀಕ್ಷಾ ಫಿಲಂಸ್ ಸಮೂಹ’ ಬ್ಯಾನರ್ ಅಡಿಯಲ್ಲಿ ಡಿ.ಪಿ ಮಂಜುಳಾ ನಾಯಕ ನಿರ್ಮಿಸಿರುವ “ಅನಘ’ ಚಿತ್ರ ಇಂದು ತೆರೆ ಕಾಣುತ್ತಿದೆ. ಇತ್ತೀಚೆಗಷ್ಟೇ ನಟ ರಿಯಲ್ ಸ್ಟಾರ್ ಉಪೇಂದ್ರ “ಅನಘ’ ಚಿತ್ರದ ಮೊದಲ ಟ್ರೇಲರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಸಸ್ಪೆನ್ಸ್, ಹಾರರ್-ಕಾಮಿಡಿ ಕಥಾಹಂದರ ಹೊಂದಿರುವ “ಅನಘ’ ರಾಜು ಎನ್.ಆರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ರಂಗಭೂಮಿ ಪ್ರತಿಭೆಗಳಾದ ನಳೀನ್ ಕುಮಾರ್, ಪವನ್ ಪುತ್ರ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿವಾಸ ಗೌಡ, ಕಿರಣತೇಜ, ಕಿರಣ್ ರಾಜ್, ಕರಣ್ ಆರ್ಯನ್, ದೀಪ, ರೋಹಿತ್, ಖುಷಿ, ರಶ್ಮಿ, ನಂಜಪ್ಪ ಬೆನಕ, ಮೋಟು ರವಿ, ಅಭಿ, ವೀರೇಶ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಇಂದಿನಿಂದ ಚಿತ್ರಮಂದಿರದಲ್ಲಿ ‘ಪಾರು’
ಚಿತ್ರದಲ್ಲಿ ನಾಲ್ಕು ವಿಭಿನ್ನ ಕ್ಲೈಮ್ಯಾಕ್ಸ್ಗಳಿರೋದು ಮತ್ತೂಂದು ವಿಶೇಷ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಅನಘ’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ದೇವರಾಯನದುರ್ಗ ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅವಿನಾಶ್ ಸಂಗೀತ ಸಂಯೋಜಿಸಿದ್ದಾರೆ. ಇದರ ಜೊತೆಗೆ “ರಣಂ’, “ನನ್ನ ಗುರಿ ವಾರೆಂಟ್’ ಹಾಗೂ “ಪಾರು’ ಚಿತ್ರಗಳು ಕೂಡ ಇಂದು ತೆರೆಕಾಣುತ್ತಿವೆ.