
ಮಹಾಲಿಂಗೇಶ್ವರ ಜಟೋತ್ಸವಕ್ಕೆ ಜನ ಸಾಗರ ;ದೇವರ ಮೊರೆ ಹೋದ ರಾಜಕಾರಣಿಗಳು
Team Udayavani, Mar 22, 2023, 5:34 PM IST

ಮಹಾಲಿಂಗಪುರ : ಹಿಂದೂಗಳ ಪವಿತ್ರ ಹಬ್ಬ, ವರ್ಷದ ಆರಂಭ ದಿನದವಾದ ಯುಗಾದಿಯ ದಿನ ನಸುಕಿನ ಜಾವ ನಡೆಯುವ ಜಟೋತ್ಸವ ವಿಕ್ಷಣೆಗಾಗಿ ಮುಂಜಾನೆ ಬುಧವಾರ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭಕ್ತ ಜನಸಾಗರವೇ ಹರಿದು ಬಂದಿತ್ತು.
ಜಟೋತ್ಸವ
ಪವಾಡ ಪುರುಷ ಮಹಾಲಿಂಗೇಶ್ವರರ ಜಟೆಗಳು ವಿಜ್ಞಾನಕ್ಕೆ ಸವಾಲು ಎಂಬಂತೆ ಪ್ರತಿವರ್ಷ ಒಂದು ಗೋಧಿ ಕಾಳಿನಷ್ಟು ಬೆಳೆಯುತ್ತಿವೆ. ಇಂತಹ ಪವಾಡ ಸದೃಶ್ಯ ಜಟೆಗಳನ್ನು ನೋಡುವದೇ ಭಕ್ತರ ಸೌಭಾಗ್ಯ. ಇಂತಹ ವೈಶಿಷ್ಟ್ಯ ಪೂರ್ಣ ಜಟೆಗಳ ಅಭಿಷೇಕ (ಜಟೋತ್ಸವ)ದ ವಿಶೇಷವಾಗಿದೆ.
ಜಟೋತ್ಸವ ವೀಕ್ಷಣೆಯೇ ಪುಣ್ಯ
ಯುಗಾದಿಯ ಪಾಡ್ಯೆ, ಹಿಂದೂಗಳ ವರ್ಷದ ಪ್ರಥಮ ದಿನ ನಡೆಯುವ ಜಟೋತ್ಸವ ವೀಕ್ಷಣೆ ಮಾಡುವದೇ ಪುಣ್ಯ ಎಂದು ಭಾವಿಸಿರುವ ಸಾವಿರಾರು ಭಕ್ತರು ಪ್ರತಿವರ್ಷ ಯುಗಾದಿ ಪಾಡ್ಯೆ ಮುಂಜಾನೆ ನಡೆಯುವ ಜಟೋತ್ಸವಕ್ಕೆ ನಸುಕಿನ ಜಾವದಿಂದಲೇ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮಹಾಲಿಂಗೇಶ್ವರರಿಗೆ ಪೂಜೆ ಸಲ್ಲಿಸಿ, ಜಟೋತ್ಸವ ವೀಕ್ಷಿಸಿ ಪುನೀತರಾದರು.
ಶ್ರೀಮಠದ ಪೀಠಾಧಿಪತಿ ಜಗದ್ಗುರು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಜಿಯವರು ಜಟೋತ್ಸವ ನೇರವೇರಿಸಿದರು. ಮಹಾಲಿಂಗೇಶ್ವರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗಿತ್ತು.
ದೇವರ ಮೊರೆ ಹೋದ ರಾಜಕಾರಣಿಗಳು
ಯುಗಾದಿ ಜಟೋತ್ಸವದಲ್ಲಿ ಭಾಗವಹಿಸಿದ ರಾಜಕಾರಣಿಗಳಿಗೆ ಗೆಲುವು ಶತಸಿದ್ಧ ಎಂಬ ಪ್ರತೀತಿ ಇದೆ. ಅದಕ್ಕಾಗಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಅವರು ಕಳೆದ ಇಪ್ಪತ್ತು ವರ್ಷಗಳಿಂದ ತಪ್ಪದೇ ಯುಗಾದಿ ಜಟೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.
ಶೀಘ್ರದಲ್ಲೆ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಈ ವರ್ಷದ ಯುಗಾದಿಯ ಜಟೋತ್ಸವಕ್ಕೆ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ತೇರದಾಳ ಮತಕ್ಷೇತ್ರ ಹಿಂದುಳಿದ ವರ್ಗಗಳ ಪಕ್ಷೇತರ ಅಭ್ಯರ್ಥಿ ಅಂಬಾದಾಸ ಕಾಮೂರ್ತಿ, ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿ, ನೇಕಾರ ಮುಖಂಡ ರಾಜೇಂದ್ರ ಅಂಬಲಿ, ಮುಧೋಳ ಮತಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರು ಭಾಗವಹಿಸಿ, ಮಹಾಲಿಂಗೇಶ್ವರರಿಗೆ ಪೂಜೆ ಸಲ್ಲಿಸಿ, ಜಟೋತ್ಸವ ವೀಕ್ಷಿಸಿ ತಮ್ಮ ತಮ್ಮ ಗೆಲುವಿಗಾಗಿ ಪ್ರಾರ್ಥಿಸಿದರು. ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಜಟೋತ್ಸವ ವೀಕ್ಷಿಸಿದರು.
ಟಾಪ್ ನ್ಯೂಸ್
