ಸಲಗಕ್ಕೆ ಟಿಣಿಂಗ ಮಿಣಿಂಗ ಟಿಶ್ಯಾ ಸೇರ್ಪಡೆ
Team Udayavani, Nov 15, 2021, 3:25 PM IST
ಸಲಗ’ ಚಿತ್ರದ “ಟಿಣಿಂಗ ಮಿಣಿಂಗ ಟಿಶ್ಯಾ’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ನಿಮಗೆ ಗೊತ್ತೇ ಇದೆ. ಚಿತ್ರದ ಪ್ರಮೋಶನಲ್ ಸಾಂಗ್ ಆಗಿದ್ದ ಇದನ್ನು ಚಿತ್ರದಲ್ಲಿ ಸೇರಿಸಿರಲಿಲ್ಲ. ಆದರೆ, ಈಗ ಚಿತ್ರತಂಡ ಹೊಸ ಹೆಜ್ಜೆ ಇಟ್ಟಿದ್ದು, ಈ ಹಾಡನ್ನು ಚಿತ್ರದಲ್ಲಿ ಸೇರಿಸಲು ನಿರ್ಧರಿಸಿದೆ.
ನ.19ರಿಂದ “ಸಲಗ’ ಚಿತ್ರಕ್ಕೆ ಈ ಹಾಡು ಸೇರಿಕೊಳ್ಳಲಿದೆ. ಈ ಮೂಲಕ “ಸಲಗ’ ಮತ್ತೆ ಮಾಸ್ ಆಡಿಯನ್ಸ್‌ಗೆ ಕಿಕ್ ಏರಿಸಲಿದೆ. “ಬೆಂಗಳೂರ್ ಸಾಹುಕಾರ್ ಮಾಲೀಕ್ ಮುಜೆ ಅಂದರ್ ಬುಲಾಯ… ದರ್ವಾಜ ಲಗಾಯಾ.. ಅಂದರ್ ಮಂಜೋ ಕೋ ಕೋ.. ಟಿಣಿಂಗ ಮಿಣಿಂಗ ಟಿಶ್ಯಾ….’ ಎಂದು ಆರಂಭವಾಗುವ ಈ ಹಾಡು ತಣ್ಣನೆಯ ಕಿಕ್ಕೇರಿಸಿತ್ತು.
ಈ ಹಾಡಿನ ಮತ್ತೂಂದು ವಿಶೇಷವೆಂದರೆ ಸಿದ್ಧಿ ಜನಾಂಗದವರನ್ನೇ ಈ ಹಾಡಿನಲ್ಲಿ ಬಳಸಿಕೊಳ್ಳಲಾಗಿದೆ. ಅಂದಹಾಗೆ, ಈ ಹಾಡು ಕೂಡಾ ಸಿದ್ಧಿ ಜನಾಂಗದವರಿಂದಲೇ ಹುಟ್ಟಿಕೊಂಡಿದೆ ಎನ್ನಬಹುದು.
ಚಿತ್ರೀಕರಣ ಮುಗಿಸಿ ದುನಿಯಾ ವಿಜಯ್ ಯಲ್ಲಾಪುರಕ್ಕೆ ಹೋಗಿದ್ದರಂತೆ. ಆ ವೇಳೆ ಸಿದ್ಧಿ ಜನಾಂಗದ ಮನೆಯೊಂದರಲ್ಲಿ ಈ ಹಾಡನ್ನು ಹಾಡುತ್ತಿದ್ದರಂತೆ. ಆಗಲೇ ಈ ಹಾಡನ್ನು ರೆಕಾರ್ಡ್ ಮಾಡಿಕೊಂಡು ಬಂದು ಸಂಗೀತ ನಿರ್ದೇಶಕ ಚರಣ್ ರಾಜ್ ಅವರಿಗೆ ನೀಡಿದರಂತೆ ವಿಜಿ. ಚರಣ್ ಅದಕ್ಕೆ ಸಿನಿಮಾ ಟಚ್ ಕೊಟ್ಟು, ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಚಿತ್ರತಂಡ ಈಗ ಪ್ರಮೋಶನಲ್ ಸಾಂಗ್ ಆಗಿ ಬಿಟ್ಟಿದ್ದು, ಸಖತ್ ವೈರಲ್ ಆಗಿತ್ತು.ಈಗ ಚಿತ್ರದಲ್ಲೂ ಈ ಹಾಡು ಸೇರಿಕೊಳ್ಳುತ್ತಿದೆ. ಹಾಡನ್ನು ಗಿರಿಜಾ ಸಿದ್ಧಿ, ಗೀತಾ ಸಿದ್ಧಿ ಹಾಗೂ ಚನ್ನಕೇಶವ ಅವರು ಹಾಡಿದ್ದಾರೆ. ವಿಜಯ್, ನಟನೆ, ನಿರ್ದೇಶನದ ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸಿದ್ದಾರೆ.