
ಕಮಿಷನ್ ಬಿಜೆಪಿ ಸರ್ಕಾರ ಶೀಘ್ರ ತೊಲಗಲಿ
ಕಾಂಗ್ರೆಸ್‌ನಿಂದ ಬೃಹತ್ ಪ್ರತಿಭಟನೆ
Team Udayavani, Apr 21, 2022, 2:26 PM IST

ಬಾಗಲಕೋಟೆ: ರಾಜ್ಯದಲ್ಲಿ ಪ್ರತಿಯೊಂದು ಕಾಮಗಾರಿಗೂ ಶೇ.40ರಷ್ಟು ಕಮಿಷನ್ ಪಡೆಯುತ್ತಿರುವ ಬಿಜೆಪಿ ಸರ್ಕಾರ ತೊಲಗಲಿ-ಈಶ್ವರಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನವನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ|ಎಂ.ಬಿ. ಪಾಟೀಲ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮುಂತಾದವರು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿವೆ. ಸರ್ಕಾರದ ವೈಫಲ್ಯ ಬೇರೆಡೆ ಸೆಳೆಯಲು ಜನರ ಭಾವನೆ ಕೆರಳಿಸಿ, ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಳೆದ 2021ರ ಜೂನ್‌ನಲ್ಲಿಯೇ ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿ, ಪ್ರತಿಯೊಂದು ಇಲಾಖೆಯಲ್ಲಿ ಕಾಮಗಾರಿಗೆ ಬಿಲ್ ಪಾಸ್ ಮಾಡಲು ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಇದರಿಂದ ಗತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಲಿಖೀತ ಮನವಿ ಸಲ್ಲಿಸಿದ್ದರು. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಗೊತ್ತಿತ್ತು. ಆದರೆ, ಪ್ರಧಾನಿ ಮೌನ ವಹಿಸಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ, ಶೇ.40ರಷ್ಟು ಕಮಿಷನ್ ವಿಷಯ ಗೊತ್ತಿದ್ದರೂ ಮೌನವಾಗಿ, ಸಮ್ಮತಿ ವಹಿಸಿದ್ದಾರೆ ಎಂದು ಆರೋಪಿಸಿದರು.
ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ, ಆತ್ಮಹತ್ಯೆಗೆ ನೇರವಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನಿರ್ವಹಿಸುತ್ತಿದ್ದ ಈಶ್ವರಪ್ಪ ಅವರೇ ನೇರ ಹೊಣೆ. ಆದರೂ, ನಾನು ರಾಜೀನಾಮೆ ಕೊಡಲ್ಲ ಎನ್ನುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್‌ನಿಂದ ಉಗ್ರ ಹೋರಾಟ ನಡೆಸಲಾಯಿತು. ರಾಜ್ಯದ ಜನರೂ ಸರ್ಕಾರ, ಈಶ್ವರಪ್ಪ ವಿರುದ್ಧ ಮುಗಿಬಿದ್ದ ಬಳಿಕ ರಾಜೀನಾಮೆ ಕೊಟ್ಟಿದ್ದಾರೆ. ಭ್ರಷ್ಟಾಚಾರದಿಂದ ಇಡೀ ರಾಜ್ಯದ ಜನ ಬೇಸತ್ತಿದ್ದಾರೆ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಲಂ ಅಡಿ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈಶ್ವರಪ್ಪ ಅವರನ್ನು ಬಂಧಿಸುವ ಜತೆಗೆ ಇಡೀ ಪ್ರಕರಣವನ್ನು ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊರೊನಾ ವೇಳೆಯೂ ಸಾವಿರಾರು ಕೋಟಿ ಭ್ರಷ್ಟಾಚಾರ ಮಾಡಿದರು.
ಪಿಎಸ್‌ಐ ನೇಮಕದಲ್ಲೂ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ದಿವ್ಯಾ ಹಂಗರಗಿ ಯಾರು ಎಂಬುದು ಜಾಹಿರಾಗಿದೆ. ಆದರೂ, ಪಿಎಸ್‌ಐ ನೇಮಕದಲ್ಲಿ ನಮ್ಮ ಪಾಲಿಲ್ಲ ಎಂದು ಬೊಂಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವರ ಎಚ್.ವೈ. ಮೇಟಿ, ಅಜಯಕುಮಾರ ಸರನಾಯಕ, ಆರ್.ಬಿ. ತಿಮ್ಮಾಪುರ, ಉಮಾಶ್ರೀ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಜೆ.ಟಿ. ಪಾಟೀಲ, ಪ್ರಮುಖರಾದ ಬಸವಪ್ರಭು ಸರನಾಡಗೌಡ, ಸತೀಶ ಬಂಡಿವಡ್ಡರ, ನಾಗರಾಜ ಹದ್ಲಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತಾ ಎನ್. ದೊಡ್ಡಮನಿ, ಎಸ್.ಎನ್. ರಾಂಪುರ, ಹಾಜಿಸಾಬ ದಂಡಿನ ಮುಂತಾದವರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
150 ಸ್ಥಾನ ಗೆಲ್ಲುವ ಗುರಿ: ರಾಜ್ಯದ ಬಿಜೆಪಿ ಸರ್ಕಾರ ಯಾವುದೇ ಸಂದರ್ಭದಲ್ಲಿ ಬೀಳಲಿದೆ. ಜನರೂ ಅದನ್ನೇ ಬಯಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರಲಿದೆ. -ಡಾ| ಎಂ.ಬಿ. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು