ರಾಜರಥದಲ್ಲಿ ಪ್ರೇಮ ಪಯಣ

Team Udayavani, Mar 23, 2018, 6:33 PM IST

ಆ ಬಸ್ಸು ರಿಗಳೂರಿನಿಂದ ಚೆನ್ನೈಗೆ ಹೊರಟಿದೆ. ಬಸ್ಸಿನ ತುಂಬಾ ಜನ ಕೂತಿದ್ದಾರೆ. ಒಬ್ಬೊಬ್ಬರು ಒಂದೊಂದು ಕೆಲಸದ ಮೇಲೆ ಊರಿಗೆ ಹೊರಟಿದ್ದಾರೆ. ಅದರಲ್ಲಿ ಮೇಘಾ ರೆಡ್ಡಿ ಮತ್ತು ಅಭಿ ಸಹ ಇಬ್ಬರು. ಅವರಿಬ್ಬರೂ ಒಂದೇ ಕಾಲೇಜ್‌ನಲ್ಲಿ ನಾಲ್ಕು ವರ್ಷಗಳ ಕಾಲ ಓದಿದವರು. ಆದರೆ, ಒಂದೇ ಒಂದು ದಿನಕ್ಕೂ ಮಾತಾಡಿದವರಲ್ಲ. ಹಾಗಂತ ಅವರಿಬ್ಬರೂ ಅಪರಿಚಿತರಂತೇನಲ್ಲ.

ಅವಳಿಗೆ ಅವನ ಬಗ್ಗೆ ಗೊತ್ತಿದೆ. ಅವನಿಗೆ ಅವಳ ಮೇಲೆ ಮನಸ್ಸಿದೆ. ಇಷ್ಟು ಹೇಳಿದರೆ ಸಾಕು, ಅವರಿಬ್ಬರ ಪ್ರಯಾಣ ಮುಗಿಯುವಷ್ಟರಲ್ಲಿ ಅವಳಿಗೂ ಅವನ ಮೇಲೆ ಪ್ರೀತಿಯಾಗುತ್ತದೆ ಎಂದು ಸಿಕ್ಕಾಪಟ್ಟೆ ಚಿತ್ರಗಳನ್ನು ನೋಡಿರುವ ಪ್ರೇಕ್ಷಕರು ಹೇಳಿಬಿಡುತ್ತಾರೆ. ಅವರ ಊಹೆ ತಪ್ಪೇನಲ್ಲ. ಖಂಡಿತವಾಗಿಯೂ ಚಿತ್ರ ಮುಗಿಯುವಷ್ಟರಲ್ಲಿ ಅವಿರಬ್ಬರು ಒಂದಾಗುತ್ತಾರೆ. ಆದರೆ, ಹೇಗೆ ಎಂಬುದಕ್ಕೆ ಚಿತ್ರ ನೋಡಬೇಕು.

“ರಾಜರಥ’ ಒಂದು ಟ್ರಾವಲ್‌ ಲವ್‌ಸ್ಟೋರಿ ಮತ್ತು “ರಾಜರಥ’ ಎನ್ನುವುದು ಒಂದು ಬಸ್ಸಿನ ಹೆಸರು. ಟ್ರಾವಲ್‌ ಲವ್‌ಸ್ಟೋರಿ ಎಂದರೆ ಅಲ್ಲೇನಾಗಬಹುದು ಎಂದು ಜನರಿಗೆ ಗೊತ್ತಿರುತ್ತದೆ. ಗುರುತು ಪರಿಚಯ ಇರದ ಒಂದಿಷ್ಟು ಜನ ಒಂದು ಬಸ್ಸಿನಲ್ಲಿ ಯಾವುದೋ ಊರಿಗೆ ಹೋಗುತ್ತಾರೆ. ಅದರಲ್ಲಿ ನಾಯಕ-ನಾಯಕಿ ಸಹ ಇರುತ್ತಾರೆ. ಅವರೆಲ್ಲರೂ ನಾಯಕ-ನಾಯಕಿಯ ಲವ್‌ಸ್ಟೋರಿಗಳಿಗೆ ರಿಪೀಸ್‌ಗಳಂತಿರುತ್ತಾರೆ.

ಒಂದು ಹಂತದಲ್ಲಿ ಅವರಿಬ್ಬರೂ ಮಿಕ್ಕವರಿಂದ ಬೇರೆಯಾಗುತ್ತಾರೆ. ಬೇರೆಯವರಿಂದ ದೂರವಾಗುವ ಅವರಿಬ್ಬರೂ ಕ್ರಮೇಣ ಹತ್ತಿರವಾಗುತ್ತಾರೆ. ಆ ನಂತರ ಅವರು ಅದ್ಹೇಗೋ ಮಿಕ್ಕವರ ಜೊತೆಗೆ ಹೋಗಿ ಸೇರಿಕೊಳ್ಳುತ್ತಾರೆ. ಅಲ್ಲೊಂದು ಟ್ವಿಸ್ಟು ಬರುತ್ತದೆ. ಆ ಟ್ವಿಸ್ಟು ಅವರಿಬ್ಬರನ್ನೂ ಒಂದು ಮಾಡುತ್ತದೆ. ಇವೆಲ್ಲಾ ಒಂದು ಪ್ರಯಾಣದ ಪ್ರೇಮಕಥೆಗಳಲ್ಲಿರುವ ಕೆಲವು ಅಂಶಗಳು. ಇವೆಲ್ಲವೂ “ರಾಜರಥ’ ಚಿತ್ರದಲ್ಲಿದೆ. ಆದರೆ, ಅದನ್ನು ಅನೂಪ್‌ ಭಂಡಾರಿ ಹೇಳಿ ಹೇಳಿದ್ದಾರೆಂಬುದು ಬಹಳ ಮುಖ್ಯ.

ಒಂದು ಮಾಮೂಲಿ ಪ್ರೇಮಕಥೆಯಾಗಬಹುದಾಗಿದ್ದ “ರಾಜರಥ’ ವಿಭಿನ್ನವಾಗುವುದು ಹೇಗೆ ಎಂದರೆ ಅದರ ನಿರೂಪಣೆಯಿಂದ. ಇಲ್ಲಿ ಅನೂಪ್‌ ಯಾವುದನ್ನೂ ನೇರವಾಗಿ ಹೇಳುವುದಕ್ಕೆ ಹೋಗುವುದಿಲ್ಲ. ಇಲ್ಲೊಂಚೂರು, ಅಲ್ಲೊಂಚೂರು ಹೇಳುತ್ತಾ ಹೋಗುತ್ತಾರೆ. ಇಲ್ಲಿ ಪ್ರಾರಂಭಿಸಿದ ವಿಷಯವನ್ನು, ಇನ್ನೆಲ್ಲೋ ಮುಗಿಸುತ್ತಾರೆ. ಇನೇಲ್ಲೋ ಪ್ರಾರಂಭವಾದ ವಿಷಯವೊಂದಕ್ಕೆ ಅವರು ಮತ್ತೆಲ್ಲೋ ಮುಕ್ತಿಕೊಡುತ್ತಾರೆ. ಈ ಪ್ರೇಮಕಥೆಯ ಜೊತೆಗೆ, ಇನ್ನೆಲ್ಲೋ ಆಗುವ ಹೋರಾಟದ ಕಥೆಯನ್ನು ಲಿಂಕ್‌ ಮಾಡುತ್ತಾರೆ.

ಪ್ರೇಮ, ತರಲೆಗಳ ಜೊತೆಗೆ ಹೋರಾಟ, ಸಿದ್ಧಾಂತ, ಮಾನವೀಯತೆ ಎಲ್ಲವನ್ನೂ ಸೇರಿಸುತ್ತಾ ಹೋಗುತ್ತಾರೆ. ಮೊದಲ ಎರಡು ಗಂಟೆ ಸ್ವಲ್ಪ ಹಗರುವಾಗಿ ಸಾಗುವ ಚಿತ್ರ, ಕೊನೆಯ 20 ನಿಮಿಷ ಬಹಳ ಗಂಭೀರವಾಗುತ್ತದೆ. ಆರಂಭದಲ್ಲೆಲ್ಲಾ ಅನೂಪ್‌ ಏನು ಹೇಳುವುದಕ್ಕೆ ಹೊರಟಿದ್ದರು ಎಂಬುದು ಕೊನೆಗೆ ಮನವರಿಕೆಯಾಗುತ್ತದೆ. ಉದಾಹರಣೆಗೆ, “ಮುಂದೆ ಬನ್ನಿ’ ಎಂಬ ರೀಮಿಕ್ಸ್‌ ಹಾಡು. ಚಿತ್ರದ ಟೈಟಲ್‌ ಕಾರ್ಡ್‌ ತೋರಿಸುವಾಗ ಬರುವ ಈ ಹಾಡು ಗಿಮಿಕ್‌ಗೆ ಅಂತನಿಸಬಹುದು.

ಆದರೆ, ಚಿತ್ರದ ಅಂತ್ಯಕ್ಕೆ ಆ ಹಾಡಿನ ತಾತ್ಪರ್ಯ ಬಹಳ ಅದ್ಭುತವಾಗಿ ಸಿಂಕ್‌ ಆಗುತ್ತದೆ ಎಂದು ಕ್ರಮೇಣ ಅರ್ಥವಾಗುತ್ತದೆ. ಹಾಗಾಗಿ ಚಿತ್ರದ ವಿಷಯದಲ್ಲಿ ಅರ್ಜೆಂಟ್‌ ಮಾಡಿಕೊಳ್ಳಬಾರದು. ಸ್ವಲ್ಪ ತಾಳ್ಮೆಯಿಂದ ಕಾದರೆ, ಚಿತ್ರ ಹಿಡಿಸೀತು. ಅನೂಪ್‌ ಹಾಗೂ ನಿರೂಪ್‌ ಇಬ್ಬರಿಗೂ ಇದು “ರಂಗಿತರಂಗ’ಕ್ಕಿಂತ ತದ್ವಿರುದ್ಧವಾದ ಚಿತ್ರ. ಅದು ಗಂಭೀರ ಮತ್ತು ವಿಷಾಧದ ಚಾಯೆಯಲ್ಲಿ ಸಾಗಿದರೆ, ಇಲ್ಲಿ ಚಿತ್ರ ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೂ ಮಜವಾಗಿ ಸಾಗುತ್ತದೆ.

ಆ ಮಟ್ಟಿಗೆ ಅವರಿಬ್ಬರಿಗೂ ದೊಡ್ಡ ಬದಲಾವಣೆ ಎಂದರೆ ತಪ್ಪಿಲ್ಲ. ಅನೂಪ್‌ ಹಾಗೂ ನಿರೂಪ್‌ ಇಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆವಂತಿಕಾ ಶೆಟ್ಟಿ ಸಹ ಲವಲವಿಕೆಯಿಂದ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ರವಿಶಂಕರ್‌ ವಿಭಿನ್ನವಾಗಿ ಕಾಣಿಸುತ್ತಾರೆ ಎಂಬುದು ನಿಜ. ಆದರೆ, ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್‌ ಇಲ್ಲ. ಹಾಗೆಯೇ ಅವರು ತೆರೆಯ ಮೇಲೆ ಹೆಚ್ಚು ಹೊತ್ತು ಕಾಣುವುದಿಲ್ಲ.

ಆರ್ಯ ಬಹಳ ಕಷ್ಟಪಟ್ಟು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಇನ್ನೊಂದಿಷ್ಟು ಹೊಸಬರು ಚಿತ್ರದಲ್ಲಿ ನಟಿಸಿದ್ದು, ಅವರೆಲ್ಲರೂ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರೆಲ್ಲರ ಜೊತೆಗೆ ಇನ್ನೊಬ್ಬರನ್ನು ಮರೆಯುವ ಹಾಗಿಲ್ಲ. ಅವರೇ ಪುನೀತ್‌ ರಾಜಕುಮಾರ್‌. ಪುನೀತ್‌ ಈ ಚಿತ್ರದಲ್ಲಿ ಅಭಿನಯಿಸಿಲ್ಲದಿದ್ದರೂ ನಿರೂಪಕರಾಗಿ ಚಿತ್ರದ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಜೊತೆಗೆ ಇರುತ್ತಾರೆ. ಚಿತ್ರವನ್ನು ಮುನ್ನಡೆಸುವುದು ಅವರೇ.

ಅನೂಪ್‌ ಇಲ್ಲಿ ಬರೀ ನಿರೂಪಣೆಯಿಂದಷ್ಟೇ ಅಲ್ಲ, ಸಂಗೀತದಿಂದಲೂ ಗಮನಸೆಳೆಯುತ್ತಾರೆ. ಅವರ ಸಂಗೀತ ನಿರ್ದೇಶನದಲ್ಲಿ ಒಂದೆರೆಡು ಹಾಡುಗಳು ನಿಜಕ್ಕೂ ಚೆನ್ನಾಗಿ ಮೂಡಿಬಂದಿವೆ. ಇನ್ನು ಇಡೀ ಚಿತ್ರವನ್ನು ಬಹಳ ಅದ್ಭುತವಾಗಿ ಸೆರೆಹಿಡಿದಿರುವುದು ಛಾಯಾಗ್ರಾಹಕ ವಿಲಿಯಮ್‌ ಡೇವಿಡ್‌. ಬಸ್‌ ಒಳಗಿರಲಿ, ಹಾಸ್ಟಲ್‌ ಇರಲಿ, ಕಾಡಿರಲಿ … ಎಲ್ಲವನ್ನೂ ಬಹಳ ಚೆನ್ನಾಗಿ ಸೆರೆಹಿಡಿದಿದ್ದಾರೆ ವಿಲಿಯಂ.

ಚಿತ್ರ: ರಾಜರಥ
ನಿರ್ದೇಶನ: ಅನೂಪ್‌ ಭಂಡಾರಿ
ನಿರ್ಮಾಣ: ಅಜಯ್‌ ರೆಡ್ಡಿ, ಅಂಜು ವಲ್ಲಭನೇನಿ, ವಿಶು ಡಾಕಪ್ಪಗಿರಿ ಮತ್ತು ಸತೀಶ್‌ ಶಾಸ್ತ್ರಿ
ತಾರಾಗಣ: ನಿರೂಪ್‌ ಭಂಡಾರಿ, ಆವಂತಿಕಾ ಶೆಟ್ಟಿ, ರವಿಶಂಕರ್‌, ಆರ್ಯ, ವಿನಯಾ ಪ್ರಸಾದ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಇಲ್ಲಿಯವರೆಗೆ ಸಂಭಾಷಣೆಕಾರನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮಂಜು ಮಾಂಡವ್ಯ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ "ಶ್ರೀ ಭರತ ಬಾಹುಬಲಿ' ಚಿತ್ರ...

  • "ದುಡ್ಡಿದ್ರೆ ದುನಿಯಾ ಬಾಸ್‌. ಇಲ್ಲ ಅಂದರೆ, ಕಟ್ಕೊಂಡಿರೋ ಹೆಂಡ್ತೀನೂ ಜೊತೆಲಿರೋಲ್ಲ...' ಆ ಅಸಹಾಯಕ ನಿರ್ದೇಶಕ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು "ಬಂಗಾರ'ದ...

  • "ನಮ್ಮಪ್ಪನ ಸಾವೇ ರೈತನ ಕೊನೇ ಸಾವಾಗಿರಬೇಕು...' ಆ ಬುದ್ಧಿವಂತ ಯುವ ರೈತ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಹಳ್ಳಿಯಲ್ಲಿ 25 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ....

  • ಅವನು ಹಳ್ಳಿ ಹುಡುಗ ಕೃಷ್ಣ. ಶುದ್ಧ ಸೋಮಾರಿ, ಯಾವುದಕ್ಕೂ ಪ್ರಯೋಜನಕ್ಕೆ ಬಾರದವನು ಅಂತ ಮನೆಯವರಿಂದ, ಊರವರಿಂದ ಕರೆಸಿಕೊಳ್ಳುತ್ತಿರುವಾತ. ಇಂಥ ಹುಡುಗನೊಬ್ಬ...

  • ಸಿನಿಮಾ ಅನ್ನೋದು ಕಾಲ್ಪನಿಕ ಜಗತ್ತು. ನೀವೊಂದು ಸುಂದರವಾದ ಕನಸನ್ನು ಅಷ್ಟೇ ಸುಂದರವಾಗಿ ಕಟ್ಟಿಕೊಡಬಹುದಾದ ಮಾಧ್ಯಮವೆಂದರೆ ಅದು ಸಿನಿಮಾ. ಕಾಲ್ಪನಿಕ ಜಗತ್ತನ್ನು...

ಹೊಸ ಸೇರ್ಪಡೆ