
ತೆರೆಗೆ ಬಂತು ನೈಜ ಘಟನೆಯ ಸುತ್ತ ‘ಪಿಂಕಿ ಎಲ್ಲಿ’?
Team Udayavani, Jun 2, 2023, 11:39 AM IST

ಈಗಾಗಲೇ ಅನೇಕ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿರುವ ಮತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ “ಪಿಂಕಿ ಎಲ್ಲಿ?’ ಚಿತ್ರ ಇಂದು (ಜೂ. 2) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಯುವ ನಿರ್ದೇಶಕ ಪೃಥ್ವಿ ಕೋಣನೂರು ನಿರ್ದೇಶನದಲ್ಲಿ ಮೂಡಿಬಂದಿರುವ “ಪಿಂಕಿ ಎಲ್ಲಿ?’ ಸಿನಿಮಾವನ್ನು ಕೃಷ್ಣೇಗೌಡ ನಿರ್ಮಿಸಿದ್ದಾರೆ. ಅಕ್ಷತಾ ಪಾಂಡವಪುರ, ದೀಪಕ್ ಸುಬ್ರಹ್ಮಣ್ಯ, ಪೃಥ್ವಿ, ಗುಂಜಲಮ್ಮ, ಸಂಗಮ್ಮ ಮುಂತಾದವರು “ಪಿಂಕಿ ಎಲ್ಲಿ?’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಬೆಂಗಳೂರಿನಲ್ಲಿ ನಡೆದಂತಹ ಕಾಣೆಯಾದ ಮಗುವಿನ ನೈಜಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಿದ್ದೇವೆ. ಮಗುವೊಂದು ಕಾಣೆಯಾಗಿದ್ದರೂ, ಈ ಕಥೆ ಮಗುವಿನ ಸುತ್ತ ಇರುವುದಿಲ್ಲ. ಮಗುವನ್ನು ಕಳೆದುಕೊಂಡವರ ಸುತ್ತ ಇರುತ್ತದೆ. ಸುಮಾರು 3 ವರ್ಷಗಳ ಹಿಂದೆ ಈ ಕಥೆಯನ್ನು ಸಿನಿಮಾ ಮಾಡುವ ಪ್ರಕ್ರಿಯೆ ಶುರುವಾಯ್ತು. ಈಗಾಗಲೇ “ಪಿಂಕಿ ಎಲ್ಲಿ?’ ಸಿನಿಮಾ ಅನೇಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆ ಮತ್ತು ಪ್ರಶಸ್ತಿ ಎರಡನ್ನೂ ಪಡೆದುಕೊಂಡಿದೆ. ಅಪರೂಪದ ಕಥೆ ಮತ್ತು ಒಂದು ಒಳ್ಳೆಯ ಸಂದೇಶ ಎರಡೂ ಸಿನಿಮಾದಲ್ಲಿದೆ. ಈಗ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಒಟ್ಟಾರೆ ಒಂದಷ್ಟು ನಿರೀಕ್ಷೆ ಮೂಡಿಸಿರುವ “ಪಿಂಕಿ ಎಲ್ಲಿ?’ ಸಿನಿಮಾ ಪ್ರೇಕ್ಷಕ ಪ್ರಭುಗಳು ಥಿಯೇಟರ್‌ನಲ್ಲಿ ಹೇಗೆ ಸ್ವೀಕರಿಸುತ್ತಾರೆ ಎಂಬುದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಟಾಪ್ ನ್ಯೂಸ್
