ಆರು ಎಪಿಸೋಡ್‌ಗಳಲ್ಲಿ “ಕ್ರಾಂತಿಪುರ’ ವೆಬ್‌ ಸೀರಿಸ್‌

Team Udayavani, Oct 14, 2019, 3:03 AM IST

ಇತ್ತೀಚೆಗೆ ಯಾವ ಸಿನಿಮಾಗಳಿಗೂ ಕಡಿಮೆಯಿಲ್ಲದೆ, ಪೈಪೋಟಿ ನೀಡುವಷ್ಟರ ಮಟ್ಟಿಗೆ ವೆಬ್‌ ಸೀರಿಸ್‌ಗಳು ಜನಪ್ರಿಯವಾಗುತ್ತಿವೆ. ಈಗಾಗಲೇ ಹಿಂದಿ, ತೆಲುಗು, ತಮಿಳಿನಲ್ಲಿ ವೆಬ್‌ ಸೀರಿಸ್‌ಗಳು ತಮ್ಮದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಯಶಸ್ವಿಯಾಗಿದ್ದು, ಬಹುದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಇಂಥ ವೆಬ್‌ ಸೀರಿಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ ಕನ್ನಡದಲ್ಲಿ ಮಾತ್ರ ಇನ್ನೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ವೆಬ್‌ ಸೀರಿಸ್‌ಗಳಿಗೆ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಿಲ್ಲ.

ಇವೆಲ್ಲದರ ನಡುವೆಯೂ ಇತ್ತೀಚೆಗೆ ಕನ್ನಡದಲ್ಲೂ ಅನೇಕ ಹೊಸ ಪ್ರತಿಭೆಗಳು ವೆಬ್‌ ಸೀರಿಸ್‌ನತ್ತ ಮುಖ ಮಾಡುತ್ತಿದ್ದು, ಒಂದಷ್ಟು ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ ಅನ್ನೋದೆ ಸಮಾಧಾನಕರ ಸಂಗತಿ. ಈಗ ಅಂಥದ್ದೇ ಹೊಸ ಪ್ರತಿಭೆಗಳ ಕೈಯಲ್ಲಿ “ಕ್ರಾಂತಿಪುರ’ ಎನ್ನುವ ಹೊಸ ವೆಬ್‌ ಸೀರಿಸ್‌ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ “ಕ್ರಾಂತಿಪುರ’ ವೆಬ್‌ ಸೀರೀಸ್‌ನ ಟ್ರೇಲರ್‌ ಮತ್ತು ಆಡಿಯೋ ಬಿಡುಗಡೆ ಸಮಾರಂಭ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆಯಿತು.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಎಂ. ಕೃಷ್ಣಪ್ಪ, ನಟಿ ಸುಮನ್‌ ನಗರ್‌ಕರ್‌, ಸುಕೃತಾ, ನಟರಾದ ಮಿತ್ರ, ಬೆನಕ ಪವನ್‌, ಪ್ರಥಮ್‌, ದೀಪಕ್‌ ಮೊದಲಾದವರು ಈ ಸಮಾರಂಭದಲ್ಲಿ ಹಾಜರಿದ್ದು “ಕ್ರಾಂತಿಪುರ’ ವೆಬ್‌ ಸೀರಿಸ್‌ನ ಟ್ರೇಲರ್‌ ಮತ್ತು ಹಾಡುಗಳನ್ನು ಹೊರತಂದು ಹೊಸಬರ ತಂಡಕ್ಕೆ ಶುಭ ಹಾರೈಸಿದರು. “ಜಿ.ಎಸ್‌ ಗೌಡ ಪೊ›ಡಕ್ಷನ್‌’ ಬ್ಯಾನರ್‌ನಲ್ಲಿ ಡಾ. ಜಿ ಸಂಜಯ್‌ ಗೌಡ “ಕ್ರಾಂತಿಪುರ’ ವೆಬ್‌ ಸೀರಿಸ್‌ ನಿರ್ಮಿಸುತ್ತಿದ್ದಾರೆ. ಗಿರೀಶ್‌ ಇದನ್ನು ನಿರ್ದೇಶಿಸುತ್ತಿದ್ದಾರೆ.

ರಾಜು ಛಾಯಾಗ್ರಹಣ, ಪ್ರಕಾಶ್‌ ಗೌಡ ಸಂಕಲನ ಕಾರ್ಯ ಈ ವೆಬ್‌ ಸೀರಿಸ್‌ಗಿದೆ. ಇನ್ನು “ಕ್ರಾಂತಿಪುರ’ ವೆಬ್‌ ಸೀರಿಸ್‌ನಲ್ಲಿ 6 ಎಪಿಸೋಡ್‌ಗಳಿದ್ದು, 2 ವಿಶೇಷ ಹಾಡುಗಳಿವೆ. ಸ್ಕಂದ ಕಶ್ಶಪ್‌ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು “ಕ್ರಾಂತಿಪುರ’ ವೆಬ್‌ ಸೀರಿಸ್‌ನ ಟೈಟಲ್‌ಗೆ “ಒಂದು ಕಿಚ್ಚಿನ ಕಥೆ’ ಎಂಬ ಟ್ಯಾಗ್‌ ಲೈನ್‌ ಇನ್ನು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ತೆರೆಗೆ ಬರುತ್ತಿದೆ. ಸದ್ಯ ಟ್ರೇಲರ್‌ ಮತ್ತು ಆಡಿಯೋ ಮೂಲಕ ಹೊರಬಂದಿರುವ “ಕ್ರಾಂತಿಪುರ’ ವೆಬ್‌ ಸೀರಿಸ್‌ ಇನ್ನೊಂದು ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ