
ಬನಹಟ್ಟಿಯಲ್ಲಿ ಸಹೋದರಿಯರ ಕೊಲೆ ಪ್ರಕರಣ: ಪೊಲೀಸರಿಂದ ಆರೋಪಿಯ ಬಂಧನ
Team Udayavani, Mar 14, 2023, 6:42 PM IST

ರಬಕವಿ-ಬನಹಟ್ಟಿ : ಕ್ಷುಲ್ಲಕ ಕಾರಣಕ್ಕೆ ಸಹೋದರಿಯಬ್ಬರನ್ನು ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಸೋಮವಾರ ಸಂಜೆ ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಡಪ್ಪ ಯಲ್ಲಪ್ಪ ಭುಜಂಗ(30) ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿ ಕಾಡಪ್ಪ ತನ್ನ ಸಹೋದರಿ ಬಂದವ್ವ ಮಿರ್ಜಿಯವಳ ಮನೆಯಾದ ಬನಹಟ್ಟಿಯ ಸೋಮವಾರ ಪೇಟೆ ಕುರುಬರ ಓಣಿಗೆ ಹೋಗಿ, ನಾಲ್ಕೈದು ದಿನ ನಮ್ಮ ಮನೆಗೆ ಹೋಗೋಣ, ನಿನ್ನ ಇಬ್ಬರೂ ಮಕ್ಕಳ ಪರೀಕ್ಷೆಯಿರುವ ಕಾರಣ ಪರೀಕ್ಷೆ ಮುಗಿದ ನಂತರ ವಾಪಸ್ ಬರುವಂತೆ ಹೇಳಿದ್ದಾನೆ.
ಈ ವಿಚಾರಕ್ಕೆ ಕೋಪಗೊಂಡ ನಾದಿನಿಯರಾದ ಯಲ್ಲವ್ವ ಹಾಗೂ ಸಹೋದರಿ ಬೌರವ್ವ ಕಾಡಪ್ಪನಲ್ಲಿ ನಮ್ಮ ಮನೆ ಮಂದಿಯ ಆರೋಗ್ಯವೂ ಸರಿಯಿಲ್ಲ ಅದಲ್ಲದೆ ಆಕೆಯ ಪತಿ ತೀರಿಕೊಂಡು ಆರೇಳು ತಿಂಗಳು ಮಾತ್ರವಾಗಿದೆ. ನೀನೂ ಹಿರಿಯನಾಗಿ ನಿನಗೂ ತಿಳಿಯುವುದಿಲ್ಲವೇ ಎಂದಿದ್ದಕ್ಕೆ ಕೋಪಗೊಂಡ ಆರೋಪಿ ಕಾಡಪ್ಪ ಅವರಿಬ್ಬರ ಮೇಲೆ ಕಬ್ಬಿಣದ ಹುಕ್ಕಿನಿಂದ ಇಬ್ಬರೂ ನಾದಿನಿಯರ ತಲೆಗೆ ಹೊಡೆದಿದ್ದಾನೆ, ಗಂಭೀರ ಗಾಯಗೊಂಡ ಅವರಿಬ್ಬರನ್ನೂ ಮನೆಯಿಂದ ಹೊರಗೆ ಎಳೆದೊಯ್ದು ಬಳಿಕ ಅಂಗಳದಲ್ಲಿ ಕಲ್ಲು ತಲೆಯಮೇಲೆ ಎತ್ತಿ ಹಾಕಿ ಕೊಲೆಗೈದಿದ್ದಾನೆ.
ಈ ಕುರಿತು ಬಂದವ್ವ ಸತೀಷ ಮಿರ್ಜಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಾಂತವೀರ ಇ., ಸಿಪಿಐ ಸುನೀಲ ಪಾಟೀಲ, ಪಿಎಸ್‌ಐ ರಾಘವೇಂದ್ರ ಖೋತ ಆಗಮಿಸಿ ತನಿಖೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
