ಮತ್ತೆ ನಿರ್ದೇಶನದತ್ತ ಅರ್ಜುನ್ ಸರ್ಜಾ: ಪುತ್ರಿಯ ಹೊಸ ಚಿತ್ರಕ್ಕೆ ನಿರ್ದೇಶನ
Team Udayavani, Jun 28, 2022, 9:59 AM IST
ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ತನ್ನದೇ ಆದ ಛಾಪು ಮೂಡಿಸಿರುವ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬಹುಕಾಲದ ನಂತರ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ.
ಹೌದು, “ಪ್ರೇಮ ಬರಹ’ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸುವ ಮೂಲಕ ತಮ್ಮ ಪುತ್ರಿ ಐಶ್ವರ್ಯಾ ಸರ್ಜಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದ ಅರ್ಜುನ್ ಸರ್ಜಾ, ಈ ಬಾರಿ ಕೂಡ ಮತ್ತೂಮ್ಮೆ ತಮ್ಮ ಪುತ್ರಿಗೆ ಹೊಸ ಸಿನಿಮಾದ ಮೂಲಕ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಇನ್ನು ಈ ಬಾರಿ ತಮ್ಮ ಪುತ್ರಿಯನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿರುವ ಅರ್ಜುನ್ ಸರ್ಜಾ, ಟಾಲಿವುಡ್ ಸಿನಿಪ್ರಿಯರಿಗೆ ಇಷ್ಟವಾಗುವಂಥ ಸಬ್ಜೆಕ್ಟ್ ಒಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ವಿಕ್ರಾಂತ್ ರೋಣನಿಗೆ ‘ಬಿಗ್ ಬಿ’ ಸಾಥ್
ಇದೊಂದು ರೋಡ್ ಟ್ರಿಪ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಐಶ್ವರ್ಯಾಗೆ ಜೋಡಿಯಾಗಿ ವಿಶ್ವಕ್ ಸೇನ್ ಅಭಿನಯಿಸುತ್ತಿದ್ದು, ಉಳಿದಂತೆ ಜಗಪತಿ ಬಾಬು ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಈ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಕ್ಲಾಪ್ ಮಾಡಿದರು. ಪ್ರಕಾಶ್ ರೈ, ನಿರ್ದೇಶಕ ರಾಘವೇಂದ್ರ ರಾವ್ ಮೊದಲಾದವರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರಕ್ಕೆ ಶುಭ ಕೋರಿದರು.
ಸದ್ಯ ಸಿನಿಮಾದ ಟೈಟಲ್ ಇನ್ನಷ್ಟೇ ಫೈನಲ್ ಆಗಬೇಕಿದ್ದು, ಅರ್ಜುನ್ ಸರ್ಜಾ ತಮ್ಮ “ಶ್ರೀರಾಮ್ ಫಿಲಂಸ್ ಇಂಟರ್‌ನ್ಯಾಷನಲ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿರುವ 15ನೇ ಚಿತ್ರ ಇದಾಗಿದೆ.