ದರ್ಶನ್‌ ತೆಗೆದ ಫೋಟೋಗೆ 1 ಲಕ್ಷ ಕೊಟ್ಟ ಚಿಕ್ಕಣ್ಣ

ಅರಣ್ಯ ಇಲಾಖೆಯ ನೆರವಿಗೆ ಹಣ ಬಳಕೆ

Team Udayavani, May 16, 2019, 3:00 AM IST

ನಟ ದರ್ಶನ್‌ ಒಳ್ಳೆಯ ಫೋಟೋಗ್ರಾಫ‌ರ್‌ ಅನ್ನೋದು ಬಹುತೇಕರಿಗೆ ಗೊತ್ತಿರುವ ವಿಷಯ. ಕಾಡು, ವನ್ಯಜೀವಿಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ದರ್ಶನ್‌ ಆಗಾಗ್ಗೆ ಕ್ಯಾಮರಾ ಹೊತ್ತು, ಪ್ರಕೃತಿಯ ಮಡಿಲಿನಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿರುತ್ತಾರೆ. ಇನ್ನು ದರ್ಶನ್‌ ಸೆರೆಹಿಡಿದ ಅಪರೂಪದ ಫೋಟೋಗಳಿಗೆ ಅಭಿಮಾನಿಗಳು, ಛಾಯಾಚಿತ್ರ ಪ್ರೇಮಿಗಳಿಂದ ಸಾಕಷ್ಟು ಬೇಡಿಕೆ ಇದೆ.

ಕೆಲ ತಿಂಗಳ ಹಿಂದಷ್ಟೇ ದರ್ಶನ್‌ ಅವರ ಫೋಟೋಗ್ರಫಿ ಪ್ರದರ್ಶನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ದರ್ಶನ್‌ ತೆಗೆದ ಅನೇಕ ಫೋಟೋಗಳು ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದವು. ಇದರಿಂದ ಬಂದ ಹಣವನ್ನು ಕೂಡ ದರ್ಶನ್‌ ವನ್ಯಜೀವಿ ಸಂರಕ್ಷಣೆ ಕಾರ್ಯಗಳಿಗೆ ಬಳಸುವುದಾಗಿ ಘೋಷಿಸಿದ್ದರು.

ಈಗ ದರ್ಶನ್‌ ತೆಗೆದ ಗಜರಾಜನ ಫೋಟೋವೊಂದು ಬರೋಬ್ಬರಿ ಒಂದು ಲಕ್ಷ ಮೊತ್ತಕ್ಕೆ ಮಾರಾಟವಾಗಿದೆ. ಅಂದಹಾಗೆ, ಈ ಫೋಟೋವನ್ನು ಇಷ್ಟೊಂದು ದೊಡ್ಡ ಮೊತ್ತ ಕೊಟ್ಟು ಖರೀದಿಸಿದವರು ಹಾಸ್ಯನಟ ಚಿಕ್ಕಣ್ಣ. ಇನ್ನು ಚಿಕ್ಕಣ್ಣ ಈ ಫೋಟೋವನ್ನು ಖರೀದಿಸಿರುವುದರ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ದರ್ಶನ್‌,

“ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು’ ಎಂದಿದ್ದಾರೆ. ಅಂದಹಾಗೆ, ಈ ಫೋಟೋದಿಂದ ಬಂದಿರುವ ಹಣ ಕೂಡ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕಾರ್ಯಕ್ಕೆ ಬಳಕೆಯಾಗಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ