ಅಯೋಗ್ಯನ ಪ್ರೀತಿ ಪಂಚಾಯ್ತಿ

Team Udayavani, Aug 19, 2018, 11:25 AM IST

ನಾನು ಗ್ರಾಮ ಪಂಚಾಯ್ತಿ ಸದಸ್ಯ ಆಗಬೇಕು. ಹಾಗಂತ ಬಾಲ್ಯದಲ್ಲೇ ತೀರ್ಮಾನಿಸಿಬಿಟ್ಟಿರುತ್ತಾನೆ ಸಿದ್ಧೇಗೌಡ. ಅದಕ್ಕೆ ಕಾರಣ ತನ್ನ ತಾಯಿಗೆ ಗ್ರಾಮ ಪಂಚಾಯ್ತಿ ಬಚ್ಚೇಗೌಡನೆಂಬ ದುಷ್ಟ ವ್ಯಾಘ್ರ ಅವಮಾನ ಮಾಡಿರುತ್ತಾನೆ. ಇದರಿಂದ ಸಿಟ್ಟಾಗುವ ಸಿದ್ಧೇಗೌಡ, ಆಗಲೇ ಗ್ರಾಮ ಪಂಚಾಯ್ತಿ ಸದಸ್ಯನಾಗುವುದಕ್ಕೆ ನಾಮಪತ್ರ ಸಲ್ಲಿಸುವುದಕ್ಕೆ ಹೊರಟಿರುತ್ತಾನೆ. ಬಚ್ಚೇಗೌಡರ ಕಡೆಯಿಂದ ಇನ್ನಷ್ಟು ಅವಮಾನಗಳಾದ ಮೇಲೆ, ಅವನ ನಿರ್ಧಾರ ಇನ್ನಷ್ಟು ಗಟ್ಟಿಯಾಗುತ್ತದೆ.

ಅಲ್ಲಿಂದ ಅವನ ಜೀವನದ ಏಕೈಕ ಉದ್ದೇಶ ಗ್ರಾಮ ಪಂಚಾಯ್ತಿ ಸದಸ್ಯನಾಗುವುದು. ಬಚ್ಚೇಗೌಡರೆಂಬ ಬಚ್ಚೇಗೌಡರ ವಿರುದ್ಧ ಸಿದ್ಧೇಗೌಡ ಗೆದ್ದು, ಹೇಗೆ ಗ್ರಾಮ ಪಂಚಾಯ್ತಿ ಸದಸ್ಯನಾಗುತ್ತಾನೆ? ಇದು “ಅಯೋಗ್ಯ’ ಚಿತ್ರದ ಒನ್‌ಲೈನರ್‌. ಈ ಕಥೆಗೂ, “ಅಯೋಗ್ಯ’ ಎಂಬ ಟೈಟಲ್‌ಗ‌ೂ ಏನು ಸಂಬಂಧ ಅಂತ ಕೇಳಬಹುದು. ಮಜ ಇರೋದೇ ಇಲ್ಲಿ. ಗ್ರಾಮ ಪಂಚಾಯ್ತಿ ಸದಸ್ಯನಾಗೋಕೆ ತೊಡೆ ತಟ್ಟಿನಿಂತಿರುವ ಸಿದ್ಧೇಗೌಡನೇ ಈ ಚಿತ್ರದ ಕಥಾನಾಯಕ.

ಬಾಲ್ಯದಿಂದಲೂ ಅಯೋಗ್ಯ ಎಂದು ಗುರುತಿಸಿಕೊಂಡಿರುವ ಆತನಿಗೆ ಗ್ರಾಮ ಪಂಚಾಯ್ತಿ ಸದಸ್ಯನೆನಿಸಿಕೊಳ್ಳುವುದರ ಜೊತೆಗೆ, ಯೋಗ್ಯ ಎಂದನಿಸಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಇವೆರೆಡನ್ನೂ ಆತ ಪರಾಕ್ರಮ, ಬಿಲ್ಡಪ್ಪು, ಬುದ್ಧಿಶಕ್ತಿಯಿಂದ ಹೇಗೆ ಸಾಧಿಸುತ್ತಾನೆ ಎಂಬುದನ್ನು ಮಜವಾಗಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಮಹೇಶ್‌ ಕುಮಾರ್‌ ಮಾಡಿದ್ದಾರೆ. “ಅಯೋಗ್ಯ’ ಒಂದು ಅಪ್ಪಟ ಗ್ರಾಮೀಣ ಚಿತ್ರ.

ಅಲ್ಲಿನ ಪರಿಸರ, ರಾಜಕೀಯ, ಸಮಸ್ಯೆಗಳನ್ನೆಲ್ಲಾ ಇಟ್ಟುಕೊಂಡು ಒಂದು ಮನರಂಜನಾತ್ಮಕ ಚಿತ್ರವನ್ನು ಕೊಟ್ಟಿದ್ದಾರೆ ಮಹೇಶ್‌. ಹಿನ್ನೆಲೆಯಲ್ಲಿ ಹಳ್ಳಿಯ ರಾಜಕೀಯ ಮತ್ತು ಸಮಸ್ಯೆಗಳಿದ್ದರೂ, ಮುನ್ನೆಲೆಯಲ್ಲೊಂದು ಲವ್‌ಸ್ಟೋರಿ. ಆ ಲವ್‌ಸ್ಟೋರಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಆ ಗೊಂದಲಗಳೇ ಚಿತ್ರದ ಜೀವಾಳ ಎಂದರೆ ತಪ್ಪಿಲ್ಲ. ಗೊಂದಲಗಳು, ಪ್ರೀತಿ ಮತ್ತು ರಾಜಕೀಯದಲ್ಲಿ ಗೆಲ್ಲುವುದಕ್ಕೆ ಅಯೋಗ್ಯ ಮಾಡುವ ಕಳ್ಳಾಟಗಳು, ಅದಕ್ಕೆ ತುಂಡೈಕ್ಳು ಮಾಡುವ ಸಹಾಯ ಇವೆಲ್ಲವೂ ಪ್ರೇಕ್ಷಕನ್ನು ಹಿಡಿದಿಡುತ್ತದೆ.

ಇಲ್ಲೊಂದು ಮೆಚ್ಚಬೇಕಾದ ವಿಷಯವೆಂದರೆ, ಅದು ಚಿತ್ರಕಥೆ. ಚಿತ್ರದ ಮೊದಲಾರ್ಧ ಮುಗಿಯುವುದೇ ಗೊತ್ತಾಗುವುದಿಲ್ಲ. ಇನ್ನು ದ್ವಿತೀಯಾರ್ಧದಲ್ಲಿ ಒಂದಿಷ್ಟು ಏರಿಳಿತಗಳಿವೆಯಾದರೂ, ಒಟ್ಟಾರೆ ಪ್ರೇಕ್ಷಕರರನ್ನು ಕೂಡಿಸಿಕೊಂಡು ಚಿತ್ರ ನೋಡುವ ಹಾಗೆ ಮಾಡುವ ಅಂಶಗಳು ಚಿತ್ರದಲ್ಲಿ ಸಾಕಷ್ಟಿದೆ. ಯೋಗ್ಯ ಮತ್ತು ಅಯೋಗ್ಯನ ಬಿಲ್ಡಪ್ಪು, ಹಾಡುಗಳು, ಫೈಟುಗಳು, ಕಾಮಿಡಿ ಸನ್ನಿವೇಶಗಳು, ಮಜವಾದ ಸಂಭಾಷಣೆಗಳು, ಸಾಕಷ್ಟು ತಿರುವುಗಳು ಇವೆಲ್ಲವೂ ಚಿತ್ರಕ್ಕೆ ಪ್ಲಸ್‌ ಆಗಿದೆ.

ಹಾಗಾಗಿ “ಅಯೋಗ್ಯ’ ಒಂದು ಅದ್ಭುತ ಚಿತ್ರವಲ್ಲದಿದ್ದರೂ, ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರನ್ನು ಮನರಂಜಿಸಿ, ನಗಿಸಿ ಕಳಿಸುವಂತ ಚಿತ್ರವಂತೂ ಖಂಡಿತಾ ಹೌದು. ಲಾಜಿಕ್ಕು, ಗೀಜಿಕ್ಕು ಅಂತೆಲ್ಲಾ ನೋಡದೆ, ಸ್ವಲ್ಪ ಹೊತ್ತು ಮ್ಯಾಜಿಕ್ಕು ಬೇಕು ಎನ್ನುವವರು ಚಿತ್ರ ನೋಡಬಹುದು. ಚಿತ್ರ ಸುತ್ತುವುದು ಸತೀಶ್‌ ನೀನಾಸಂ ಮತ್ತು ರವಿಶಂಕರ್‌ ಅವರ ಸುತ್ತ. ಇಬ್ಬರೂ ಸಿಕ್ಕ ಪಾತ್ರಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.

ಇಲ್ಲಿ ಸತೀಶ್‌ ಮತ್ತು ರವಿಶಂಕರ್‌ ಪ್ರಮುಖವಾದರೂ, ಅವರಿಬ್ಬರ ಜೊತೆಗೆ ಇನ್ನೂ ಹಲವರು ಗಮನಸೆಳೆಯುತ್ತಾರೆ. ಪ್ರಮುಖವಾಗಿ ಸುಂದರ್‌ ರಾಜ್‌ ಅವರಿಗೆ ಬಹಳ ದಿನಗಳ ನಂತರ ಒಂದು ಮಜಬೂತಾದ ಪಾತ್ರ ಸಿಕ್ಕಿದೆ ಮತ್ತು ಅವರು ಅದನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆ.ಆರ್‌. ಪೇಟೆ ಶಿವರಾಜ್‌, ಗಿರಿ, ತಬಲಾ ನಾಣಿ, ಅರುಣ ಬಾಲರಾಜ್‌, ಲಕ್ಷ್ಮೀದೇವಮ್ಮ ಎಲ್ಲರೂ ತಮ್ತಮ್ಮ ಅಭಿನಯದಿಂದ ಇಷ್ಟವಾಗುತ್ತಾರೆ.

ಚಿತ್ರದ ಕೊನೆಗೆ ಬರುವ ಕುರಿ ಪ್ರತಾಪ್‌ ಮತ್ತು ಸಾಧು ಕೋಕಿಲ ಸಹ ಒಂದಿಷ್ಟು ನಗಿಸಿಯೇ ಹೋಗುತ್ತಾರೆ. ಎಲ್ಲರಿಗೆ ಹೋಲಿಸಿದರೆ, ರಚಿತಾ ಪಾತ್ರ ಚಿಕ್ಕದೇ. ಚಿಕ್ಕ ಪಾತ್ರವಾದರೂ ರಚಿತಾ ಗಮನ ಸೆಳೆಯುತ್ತಾರೆ. ಇನ್ನು ಅರ್ಜುನ್‌ ಜನ್ಯ ಸಂಗೀತದಲ್ಲಿ ಒಂದೆರೆಡು ಹಾಡುಗಳು, ಪ್ರವೀಣ್‌ ತೆಗ್ಗಿನಮನೆ ಕ್ಯಾಮೆರಾ ಕಣ್ಣಲ್ಲಿ ಮಂಡ್ಯದ ಸುಂದರ ಪರಿಸರ ಖುಷಿಕೊಡುತ್ತದೆ.

ಚಿತ್ರ: ಅಯೋಗ್ಯ
ನಿರ್ದೇಶನ: ಮಹೇಶ್‌ ಕುಮಾರ್‌
ನಿರ್ಮಾಣ: ಟಿ.ಆರ್‌. ಚಂದ್ರಶೇಖರ್‌
ತಾರಾಗಣ: ಸತೀಶ್‌ ನೀನಾಸಂ, ರಚಿತಾ ರಾಮ್‌, ರವಿಶಂಕರ್‌, ಗಿರಿ, ಕೆ.ಆರ್‌. ಪೇಟೆ ಶಿವರಾಜ್‌, ಸುಂದರ್‌ ರಾಜ್‌, ಅರುಣ ಬಾಲರಾಜ್‌ ಮುಂತಾದವರು

* ಚೇತನ್‌ ನಾಡಿಗೇರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವಿಸ್ಮಯ ಸಾವಿನ ಹಿಂದಿನ ಸತ್ಯವೇನು? ಅದು ಕೊಲೆನಾ, ಆ್ಯಕ್ಸಿಡೆಂಟಾ ಅಥವಾ ಅದಕ್ಕೂ ಮಿಗಿಲಾದ ರಹಸ್ಯವಿದೆಯಾ? ಇನ್ಸ್‌ಪೆಕ್ಟರ್‌ ಅಶೋಕ್‌ ಬೇರೆ ಬೇರೆ ಆಯಾಮದಿಂದ...

  • "ಅವನು ಧಾರಾವಾಹಿ ಹೀರೋ. ಹೆಸರು ದೃಶ್ಯ. ಅವಳು ಅವನ ಅಪ್ಪಟ ಅಭಿಮಾನಿ. ಹೆಸರು ಶಾಯರಿ. ಅವನ ವಾಸ ಬೆಂಗಳೂರು. ಆಕೆಯ ವಾಸ ಹೊನ್ನಾವರ ಸಮೀಪದ ಊರು. ಇವರಿಬ್ಬರಿಗೆ "ಫೇಸ್‌ಬುಕ್‌'...

  • ಚಿತ್ರ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ •ನಿರ್ಮಾಣ: ಟಿ.ಆರ್‌.ಚಂದ್ರಶೇಖರ್‌ •ನಿರ್ದೇಶನ: ಸುಜಯ್‌ ಶಾಸ್ತ್ರಿ •ತಾರಾಗಣ: ರಾಜ್‌ ಬಿ ಶೆಟ್ಟಿ, ಕವಿತಾ, ಗಿರಿ,...

  • ಅದು ಆದಿಕಾಳೇಶ್ವರಿ ಗಿರಿ. ಆ ಗಿರಿಯ ತುದಿಯಲ್ಲೊಂದು ಭವ್ಯವಾದ ಬಂಗಲೆ. ಆ ಬಂಗಲೆಯೊಳಗೆ ಬೇತಾಳಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡ ಆತ್ಮವೊಂದು ಇದೆ. ಏನೂ ಅರಿಯದ...

  • ಅವನ ಹೆಸರು ಕೆಂಪೇಗೌಡ. ಪೊಲೀಸ್‌ ಸರ್ಕಲ್ ಇನ್ಸ್‌ಪೆಕ್ಟರ್‌. ಇಲಾಖೆಗೆ ಸೇರಿದ 7-8 ವರ್ಷಗಳಲ್ಲಿ 15-16 ಕಡೆ ಟ್ರಾನ್ಸ್‌ಫ‌ರ್‌. ಅದಕ್ಕೆ ಕಾರಣ 'ಕೆಂಪೇಗೌಡ'ನ ಯಾರಿಗೂ...

ಹೊಸ ಸೇರ್ಪಡೆ