
Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ
Team Udayavani, Jun 2, 2023, 10:20 PM IST

ಮಹಾಲಿಂಗಪುರ : ಗುರುವಾರ ಸಂಜೆ ಪಟ್ಟಣದಲ್ಲಿ ಭಾರಿ ಬಿರುಗಾಳಿ ಸಹಿತ ಸುರಿದ ಮಹಾಮಳೆಯು ಪಟ್ಟಣದ ತುಂಬ ಹಲವಾರು ಆವಾಂತರಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಹಾನಿಯುಂಟು ಮಾಡಿದೆ.
ಪಟ್ಟಣದ ಕೆಂಗೇರಿಮಡ್ಡಿ, ಬುದ್ನಿಪಿಡಿ, ಕಲ್ಪಡ, ಬಸವನಗರ, ಪೊಲೀಸ್ ಠಾಣೆ, ಪಿಕೆಪಿಎಸ್ ಆವರಣ, ರಬಕವಿ ರಸ್ತೆ ಸೇರಿದಂತೆ ಹಲವು ಭಾಗಳಲ್ಲಿ ನೂರಾರು ಮರಗಳು, ವಿದ್ಯುತ್ ಕಂಬಗಳು ಬಿದ್ದು ಸಾಕಷ್ಟು ಹಾನಿಯಾಗಿದೆ.
ಮನೆಗಳಿಗೆ ಹಾನಿ: ಕೆಂಗೇರಿಮಡ್ಡಿ ಕಿನಾಲ್ ಹತ್ತಿರ ಜಿಎಲ್ಬಿಸಿ ಕಿನಾಲ್ ಪಕ್ಕದಲ್ಲಿನ ಮರಗಳು ಬಿದ್ದು ಒಂದು ಕಿರಾಣಿ ಅಂಗಡಿ, ಚಿಕನ್ ಅಂಗಡಿ, ಮೂರು ಮನೆಗಳು ಸೇರಿದಂತೆ 5 ಮನೆಗಳು ಸಂಪೂರ್ಣ ನೆಲಸಮವಾಗಿವೆ. ಚಿಕನ್ ಅಂಗಡಿಯ ಅಮಿತ್ ಕಲಾಲ ಎಂಬುವರಿಗೆ ಗಾಯವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಮನೆಯ ಮಹಿಳೆ ಮತ್ತು ಪುರುಷನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕೆಂಗೇರಿಮಡ್ಡಿಯ ರಾಜು ಕುಕ್ಕುಗೋಳ, ಭಜಂತ್ರಿ ಸೇರಿದಂತೆ 4-5 ಮನೆಗಳ ಮೇಲ್ಛಾವಣಿಯು ಸಂಪೂರ್ಣ ಹಾರಿಹೋಗಿವೆ. ನೇಕಾರ ಮನೆಯ ಮಗ್ಗಗಳು ಹಾನಿಯಾಗಿ ಲಕ್ಷಾಂತರ ನಷ್ಟವಾಗಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಳೆ ಗಾಳಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ನೂರಾರು ವಿದ್ಯುತ್ ಕಂಬಗಳು ಮುರಿದು ಬಿದ್ದು ಲಕ್ಷಾಂತರ ರೂ. ಹಾನಿಯಾಗಿದೆ.
ಶುಕ್ರವಾರ ಮುಂಜಾಯಿಂದ ಸಂಜೆವರೆಗೆ ಹೆಸ್ಕಾಂ 4 ತಂಡಗಳು ವಿದ್ಯುತ್ ಕಂಬಗಳ ದುರಸ್ಥಿ ಕಾರ್ಯ ಮಾಡಿದರೂ ಕೆಲಸ ಪೂರ್ಣಗೊಂಡಿಲ್ಲ. ಗುರುವಾರ ಸಂಜೆ 7 ರಿಂದ ಶುಕ್ರವಾರ ಸಂಜೆ 7 ವರೆಗೂ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಸಾರ್ವತ್ರಿಕರು ಪರದಾಡುವಂತಾಗಿತ್ತು.
ಗುರುವಾರ ಸಂಜೆ ಕೇವಲ ಗಂಟೆಗಳ ಕಾಲ ಸುರಿದ ಆಣೆಕಲ್ಲು ಮಳೆ ಮತ್ತು ವಿಪರೀತ ಗಾಳಿಯು ಹಲವಾರು ಆವಾಂತರಗಳನ್ನು ಸೃಷ್ಟಿಸಿ, ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿ ವಿದ್ಯುತ್ ಪೂರೈಕೆ ಇಲ್ಲದೇ ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳುಂಟಾಗಿ ಸಾರ್ವಜನಿಕರನ್ನು ಹೈರಾಣಾಗಿಸಿದೆ.
ನೀರಿಗಾಗಿ ಮಹಿಳೆಯರ ಪರದಾಟ ಹೇಳತೀರದಾಗಿತ್ತು. ಪಟ್ಟಣದ 23 ವಾರ್ಡಗಳಲ್ಲಿ ಕೇವಲ 8-10 ಕೈಪಂಪ್ (ಮೋಟಾರ್ ರಹಿತ ಕೊಳವೆ ಬಾವಿ ) ಇರುವುದರಿಂದ ಕೈಪಂಪ್ ಇರುವ ಪ್ರದೇಶಗಳಲ್ಲಿ ನೀರಿಗಾಗಿ ಗಂಟೆಗಟ್ಟಲೆ ಕಾಯುವಂತಾಗಿತ್ತು. ಅದರಲ್ಲೂ ಕೆಂಗೇರಿಮಡ್ಡಿ ಬಡಾವಣೆಯ ಸರ್ಕಾರಿ ಶಾಲೆಯ ಹತ್ತಿರದ ಕೈಪಂಪ್ ಮುಂದೆ ನೀರಿಗಾಗಿ ಮುಂಜಾನೆಯಿಂದ ಸಂಜೆವರೆಗೂ ನೂರಾರು ಮಹಿಳೆಯರು ಪರದಾಡುತ್ತಿದ್ದ ದೃಶ್ಯಗಳು ಸರ್ವೆ ಸಾಮಾನ್ಯವಾಗಿದ್ದವು.
ಶಾಸಕ ಸಿದ್ದು ಸವದಿ ಭೇಟಿ,ಪರಿಶೀಲನೆ
ಮಳೆಗಾಳಿಗೆ ಹಾನಿಯಾದ ಕೆಂಗೇರಿಮಡ್ಡಿ ಬಡಾವಣೆಯ ಮನೆಗಳಿಗೆ ಶಾಸಕ ಸಿದ್ದು ಸವದಿ ಶುಕ್ರವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಮಳೆಗಾಳಿಗೆ ಮಹಾಲಿಂಗಪುರ ಪಟ್ಟಣದ ಸಾಕಷ್ಟು ಹಾನಿಯಾಗಿದೆ. ತಹಶಿಲ್ದಾರ ಮತ್ತು ಪುರಸಭೆ ಅಧಿಕಾರಿಗಳಿಗೆ ಸರ್ವೆ ಮಾಡಲು ತಿಳಿಸಲಾಗಿದೆ. ನೈಜವಾಗಿ ಹಾನಿಗೊಳಗಾದ ಪ್ರತಿಯೊಂದು ಮನೆಯ ದಾಖಲೆಗಳನ್ನು ಪಡೆದುಕೊಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದೇನೆ ಎಂದರು.
ಪಾರದರ್ಶಕವಾಗಿ ಸರ್ವೆ ಮಾಡಿ : ಸಿದ್ದು ಕೊಣ್ಣೂರ
ಮಳೆಗಾಳಿಗೆ ಹಾನಿಯಾದ ಕೆಂಗೇರಿಮಡ್ಡಿ, ಸಾಧುನಗುಡಿ, ಕಲ್ಪಡ ಏರಿಯಾದ ಮನೆಗಳಿಗೆ ಭೇಟಿ ನೀಡಿ ಮಾತನಾಡಿದ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಗಿಡಮರಗಳು, ವಿದ್ಯುತ್ ಕಂಬಗಳು ಬಿದ್ದು ಸಾಕಷ್ಟು ಹಾನಿಯಾಗಿದೆ. ಅಧಿಕಾರಿಗಳು ಪಾರದರ್ಶಕವಾಗಿ ಹಾನಿಯಾದ ಪ್ರತಿಯೊಂದು ಮನೆಯ ಸರ್ವೆ ಕಾರ್ಯಮಾಡಿ, ಅರ್ಹ ಸಂತ್ರಸ್ತರಿಗೆ ನ್ಯಾಯ ಒದಗಿಸಿ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು

UK ವಿಶ್ವದಲ್ಲೇ ಬಲಿಷ್ಠ ಲೇಸರ್ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ

Daily Horoscope: ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ, ಮಂಗಲ ಕಾರ್ಯದ ಸಿದ್ಧತೆ