ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ “ನಿಷ್ಕರ್ಷ’
26 ವರ್ಷಗಳ ನಂತರ ರೀರಿಲೀಸ್
Team Udayavani, Aug 28, 2019, 3:02 AM IST
ಸಾಹಸಸಿಂಹ ವಿಷ್ಣುವರ್ಧನ್ ಚಿತ್ರ ಬದುಕಿನ ವಿಭಿನ್ನ ಚಿತ್ರಗಳಲ್ಲಿ “ನಿಷ್ಕರ್ಷ’ ಕೂಡ ಒಂದು. ಸಸ್ಪೆನ್ಸ್-ಥ್ರಿಲ್ಲರ್ ಮಾಂತ್ರಿಕ ಸುನೀಲ್ ಕುಮಾರ್ ದೇಸಾಯಿ ಮತ್ತು ವಿಷ್ಣುವರ್ಧನ್ ಅವರ ಕಾಂಬಿನೇಶನ್ನಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅನಂತ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರಕರ್, ರಮೇಶ್ ಭಟ್, ಪ್ರಕಾಶ್ ರಾಜ್, ಅವಿನಾಶ್ ಮೊದಲಾದವರು ಅಭಿನಯಿಸಿದ್ದ ಈ ಚಿತ್ರವನ್ನು ನಟ ಬಿ.ಸಿ.ಪಾಟೀಲ್ “ಸೃಷ್ಠಿ ಫಿಲಂಸ್’ ಮೂಲಕ ನಿರ್ಮಾಣ ಮಾಡಿದ್ದರು.
1993ರಲ್ಲಿ ತೆರೆಕಂಡಿದ್ದ ಈ ಚಿತ್ರ ಶತದಿನೋತ್ಸವ ಆಚರಿಸಿತ್ತು. ಅಲ್ಲದೆ ಹಲವು ಪ್ರಶಸ್ತಿಗಳನ್ನು ಸಹ ಬಾಜಿಕೊಂಡಿತ್ತು. ಅದೆಲ್ಲ ಸರಿ, ಈಗ ಯಾಕೆ ಈ “ನಿಷ್ಕರ್ಷ’ ಚಿತ್ರದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಹಾಲಿವುಡ್ನ “ಡೈ ಹಾರ್ಡ್’ ಚಿತ್ರದ ಪ್ರೇರಣೆಯಿಂದ ನಿರ್ಮಾಣವಾಗಿದ್ದ “ನಿಷ್ಕರ್ಷ’ ಚಿತ್ರ ಈಗ ಮತ್ತೆ ತೆರೆಗೆ ಬರುತ್ತಿದೆ. ಹೌದು, ಇದೇ ಸೆಪ್ಟೆಂಬರ್ 18ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಹುಟ್ಟುಹಬ್ಬವಿದ್ದು, ಅದೇ ಸಂದರ್ಭದಲ್ಲಿ “ನಿಷ್ಕರ್ಷ’ ಚಿತ್ರದ ನಟ ಕಂ ನಿರ್ಮಾಪಕ ಬಿ.ಸಿ ಪಾಟೀಲ್ ಚಿತ್ರವನ್ನು ಮತ್ತೂಮ್ಮೆ ತೆರೆಗೆ ತರಲು ಹೊರಟಿದ್ದಾರೆ.
ಸೆಪ್ಟೆಂಬರ್ 20ರಂದು “ನಿಷ್ಕರ್ಷ’ ಸಂಪೂರ್ಣ ಡಿಜಿಟಲ್ ಸ್ವರೂಪದಲ್ಲಿ ರೀ-ರಿಲೀಸ್ ಆಗುತ್ತಿದ್ದು, ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ತೆರೆಗೆ ತರುತ್ತಿದ್ದೇವೆ ಎನ್ನುತ್ತಾರೆ ಬಿ.ಸಿ ಪಾಟೀಲ್. ಇನ್ನು ರೀ-ರಿಲೀಸ್ ಆಗುತ್ತಿರುವ “ನಿಷ್ಕರ್ಷ’ ಚಿತ್ರದ ವಿತರಣೆಯ ಹೊಣೆಯನ್ನು ವಿತರಕ ಜಯಣ್ಣ ವಹಿಸಿಕೊಂಡಿದ್ದು, ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.