
ನಾಲ್ಕನೇ ವಾರಕ್ಕೆ ‘ಜರ್ಸಿ ನಂಬರ್ 10’
Team Udayavani, Jun 9, 2023, 4:28 PM IST

“ಜರ್ಸಿ ನಂಬರ್ 10′ ಎಂಬ ಸಿನಿಮಾವೊಂದು ಬಿಡುಗಡೆಯಾಗಿದ್ದು ನಿಮಗೆ ನೆನಪಿರಬಹುದು. ಈಗ ಆ ಚಿತ್ರ ಯಶಸ್ವಿ ಮೂರು ವಾರಗಳನ್ನು ಪೂರೈಸಿ 4ನೇವಾರಕ್ಕೆ ಮುನ್ನುಗ್ಗುತ್ತಿದೆ. ಈ ಸಿನಿಮಾ ಮೂಲಕ ಆದ್ಯ ತಿಮ್ಮಯ್ಯ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ. ಈ ಹಿಂದೆ ಮೂರ್‍ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಆದ್ಯಗೆ ಹೀರೋ ಆಗಿ “ಜರ್ಸಿ’ ಮೊದಲ ಸಿನಿಮಾ. ಆದ್ಯ ಕೂಡಾ ಹಾಕಿ ಆಟಗಾರರಾಗಿರುವುದರಿಂದ ಸಿನಿಮಾಕ್ಕೂ ಅದೇ ಕಥೆಯನ್ನು ಆಯ್ಕೆ ಮಾಡಿಕೊಂಡು ಈಗ ಗೆಲುವಿನ ನಗೆಬೀರಿದ್ದಾರೆ. ಈ ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಕೂಡಾ ಆದ್ಯ ಅವರದೇ.
ಚಿತ್ರದ ಬಗ್ಗೆ ಮಾತನಾಡುವ ಆದ್ಯ “ನನ್ನ ತಾಯಿ ಒಬ್ಬರು ಸರ್ಕಾರಿ ಶಾಲೆಯ ಶಿಕ್ಷಕಿ, ಅವರು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಗುರಿಯನ್ನು ಹೊಂದಬೇಕು, ಸಾಧನೆ ಅನ್ನುವುದರ ಕಡೆಗೆ ಹೆಚ್ಚು ಗಮನ ಕೊಡಬೇಕೆಂದು ಹೇಳುತ್ತಾ ಎಳೆಯ ವಯಸ್ಸಿನ ಮಕ್ಕಳಿಗೆ ಕನಸುನ್ನು ಕಾಣುವುದರ ಜೊತೆಗೆ ಸಾಧಿಸುವ ಕಿಚ್ಚನ್ನು ಹಚ್ಚಿದ್ದರು. ಅದರ ಫಲವಾಗಿ ನನ್ನಮ್ಮ ನನಗಾಗಿ ಒಂದು ಕಥೆಯನ್ನು ಸೃಷ್ಟಿ ಮಾಡಿ ಅದರೊಳಗೆ ನನ್ನನ್ನು ನಾಯಕನನ್ನಾಗಿ ಮಾಡಿ ಸಾಧನೆಯ ಗುರಿಯ ಬಗ್ಗೆ ಹೇಗೆಲ್ಲಾ ಇರಬೇಕು, ನಡೆಯಬೇಕೆಂದು ತಿಳಿಸಿದರ ಫಲವಾಗಿ ನಿಮ್ಮ ಮುಂದೆ ಈ ನಮ್ಮ ಜೆರ್ಸಿ ನಂ 10 ಸಿನಿಮಾ ಯಶಸ್ವಿಯಾಗಿ ನಿಂತಿದೆ. ಕನ್ನಡದ ಸಿನಿ ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ಎಂದಿಗೂ ಸೋಲಿಸುವುದಿಲ್ಲವೆಂಬುದಕ್ಕೆ ನಮ್ಮ ಪ್ರಯತ್ನದ ಸಿನಿಮಾ ತಾಜಾ ಉದಾಹರಣೆ. ನಮ್ಮ ಬ್ಯಾನರ್ ಅಡಿಯಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡುವ ಯೋಜನೆಗಳು ನಡೆಯುತ್ತಿವೆ’ ಎನ್ನುವುದು ಆದ್ಯ ಮಾತು.
ಚಿತ್ರದಲ್ಲಿ ಥ್ರಿಲ್ಲರ್ ಮಂಜು ಕೂಡಾ ಕೋಚ್ ಪಾತ್ರ ಮಾಡಿದ್ದು, ಭರ್ಜರಿಯಾದ ಫೈಟ್ ಸಂಯೋಜಿಸಿದ್ದಾರಂತೆ. ಉಳಿದಂತೆ ಹಿರಿಯ ನಟ ದತ್ತಣ್ಣ ಇಲ್ಲಿ ನಾಯಕನ ತಾತನ ಪಾತ್ರ ಮಾಡಿದ್ದಾರೆ. ಉಳಿದಂತೆ ಟೆನ್ನಿಸ್ ಕೃಷ್ಣ, ಮಂಡ್ಯ ರಮೇಶ್, ಚಂದನ್ ಆಚಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಟಾಪ್ ನ್ಯೂಸ್
