ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್
Team Udayavani, Sep 9, 2021, 8:30 AM IST
ಒಂದೊಂದೇ ಸ್ಟಾರ್ ಸಿನಿಮಾಗಳು ತಮ್ಮ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತಿವೆ. ಈ ಮೂಲಕ ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ದೊಡ್ಡ ಮನರಂಜನೆಯ ಹಬ್ಬಕಾದಿದೆ. ಈಗಾಗಲೇ ಯಶ್ ಅವರ ಬಹುನಿರೀಕ್ಷಿತ “ಕೆಜಿಎಫ್-2′ ಮುಂದಿನ ವರ್ಷ ಏ.14ರಂದು ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಈಗ ಮತ್ತೂಬ್ಬ ಸ್ಟಾರ್ ನಟನ ಚಿತ್ರದ ರಿಲೀಸ್ ಡೇಟ್ ಘೋಷಣೆ.
ಹೌದು, ರಕ್ಷಿತ್ ಶೆಟ್ಟಿ ನಟನೆಯ “777 ಚಾರ್ಲಿ’ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರತಂಡ ಈಗ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಅದು ಡಿಸೆಂಬರ್ 31. ಹೌದು, 2021ರ ಕೊನೆಗೆ ರಕ್ಷಿತ್ ಶೆಟ್ಟಿ ಎಂಟ್ರಿಕೊಡಲಿದ್ದಾರೆ. ಈ ಮೂಲಕ ರಕ್ಷಿತ್ಕೂಡಾ ಡಿಸೆಂಬರ್ ಮೇಲೆ ನಂಬಿಕೆ ಇಟ್ಟಿದ್ದಾರೆ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ಡಿಸೆಂಬರ್ನಲ್ಲಿ ಬಿಡುಗಡೆಯಾಗುತ್ತಿರುವ ಮೂರನೇ ಸಿನಿಮಾ. ರಕ್ಷಿತ್ ನಟನೆಯ “ಕಿರಿಕ್ ಪಾರ್ಟಿ’ ಚಿತ್ರ2016 ಡಿಸೆಂಬರ್ 30ರಂದು ತೆರೆಕಂಡರೆ, “ಅವನೇ ಶ್ರೀಮನ್ನಾರಾಯಣ’ ಚಿತ್ರ 2019 ಡಿಸೆಂಬರ್ 27ರಂದು ತೆರೆಗೆ ಬಂದಿತ್ತು. “777 ಚಾರ್ಲಿ’ ಕೂಡಾ ಡಿಸೆಂಬರ್ನಲ್ಲೇ ಬಿಡುಗಡೆಯಾಗುತ್ತಿದೆ.
ಇನ್ನು, “777 ಚಾರ್ಲಿ’ ಚಿತ್ರದ ಟಾರ್ಚರ್ ಸಾಂಗ್ ಇಂದು ರಿಲೀಸ್ ಆಗುತ್ತಿದೆ. ಇನ್ನೊಂದು ವಿಷಯವೆಂದರೆ, “777 ಚಾರ್ಲಿ’ ಚಿತ್ರದ ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ವಿಜಯ್ ಪ್ರಕಾಶ್ ಈ ಹಾಡಿಗೆ ಧ್ವನಿಯಾದರೆ, ಮಲಯಾಳಂನಲ್ಲಿ ಜೆಸ್ಸಿ ಗಿಫ್ಟ್, ತಮಿಳಿನಲ್ಲಿ ಗಾನ ಬಾಲಚಂದರ್, ತೆಲುಗಿನಲ್ಲಿ ರಾಮ್ ಮಿರಿಯಾಲ ಮತ್ತು ಹಿಂದಿಯಲ್ಲಿ ಸ್ವರೂಪ್ ಖಾನ್ಕ್ರಮವಾಗಿ ಆಯಾಯ ಭಾಷೆಗಳ ಅವತರಣಿಕೆಗಳನ್ನು ಹಾಡಿದ್ದಾರೆ.
ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ “777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ನಾಯಿ ಒಂದು ಪೂರ್ಣ ಪ್ರಮಾಣದ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಂಡಿದೆ. ಸಂಗೀತಾ ಶೃಂಗೇರಿ ಚಿತ್ರದಲ್ಲಿ ನಾಯಕಿಯಾಗಿದ್ದು, ಉಳಿದಂತೆ ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.