ಸ್ಟಾರ್ ನಟರಿಗೆ “ಡ್ಯಾನ್ಸ್” ಕಲಿಸಿದ್ದ ನೃತ್ಯ ಬ್ರಹ್ಮ ಉಡುಪಿ ಜಯರಾಂ ಬಗ್ಗೆ ಗೊತ್ತಾ?

ಅಡಕೆ ಮಾರಿ ಜೀವನ, ಕೊನೆಯ ದಿನಗಳಲ್ಲಿ ನೆನಪಿನ ಶಕ್ತಿ ಕಳೆದುಕೊಂಡುಬಿಟ್ಟಿದ್ರು…

ನಾಗೇಂದ್ರ ತ್ರಾಸಿ, Apr 25, 2019, 3:29 PM IST

ಬಾಲಿವುಡ್ ಆಗಲಿ, ಸ್ಯಾಂಡಲ್ ವುಡ್, ಕೋಸ್ಟಲ್ ವುಡ್, ಕಾಲಿವುಡ್, ಮೊಲಿವುಡ್ ಹೀಗೆ ಯಾವುದೇ ಸಿನಿಮಾರಂಗ ಇರಲಿ ಅಲ್ಲಿ ನಾವು ಹೆಚ್ಚು ಮಾತನಾಡೋದು, ಗಮನಿಸೋದು ಸ್ಟಾರ್ ನಟ, ನಟಿಯ ಬಗ್ಗೆ. ಆದರೆ ಬೆಳ್ಳಿಪರದೆಯ ಹಿಂದೆ ಸ್ಟಾರ್ ನಟರ ನೃತ್ಯವಾಗಲಿ, ಧ್ವನಿ, ಫೈಟ್, ಮೇಕಪ್ ಇವೆಲ್ಲದಕ್ಕೂ ಒಬ್ಬೊಬ್ಬ ಸ್ಟಾರ್ ಗಳಿರುತ್ತಾರೆ ಎಂಬುದನ್ನು ಮರೆಯಬಾರದು. ಧ್ವನಿ ಡಬ್ ಆರ್ಟಿಸ್ಟ್, ಫೈಟ್ ಮಾಸ್ಟರ್, ಮೇಕಪ್ ಮಾಸ್ಟರ್ ಗಳ ತೆರೆ ಹಿಂದಿನ ಕಸರತ್ತುಗಳಿಂದಾಗಿಯೇ ಸ್ಟಾರ್ ನಟರು ಮಿಂಚುತ್ತಾರೆ! ಹೀಗೆ ಕನ್ನಡ ಸಿನಿಮಾ ಪ್ರಸಾರವಾಗುವ ವೇಳೆ ನೀವು ಗಮನಿಸಿದ್ದೀರಾ…ನೃತ್ಯ ಸಂಯೋಜನೆ ಉಡುಪಿ ಜಯರಾಂ ಅಂತ ಬರುತ್ತದೆ..

ಹೌದು ಬರೋಬ್ಬರಿ 500 ಸಿನಿಮಾಗಳಿಗೆ ಕೋರಿಯೊಗ್ರಫಿ ಮಾಡಿದವರು ನೃತ್ಯ ಬ್ರಹ್ಮ ಎಂದೇ ಖ್ಯಾತರಾಗಿದ್ದ ಉಡುಪಿ ಜಯರಾಂ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ, ಈಗಿನ ಉಡುಪಿ ಜಿಲ್ಲೆಯ ಬಾಳೇಕುದ್ರು ಎಂಬ ಪುಟ್ಟ ಊರಿನಲ್ಲಿ ಜನಿಸಿದ್ದವರು ಜಯರಾಂ. ಊರು ಚಿಕ್ಕದಾದರೇನು ಕಡು ಬಡತನದಲ್ಲಿಯೇ ಬೆಳೆದಿದ್ದ ಜಯರಾಂ ಅವರು ಸಿನಿಮಾರಂಗದಲ್ಲಿ ಸ್ಟಾರ್ ಆಗಿದ್ದರು ಎಂಬುದು ಕನ್ನಡ ಚಿತ್ರರಂಗದ ಹೆಮ್ಮೆ.

1929 ನವೆಂಬರ್ 28ರಂದು ಆನಂದ್ ಭಟ್ ಮತ್ತು ಜಲಜಮ್ಮ ದಂಪತಿಗಳ ಪುತ್ರನಾಗಿ ಜನಿಸಿದ್ದ ಜಯರಾಂ ಅವರು. ಸಿನಿಮಾರಂಗಕ್ಕೆ ಕಾಲಿಟ್ಟ ಮೇಲೆ ಆ ಕಾಲದ ಸ್ಟಾರ್ ನಟರಾಗಿದ್ದ ಡಾ.ರಾಜ್ ಕುಮಾರ್, ತಮಿಳಿನ ಶಿವಾಜಿ ಗಣೇಶನ್, ಎಂಜಿ ರಾಮಚಂದ್ರನ್, ಜಯಲಲಿತಾ ಸೇರಿದಂತೆ ನೂರಾರು ನಟರಿಗೆ ಡ್ಯಾನ್ಸ್ ಮಾಸ್ಟರ್ ಆಗಿದ್ದರು. ಬಿ.ಜಯರಾಂ ಅವರು ಅಪ್ರತಿಮ ಪ್ರತಿಭಾವಂತರಾಗಿದ್ದರು ಎಂಬುದಕ್ಕೆ ಸಾಕ್ಷಿ ಅವರು ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯಂ, ಕಥಕ್, ಮಣಿಪುರಿ ಹಾಗೂ ಕೂಚುಪುಡಿ ನೃತ್ಯದ ಮಾದರಿಯ ಮಾಸ್ಟರ್ ಆಗಿ ಗಮನಸೆಳೆದಿದ್ದು. ಬೆಳ್ಳಿಪರದೆಯಲ್ಲಿ ಬಹುತೇಕ ಕೋರಿಯೋಗ್ರಫರ್ ಗಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದರು. ಆದರೆ ಜಯರಾಂ ಅವರು ಸ್ಥಳೀಯ ಹಾಗೂ ಸಾಂಪ್ರದಾಯಿಕ ನೃತ್ಯ ಶೈಲಿಯನ್ನು ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಳಸಿಕೊಂಡಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಹಿಂದಿ ಸಿನಿಮಾಗಳಲ್ಲಿ ಉಡುಪಿ ಜಯರಾಂ ಅವರು ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.

ತಾಯಿ ಪ್ರೀತಿ ಸಿಗದ ಜಯರಾಂಗೆ ತಂದೆಯೇ ಸರ್ವಸ್ವವಾಗಿದ್ರು:

ಜಯರಾಂ ಅವರು ತಮ್ಮ ತಾಯಿಯನ್ನು 5ನೇ ವಯಸ್ಸಿಗೆ ಕಳೆದುಕೊಂಡಿದ್ದರು. ತದನಂತರ ತಂದೆ ಆನಂದ ಭಟ್ಟರು ಭವಾನಿ ಎಂಬಾಕೆಯನ್ನು ವಿವಾಹವಾಗಿದ್ದರು. ವಿಧಿ ವಿಪರ್ಯಾಸ ಚಿಕ್ಕಮ್ಮ ಜಯರಾಂ ಅವರನ್ನು ತಾಯಿಯಂತೆ ನೋಡಿಕೊಳ್ಳುತ್ತಿರಲಿಲ್ಲವಾಗಿತ್ತು! ಆದರೂ ಅವರು ಎಂದೂ ಚಿಕ್ಕಮ್ಮನ ಬಗ್ಗೆ ದೂರಿದವರಲ್ಲವಂತೆ. ಗುರು ಪದ್ಮನಾಭ್ ಭಟ್ಟ ಬಳಿ ಶಿಷ್ಯನಾಗಿ ಸಂಗೀತ ಕಲಿತಿದ್ದ ಜಯರಾಂ ಅವರು ಬಾಲ್ಯ ಜೀವನ ಸುಖದ ಸುಪ್ಪತ್ತಿಗೆಯದ್ದಾಗಿರಲಿಲ್ಲ. ಮಲೆನಾಡಿನಲ್ಲಿ ಅಡಕ್ಕೆ ಕೊಯ್ಲಿನ ಸಂದರ್ಭದಲ್ಲಿ ಅಡಕೆ ಸುಲಿಯಲು ಹೋಗುತ್ತಿದ್ದ ಜಯರಾಂ ಅವರಿಗೆ ಸಿಗುತ್ತಿದ್ದದ್ದು ಊಟ ಮತ್ತು ಸ್ವಲ್ಪ ಅಡಿಕೆ!

ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವರ ಸಹಪಾಠಿಯೂ ಆಗಿದ್ದ ಜಯರಾಂ ಅವರು ಸಂಗೀತವನ್ನು ತುಂಬಾ ಪ್ರೀತಿಸುತ್ತಿದ್ದರು. ಅಡಕೆ ಮಾರಿ ಜೀವನ ನಿರ್ವಹಿಸುತ್ತಿದ್ದ ಜಯರಾಂ ಅವರಿಗೆ ಬದುಕು ದೊಡ್ಡ ಪಾಠ ಕಲಿಸತೊಡಗಿತ್ತು.

ಟರ್ನಿಂಗ್ ಪಾಯಿಂಟ್…!

ಜಯರಾಂ ಅವರು ಅಕ್ಕ ಸುಶೀಲ ಅವರ ಮನೆ ಹೋದಾಗ. ತಮ್ಮನ ಕಷ್ಟ ಕಂಡು ಮನನೊಂದ ಅಕ್ಕ ಯಾರಿಗೂ ತಿಳಿಯದ ಹಾಗೆ ಹಣ ಹೊಂದಿಸಿಕೊಟ್ಟು, ತೀರಿ ಹೋದ ಸಹೋದರಿಯ ಗಂಡ ಕೃಷ್ಣ ಕಾರಂತರ ಹೋಟೆಲ್ ಗೆ ತಮ್ಮ ಜಯರಾಂ ಅವರನ್ನು ಕಳುಹಿಸಿಕೊಟ್ಟಿದ್ದರು. ನಿಷ್ಠೆಯ ಕೆಲಸದಿಂದ ಜಯರಾಂ ಎಲ್ಲರಿಗೂ ಇಷ್ಟವಾಗಿದ್ದರು. ಏತನ್ಮಧ್ಯೆ ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಅವರ ಬದುಕಿಗೆ ಮಾರ್ಗದರ್ಶಿಯಾಗಿಬಿಟ್ಟಿದ್ದರು.

ತನ್ನ 17ನೇ ವಯಸ್ಸಿಗೆ ಕೈಯಲ್ಲಿ ಬಿಡಿಗಾಸು ಇಲ್ಲದೆ ಮದ್ರಾಸ್ ಹೋಗಿಬಿಟ್ಟಿದ್ದರಂತೆ. ಅಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತ ಕನ್ನಡಿಗರ ಪರಿಚಯದ ಮೂಲಕ ಜಯರಾಂ 1948ರಲ್ಲಿ ಮೊದಲ ಬಾರಿಗೆ ಜೆಮಿನಿ ಪಿಕ್ಚರ್ಸ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡು ಬಿಟ್ಟಿದ್ದರು. ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಜಯರಾಂ ಅವರು 1954ರಲ್ಲಿ ಡಾ.ರಾಜ್ ಕುಮಾರ್ ಅಭಿನಯದ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಸಹಾಯಕ ಕೋರಿಯೊಗ್ರಫರ್ ಆಗಿ ಕೆಲಸ ಮಾಡಿದ್ದರು. 1956ರಲ್ಲಿ ಭಾಗ್ಯೋದಯ ಕನ್ನಡ ಸಿನಿಮಾದ ಮೂಲಕ ಸ್ವತಂತ್ರರಾಗಿ ನೃತ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸುವ ಮೂಲಕ ಮತ್ತೆ ಸಿನಿಮಾ ರಂಗದಲ್ಲಿ ಅವರು ಹಿಂದಿರುಗಿ ನೋಡಲೇ ಇಲ್ಲ. ಆ ನಂತರ ಬರೋಬ್ಬರಿ 500ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ದುಡಿದ ಹೆಗ್ಗಳಿಕೆ ಉಡುಪಿ ಜಯರಾಮ್ ಅವರದ್ದು!

ಎಂಜಿಆರ್ ಅವರ “ನಾಳೈ ನಮ್ಮದೈ”, ಶಿವಾಜಿ ಗಣೇಶನ್ ಅವರ ಕರ್ಣನ್ ತಮಿಳು ಸಿನಿಮಾಕ್ಕೂ ಜಯರಾಮ್ ಕೋರಿಯೋಗ್ರಫಿ ಮಾಡಿದ್ದರು. ಹೀಗೆ ಕನ್ನಡದ ಬದುಕು ಬಂಗಾರವಾಯ್ತು, ಕವಿರತ್ನ ಕಾಳಿದಾಸ, ಪ್ರೇಮದ ಕಾಣಿಕೆ, ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಬಬ್ರುವಾಹನ, ಗಿರಿ ಕನ್ಯೆ, ಜೀವನ ಚೈತ್ರಯ, ಸೊಸೆ ತಂದ ಸೌಭಾಗ್ಯ, ಮಲಯ ಮಾರುತ, ಗೀತಾ, ಪುಟಾಣಿ ಏಜೆಂಟ್ 1,2,3,, ಚಂಡಿ ಚಾಮುಂಡಿ ಪ್ರಮುಖ ಸಿನಿಮಾಗಳಾಗಿವೆ.

ನೃತ್ಯ ಬ್ರಹ್ಮನ ಕೊನೆಯ ದಿನಗಳು ಕರುಣಾಜನಕವಾಗಿತ್ತು!

ಚೆನ್ನೈನಲ್ಲಿ ವಾಸವಾಗಿದ್ದ ಜಯರಾಮ್ ಅವರು 24ನೇ ವಯಸ್ಸಿನಲ್ಲೇ ಸರೋಜ ಅವರ ಜೊತೆ ಹಸೆಮಣೆ ಏರಿದ್ದರು. ಜಯರಾಂ, ಸರೋಜ ದಂಪತಿಗೆ ಮೂವರು ಗಂಡು ಹಾಗೂ ಓರ್ವ ಹೆಣ್ಣು ಮಗಳ ತುಂಬು ಸಂಸಾರ. ಮಕ್ಕಳನ್ನು ಅತೀಯಾಗಿ ಪ್ರೀತಿಸುತ್ತಿದ್ದ ಜಯರಾಮ್ ಅವರದ್ದು ಸುಂದರ, ಸಂತೋಷದ ಕುಟುಂಬವಾಗಿತ್ತು. ಘಟಾನುಘಟಿ ಸ್ಟಾರ್ ನಟರಿಗೆ ನೃತ್ಯ ಹೇಳಿಕೊಟ್ಟಿದ್ದ ಜಯರಾಮ್ ಅವರ ಬದುಕಿನ ಕೊನೆಯ ಕೊನೆಯ ಎಂಟು ತಿಂಗಳು ಕರುಣಾಜನಕವಾಗಿತ್ತು. ಮರೆಗುಳಿ (ಅಲ್ ಝಮೈರ್) ರೋಗಕ್ಕೆ ಒಳಗಾಗಿದ್ದ ಅವರಿಗೆ ಕೊನೆಗೆ ತಮ್ಮ ಮನೆ, ಮಠ, ಹೆಂಡತಿ, ಮಕ್ಕಳ ಪರಿಚಯ, ನೆನಪು ಯಾವುದೂ ಇರಲಿಲ್ಲವಾಗಿತ್ತಂತೆ! ಹಾಸಿಗೆ ಮೇಲೆ ಶೂನ್ಯವನ್ನೇ ದಿಟ್ಟಿಸಿ ನೋಡುತ್ತ ಮಲಗುತ್ತಿದ್ದ ಪತಿಯನ್ನು ಪತ್ನಿ, ಮಕ್ಕಳು ಆರೈಕೆ ಮಾಡಿದ್ದರು. 2004ರ ಅಕ್ಟೋಬರ್ 13ರಂದು ಚೆನ್ನೈನ ನಿವಾಸದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ