
‘ಖೆಯೊಸ್’ ಚಿತ್ರ ವಿಮರ್ಶೆ; ಮೆಡಿಕಲ್ ವಿದ್ಯಾರ್ಥಿಗಳ ಕ್ರೈಂ-ಥ್ರಿಲ್ಲರ್ ಗಳ ಕಹಾನಿ
Team Udayavani, Feb 18, 2023, 12:11 PM IST

ಅವರೆಲ್ಲರೂ ಒಂದೇ ಕಾಲೇಜಿನಲ್ಲಿ ಓದುತ್ತಿರುವ ಮೆಡಿಕಲ್ ಮತ್ತು ಫಾರ್ಮಸಿ ವಿದ್ಯಾರ್ಥಿಗಳು. ಅದರಲ್ಲಿ ಕೆಲವರು ಆತ್ಮೀಯರಾದರೆ ಮತ್ತೆ ಕೆಲವರು ಪರಿಚಿತರು. ಒಮ್ಮೆ ಒಟ್ಟಾಗಿ ಸೇರುವ ಈ ಹುಡುಗರ ಗುಂಪು ಮಧ್ಯರಾತ್ರಿಯವರೆಗೂ ಸಿಟಿಯ ಹೊರಗಿನ ಡಾಬಾದಲ್ಲಿ ಭರ್ಜರಿಯಾಗಿ ಪಾರ್ಟಿ ಮಾಡುತ್ತಾ, ನಶೆಯ ಗುಂಗಿನಲ್ಲಿ ತೇಲಾಡುತ್ತದೆ. ಇನ್ನೇನು ಹಾಡು-ಡ್ಯಾನ್ಸ್, ಮೋಜು-ಮಸ್ತಿ ಎಲ್ಲವೂ ಮುಗಿದು, ನಶೆ ಕೂಡ ಇಳಿದು ಬೆಳಗಾಯಿತು ಎನ್ನುವಾಗಲೇ ಈ ವಿದ್ಯಾರ್ಥಿಗಳ ಗುಂಪಿನಲ್ಲೊಬ್ಬ ಹುಡುಗ ನಿಗೂಢವಾಗಿ ಸಾವನ್ನಪ್ಪಿರುತ್ತಾನೆ. ರಾತ್ರಿಯಷ್ಟೇ ಜೋಶ್‌ನಲ್ಲಿ ಕುಣಿದು ಕುಪ್ಪಳಿಸಿದ ಈ ಹುಡುಗ ಬೆಳಗಾಗುವುದರೊಳಗೆ, ಉಸಿರು ಚೆಲ್ಲಿದ್ದು ಯಾಕೆ? ಅದು ಹೇಗೆ? ಎಂಬ ಪ್ರಶ್ನೆಗಳ ನಡುವೆಯೇ ಆದಿ ಎಂಬ ಮೆಡಿಕಲ್ ವಿದ್ಯಾರ್ಥಿ ಈ ನಿಗೂಢತೆಯನ್ನು ಬೇಧಿಸಲು ಹೊರಡುತ್ತಾನೆ. ಅಲ್ಲಿಂದ ನಿಧಾನವಾಗಿ ಕ್ರೈಂ ಲೋಕದ ಒಂದೊಂದೇ ಮಜಲುಗಳು ಅನಾವರಣವಾಗುತ್ತ ಹೋಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಖೆಯೊಸ್’ ಸಿನಿಮಾದ ಕಥೆಯ ಎಳೆ. ಅದು ಹೇಗಿದೆ ಎಂಬುದನ್ನು ಪೂರ್ಣವಾಗಿ ಕಣ್ತುಂಬಿಕೊಳ್ಳಬೇಕಾದರೆ, ನೀವು ಥಿಯೇಟರ್‌ನಲ್ಲಿ “ಖೆಯೊಸ್’ ಕಡೆಗೆ ಮುಖ ಮಾಡಬಹುದು.
ಅಂದಹಾಗೆ, ಮೂಲತಃ ವೈದ್ಯರಾಗಿರುವ ಡಾ. ಜಿ. ವಿ ಪ್ರಸಾದ್, ಮೆಡಿಕಲ್ ವಿದ್ಯಾರ್ಥಿಗಳ ಲೈಫ್ ಸ್ಟೈಲ್, ಅವರ ಯೋಚನೆ ಎಲ್ಲವನ್ನೂ ಸೇರಿಸಿ ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ “ಖೆಯೊಸ್’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಸಿನಿಮಾದ ಕಥೆ ಮತ್ತು ಚಿತ್ರಕಥೆ ನಿಧಾನವಾಗಿ ನೋಡುಗರನ್ನು ಆವರಿಸಕೊಂಡು ಕ್ಲೈಮ್ಯಾಕ್ಸ್‌ನಲ್ಲಿ ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ ಸಿಗುತ್ತದೆ. ಚಿತ್ರಕಥೆಗೆ ಕೊಂಚ ವೇಗ ಸಿಕ್ಕಿದ್ದರೆ, “ಖೆಯೊಸ್’ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪುವ ಸಾಧ್ಯತೆಗಳಿದ್ದವು.
ಇನ್ನು ಚಿತ್ರ ಕಲಾವಿದರ ಬಗ್ಗೆ ಹೇಳುವುದಾದರೆ, ನಿಗೂಢ ಕೊಲೆಯ ಹಿಂದಿನ ರಹಸ್ಯ ಹುಡುಕುವ ಹುಡುಗನಾಗಿ ನಾಯಕ ಅಕ್ಷಿತ್ ಮತ್ತು ಮೆಡಿಕಲ್ ವಿಧ್ಯಾರ್ಥಿಗಳಾಗಿ ಅದಿತಿ ಪ್ರಭುದೇವ, ಸಿದ್ಧು ಮೂಲಿಮನಿ ತಮ್ಮ ಪಾತ್ರಗಳಲ್ಲಿ
ಗಮನ ಸೆಳೆಯುತ್ತಾರೆ. ಉಳಿದಂತೆ ಬಹುತೇಕ ಹೊಸ ಪ್ರತಿಭೆಗಳೇ ಇತರ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದು, ಬಹುತೇಕರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಹಿರಿಯ ನಟ ಶಶಿಕುಮಾರ್ ಕೇವಲ ದೃಶ್ಯವೊಂದಕಷ್ಟೇ ಸೀಮಿತವಾಗಿದ್ದಾರೆ. ಉಳಿದಂತೆ ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರು ಒಮ್ಮೆ “ಖೆಯೊಸ್’ ನೋಡಿಬರಲು ಅಡ್ಡಿಯಿಲ್ಲ.
ಜಿ. ಎಸ್ ಕಾರ್ತಿಕ ಸುಧನ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Asian Games 2023: 10 ಮೀಟರ್ ಏರ್ ರೈಫಲ್ ನಲ್ಲಿ ಚಿನ್ನ ಗೆದ್ದು ವಿಶ್ವ ದಾಖಲೆ ಬರೆದ ಭಾರತ

Nutrition Food ಫಲಾನುಭವಿಗಳ ಕೈಸೇರದ ಪೌಷ್ಟಿಕ ಆಹಾರ; ಕೊರಗ,ಮಲೆಕುಡಿಯ ಸಮುದಾಯದವರ ಸಂಕಷ್ಟ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Inspire Award: ವಿಜ್ಞಾನದತ್ತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆಸಕ್ತಿ

District In-charge Minister ಮಂಗಳೂರು, ಉಡುಪಿಯಲ್ಲಿ ಇಂದು ಜನತಾ ದರ್ಶನ