ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ
ಸದ್ಯ ಅಂತಹ ಯಾವುದೇ ಮಾಹಿತಿ ಇಲಾಖೆಯಿಂದ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
Team Udayavani, Apr 9, 2020, 1:47 PM IST
Representative Image
ನವದೆಹಲಿ:ದೇಶಾದ್ಯಂತ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಮುಗಿದ ಬಳಿಕ ಏಪ್ರಿಲ್ 15ರಿಂದ ರೈಲು ಸಂಚಾರ ಆರಂಭಗೊಳ್ಳಲಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ರೈಲ್ವೆ ಇಲಾಖೆ ಗುರುವಾರ ತಳ್ಳಿಹಾಕಿದೆ.
ದೇಶದಲ್ಲಿ ಲಾಕ್ ಡೌನ್ ತೆರವುಗೊಳಿಸಿದ ನಂತರ ಪ್ರಯಾಣಿಕರು ನೂತನ ನಿರ್ಬಂಧದ ನಿಯಮಾವಳಿ ಅನುಸರಿಸಬೇಕೆಂಬ ಮಾಧ್ಯಮಗಳ ವರದಿಯನ್ನು ಭಾರತೀಯ ರೈಲ್ವೆ ಇಲಾಖೆ ನಿರಾಕರಿಸಿದೆ. ಸದ್ಯ ಅಂತಹ ಯಾವುದೇ ಮಾಹಿತಿ ಇಲಾಖೆಯಿಂದ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಇಂತಹ ಊಹಾಪೋಹ ವರದಿಗಳ ಮಾಹಿತಿ ಪ್ರಕಾರ, ಏಪ್ರಿಲ್ 14ರ ನಂತರ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಪ್ರಯಾಣಿಕರು ರೈಲು ಹೊರಡುವ ಸಮಯಕ್ಕಿಂತ ನಾಲ್ಕು ಗಂಟೆಗಳ ಕಾಲ ಮೊದಲೇ ರೈಲ್ವೆ ನಿಲ್ದಾಣಕ್ಕೆ ಆಗಮಿಸಬೇಕು. ಅಲ್ಲದೇ ಎಲ್ಲಾ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವ ಮುನ್ನ ಸ್ಕ್ರೀನಿಂಗ್ ಗೆ ಒಳಗಾಗಬೇಕು ಎಂದು ವರದಿಯಾಗಿದೆ.
ಆದರೆ ಭಾರತೀಯ ರೈಲ್ವೆ ಇಲಾಖೆ ಇಂತಹ ಯಾವುದೇ ನಿಯಮಾವಳಿಯನ್ನು ಜಾರಿಗೊಳಿಸಿಲ್ಲ ಎಂದು ಕೇಂದ್ರ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದೆ. ಈ ಹಂತದಲ್ಲಿ ಇಂತಹ ಊಹಾಪೋಹಗಳು ಹರಡುತ್ತಿರುವುದು ಅವಸರದ ಕ್ರಮವಾಗಿದೆ ಎಂದು ಇಲಾಖೆ ತಿಳಿಸಿದೆ.