ಉಪೇಂದ್ರ ಚಿತ್ರಕ್ಕೆ ಸೋನಾಲ್‌ ನಾಯಕಿ

ಪಂಚತಂತ್ರ ಬೆಡಗಿ ಬಿಝಿ

Team Udayavani, May 16, 2019, 3:00 AM IST

ಯೋಗರಾಜ್‌ ಭಟ್ಟರ “ಪಂಚತಂತ್ರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸೋನಾಲ್‌ ಮೊಂತೆರೋ ಬಿಝಿಯಾಗುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಭಟ್ಟರ “ಗಾಳಿಪಟ’ ಚಿತ್ರಕ್ಕೂ ನಾಯಕಿಯಾಗಿರುವ ಸೋನಾಲ್‌ ಈಗ ಸದ್ದಿಲ್ಲದೇ, ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು ಉಪೇಂದ್ರ ನಾಯಕರಾಗಿರುವ ಸಿನಿಮಾ ಎಂಬುದು ವಿಶೇಷ.

ಹೌದು, ಉಪೇಂದ್ರ ನಾಯಕರಾಗಿರುವ ಹೊಸ ಸಿನಿಮಾದಲ್ಲಿ ಸೋನಾಲ್‌ ಮೊಂತೆರೋ ನಾಯಕಿಯಾಗಿದ್ದಾರೆ. ಎಲ್ಲಾ ಓಕೆ, ಯಾವ ಸಿನಿಮಾ ಎಂದು ನೀವು ಕೇಳಬಹುದು. “ಚಮಕ್‌’, “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಕ್ರಿಸ್ಟಲ್‌ ಪಾರ್ಕ್‌ನ ಟಿ.ಆರ್‌. ಚಂದ್ರಶೇಖರ್‌ ನಿರ್ಮಾಣದಲ್ಲಿ ಉಪೇಂದ್ರ ಅವರ ಸಿನಿಮಾವೊಂದು ತಯಾರಾಗಲಿದೆ ಎಂಬ ವಿಚಾರ ನಿಮಗೆ ಗೊತ್ತೇ ಇದೆ.

ಮೌರ್ಯ ಎನ್ನುವವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮವಾಗಬೇಕಿದೆ. ಈಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಸೋನಾಲ್‌ಗೆ ಉಪೇಂದ್ರ ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿದೆ. ಮಂಗಳೂರು ಮೂಲದ ಸೋನಾಲ್‌ ತುಳು ಚಿತ್ರದಲ್ಲೂ ನಟಿಸಿದ್ದಾರೆ.

ಜೊತೆಗೆ ಈಗಾಗಲೇ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿದ್ದು, “ಪಂಚತಂತ್ರ’ ಚಿತ್ರ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿತ್ತು. ಸದ್ಯ ಸೋನಾಲ್‌ ನಾಯಕಿಯಾಗಿರುವ “ಡೆಮೋ ಪೀಸ್‌’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಈ ನಡುವೆಯೇ ಹೊಸ ಸಿನಿಮಾದ ಅವಕಾಶ ಸೋನಾಲ್‌ಗೆ ಸಿಕ್ಕಿದೆ. ಹೊಸ ಚಿತ್ರ ಮೇ 27 ರಿಂದ ಆರಂಭವಾಗಲಿದ್ದು, ಉಪ್ಪಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರಕ್ಕೆ ಗುರುಕಿರಣ್‌ ಅವರ ಸಂಗೀತವಿದ್ದು, ಮತ್ತೂಮ್ಮೆ ಉಪ್ಪಿ-ಗುರು ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ