
ಜಾಹ್ನವಿ ದರ್ಬಾರ್: ಚೊಚ್ಚಲ ಚಿತ್ರದ ಮೇಲೆ ನವ ನಟಿಯ ನಿರೀಕ್ಷೆ
Team Udayavani, Jun 7, 2023, 3:09 PM IST

ವಿ. ಮನೋಹರ್ ನಿರ್ದೇಶಿಸಿರುವ ಹೊಸ ಚಿತ್ರ “ದರ್ಬಾರ್’ ಇದೇ ಶುಕ್ರ ವಾರ ತೆರೆಗೆ ಬರುತ್ತಿದೆ. ಈ ಸಿನಿಮಾದ ಮೂಲಕ ಹೊಸ ಪ್ರತಿಭೆ ಜಾಹ್ನವಿ ರಾಜು ನಾಯಕಿಯಾಗಿ ಚಂದನವನಕ್ಕೆ ಅಡಿಯಿಡುತ್ತಿದ್ದಾರೆ. “ದರ್ಬಾರ್’ ಸಿನಿಮಾದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕ ಜಾಹ್ನವಿ ರಾಜು, ತಮ್ಮ ಚೊಚ್ಚಲ ಸಿನಿಮಾ ಮತ್ತದರ ಪಾತ್ರದ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
ನಿಮ್ಮ ಹಿನ್ನೆಲೆ ಬಗ್ಗೆ ಏನು ಹೇಳುವಿರಿ?
ನಾನು, ನಮ್ಮ ಪೋಷಕರು ಎಲ್ಲರೂ ಬೆಂಗಳೂರಿನವರು. ನಮ್ಮದು ಸಿನಿಮಾ ಹಿನ್ನಲೆಯ ಕುಟುಂಬವಲ್ಲ. ಥಿಯೇಟರ್ ಅನುಭವವಾಗಲಿ, ಅಭಿನಯ ತರಬೇತಿಯಾಗಲಿ ನನಗೆ ಇಲ್ಲ. ಆದರೆ ಸಿನಿಮಾದ ಕಡೆಗಿದ್ದ ಆಸಕ್ತಿ ನನ್ನನ್ನು ನಾಯಕಿಯನ್ನಾಗಿ ಮಾಡಿದೆ. ಸದ್ಯ ನಾನು ಸೈಕಾಲಜಿ ಪದವಿ ಅಧ್ಯಯನ ಮಾಡುತ್ತಿದ್ದೇನೆ. ಹೀರೋಯಿನ್ ಆಗಿ “ದರ್ಬಾರ್’ ನನ್ನ ಮೊದಲ ಸಿನಿಮಾ.
ಸಿನಿಮಾದ ಕಡೆಗೆ ಆಸಕ್ತಿ ಮೂಡಿದ್ದು ಯಾವಾಗ? ನಾನು ಮೂಲತಃ ಶಾಸ್ತ್ರೀಯ ನೃತ್ಯ ಕಲಾವಿದೆ. ಆದರೆ ತುಂಬಾ ಚಿಕ್ಕವಯಸ್ಸಿನಲ್ಲೇ ಸಿನಿಮಾದ ಕಡೆಗೆ ಸಾಕಷ್ಟು ಆಸಕ್ತಿಯಿತ್ತು. ಆದರೆ ಅವಕಾಶ ಸಿಕ್ಕಿರಲಿಲ್ಲ. ಒಮ್ಮೆ “ಫೇರ್ ವೆಲ್’ ಎಂಬ ಶಾರ್ಟ್ ಫಿಲಂನಲ್ಲಿ ಅವಕಾಶ ಸಿಕ್ಕಿತು. ಅದಾದ ನಂತರ ಡಾರ್ಲಿಂಗ್ ಕೃಷ್ಣ ಅಭಿನಯದ “ಮಿ. ಬ್ಯಾಚುಲರ್’ ಸಿನಿಮಾದಲ್ಲೂ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಹೀಗೆ ಸಿನಿಮಾ ನಂಟು ಶುರುವಾಯಿತು.
“ದರ್ಬಾರ್’ ಸಿನಿಮಾಕ್ಕೆ ನಾಯಕಿಯಾಗಿದ್ದು ಹೇಗೆ?
ನಾನು ಒಂದು ಶಾರ್ಟ್ ಫಿಲಂ ಹಾಗೂ ಮತ್ತೂಂದು ಸಿನಿಮಾ ಮಾಡಿದ ನಂತರ “ದರ್ಬಾರ್’ ಸಿನಿಮಾದ ಕಡೆಯಿಂದ ಆಡಿಷನ್ ಕಾಲ್ ಬಂತು. ನಾನು ಕೂಡ ಆಡಿಷನ್ ಕೊಟ್ಟೆ. ನಿರ್ದೇಶಕ ವಿ. ಮನೋಹರ್ ಮತ್ತು ಚಿತ್ರತಂಡ ನನ್ನನ್ನು “ದರ್ಬಾರ್’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು.
“ದರ್ಬಾರ್’ ಸಿನಿಮಾದಲ್ಲಿ ನಿಮ್ಮ ಪಾತ್ರವೇನು?
ಇದೊಂದು ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ. ಈ ಸಿನಿಮಾದಲ್ಲಿ ನಾನು ಮಧ್ಯಮ ವರ್ಗದ ಕುಟುಂಬ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಜಾತ್ರೆ ನೋಡಲು ಪಕ್ಕದ ಊರಿಗೆ ಹೋಗುವ ಹುಡುಗಿಯೊಬ್ಬಳು ಅಲ್ಲೆ ಏನೇನು ಸನ್ನಿವೇಶಗಳನ್ನು ಎದುರಿಸುತ್ತಾಳೆ ಎನ್ನುವುದು ನನ್ನ ಪಾತ್ರ.
ವಿ. ಮನೋಹರ್ ಅವರಂಥ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ವಿ. ಮನೋಹರ್ ಸಿನಿಮಾರಂಗದಲ್ಲಿ ಸಾಕಷ್ಟು ಅನುಭವಿ. ಅವರ ಜೊತೆಗೆ ಕೆಲಸ ಮಾಡುವಾಗ ಕಲಿಯುವುದು ಸಾಕಷ್ಟು ಇತ್ತು. ಈ ಸಿನಿಮಾದಲ್ಲಿ ಕೂಡ ಕ್ಯಾಮರಾ ಎದುರಿಸುವುದರಿಂದ ಹಿಡಿದು, ಪಾತ್ರವೊಂದಕ್ಕೆ ಹೇಗೆ ತಯಾರಿ ಮಾಡಿಕೊಳ್ಳಬೇಕು, ಹೇಗೆ ಅಭಿನಯಿಸಬೇಕು ಎಂಬ ಅನೇಕ ವಿಷಯಗಳನ್ನು ಅವರಿಂದ ಕಲಿತುಕೊಂಡಿದ್ದೇನೆ.
ಟಾಪ್ ನ್ಯೂಸ್
