ಶಾಲೆಯ ಮೆಟ್ಟಿಲೇರದ “ವಡಿವೇಲು” ಎಂಬ ಕಾಮಿಡಿ ಕಿಂಗ್ ನಟನ ಏಳು-ಬೀಳಿನ ಜೀವನಗಾಥೆ

ನಾಗೇಂದ್ರ ತ್ರಾಸಿ, Sep 14, 2019, 6:29 PM IST

ಬಹುತೇಕ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ, ಸಿನಿಮಾದ ಕುರಿತು ಮಾತನಾಡುವಾಗ ನಮಗೆ ಥಟ್ಟನೆ ಒಂದಿಷ್ಟು ನೆನಪು, ನಮ್ಮ ಮನಸ್ಸಿನಾಳದಲ್ಲಿ ಅಚ್ಚಳಿಯದೇ ಉಳಿದ ನಟರ ಚಿತ್ರಗಳು ಕಣ್ಮುಂದೆ ಹಾದು ಬರುತ್ತದೆ. ಹೀಗೆ ತಮಿಳು ಸಿನಿಮಾ, ತಮಿಳು ಚಿತ್ರರಂಗವೆಂದ ಕೂಡಲೇ ರಜನಿಕಾಂತ್ ಹೆಸರು ಮುಂಚೂಣಿಯಲ್ಲಿರುತ್ತದೆ. ಆದರೆ ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಎಷ್ಟು ಪ್ರಭಾವಿಯೋ ಹಾಸ್ಯ ನಟ ವಡಿವೇಲು ಕೂಡಾ ಹೆಚ್ಚು ಜನಪ್ರಿಯ ನಟರಾಗಿ ಬೆಳೆದಿರುವುದು ಸುಳ್ಳಲ್ಲ. ಹೌದು ತಮಿಳು ಚಿತ್ರರಂಗದಲ್ಲಿ ಗೌಂಡಮಣಿ ಹಾಸ್ಯ ನಟರಾಗಿ ಜನಪ್ರಿಯರಾಗಿದ್ದರು. 1990ರ ಬಳಿಕ ಹೆಚ್ಚು, ಹೆಚ್ಚು ಪ್ರೇಕ್ಷಕರನ್ನು ಸೆಳೆದ ಖ್ಯಾತಿ ವಡಿವೇಲು ಅವರದ್ದು!

ತಮಿಳು ಸಿನಿಮಾರಂಗದಲ್ಲಿ ಬರೋಬ್ಬರಿ ಮೂರು ದಶಕಗಳ ಸುದೀರ್ಘ ಕಾಲ ವಿವಿಧ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ವಡಿವೇಲು ಎಂಬ ಹಾಸ್ಯ ನಟ ಹೀರೋಗಿಂತಲೂ ಹೆಚ್ಚು ಬೇಡಿಕೆಯನ್ನು ಗಳಿಸಿಕೊಂಡಿದ್ದರು ಎಂಬುದು ಹೆಗ್ಗಳಿಕೆ. 90ರ ದಶಕಕ್ಕೂ ಮುನ್ನ ತಾಯ್ ನಾಗೇಶ್, ಗೌಂಡಮಣಿ, ದಾಮು, ಬಾಲಯ್ಯ, ಎನ್ ಎಸ್ ಕಾಳಿವನ್ನಾರ್, ತಂಗವೇಲು, ಸುರುಳಿ ರಾಜನ್, ಜಾನಕಿರಾಜ್, ಸೆಂಥಿಲ್ ಜೋಡಿ, ವಿವೇಕ್ ಹೀಗೆ ಹಲವು ಘಟಾನುಘಟಿ ಹಾಸ್ಯ ದಿಗ್ಗಜರಿದ್ದರು. 1990ರ ದಶಕದಿಂದ ಈವರೆಗೂ ಬಹುಬೇಡಿಕೆಯ ಹಾಸ್ಯ ನಟರಾಗಿ ಉಳಿದಿರುವುದು ವಡಿವೇಲು ನಟನೆಯ ಪ್ರತಿಭೆಗೆ ಸಿಕ್ಕ ಗೌರವವಾಗಿದೆ.

ಶಾಲೆಯ ಮೆಟ್ಟಿಲೇ ಏರದ ಹುಡುಗ ವಡಿವೇಲು:

ತಮಿಳುನಾಡಿನ ಮದುರೈನ ಕುಮಾರವಾದಿವೆಲ್ ನಲ್ಲಿ 1960ರ ಅಕ್ಟೋಬರ್ 10ರಂದು ವಡಿವೇಲು ಜನಿಸಿದ್ದರು. ನಟರಾಜನ್ ಮತ್ತು ಸರೋಜಿನಿ ತಂದೆ, ತಾಯಿ. ತಂದೆಯ ಪುಟ್ಟ ಗ್ಲಾಸ್ ಕಟ್ಟಿಂಗ್ ವ್ಯವಹಾರದಲ್ಲಿ  ಬಾಲಕ ವಡಿವೇಲು ತೊಡಗಿಕೊಂಡಿದ್ದ. ಇದರಿಂದಾಗಿ ಪ್ರಾಥಮಿಕ ಶಿಕ್ಷಣವೂ ವಡಿವೇಲು ಪಡೆಯಲಿಲ್ಲವಾಗಿತ್ತು. ತಂದೆಯ ನಿಧನದ ನಂತರ ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿತ್ತು. ಆಗ ವಡಿವೇಲು ಸಹೋದರರು ತಂದೆಯ ವ್ಯವಹಾರವನ್ನು ಮುಂದುವರಿಸಿದ್ದರು. ಹೀಗೆ ಸಮಯ ಸಿಕ್ಕಗಾಗಲೆಲ್ಲ ವಡಿವೇಲು ನಾಟಕದತ್ತ ಮುಖಮಾಡುತ್ತಿದ್ದರು…ಅಲ್ಲಿಯೂ ವಡಿವೇಲು ಗುರುತಿಸಿಕೊಂಡಿದ್ದು ಹಾಸ್ಯದ ಮೂಲಕ.

ರೈಲಿನಲ್ಲಿ ರಾಜ್ ಕಿರಣ್ ಭೇಟಿ ಟರ್ನಿಂಗ್ ಪಾಯಿಂಟ್:

ಒಮ್ಮೆ ರೈಲಿನಲ್ಲಿ ವಡಿವೇಲುಗೆ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ರಾಜ್ ಕಿರಣ್ ಅವರನ್ನು ಭೇಟಿ ಮಾಡಿದ್ದ. ನಾಟಕದಲ್ಲಿನ ಪಾತ್ರ, ತನಗೆ ನಟಿಸಬೇಕೆಂಬ ಇರುವ ಆಸೆ ಬಗ್ಗೆ ವಡಿವೇಲು ಹೇಳಿಕೊಂಡಿದ್ದರು. ಕೆಲವು ಸಮಯದ ನಂತರ ರಾಜ್ ಕಿರಣ್ ವಡಿವೇಲುಗೆ ತನ್ನ ಮುಂದಿನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವುದಾಗಿ ಸಂದೇಶ ಕಳುಹಿಸಿಬಿಟ್ಟಿದ್ದರು! 1988ರಲ್ಲಿ ಕಸ್ತೂರಿ ರಾಜಾ ನಿರ್ದೇಶಿಸಿದ, ರಾಜ್ ಕಿರಣ್ ನಿರ್ಮಾಣದ ಎನ್ ರಾಸಾವಿನ್ ಮನಸಿಲ್ಲೈ ಎಂಬ ತಮಿಳು ಚಿತ್ರದಲ್ಲಿ ವಡಿವೇಲುಗೆ ಚಿಕ್ಕ ಪಾತ್ರದಲ್ಲಿ ನಟಿಸಲು ಅವಕಾಶ ದೊರಕಿತ್ತು. ಬಳಿಕ 1988ರಲ್ಲಿ ಟಿ.ರಾಜೇಂದರ್ ನಿರ್ದೇಶನದ ಎನ್ ತಂಗೈ ಕಲ್ಯಾಣಿ ಸಿನಿಮಾದಲ್ಲೂ ಅವಕಾಶ ಸಿಕ್ಕಿತ್ತು.

ಆದರೆ ಆರಂಭದ ಕೆಲವು ವರ್ಷಗಳು ವಡಿವೇಲುಗೆ ಯಶಸ್ಸಿನ ಮೆಟ್ಟಿಲೇರಲು ಕಷ್ಟವಾಗಿತ್ತು. ಯಾಕೆಂದರೆ ಅಂದು ಗೌಂಡಮಣಿ ಮತ್ತು ಸೆಂಥಿಲ್ ಖ್ಯಾತ ಹಾಸ್ಯ ನಟರಾಗಿದ್ದರು. ಹೀಗಾಗಿ ವಡಿವೇಲುಗೆ ಕಡಿಮೆ ಅವಕಾಶ ದೊರಕುವಂತಾಗಿತ್ತು. 1992ರಲ್ಲಿ ಕಮಲ್ ಹಾಸನ್ ನಟನೆಯ ದೇವರ್ ಮಗನ್ ಸಿನಿಮಾದಲ್ಲಿ ವಡಿವೇಲುಗೊಂದು ಅವಕಾಶ ಸಿಕ್ಕಿತ್ತು. ಬಳಿಕ ಕಮಲ್ ಹಾಸನ್ ನಿರ್ದೇಶನದ ಸಿಂಗಾರಾ ವೇಲನ್ ಚಿತ್ರದಲ್ಲಿ ವಡಿವೇಲುಗೆ ಹಾಸ್ಯ ಪಾತ್ರ ಸಿಕ್ಕಿತ್ತು. ಈ ಸಿನಿಮಾದಿಂದ ಪ್ರೇಕ್ಷಕರ ಮನ ಗೆದ್ದಿದ್ದರು.

1994ರಲ್ಲಿ ಎಸ್.ಶಂಕರ್ ನಿರ್ದೇಶನದ ಕಾದಲನ್ ಸಿನಿಮಾ ವಡಿವೇಲುಗೆ ಹೆಚ್ಚು ಜನಪ್ರಿಯವಾಗಲು ಕಾರಣವಾಯ್ತು. ಒಂದರ ಹಿಂದೆ ಒಂದರಂತೆ ವಡಿವೇಲು ಸಿನಿಮಾಗಳು ಹಿಟ್ ಆಗತೊಡಗಿದ್ದವು. ಗೌಂಡಮಣಿ, ಸೆಂಥಿಲ್ ಕಮಲ್ ಹಾಸನ್, ರಜನಿಕಾಂತ್ ರಂತಹ ಹೀರೋಗಳಿಗೆ ಹಾಸ್ಯ ನಟರಾಗಲು ಸೀಮಿತರಾದರು. 90ರ ದಶಕದ ನಂತರ ಅಜಿತ್, ವಿಜಯ್, ಸೂರ್ಯ, ಮಾಧವ್ ಅವರಂತಹ ಹೀರೋಗಳಿಗೆ ವಡಿವೇಲು ಜೊತೆಯಾಗುವ ಮೂಲಕ ಹಾಸ್ಯ ನಟ ವಿವೇಕ್ ಗೆ ಸಡ್ಡುಹೊಡೆದುಬಿಟ್ಟಿದ್ದರು. ತಮ್ಮ ವಿಭಿನ್ನ ಹಾಸ್ಯ ನಟನೆ ಮೂಲಕ ವಡಿವೇಲು ಸ್ಟಾರ್ ಆಗಿಬಿಟ್ಟಿದ್ದರು. 1988ರಿಂದ 2015ರವರೆಗೆ ವಡಿವೇಲು ಬಿಡುವಿಲ್ಲದ ಬಹುಬೇಡಿಕೆಯ ನಟರಾಗಿದ್ದರು.

2000ನೇ ಇಸವಿ ವೇಳೆಗೆ ವಡಿವೇಲು ಪ್ರಶ್ನಾತೀತ ಕಾಮಿಡಿ ಕಿಂಗ್ ಆಗಿ ಬೆಳೆದುಬಿಟ್ಟಿದ್ದರು. ವರ್ಷಕ್ಕೆ 15-20 ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಕೆಲವೊಮ್ಮೆ ವಡಿವೇಲು ಹಾಸ್ಯ ಅಶ್ಲೀಲ ಮತ್ತು ಅಪಾಯಕಾರಿಯಾಗಿರುತ್ತಿತ್ತು ಎಂಬ ಆರೋಪವೂ ಬಂದಿತ್ತು.ಆದರೆ ಗೌಂಡಮಣಿ, ಸೆಂಥಿಲ್ ಹಾಗೂ ವಡಿವೇಲು ಸ್ಕ್ರಿಫ್ಟ್ ಇಲ್ಲದೆಯೇ ಸಿನಿಮಾಗಳಲ್ಲಿ ಡೈಲಾಗ್ ಹೊಡೆಯುವ ಮೂಲಕ ಸೂಪರ್ ಹಿಟ್ ಆಗಿದ್ದವಂತೆ!

2008ರಿಂದ 2018ರವರೆಗೆ ವಿವಾದಗಳ ಸುಳಿಯಲ್ಲಿ:

ತಮಿಳಿನ ಖ್ಯಾತ ನಟ ಕ್ಯಾ.ವಿಜಯ್ ಕಾಂತ್ ಜತೆಗೆ ವಡಿವೇಲು ಜಿದ್ದಿಗೆ ಬಿದ್ದುಬಿಟ್ಟಿದ್ದರು. ಇಬ್ಬರ ಜಗಳ ಕೋರ್ಟ್ ಕಟಕಟೆಗೂ ಹೋಗಿತ್ತು. 2008ರಲ್ಲಿ ಚೆನ್ನೈನ ಸಾಲಿಗ್ರಾಮದಲ್ಲಿ ವಡಿವೇಲು ಮನೆ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿತ್ತು. ಅಂದು ವಡಿವೇಲುವನ್ನು ಮನೆಯೊಳಗೆ ಕೂಡಿಹಾಕಿ ರಕ್ಷಿಸಲಾಗಿತ್ತು. 2010ರಲ್ಲಿ ನಟ ಸಿಂಗಮುತ್ತು ಹಣ ವಂಚನೆ ನಡೆಸಿರುವುದಾಗಿ ಆರೋಪಿಸಿದ್ದರು. ಈ ಪ್ರಕರಣವೂ ಕೋರ್ಟ್ ಮೆಟ್ಟಿಲೇರಿತ್ತು. 2011ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಕಾಂತ್ ವಿರುದ್ಧ ವಡಿವೇಲು ಚುನಾವಣಾ ಪ್ರಚಾರ ನಡೆಸಿದ್ದರು.

2018ರಲ್ಲಿ ಚಿಂಬು ದೇವನ್ ನಿರ್ದೇಶನದ ಇಮ್ಸಾಯಿ ಅರಸನ್ 24ನೇ ಪುಲಿಕೇಶಿ ಸಿನಿಮಾದಲ್ಲಿ ನಟಿಸಲು ವಡಿವೇಲು ಒಪ್ಪಿಕೊಂಡಿದ್ದು, ವಸ್ತ್ರ ವಿನ್ಯಾಸಕಾರನ ವಿಷಯದಲ್ಲಿ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ಹೇಳಿ ಹೊರಬಂದಿದ್ದರು. ಈ ಸಿನಿಮಾದ ನಿರ್ಮಾಪಕ ಎಸ್.ಶಂಕರ್ ರಾಜೀ ಸಂಧಾನಕ್ಕೆ ಪ್ರಯತ್ನಿಸಿದ್ದರೂ ವಡಿವೇಲು ಒಪ್ಪಿರಲಿಲ್ಲವಾಗಿತ್ತು. ಕೊನೆಗೆ ವಡಿವೇಲು ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮಿಳು ಸಿನಿಮಾ ನಿರ್ಮಾಪಕರ ಮಂಡಳಿ ವಡಿವೇಲುಗೆ ಚಿತ್ರದಲ್ಲಿ ಅವಕಾಶ ನೀಡಬಾರದು ಎಂದು ಸೂಚಿಸಿ ನಿಷೇಧ ಹೇರಿತ್ತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ