‘ವೀಲ್ ಚೇರ್ ರೋಮಿಯೋ’ ಚಿತ್ರ ವಿಮರ್ಶೆ; ವೀಲ್‌ಚೇರ್‌ನಿಂದ ಮೇಲೇಳುವ ಸಿನಿಮಾವಿದು…
Team Udayavani, May 28, 2022, 9:46 AM IST
ಸಿನಿಮಾದ ಟೈಟಲ್ಲೇ ಹೇಳುವಂತೆ ಆತ ವೀಲ್ ಚೇರ್ ರೋಮಿಯೋ. ಕೈ-ಕಾಲುಗಳು ಸ್ವಾಧೀನ ಕಳೆದುಕೊಂಡರೂ ಸ್ವಾವಲಂಭಿಯಾಗಿ ಬದುಕ ಬೇಕೆಂಬ ಉತ್ಕಟ ಆಸೆ ನಾಯಕ ಉಲ್ಲಾಸ್ (ರಾಮ್ ಚೇತನ್)ನದ್ದು. ತನ್ನ ಮಗ ಅಂಗವಿಕಲನಾದರೂ ಆ ನೋವು, ಭಾವನೆ ಮನಸ್ಸಿನಲ್ಲಿ ಮೂಡದಂತೆ ಬಾಲ್ಯದಿಂದಲೇ ಜೋಪಾನವಾಗಿ ನೋಡಿಕೊಂಡ ನಾಯಕನ ಆದರ್ಶ ತಂದೆ. ಅಂಗವಿಕಲನಾದರೂ ವಯಸ್ಸಿಗೆ ಬರುತ್ತಿದ್ದಂತೆ ಉಲ್ಲಾಸ್‌ನಿಂದ ವ್ಯಕ್ತವಾದ ವಯೋಸಹಜ ಮನೋಕಾಮನೆಯನ್ನು ತೀರಿಸುವ ಸಲುವಾಗಿ ತಂದೆ, ಮಗನಿಗೆ ಮದುವೆ ಮಾಡುವ ನಿರ್ಧಾರಕ್ಕೆ ಬರುತ್ತಾನೆ. ಆದರೆ ಯಾರೊಬ್ಬರೂ ಉಲ್ಲಾಸ್ ನಿಗೆ ಹೆಣ್ಣು ನೀಡಲು ಮುಂದಾಗುವುದಿಲ್ಲ. ಕೊನೆಗೆ ಅಪ್ಪ-ಮಗ ಏನು ಮಾಡುತ್ತಾರೆ? ಉಲ್ಲಾಸನಿಗೆ ಹೆಣ್ಣು ಕೊಡುವವರು ಯಾರು? “ವೀಲ್‌ಚೇರ್ ರೋಮಿಯೋ’ಗೆ ಒಬ್ಬಳು ಜ್ಯೂಲಿಯೆಟ್ ಸಿಗುತ್ತಾಳಾ? ಇವರ ಹುಡುಗಿಯ ಹುಡುಕಾಟ ಹೇಗಿರುತ್ತದೆ ಅನ್ನೋದೇ “ವೀಲ್‌ಚೇರ್ ರೋಮಿಯೋ’ ಸಿನಿಮಾದ ಕಥಾಹಂದರ. ಅದನ್ನು ಕಣ್ತುಂಬಿಕೊಳ್ಳುವ ಆಸೆಯಿದ್ದರೆ, ನೀವು ಖಂಡಿತವಾಗಿಯೂ ಥಿಯೇಟರ್ ಗೆ ಹೋಗಬೇಕು.
ಮೂಲತಃ ಚಿತ್ರಕಥೆ ಬರಹಗಾರರಾಗಿರುವ ನಿರ್ದೇಶಕ ನಟರಾಜ್ ತಮ್ಮ ಸರಳ ಕಥೆ, ಸರಾಗವಾಗಿ ಸಾಗುವ ಚಿತ್ರಕಥೆ, ಕಚಗುಳಿಯಿಡುವ ಸಂಭಾಷಣೆ ಮೂಲಕ ಇಡೀ ಸಿನಿಮಾವನ್ನು ಭಾವನಾತ್ಮಕವಾಗಿ ತೆರೆಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾದ ನಾಲ್ಕೈದು ಪ್ರಮುಖ ಪಾತ್ರಗಳು, ಅದರ ಹಿಂದಿನ ಸನ್ನಿವೇಶಗಳು ಮತ್ತು ಅದಕ್ಕೆ ಒಪ್ಪುವಂಥ ಡೈಲಾಗ್ಸ್ ಇಡೀ ಸಿನಿಮಾದ ಬಹುದೊಡ್ಡ ಹೈಲೈಟ್ಸ್ ಎನ್ನಬಹುದು.
ಗುರು ಕಶ್ಯಪ್ ಅವರ ಪಂಚಿಂಗ್ ಡೈಲಾಗ್ಸ್ ಅದಕ್ಕೆ ತಕ್ಕಂತೆ ಕಲಾವಿದರ ಕಾಮಿಡಿ ಟೈಮಿಂಗ್ ಎಲ್ಲೂ ಬೋರ್ ಹೊಡೆಸದಂತೆ ಸಿನಿಮಾವನ್ನು ಕೊನೆವರೆಗೂ ಕರೆದುಕೊಂಡು ಹೋಗುತ್ತದೆ. ಅದರಲ್ಲೂ ಮೊದಲರ್ಧ ಮುಗಿದು ಹೋಗುವುದು ಪ್ರೇಕ್ಷಕರಿಗೆ ಗೊತ್ತೇ ಆಗುವುದಿಲ್ಲ. ಅಷ್ಟೊಂದು ವೇಗವಾಗಿ ನೋಡುಗರನ್ನು ನಗಿಸುತ್ತ ಸಿನಿಮಾ ಸಾಗುತ್ತ ಭರಪೂರ ಮನರಂಜನೆ ನೀಡುತ್ತದೆ. ಆದರೆ, ದ್ವಿತಿಯಾರ್ಧದಲ್ಲಿ ಚಿತ್ರಕಥೆಗೆ ಒಂದಷ್ಟು ಟರ್ನ್, ಟ್ವಿಸ್ಟ್‌ಗಳು ಸಿಗುವುದರಿಂದ ಸಿನಿಮಾ ಸ್ವಲ್ಪ ಗಂಭೀರ ಎನಿಸುತ್ತದೆ. ಕೊನೆಯಲ್ಲಿ ಕ್ಲೈಮ್ಯಾಕ್ಸ್ ಮುಗಿದು ಹೊರಗೆ ಬರುವಾಗ ಪ್ರೇಕ್ಷಕರನ್ನು ಹಗುರಭಾವದಿಂದ ಹೊರಬರುವಂತೆ ಮಾಡಲು “ವೀಲ್‌ಚೇರ್ ರೋಮಿಯೋ’ ಯಶಸ್ವಿಯಾಗಿದ್ದಾನೆ.
ಇದನ್ನೂ ಓದಿ:ರ..ರ..ರಕ್ಮಮ್ಮ ಸಖತ್ ಲುಕ್ಕಮ್ಮ… ಸುದೀಪ್ ರೀಲ್ಸ್ ವೈರಲ್
ಇನ್ನು ಮೊದಲ ಬಾರಿಗೆ ಹೀರೋ ಆಗಿರುವ ರಾಮ್ ಚೇತನ್, ಇಡೀ ಸಿನಿಮಾದಲ್ಲಿ ವೀಲ್‌ಚೇರ್ ಮೇಲೇ ಕುಳಿತೇ ರೋಮಿಯೋ ಆಗಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ದಡ ಮುಟ್ಟಿಸಿದ್ದಾರೆ. ನಾಯಕಿ ಮಯೂರಿ ಅಂಧ ಹುಡುಗಿಯ ಪಾತ್ರದಲ್ಲಿ ಅಂದವಾದ ಅಭಿನಯ ನೀಡಿದ್ದಾರೆ. ಉಳಿದಂತೆ ಜಾಕ್ ಮಾಮನಾಗಿ ರಂಗಾಯಣ ರಘು ಅವರ ಸಂಭಾಷಣೆ ಮತ್ತು ಮ್ಯಾನರಿಸಂ ಇಡೀ ಸಿನಿಮಾದ ಉದ್ದಕ್ಕೂ ನೋಡುಗರಿಗೆ ಕಿಕ್ ಕೊಡುತ್ತದೆ. ಜವಾಬ್ದಾರಿಯುತ ತಂದೆಯಾಗಿ, ಮಗನ ಆಸೆಗಳನ್ನು ಈಡೇರಿಸಲು ಎಂಥ ತ್ಯಾಗ, ಸಾಹಸಕ್ಕೂ ಸೈ ಎನಿಸುವ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯದ ಭಾವನಾತ್ಮಕವಾಗಿ ಮನಮುಟ್ಟುತ್ತದೆ.
ಭರತ್ ಬಿ. ಜೆ. ಸಂಗೀತ ನಿರ್ದೇಶನದ ಹಾಡುಗಳು ಗುನುಗುವಂತೆ ಮಾಡುತ್ತದೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಸಂತೋಷ್ ಪಾಂಡಿ ಛಾಯಾಗ್ರಹಣ ಚಿತ್ರವನ್ನು ಅಂದವಾಗಿ ತೆರೆಮೇಲೆ ಕಟ್ಟಿಕೊಟ್ಟಿದೆ. ಒಟ್ಟಾರೆ ಥಿಯೇಟರ್‌ಗೆ ಹೋದವರಿಗೆ “ವೀಲ್‌ಚೇರ್ ರೋಮಿಯೋ’ ಒಂದು ಅಚ್ಚುಕಟ್ಟಾದ ಮನರಂಜನೆ ನೀಡುವ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಬಡ್ಡೀಸ್’ ಚಿತ್ರ ವಿಮರ್ಶೆ: ಸ್ನೇಹದ ನೆರಳಿನಲ್ಲಿ ಥ್ರಿಲ್ಲಿಂಗ್ ಸ್ಟೋರಿ
‘ತುರ್ತು ನಿರ್ಗಮನ’ ಚಿತ್ರ ವಿಮರ್ಶೆ; ಹುಟ್ಟು ಸಾವಿನ ನಡುವೆ ಸಿಕ್ಕ ಹೊಸ ಜಗತ್ತು
‘ತ್ರಿವಿಕ್ರಮ’ ಚಿತ್ರ ವಿಮರ್ಶೆ: ಜಬರ್ದಸ್ತ್ ಆ್ಯಕ್ಷನ್ ನಲ್ಲಿ ವಿಕ್ರಂ ಮಿಂಚು
‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರವಿಮರ್ಶೆ: ಸಿನಿ ಕನಸಿನ ಹುಡುಗರ ಜಾಲಿರೈಡ್
‘ಮೇಡ್ ಇನ್ ಚೈನಾ’ ಚಿತ್ರ ವಿಮರ್ಶೆ: ವರ್ಚುವಲ್ ನಲ್ಲಿ ಹೊಸ ಅನುಭವ