ಕೇಜ್ರಿವಾಲ್ ಗೆ ಅನಾರೋಗ್ಯ; ಸ್ವಯಂ ಐಸೋಲೇಶನ್, ಕೋವಿಡ್ 19 ಪರೀಕ್ಷೆ ಸಾಧ್ಯತೆ? ವರದಿ
ಭಾನುವಾರ ಮಧ್ಯಾಹ್ನದಿಂದ ಕೇಜ್ರಿವಾಲ್ (51ವರ್ಷ) ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ಪಿಟಿಐ ವರದಿ ತಿಳಿಸಿದೆ
Team Udayavani, Jun 8, 2020, 1:46 PM IST
ನವದೆಹಲಿ:ಭಾನುವಾರದಿಂದ ಜ್ವರ, ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋವಿಡ್ 19 ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದ್ದು, ಸ್ವಯಂ ಕ್ವಾರಂಟೈನ್ ವಿಧಿಸಿಕೊಂಡಿರುವುದಾಗಿ ಪಿಟಿಐ ಸೋಮವಾರ ವರದಿ ಮಾಡಿದೆ. ಅಲ್ಲದೇ ಎಲ್ಲಾ ಸಭೆಗಳನ್ನು ದೆಹಲಿ ಮುಖ್ಯಮಂತ್ರಿ ರದ್ದುಗೊಳಿಸಿರುವುದಾಗಿಯೂ ತಿಳಿಸಿದೆ.
ಭಾನುವಾರ ಮಧ್ಯಾಹ್ನದಿಂದ ಕೇಜ್ರಿವಾಲ್ (51ವರ್ಷ) ಅನಾರೋಗ್ಯಕ್ಕೆ ಒಳಗಾಗಿರುವುದಾಗಿ ಪಿಟಿಐ ವರದಿ ತಿಳಿಸಿದ್ದು, ಅನಾರೋಗ್ಯದ ನಿಟ್ಟಿನಲ್ಲಿ ಕೇಜ್ರಿವಾಲ್ ಯಾರನ್ನೂ ಭೇಟಿಯಾಗಿಲ್ಲ ಎಂದು ವಿವರಿಸಿದೆ. ಕೇಜ್ರಿವಾಲ್ ಅವರು ದಿಲ್ಲಿಯ ಅಧಿಕೃತ ನಿವಾಸದಲ್ಲಿ ಸ್ವಯಂ ಆಗಿ ಐಸೋಲೇಶನ್ ಗೆ ಒಳಗಾಗಿರುವುದಾಗಿ ಎಎನ್ ಐ ವರದಿ ಮಾಡಿದೆ.
ವರದಿಯ ಪ್ರಕಾರ, ಜ್ವರ ಮತ್ತು ಗಂಟಲು ಬೇನೆಯಿಂದ ಒಂದು ವೇಳೆ ಕೇಜ್ರಿವಾಲ್ ಕೋವಿಡ್ 19 ಪರೀಕ್ಷೆಗೆ ಒಳಗಾಗುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ. ಕೆಲವು ದಿನಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ಕೆಲವು ಸಭೆಗಳಲ್ಲಿ ಭಾಗಿಯಾಗಿದ್ದರು, ಅಲ್ಲದೇ ದಿಲ್ಲಿ ಸಚಿವಾಲಯಕ್ಕೂ ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.