ದೇವರ ಸನ್ನಿಧಾನದಲ್ಲಿ ನೆಮ್ಮದಿ ಇದೆ …

ಚಿತ್ರ ವಿಮರ್ಶೆ

Team Udayavani, Oct 12, 2019, 3:02 AM IST

ದೇವರು ಸಿಕ್ಕರೆ ತನ್ನ ಆಸೆ ಈಡೇರುತ್ತದೆ, ಮೊದಲು ದೇವರನ್ನು ಭೇಟಿಯಾಗಬೇಕು. ಹಾಗಾದರೆ ದೇವರು ಎಲ್ಲಿದ್ದಾರೆ… ಹುಡುಕಬೇಕು – ಮುಗ್ಧ ಬಾಲಕನ ಮನಸ್ಸಲ್ಲಿ ಈ ಆಲೋಚನೆ ಗಟ್ಟಿಯಾಗುತ್ತಲೇ, ಬಾಲಕನ ಹುಡುಕಾಟ ಆರಂಭವಾಗುತ್ತದೆ. ಆ ಹುಡುಕಾಟದ ಹಾದಿ ಸುಲಭವಲ್ಲ. ಕಷ್ಟ, ನೋವು, ಹಸಿವು … ಹೀಗೆ ಎಲ್ಲವೂ ಆ ಹಾದಿಯುದ್ದಕ್ಕೂ ಸಿಗುತ್ತದೆ. ಆದರೆ, ಮುಗ್ಧ ಬಾಲಕ ಅವೆಲ್ಲವನ್ನು ದಾಟಿಕೊಂಡು ದೇವರ ಹುಡುಕುತ್ತಾ ಸಾಗುತ್ತಾನೆ …

ಸಿನಿಮಾ ಮಾಡಲು ಬರೀ ಕಮರ್ಷಿಯಲ್‌ ಕಥೆಗಳು, ಅನವಶ್ಯಕ ಬಿಲ್ಡಪ್‌ಗ್ಳೇ ಬೇಕಿಲ್ಲ, ಜೀವಂತಿಕೆ ಇರುವ ಒಂದು ಭಾವನಾತ್ಮಕ ಕಥೆ ಇದ್ದರೂ ಒಂದು ಒಳ್ಳೆಯ ಸಿನಿಮಾವಾಗಬಹುದು ಎಂಬುದು ಆಗಾಗ ಸಾಬೀತಾಗುತ್ತಲೇ ಇದೆ. ಈಗ ಅದು ಮತ್ತೂಮ್ಮೆ ಸಾಬೀತಾಗಿದೆ. “ದೇವರು ಬೇಕಾಗಿದ್ದಾರೆ’ ಸಿನಿಮಾ ನೋಡಿದಾಗ ನಿಮಗೆ ಆ ಕಥೆಯಲ್ಲೊಂದು ಜೀವಂತಿಕೆ ಕಾಣುತ್ತದೆ. ನೋಡ ನೋಡುತ್ತಲೇ ಆ ಕಥೆ ನಿಮ್ಮನ್ನು ಕಾಡುತ್ತಾ, ಕಣ್ಣಂಚು ಒದ್ದೆ ಮಾಡುತ್ತದೆ.

ನಿರ್ದೇಶಕ ಚೇತನ್‌ ಕುಮಾರ್‌ ಒಂದು ಸರಳ ಕಥೆಯನ್ನು ಎಷ್ಟು ಸುಂದರವಾಗಿ ಹಾಗೂ ಸಾಮಾನ್ಯ ಪ್ರೇಕ್ಷಕನಿಗೆ ಆಪ್ತವೆನಿಸುವಂತೆ ಹೇಗೆ ಕಟ್ಟಿಕೊಡಬಹುದೋ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ದೇವರನ್ನು ಹುಡುಕಿಕೊಂಡು ಬೆಂಗಳೂರಿಗೆ ಬರುವ ಮಗುವಿನ ಪಯಣ, ಹುಡುಕಾಟದ ಹಾದಿ, ಅಲ್ಲಿ ಸಿಗುವ ಜನ, ಪರಿಸರವನ್ನು ಸಾಕಷ್ಟು ನೈಜವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಜೊತೆಗೆ ಚಿತ್ರದಲ್ಲಿ ಒಂದಷ್ಟು ಟ್ವಿಸ್ಟ್‌ಗಳನ್ನು ಕೂಡಾ ಇಟ್ಟಿದ್ದಾರೆ.

ಅದು ಏನೆಂಬುದನ್ನು ನೀವು ಸಿನಿಮಾದಲ್ಲಿ ನೋಡಿದರೇನೇ ಮಜಾ. ಸಿನಿಮಾ ಎಂದರೆ ಕೇವಲ ಹೊಡೆದಾಟ, ಬಡಿದಾಟವಲ್ಲ, ಅದರಾಚೆಗೂ ಬೇರೆ ಬೇರೆ ಅಂಶಗಳ ಮೂಲಕ ರಂಜಿಸಬಹುದು, ಪ್ರೇಕ್ಷಕರನ್ನು ತಟ್ಟಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡೇ “ದೇವರು ಬೇಕಾಗಿದ್ದಾರೆ’ ಸಿನಿಮಾ ಮಾಡಿದಂತಿದೆ. ಕಥೆಯ ಆಶಯ, ಉದ್ದೇಶ ಚೆನ್ನಾಗಿದೆ. ಮಗುವನ್ನು ಸಾಂಕೇತಿಕವಾಗಿಟ್ಟುಕೊಂಡು, ಒಂದು ಗಂಭೀರ ಕಥೆಯನ್ನು ಸೊಗಸಾಗಿ ಹೇಳುವ ಮೂಲಕ ಮೆಚ್ಚುಗೆ ಪಡೆಯುತ್ತಾರೆ ನಿರ್ದೇಶಕರು.

ಹಾಗಂತ ಈ ಸಿನಿಮಾದಲ್ಲಿ ತಪ್ಪುಗಳೇ ಇಲ್ಲವೇ ಎಂದರೆ, ಖಂಡಿತಾ ಇದೆ. ಮುಖ್ಯವಾಗಿ ತಾಂತ್ರಿಕವಾಗಿ ಚಿತ್ರದಲ್ಲಿ ಒಂದಷ್ಟು ಕೊರತೆ ಇದೆ. ಜೊತೆಗೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರದ ವೇಗವನ್ನು ಹೆಚ್ಚಿಸಬಹುದಿತ್ತು .. ಹೀಗೆ ಪಟ್ಟಿ ಮಾಡುತ್ತಾ ಹೋದರೆ ದೇವರಲ್ಲೂ ತಪ್ಪು ಹುಡುಕಬಹುದು. ಆದರೆ, ಅವೆಲ್ಲವನ್ನು ಬದಿಗೆ ಸರಿಸಿ ಸೈ ಎನಿಸಿಕೊಳ್ಳೋದು ಕಥೆ ಹಾಗೂ ನೈಜ ನಿರೂಪಣೆ. ಅಂದಹಾಗೆ, ಬಾಲಕನೊಬ್ಬ ಈ ಚಿತ್ರದ ಕೇಂದ್ರಬಿಂದು.

ಹಾಗಂತ ಇದು ಮಕ್ಕಳ ಚಿತ್ರವಲ್ಲ. ಚಿತ್ರದಲ್ಲಿ ಬಾಲನಟ ಅನೂಪ್‌ ತಮ್ಮ ನಟನೆಯ ಮೂಲಕ ಮನಗೆಲ್ಲುತ್ತಾರೆ. ತಾತನಾಗಿ ಹಿರಿಯ ನಟ ಶಿವರಾಂ ಇಷ್ಟವಾಗುತ್ತಾರೆ. ಉಳಿದಂತೆ ಪ್ರಸಾದ್‌, ಸತ್ಯನಾಥ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯಾವುದೇ ಅಬ್ಬರವಿಲ್ಲದೇ, ತಣ್ಣಗೆ ನಿಮ್ಮನ್ನು ಆವರಿಸಿಕೊಳ್ಳುವ ಸಿನಿಮಾ ನೋಡಲು ಬಯಸುವವರಿಗೆ “ದೇವರು’ ಇಷ್ಟವಾಗುತ್ತದೆ.

ಚಿತ್ರ: ದೇವರು ಬೇಕಾಗಿದ್ದಾರೆ
ನಿರ್ಮಾಣ: ಹಾರಿಜಾನ್‌ ಮೂವೀಸ್‌
ನಿರ್ದೇಶನ: ಕೇಂಜ ಚೇತನ್‌ ಕುಮಾರ್‌
ತಾರಾಗಣ: ಅನೂಪ್‌, ಶಿವರಾಂ, ಪ್ರಸಾದ್‌, ಸತ್ಯನಾಥ್‌ ಮತ್ತಿತರರು.

* ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ