“ಸಲಗ” ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಐವರು ನಾಯಕರು
Team Udayavani, Oct 8, 2021, 2:43 PM IST
ಬೆಂಗಳೂರು: ಮೊದಲ ಬಾರಿಗೆ ನಟ ದುನಿಯಾ ವಿಜಯ್ ನಿರ್ದೇಶನ ಮಾಡಿ ಅಭಿನಯಿಸಿರುವ ಸಲಗ ಸಿನಿಮಾ ಬಿಡುಗಡೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಸಿನಿಮಾ ಬಿಡುಗಡೆ ಮುನ್ನ ಅದ್ಧೂರಿ ಕಾರ್ಯಕ್ರಮ ಆಯೋಜಿಸಿರುವ ಚಿತ್ರತಂಡ, ಅದಕ್ಕಾಗಿ ಅತಿಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ.
ಅಕ್ಟೋಬರ್ 14 ರಂದು ಸಲಗ ಸಿನಿಮಾ ಬೆಳ್ಳಿ ಪರದೆ ಮೇಲೆ ಮೊದಲ ಪ್ರದರ್ಶನ ಕಾಣಲಿದೆ. ಅಕ್ಟೋಬರ್ 10 ರಂದು ಚಿತ್ರತಂಡದಿಂದ ಪ್ರಿ-ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಘಟಾನುಘಟಿ ನಾಯಕರು ಭಾಗವಹಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೆಂಚ್ಯೂರಿ ಸ್ಟಾರ್ ಶಿವರಾಜಕುಮಾರ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಂದನವನದ ಬುದ್ಧಿವಂತ ಉಪೇಂದ್ರ ಅವರು ಸಲಗ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಲಿದ್ದಾರೆ. ಇತ್ತೀಚಿಗಷ್ಟೆ ಈ ಅತಿಥಿಗಳ ಮನೆಗೆ ತೆರಳಿದ ಚಿತ್ರತಂಡ ಕಾರ್ಯಕ್ರಮಕ್ಕೆ ಅಹ್ವಾನ ನೀಡಿದೆ.
#SALAGA Pre Release Event 10th
Oct 14th Release On Screens pic.twitter.com/OsPfvGWybA
— Duniya Vijay (@OfficialViji) October 8, 2021
ಈ ಸಿನಿಮಾದಲ್ಲಿ ದುನಿಯಾ ವಿಜಯ್ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಡಾಲಿ ಧನಂಜಯ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಎಲ್ಲ ಕಾರಣಗಳಿಂದಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ. ಕೆ.ಪಿ ಶ್ರೀಕಾಂತ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.