ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ..ಕನ್ನಡತಿಯ ವರಿಸಿದ ವರ ಯಾರು ?
Team Udayavani, May 31, 2021, 1:36 PM IST
ಬೆಂಗಳೂರು: ಕನ್ನಡದ ‘ಪೊರ್ಕಿ’ ಸಿನಿಮಾದಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಪ್ರಣಿತಾ ಸುಭಾಷ್ ಇದೀದ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರಾ?. ಲಾಕ್ ಡೌನ್ ಕಾರಣವಾಗಿ ಸಿಂಪಲ್ ಆಗಿ ಹಸೆಮಣೆ ಏರಿದ್ರಾ ಈ ಕನ್ನಡತಿ? ಇವರ ಮದುವೆಯ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದರಿಂದ ಈ ಮೇಲಿನ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಮೂಡಿವೆ.
ನಟಿ ಪ್ರಣಿತಾ ಸುಭಾಷ್ ಇತ್ತೀಚೆಗಷ್ಟೆ ಕನಕಪುರ ರಸ್ತೆಯ ರೆಸಾರ್ಟ್ ಒಂದರಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಉದ್ಯಮಿಯೊಬ್ಬರೊಂದಿಗೆ ವಿವಾಹವಾಗಿದ್ದಾರೆ. ಪ್ರಣಿತಾ ಮದುವೆಯಾಗಿರುವ ವ್ಯಕ್ತಿಯ ಹೆಸರು ನಿತಿನ್ ರಾಜು ಎನ್ನಲಾಗಿದ್ದು, ಬೆಂಗಳೂರಿನಲ್ಲಿ ಶಾಪಿಂಗ್ ಮಾಲ್ ಹೊಂದಿದ್ದು ಇತರೆ ಬ್ಯುಸಿನೆಸ್ಗಳನ್ನು ಸಹ ಅವರು ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆಯೇ ಪ್ರಣಿತಾ ಮದುವೆ ಸುದ್ದಿ ವೈರಲ್ ಆಗಿತ್ತು, ಆಗ ತಮ್ಮನ್ನು ಸಂಪರ್ಕಿಸಿದ್ದ ಮಾಧ್ಯಮದವರಿಗೆ ‘ನಾನು ಮದುವೆ ಆಗಿಲ್ಲ. ಹಾಗೇನಾದರೂ ಮದುವೆ ಆದರೆ ಖಂಡಿತ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ’ ಎಂದಿದ್ದರು. ಆದರೆ ಈಗ ಪ್ರಣಿತಾ ಮದುವೆ ಆಗಿರುವುದು ಖಾತ್ರಿಯಾಗಿದೆ. ಈ ಬಗ್ಗೆ ಪ್ರಣಿತಾ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ತಮ್ಮ ಮದುವೆ ವಿಷಯವನ್ನು ಬಹಳ ಗುಟ್ಟಾಗಿ ಇಡಬೇಕೆಂದು ಪ್ರಣಿತಾ ಯತ್ನಿಸಿದ್ದರು. ಆದರೆ ಮದುವೆಗೆ ಹಾಜರಾಗಿದ್ದ ಕುಟುಂಬ ಸದಸ್ಯರೊಬ್ಬರು ಮದುವೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗುಟ್ಟು ಬಹಿರಂಗವಾಗಿದೆ.