ಕನ್ನಡಿಗನ ಪ್ರೀತಿ ಹೊಸ ರೀತಿ

ಚಿತ್ರ ವಿಮರ್ಶೆ

Team Udayavani, Nov 2, 2019, 5:01 AM IST

“ದೊಡ್ಡೋರನ್ನ ಹಾಕ್ಕೊಂಡು ದಡ್ಡರು ಆಗೋಕ್ಕಿಂತ, ನಮ್ಮಂತಹ ದಡ್ಡರನ್ನ ಹಾಕ್ಕೊಂಡು ದೊಡ್‌ ಸಿನ್ಮಾ ಮಾಡ್ತೀನಿ…’ ಹೀಗೆ ಹೇಳಿ, ಆ ಯುವ ನಿರ್ದೇಶಕ ಒಂದು ಸಿನಿಮಾ ಮಾಡೋಕೆ ರೆಡಿಯಾಗ್ತಾನೆ. ಅಲ್ಲೀವರೆಗೂ ಕಥೆ, ಚಿತ್ರಕಥೆ, ಹೀರೋ, ಹೀರೋಯಿನ್‌ ಅಷ್ಟೇ ಯಾಕೆ ನಿರ್ಮಾಪಕರೇ ಇರೋದಿಲ್ಲ. ಹೇಗೋ, ಗೆಳೆಯನ ಮೂಲಕ ನಿರ್ಮಾಪಕರೊಬ್ಬರು ಸಿಕ್ಕಿದ್ದೇ ತಡ, ರಿಯಲ್‌ ಆಗಿ ಹುಡುಗಿಯೊಬ್ಬಳನ್ನು ಪ್ರೀತಿಸಿ, ಆ ಕ್ಷಣಕ್ಕೆ ಹುಟ್ಟುವ ಸನ್ನಿವೇಶಗಳನ್ನೇ ಚಿತ್ರೀಕರಿಸುವ ಧೈರ್ಯ ಮಾಡ್ತಾನೆ. ಕೊನೆಗೆ ಏನಾಗುತ್ತೆ ಅನ್ನೋದೇ ಕಥೆ.

ಇದು ಹೊಸಬರೇ ಸೇರಿ ಮಾಡಿರುವ ಚಿತ್ರ. ಹಾಗಾಗಿ ಚಿಟಿಕೆಯಷ್ಟು ಹೊಸತನ ನಿರೀಕ್ಷಿಸಬಹುದು. ಬೊಗಸೆಯಷ್ಟು ಪ್ರೀತಿಯ ಅನುಭವ ಪಡೆಯಬಹುದು. ಮನಸ್ಸು ಹಿಡಿಯುವಷ್ಟು ಕನ್ನಡತನ ಸವಿಯಬಹುದು. ಒಟ್ಟಾರೆ, ಒಂದು ಫ್ರೆಶ್‌ ಎನಿಸುವ ಕಥೆ ಜೊತೆ ಸಣ್ಣದ್ದೊಂದು ಖುಷಿಯೊಂದಿಗೆ ಕನ್ನಡದ ತೇರಲ್ಲಿ ಪಯಣಿಸಬಹುದು. ಇಷ್ಟು ಹೇಳಿದ ಮೇಲೆ ಇದೊಂದು ಸಿನಿಮಾದೊಳಗಿನ ಸಿನಿಮಾ ಕಥೆ ಆನ್ನೋದು ಸ್ಪಷ್ಟ. ಇಲ್ಲಿ ಕಥೆ ಸರಳವಾಗಿದೆ.

ಕನ್ನಡ ಪ್ರೀತಿ ಹೇರಳವಾಗಿದೆ. ಮನರಂಜನೆ ವಿರಳವಾಗಿದೆ. ಆತ್ಮವಿಶ್ವಾಸ ಜೋರಾಗಿದೆ. ಹೊಸಬರಾದರೂ ಸಿನಿಮಾ ಗ್ರಾಮರ್‌ ಸ್ವಲ್ಪಮಟ್ಟಿಗೆ ಗೊತ್ತಿರುವಂತಿದೆ. ಜೊತೆಗೆ ಗ್ಲಾಮರ್‌ನ ಅರಿವೂ ಇದೆ. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಇಲ್ಲಿದೆಯಾದರೂ, ನಿರೂಪಣೆಯಲ್ಲಿ ಇನ್ನಷ್ಟು ಗಟ್ಟಿತನ ಕಟ್ಟಿಕೊಡಲು ಸಾಧ್ಯವಿತ್ತು. ಅಲ್ಲಲ್ಲಿ ಕೆಲ ಸಣ್ಣಪುಟ್ಟ ಎಡವಟ್ಟುಗಳು ಕಾಣಸಿಕ್ಕರೂ, ಬರುವ ಹಾಗೊಂದು ಹೀಗೊಂದು ಬಿಟ್‌ ಸಾಂಗ್ಸ್‌ ಆ ಎಡವಟ್ಟನ್ನು ಪಕ್ಕಕ್ಕಿಡುತ್ತವೆ.

ಇನ್ನು, ಇದು ಆಟೋ ಮತ್ತು ಕ್ಯಾಬ್‌ ಚಾಲಕ ಗೆಳೆಯರೇ ಸೇರಿ ಮಾಡಿರುವ ಚಿತ್ರವಾಗಿರುವುದರಿಂದ ಪಂಚ್‌ ಡೈಲಾಗ್‌ಗಳಿಗೇನೂ ಇಲ್ಲಿ ಬರವಿಲ್ಲ. ಆಟೋ ಹಿಂದೆ, ಕಾರ್‌ ಹಿಂದೆ ಕಾಣಸಿಗುವ ಡೈಲಾಗ್‌ಗಿಂತಲೂ ಕೊಂಚ ಭಿನ್ನವಾಗಿ ಮಾತುಗಳನ್ನು ಪೋಣಿಸಿರುವುದು ಚಿತ್ರದ ಇನ್ನೊಂದು ಹೈಲೈಟ್‌ ಎನ್ನಬಹುದು. ಇಲ್ಲಿ ಬಜೆಟ್‌ಗಿಂತ ಮುಖ್ಯವಾಗಿ ಚಿತ್ರಕಥೆಯಲ್ಲಿ ಹೂರಣದ ರುಚಿ ಇದೆ. ಅಲ್ಲಲ್ಲಿ ಕಾಣುವ ತಾಂತ್ರಿಕ ದೋಷದ ನಡುವೆಯೂ ಕನ್ನಡ ಮೇಳೈಸಿದೆ ಎಂಬುದೇ ಸಮಾಧಾನ.

ಒಬ್ಬ ಯುವ ಪ್ರತಿಭೆ ತಾನೊಬ್ಬ ನಿರ್ದೇಶಕ ಆಗಬೇಕು ಅಂತ ಹೊರಡುವ ಸನ್ನಿವೇಶಗಳನ್ನು ಹೊಸ ರೀತಿಯಲ್ಲಿ ತೋರಿಸಿರುವುದು ವಿಶೇಷ. ಆ ವಿಶೇಷ ಹೇಗಿದೆ ಅನ್ನುವ ಕುತೂಹಲವಿದ್ದರೆ, “ಸ್ಟಾರ್‌ ಕನ್ನಡಿಗನ’ ಪ್ರೀತಿ ಗೀತಿ ಇತ್ಯಾದಿಯನ್ನು ನೋಡಬಹುದು. ಐವರು ಗೆಳೆಯರು ಸಿನಿಮಾ ರಂಗದಲ್ಲಿ ಸಾಧಿಸಬೇಕು ಅಂತ ಗಾಂಧಿನಗರಕ್ಕೆ ಕಾಲಿಡುತ್ತಾರೆ. ಹೊಸಬರನ್ನು ನಂಬಿ ಹಣ ಹಾಕಲು ಒಬ್ಬ ನಿರ್ಮಾಪಕನೂ ಸಿಗುತ್ತಾನೆ.

ಆದರೆ, ನಿರ್ದೇಶಕ ಯಾವ ಕಥೆ ಮಾಡಬೇಕು ಎಂಬ ಗೊಂದಲಕ್ಕೀಡಾಗುತ್ತಾನೆ. ಕೊನೆಗೆ, ಒಂದು ಹುಡುಗಿಯನ್ನು ಹಿಂಬಾಲಿಸಿ, ಆಕೆಯ ಮುಂದೆ ತಮ್ಮ ಪ್ರೀತಿ ವ್ಯಕ್ತಪಡಿಸೋದು, ಆ ಕ್ಷಣದಿಂದ ಶುರುವಾಗುವ ಪ್ರತಿ ಚಿತ್ರಣವನ್ನೂ ಹಾಗೆಯೇ ಚಿತ್ರೀಕರಿಸಿ ಸಿನಿಮಾ ಮಾಡುವ ಬಗ್ಗೆ ಯೋಚಿಸುತ್ತಾನೆ. ಗೆಳೆಯರೆಲ್ಲರೂ ಸಾಥ್‌ ಕೊಡುತ್ತಾರೆ. ಅದರಂತೆ, ಆಟೋ ಓಡಿಸಿ, ಬದುಕು ಸವೆಸುವ ಸುಂದರ ಹುಡುಗಿಯೊಬ್ಬಳ ಹಿಂದೆ ನಿರ್ದೇಶಕ ಬೀಳುತ್ತಾನೆ. ಅಲ್ಲೊಂದು ರಿಯಲ್‌ ಲವ್‌ಸ್ಟೋರಿ ಹುಟ್ಟಿಕೊಳ್ಳುತ್ತೆ.

ಅಲ್ಲೊಂದಷ್ಟು ತಿರುವುಗಳೂ ಬಂದುಹೋಗುತ್ತವೆ. ಕ್ಲೈಮ್ಯಾಕ್ಸ್‌ ಏನಾಗುತ್ತೆ ಅನ್ನೋದೇ ಕಥೆ.ಮಂಜುನಾಥ್‌ ಇಲ್ಲಿ ಅಚ್ಚುಮೆಚ್ಚಿನ ಗೆಳೆಯನಾಗಿ, ಪ್ರೀತಿಸೋ ಹುಡುಗನಾಗಿ ಗಮನಸೆಳೆಯುತ್ತಾರೆ. ಶಾಲಿನಿ ಭಟ್‌ ನಿರ್ದೇಶಕರ ಸೂಚನೆಯಂತೆ ಅಭಿನಯಿಸಿದ್ದಾರೆ. ಉಳಿದಂತೆ ರಾಕ್‌ಲೈನ್‌ ಸುಧಾಕರ್‌, ಕಿರಣ್‌, ರೋಹಿತ್‌, ಕೆವಿನ್‌, ಹರೀಶ್‌, ಮೋಹನ್‌, ನಾಗಭೂಷಣ್‌ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಪವನ್‌ ಪಾರ್ಥ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನೂ ಸ್ವಾದ ಬೇಕಿತ್ತು. ಮಹಾದೇವ ಛಾಯಾಗ್ರಹಣ ಪರವಾಗಿಲ್ಲ.

ಚಿತ್ರ: ಸ್ಟಾರ್‌ ಕನ್ನಡಿಗ
ನಿರ್ಮಾಣ: ಚನ್ನವೀರ, ಅರುಣ್‌, ಭೈರವ, ಹರೀಶ್‌ ಜೋಗಿ, ಮಂಜುನಾಥ್‌
ನಿರ್ದೇಶನ: ಕನ್ನಡಿಗ (ಮಂಜುನಾಥ್‌)
ತಾರಾಗಣ: ಮಂಜುನಾಥ್‌, ಶಾಲಿನಿ, ರಾಕ್‌ಲೈನ್‌ ಸುಧಾಕರ್‌, ಕಿರಣ್‌, ರೋಹಿತ್‌,ಕೆವಿನ್‌, ಹರೀಶ್‌, ಮೋಹನ್‌, ನಾಗಭೂಷಣ್‌ ಇತರರು.

* ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ