ಮುಖ್ಯಮಂತ್ರಿಗಳಿಗೆ ಪತಿಬೇಕು.ಕಾಂ ತಂಡದ ಪತ್ರ
Team Udayavani, Aug 30, 2018, 11:19 AM IST
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜನತಾ ದರ್ಶನದಲ್ಲಿ ಬೇರೆ ಬೇರೆ ಊರುಗಳಿಂದ ಬರುವ ಜನ ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ. ಮಗಳ ಮದುವೆಗೆ ಸಹಾಯ ಮಾಡಿ ಎಂದು ಕೇಳುವುದರಿಂದ ಹಿಡಿದು ತಮ್ಮ ಬೇರೆ ಬೇರೆ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಇಂತಹ ಜಾಗದಲ್ಲಿ ತಮ್ಮ ಚಿತ್ರದ ಆಡಿಯೋ ಬಿಡುಗಡೆ ಮಾಡಿಸಬೇಕೆಂಬ ಆಸೆಯೊಂದಿಗೆ ಮುಖ್ಯಮಂತ್ರಿಯವರಿಗೆ ಚಿತ್ರತಂಡವೊಂದು ಪತ್ರ ಬರೆದಿದೆ. ಅದು “ಪತಿಬೇಕು.ಕಾಂ’.
ಹೌದು, “ಪತಿಬೇಕು.ಕಾಂ’ ಚಿತ್ರದ ನಿರ್ದೇಶಕ ರಾಕೇಶ್ ತಮ್ಮ ಚಿತ್ರದ ಹಾಡನ್ನು ಜನತಾ ದರ್ಶನದಲ್ಲಿ ಮುಖ್ಯಮಂತ್ರಿಯವರಿಂದ ಬಿಡುಗಡೆ ಮಾಡಿಸಬೇಕೆಂಬ ಆಸೆ ಹೊತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡುವ ನಿರ್ದೇಶಕ ರಾಕೇಶ್, “ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಮದುವೆ ಎನ್ನುವುದು ಆಸೆಯ ಜೊತೆಗೆ ಒಂದು ಮರೀಚಿಕೆ.
ಸಾಮಾನ್ಯರ ಕಥೆಯ ವಿಡಿಯೋ ಸಾಂಗ್ ಅನ್ನು ಸಾಮಾನ್ಯರಂತೆಯೇ ಯಾವುದೇ ಅದ್ಧೂರಿತನವಿಲ್ಲದೇ, ಜನತಾ ದರ್ಶನದಲ್ಲಿ ಜನ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಹಾಡನ್ನು ಬಿಡುಗಡೆ ಮಾಡಿಸಬೇಕು ಎಂಬ ಬಯಕೆ ಇದೆ’ ಎನ್ನುವುದು ನಿರ್ದೇಶಕ ರಾಕೇಶ್ ಮಾತು. ಈ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆಂಬ ವಿಶ್ವಾಸ ಕೂಡಾ ರಾಕೇಶ್ ಅವರಿಗಿದೆ.
ಶೀತಲ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ “ಪತಿಬೇಕು.ಕಾಂ’ ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಮದುವೆ ವಯಸ್ಸು ದಾಟಿದ ಹೆಣ್ಣಿಗೆ ಗಂಡು ಹುಡುಕೋದು ಎಷ್ಟು ಕಷ್ಟ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಹಾಗಂತ ಸಿನಿಮಾ ಸೀರಿಯಸ್ ಆಗಿ ಸಾಗುವುದಿಲ್ಲ. ತುಂಬಾ ಮಜವಾದ ಅಂಶಗಳೊಂದಿಗೆ ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ ರಾಕೇಶ್.