ಜ್ವಲಂತಂ ನಿರ್ದೇಶಕನ ಕಾಲಾಂತಕ

Team Udayavani, May 9, 2019, 3:00 AM IST

ಮಾರ್ಕಾಂಡೇಯ ಪುರಾಣದಲ್ಲಿ ಶಿವವನ್ನು “ಕಾಲಾಂತಕ’ ಎಂದು ಕರೆದಿರುವುದನ್ನು ಅನೇಕರು ಕೇಳಿರುತ್ತೀರಿ. ಈಗ ಇದೇ “ಕಾಲಾಂತಕ’ ಎನ್ನುವ ಹೆಸರನ್ನು ಇಟ್ಟುಕೊಂಡು ಕನ್ನಡದಲ್ಲಿ ಚಿತ್ರವೊಂದು ತೆರೆಗೆ ಬರುತ್ತಿದೆ. ಈ ಹಿಂದೆ “ಜ್ವಲಂತಂ’ ಎನ್ನುವ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದ ಅಂಬರೀಶ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಅಂದಹಾಗೆ ಸಸ್ಪೆನ್ಸ್‌ – ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಕಾಲಾಂತಕ’ ಚಿತ್ರ, ಈಗಾಗಲೇ ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಸದ್ಯ ಡಬ್ಬಿಂಗ್‌ ಹಂತದಲ್ಲಿದೆ. ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ “ಕಾಲಾಂತಕ’ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿದೆ.

ಇನ್ನು “ಕಾಲಾಂತಕ’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಅಂಬರೀಶ್‌, “ನಮ್ಮ ಜೀವನದಲ್ಲಿ ಅನೇಕ ಬಾರಿ ನಮಗೆ ಗೊತ್ತಿಲ್ಲದಂತೆ ಅನೇಕ ಸಣ್ಣ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಗೊತ್ತಿಲ್ಲದಂತೆ ಮಾಡಿದ ಅಂಥ ಕೆಲವು ತಪ್ಪುಗಳಿಗೆ ಕೆಲವೊಮ್ಮೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಕೊನೆಗೆ ಅದರಿಂದ ಏನಾಗುತ್ತದೆ ಅನ್ನೋದೆ ಚಿತ್ರದ ಎಳೆ.

ಎಲ್ಲರ ಜೀವನದಲ್ಲೂ ನಡೆಯುವ ಕೆಲ ಘಟನೆಗಳನ್ನೇ ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ. ಚಿತ್ರದಲ್ಲಿ ಯಾರೂ ಹೀರೋ ಅಂತಿಲ್ಲ. ಚಿತ್ರದ ಕಥೆ ಮತ್ತು ಚಿತ್ರಕಥೆಗಳೇ ಚಿತ್ರದ ನಿಜವಾದ ಹೀರೋ, ಹೀರೋಯಿನ್‌ ಎನ್ನಬಹುದು. ಅದು ಹೇಗೆ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು’ ಎನ್ನುತ್ತಾರೆ.

ಇನ್ನು ಕಳೆದ ಜನವರಿಯಲ್ಲಿ ಶುರುವಾದ “ಕಾಲಾಂತಕ’ ಚಿತ್ರವನ್ನು ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ಯಶ್ವಂತ್‌ ಶೆಟ್ಟಿ, ಕಾರ್ತಿಕ್‌ ಸಾಮಗ, ಅರ್ಚನಾ ಜೋಯಿಸ್‌, ಸುಶ್ಮಿತಾ ಜೋಷಿ, ಶ್ರೀಧರ್‌, ಧಮೇಂದ್ರ ಅರಸ್‌, ಪ್ರಕಾಶ್‌, ಕಡ್ಡಿಪುಡಿ ಚಂದ್ರು ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ದೃಶ್ಯಗಳಿಗೆ ಹಾಲೇಶ್‌ ಛಾಯಾಗ್ರಹಣ, ಹರೀಶ್‌ ಕೊಮ್ಮೆ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಕೇವಲ ಒಂದು ಹಾಡಿದ್ದು, ಅದಕ್ಕೆ ಫಿನ್ನಿ ಕುರಿಯನ್‌ ಸಂಗೀತ ಸಂಯೋಜಿಸಿದ್ದಾರೆ. “ಭಾಸ್ಕರ್‌ ಮೂವೀ ಲೈನ್ಸ್‌’ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಸದ್ಯ “ಕಾಲಾಂತಕ’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ನಿಧಾನವಾಗಿ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈ ತಿಂಗಳ ಕೊನೆಗೆ ಟೀಸರ್‌ ಲಾಂಚ್‌ ಮಾಡುವ ಪ್ಲಾನ್‌ ಹಾಕಿಕೊಂಡಿದೆ. “ಆಗಸ್ಟ್‌ ಮೊದಲ ವಾರದ ವೇಳೆಗೆ “ಕಾಲಾಂತಕ’ ಚಿತ್ರ ತೆರೆಗೆ ತರುವ ಯೋಚನೆ ಇದೆ” ಎನ್ನುತ್ತಾರೆ ನಿರ್ದೇಶಕ ಅಂಬರೀಶ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ