ಲಾಕ್‌ಡೌನ್ ನಂತರವೂ ನಿಯಮ ಪಾಲಿಸಿ
Team Udayavani, Apr 25, 2020, 1:10 PM IST
ಬೀಳಗಿ: ಲಾಕಡೌನ್ ಅವಧಿ ಮುಗಿದ ನಂತರ ರಾಜ್ಯದ ಎಲ್ಲ ಕೈಗಾರಿಕೆಗಳು ಆರಂಭವಾಗಲಿವೆ. ಲಾಕಡೌನ್ ಅವಧಿಯ ನಂತರವೂ ಕಾರ್ಖಾನೆಗಳಲ್ಲಿ ದುಡಿಯುವ ಉದ್ಯೋಗಿಗಳು ಆರೋಗ್ಯ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಮುರುಗೇಶ ನಿರಾಣಿ ಸಲಹೆ ನೀಡಿದ್ದಾರೆ.
ಕೈಗಾರಿಕೆಗಳಲ್ಲಿ ಕಾರ್ಮಿಕರು ಕೂಡಿ ಕೆಲಸ ಮಾಡಬೇಕಾದ ಸನ್ನಿವೇಶಗಳು ಹೆಚ್ಚಾಗಿರುತ್ತವೆ. ಮುಂಜಾಗ್ರತೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ಆಗಾಗ ಕೈ ತೊಳೆದುಕೊಳ್ಳುವುದು ಹಾಗೂ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಕಾರ್ಖಾನೆಗಳ ಆಡಳಿತ ಮಂಡಳಿಯವರು ಹಾಗೂ ಅಧಿಕಾರಿಗಳು ಕಾರ್ಮಿಕರಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬಬೇಕು ಹಾಗೂ ನೆಮ್ಮದಿಯ ಜೀವನ ನಡೆಸುವುದಕ್ಕೆ ಅವಶ್ಯಕ ಮಾರ್ಗದರ್ಶನ ನೀಡಬೇಕು. ಕೋವಿಡ್ 19 ಭೀತಿಯ ಈ ಸಂದಿಗ್ಧ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಜನಮಾನಸದಲ್ಲಿ ಹೊಸ ಭಾರತವನ್ನು ಕಟ್ಟಬಲ್ಲವು ಎಂಬ ವಿಶ್ವಾಸ ಮೂಡಿಸಿದ್ದಾರೆ ಎಂದು ಹೇಳಿದರು.