34 ಸಿನಿಮಾಗಳಲ್ಲಿ ಬಾಲನಟಿ; ಶ್ರೀದುರ್ಗಾ ಆ್ಯಕ್ಷನ್ ಕ್ವೀನ್ ಆದ ಹಿಂದಿದೆ ನೋವಿನ ಕಥೆ!

Team Udayavani, Nov 16, 2019, 5:18 PM IST

ಕನ್ನಡ ಚಿತ್ರರಂಗದಲ್ಲಿ 1980 ಮತ್ತು 1990ರ ದಶಕದಲ್ಲಿ ಹೀರೋಗಳಿಗೆ ಸರಿಸಮನಾಗಿ ಬೆಳೆದ ಈ ನಟಿ ಹೀರೋಯಿನ್ ಪಟ್ಟದ ಜತೆಗೆ ಆ್ಯಕ್ಷನ್ ಕ್ವೀನ್ ಎಂದೇ ಜನಪ್ರಿಯತೆ ಗಳಿಸಿದ ನಟಿ ಶ್ರೀದುರ್ಗಾ ಅಲಿಯಾಸ್ ಕನಸಿನ ರಾಣಿ ಮಾಲಾಶ್ರೀ. 1973ರಲ್ಲಿ ಚೆನ್ನೈನಲ್ಲಿ ತೆಲುಗು ಕುಟುಂಬದಲ್ಲಿ ಜನಿಸಿದ್ದ ಶ್ರೀದುರ್ಗಾ ಹೆಚ್ಚು ಜನಾನುರಾಗಿ ನಟಿಯಾಗಿ ಬೆಳೆದದ್ದು ಕನ್ನಡ ಸಿನಿಮಾರಂಗದಲ್ಲಿ ಎಂಬುದು ಹೆಗ್ಗಳಿಕೆ.

ಹೀರೋಯಿನ್, ಆ್ಯಕ್ಷನ್ ಕ್ವೀನ್ ಆಗೋ ಮೊದಲೇ ಫೇಮಸ್!

ನಟಿ ಮಾಲಾಶ್ರೀ ಬಗ್ಗೆ ನಮಗೆಲ್ಲ ಹೆಚ್ಚು ಪರಿಚಿತರಾದದ್ದು ನಂಜುಂಡಿ ಕಲ್ಯಾಣ ಸಿನಿಮಾದ “ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು” ಸಿನಿಮಾದ ಹಿಟ್ ಹಾಡಿನ ಮೂಲಕ. ಪಾರ್ವತಮ್ಮ ರಾಜ್ ಕುಮಾರ್ ತಮ್ಮ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಸಿನಿಮಾಕ್ಕೆ ಹೊಸ ಮುಖ ಹುಡುಕಾಟದಲ್ಲಿದ್ದಾಗ ಚಿ.ಉದಯ್ ಶಂಕರ್ ಅವರು ನಟಿ ಮಾಲಾಶ್ರೀಯನ್ನು ರಾಜ್ ಕುಟುಂಬಕ್ಕೆ ಪರಿಚಯಿಸಿದ್ದರು. ನಂಜುಂಡಿ ಕಲ್ಯಾಣ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಜತೆ ನಟಿಸಿದ್ದ ಮಾಲಾಶ್ರೀ ನಂತರ ಸಿನಿ ಪಯಣದಲ್ಲಿ ಹಿಂದಿರುಗಿ ನೋಡಲೇ ಇಲ್ಲ. ಈ ಸಿನಿಮಾದಲ್ಲಿ ನಟಿಸುವಾಗ ಶ್ರೀದುರ್ಗಾ ಹೆಸರನ್ನು ಬದಲಾಯಿಸಿ ಮಾಲಾಶ್ರೀ ಎಂದು ಬದಲಾಯಿಸಲಾಗಿತ್ತು.

ಕುತೂಹಲಕಾರಿ ವಿಷಯ ಏನೆಂದರೆ ಶ್ರೀದುರ್ಗಾ ಬಾಲ ನಟಿಯಾಗಿ 34 ಸಿನಿಮಾಗಳಲ್ಲಿ ಅಭಿನಯಿಸಿರುವುದು. ಇದರಲ್ಲಿಯೂ 26 ಚಿತ್ರಗಳಲ್ಲಿ ಶ್ರೀದುರ್ಗಾ ಹುಡುಗರ ಪಾತ್ರವನ್ನೇ ಮಾಡಿರುವುದು! 1979ರಲ್ಲಿ ಮುಖ್ತಾ ಶ್ರೀನಿವಾಸನ್ ನಿರ್ದೇಶನದ ಇಮಾಯಂ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ಬೇಬಿ ಜಮುನಾ ಬಾಲನಟಿಯಾಗಿ ಅಭಿನಯಿಸಿದ್ದಳು. ಶಿವಾಜಿಗಣೇಶನ್, ಶ್ರೀವಿದ್ಯಾ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದರು.

1979ರಲ್ಲಿ ತೆರೆಕಂಡ ಮತ್ತೊಂದು ತಮಿಳು ಸಿನಿಮಾ ನೀಲ ಮಲಾರ್ಗಳ್ ನಲ್ಲಿಯೂ ಬೇಬಿ ಶ್ರೀದುರ್ಗಾ ಅಭಿನಯಿಸಿದ್ದಳು. ಮಾಲಾಶ್ರೀ ತಾಯಿ ಕೂಡಾ ನಟಿಯಾಗಿದ್ದು, ಆಕೆ ಚಿತ್ರೀಕರಣಕ್ಕೆ ತೆರಳುವ ವೇಳೆ ಶ್ರೀದುರ್ಗಾಳನ್ನೂ ಜತೆಗೊಯ್ಯುತ್ತಿದ್ದರಂತೆ. ಆಗ ನಿರ್ದೇಶಕರು ಬಾಲನಟಿಯಾಗಿ ಸಿನಿಮಾದಲ್ಲಿ ನಟಿಸಲಿ ಎಂದು ತಾಯಿ ಬಳಿ ಹೇಳಿದ್ದರಂತೆ. ಹೀಗೆ ಶ್ರೀದುರ್ಗಾ ಸುಮಾರು  34 ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು.

1989ರಿಂದ ಬೆಳ್ಳಿಪರದೆ ಮೇಲೆ ಎರಡು ದಶಕಗಳ ಕಾಲ ಮಿಂಚಿದ್ದ ಮಾಲಾಶ್ರೀ;

1989ರಲ್ಲಿ ನಂಜುಂಡಿ ಕಲ್ಯಾಣದ ನಂತರ ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್ ನಡಿ ತಯಾರಾದ ಗಜಪತಿ ಗರ್ವಭಂಗ, ಮೃತ್ಯುಂಜಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಮಾಲಾಶ್ರೀ ಜನಪ್ರಿಯರಾಗಿದ್ದರು. ಹೃದಯ ಹಾಡಿತು ಸಿನಿಮಾವಂತೂ ಮಾಲಾಶ್ರೀಗೆ ದೊಡ್ಡ ಯಶಸ್ಸನ್ನೇ ತಂದುಕೊಟ್ಟಿತ್ತು. 1990ರಲ್ಲಿ ಬಿಡುಗಡೆಯಾದ ಎಸ್ ಪಿ ಭಾರ್ಗವಿ ಸಿನಿಮಾದಲ್ಲಿ ಮೊದಲ ಬಾರಿಗೆ ಪೊಲೀಸ್ ಪಾತ್ರ ನಿರ್ವಹಿಸುವ ಮೂಲಕ ಆ್ಯಕ್ಷನ್ ಕ್ವೀನ್ ಆಗಿ ಭಡ್ತಿ ಪಡೆದಿದ್ದರು. ನಂತರ ಚಾಮುಂಡಿ, ದುರ್ಗಿ, ಮರಣಮೃದಂಗ, ಕನ್ನಡದ ಕಿರಣ್ ಬೇಡಿ, ಶಕ್ತಿ, ವೀರಾ, ಗಂಗಾ, ಕಲಿಯುಗ ಸೀತೆ, ನಗರದಲ್ಲಿ ನಾಯಕರು ಹೀಗೆ ಹಲವಾರು ಚಿತ್ರಗಳಲ್ಲಿ ಸಾಹಸಮಯ ಪಾತ್ರದ ಮೂಲಕ ಎರಡು ದಶಕಗಳ ಕಾಲ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದರು.

ತಾಯಿಯ ಅಗಲಿಕೆ ನಂತರ ಪ್ರೀತಿಯ ಜೀವದ ಗೆಳೆಯ ಕಣ್ಣೆದುರೇ ಸಾವನ್ನಪ್ಪಿದ್ದ:

ತನ್ನ ನಟನೆಗೆ, ಬದುಕಿಗೆ ಪ್ರೇರಣೆಯಾಗಿದ್ದ ತಾಯಿ 1989ರಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸಿನಿ ಬದುಕಿನಲ್ಲಿ ಯಶಸ್ಸಿನ ಮೆಟ್ಟಿಲೇರುತ್ತಿದ್ದ ಸಂದರ್ಭದಲ್ಲಿಯೇ ಮಾಲಾಶ್ರೀಗೆ ಇದು ಆಘಾತವನ್ನೇ ತಂದೊಡ್ಡಿತ್ತು. ಅಂತೂ ಸಿನಿಮಾಲೋಕದಲ್ಲಿ ಅಭಿನಯಿಸುತ್ತಿದ್ದಾಗಲೇ ಸಿಕ್ಕ ಗೆಳೆಯ, ನಟ ಬಾರ್ಕೂರಿನ ಸುನಿಲ್. ಇಬ್ಬರೂ ಹಲವಾರು ಸಿನಿಮಾಗಳಲ್ಲಿ ಜತೆಯಾಗಿ ನಟಿಸುವ ಮೂಲಕ ಚಿತ್ರಪ್ರೇಮಿಗಳಿಗೆ ಮೋಡಿ ಮಾಡಿದ್ದರು. ಆದರೆ ವಿಧಿಬರಹ ಬೇರೆಯದ್ದೇ ಆಗಿತ್ತು, 1994ರ ಜುಲೈ 25ರಂದು ಮಾಲಾಶ್ರೀ ಹಾಗೂ ಸುನಿಲ್ ಕಾರಿನಲ್ಲಿ ಜತೆಯಾಗಿ ತೆರಳುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಸುನಿಲ್ ಸಾವನ್ನಪ್ಪಿದ್ದರು. ಮಾಲಾಶ್ರೀ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಕೆಲವು ದಿನಗಳ ನಂತರ ಚೇತರಿಸಿಕೊಂಡಿದ್ದರು. ಈ ಇಬ್ಬರೂ ವಿವಾಹವಾಗಬೇಕೆಂದು ನಿಶ್ಚಯಿಸಿದ್ದರು.

ನಂತರ ಲಾಕಪ್ ಡೆತ್, ಗೋಲಿಬಾರ್, ಕಲಾಸಿಪಾಳ್ಯದಂತಹ ಸಿನಿಮಾ ನಿರ್ಮಾಪಕರಾದ ರಾಮು ಅವರ ಜತೆ ಮಾಲಾಶ್ರೀ ಹಸೆಮಣೆ ಏರಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಾಲಾಶ್ರೀ ಸುಮಾರು ಮೂರ್ನಾಲ್ಕು ವರ್ಷಗಳ ಬ್ರೇಕ್ ನಂತರ ಪತಿ ರಾಮು ನಿರ್ಮಾಣದ ಚಾಮುಂಡಿ ಸಿನಿಮಾದಲ್ಲಿ ನಟಿಸುವುದರ ಜತೆಗೆ ರೀ ಎಂಟ್ರಿ ಪಡೆದಿದ್ದರು. ಅತ್ಯುತ್ತಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ಸ್ಟೇಟ್ ಫಿಲ್ಮ್ ಪ್ರಶಸ್ತಿ ಪಡೆದ ಮಾಲಾಶ್ರೀ ನಟನೆ ಇಂದಿಗೂ ಜನಮಾನಸದಲ್ಲಿ ಉಳಿದಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ