ರಾಜ್ ಕಪೂರ್ ಐತಿಹಾಸಿಕ R K ಸ್ಟುಡಿಯೋ ಇನ್ನು ನೆನಪು ಮಾತ್ರ; ಜಿಪಿಎಲ್ ಗೆ ಮಾರಾಟ!

Team Udayavani, May 4, 2019, 2:07 PM IST

ಮುಂಬೈ: ಬಾಲಿವುಡ್ ದಂತಕತೆ, ಬಾಲಿವುಡ್ ಶೋ ಮ್ಯಾನ್ ಎಂದೇ ಖ್ಯಾತಿ ಗಳಿಸಿದ್ದ ನಟ.ದಿ.ರಾಜ್ ಕಪೂರ್ ಅಂದು ಹುಟ್ಟುಹಾಕಿದ್ದ ಪ್ರಸಿದ್ಧ ಆರ್ ಕೆ ಸ್ಟುಡಿಯೋಸ್ ಇದೀಗ ಗೋದ್ರೆಜ್ ಪ್ರಾಪರ್ಟಿಸ್ ಲಿಮಿಟೆಡ್ (ಜಿಪಿಎಲ್) ತೆಕ್ಕೆಗೆ ಸೇರ್ಪಡೆಗೊಂಡಿದೆ. ಮುಂಬೈನ ಚೆಂಬೂರ್ ನಲ್ಲಿರುವ ಆರ್ ಕೆ ಸ್ಟುಡಿಯೋಸ್ ಅನ್ನು ರಾಜ್ ಕಪೂರ್ ಸ್ಥಾಪಿಸಿದ್ದು, ಇದಕ್ಕೆ ಈಗ ರಾಜ್ ಕಪೂರ್ ಮಕ್ಕಳು ವಾರಿಸುದಾರರಾಗಿದ್ದಾರೆ.

2017ರಲ್ಲಿ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತ್ತು. ಇದರಿಂದಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಹೀಗಾಗಿ ಸ್ಟುಡಿಯೋವನ್ನು ಮತ್ತೆ ಪುನರ್ ನಿರ್ಮಾಣ ಮಾಡುವುದರಿಂದ ಆರ್ಥಿಕವಾಗಿ ಹೆಚ್ಚು ಲಾಭವಿಲ್ಲ ಎಂಬುದನ್ನು ಮನಗಂಡ ಕಪೂರ್ ಸಹೋದರರು ಆರ್ ಕೆ ಸ್ಟುಡಿಯೋ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದರು.

1970, 1980ರ ದಶಕದಲ್ಲಿ ಆರ್ ಕೆ ಫಿಲ್ಮ್ ಬ್ಯಾನರ್ ನಡಿ ಆರ್ ಕೆ ಸ್ಟುಡಿಯೋದಲ್ಲಿ ನೂರಾರು ಸಿನಿಮಾಗಳ ಚಿತ್ರೀಕರಣ ನಡೆದಿತ್ತು. ಮಾಧ್ಯಮಗಳ ವರದಿ ಪ್ರಕಾರ, ಆರ್ ಕೆ ಸ್ಟುಡಿಯೋ ಸುಮಾರು 2.2 ಎಕರೆ ಜಾಗವನ್ನೊಳಗೊಂಡಿದೆ. ಈ ಸ್ಥಳದಲ್ಲಿ ಬೃಹತ್ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಿರುವುದಾಗಿ ಜಿಪಿಎಲ್ ಹೇಳಿದೆ.

ಆರ್ ಕೆ ಸ್ಟುಡಿಯೋವನ್ನು ಗೋದ್ರಜ್ ಕಂಪನಿ ಎಷ್ಟು ಮೊತ್ತಕ್ಕೆ ಖರೀದಿಸಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. 33,000 ಚದರ ಅಡಿ ಜಾಗದಲ್ಲಿ ಮಾರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆಧುನಿಕ ರೆಸಿಡೆನ್ಶಿಯಲ್ ಅಪಾರ್ಟ್ ಮೆಂಟ್ಸ್ ನಿರ್ಮಿಸುವ ಇರಾದೆಯೂ ಇದೆ ಎಂದು ಗೋದ್ರೆಜ್ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ