
ಬಾದಾಮಿಯಲ್ಲಿ ಸಿದ್ದು “ಭರ್ಜರಿ ರೋಡ್ ಶೋ’
ಐದು ವರ್ಷ ಸಹಕಾರ ನೀಡಿದ ಕ್ಷೇತ್ರದ ಜನರಿಗೆ ಕೃತಜ್ಞತೆ
Team Udayavani, Mar 25, 2023, 6:22 AM IST

ಬಾಗಲಕೋಟೆ: ಸುರಕ್ಷಿತ ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತವರು ಕ್ಷೇತ್ರ ಬಾದಾಮಿಯಲ್ಲಿ ಶುಕ್ರವಾರ ಭರ್ಜರಿ ರೋಡ್ ಶೋ ನಡೆಸಿದರು.
ತಾವು ಬಾದಾಮಿ ಕ್ಷೇತ್ರದ ಶಾಸಕರಾದ ಬಳಿಕ ಇದೇ ಮೊದಲ ಬಾರಿಗೆ 1 ಸಾವಿರ ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಗೆ ಆಗಮಿಸಿದ್ದ ಅವರು, ಬಾದಾಮಿ ಪಟ್ಟಣದ ರಾಮದುರ್ಗ ಕ್ರಾಸ್‌ನಿಂದ ಎಪಿಎಂಸಿ ಕಚೇರಿವರೆಗೆ ಸುಮಾರು ಒಂದು ಕಿಮೀವರೆಗೂ ರೋಡ್ ಶೋ ನಡೆಯಿತು. ಈ ವೇಳೆ ರಾಮದುರ್ಗ ಕ್ರಾಸ್‌ಗೆ ಬಂದಿಳಿಯುತ್ತಿದ್ದಂತೆ, ಸಿದ್ದರಾಮಯ್ಯ ಅವರು ಮಲಪ್ರಭಾ ನದಿಗೆ ನಿರಂತರ ನೀರು ಬಿಡಿಸಿದ್ದರಿಂದ ನಾವು ಕಬ್ಬು ಬೆಳೆದಿದ್ದೇವೆ ಎಂದು ಘೋಷಣೆ ಕೂಗುತ್ತಿದ್ದ ಅಭಿಮಾನಿಗಳು, ಕಬ್ಬಿನ ತುಂಡುಗಳಿಂದ ತಯಾರಿಸಿದ್ದ ಕ್ರೇನ್ ಮೂಲಕ ಬೃಹತ್ ಹಾರ ಹಾಕಿದರು. ಬಳಿಕ ಹೂವಿನ ಸುರಿಮಳೆಗೈದು, ಘೋಷಣೆ ಕೂಗಿದರು. ಸಾಹೇಬ್ರ ನೀವು ಮತ್ತೆ ಬಾದಾಮಿಗೆ ಬರಬೇಕ್ರಿ ಎಂದು ಕೂಗುತ್ತಿದ್ದರು.
ಸುಮಾರು ಒಂದು ಕಿಮೀವರೆಗೂ ನಡೆದ ರೋಡ್ ಶೋನಲ್ಲಿ ಸಾವಿರಾರು ಅಭಿಮಾನಿಗಳು ಕೇಕೆ ಹಾಕಿ, ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು. ಅಲ್ಲದೇ ಡೊಳ್ಳು ಕುಣಿತ ಸಹಿತ ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಅಭಿಮಾನಿಗಳ ಗಲಾಟೆ:
ರೋಡ್ ಶೋ ಮುಗಿಸಿ ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೆ ಜನರು ಕೂಗು ಜೋರಾಯಿತು. ಹೌಧ್ದೋ ಹುಲಿಯಾ ಎಂದು ಹಲವರು ಕೂಗಿದರೆ, ಟಗರು ಬಂತು ಟಗರು ಎಂದು ಇನ್ನೂ ಕೆಲವರು ಕೂಗಿದರು. ಸಿದ್ದರಾಮಯ್ಯ ಭಾಷಣ ಆರಂಭಿಸುವ ಮೊದಲೇ ಹಲವರು ಸಾಹೇಬ್ರ ನೀವು ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದರು. ವೇದಿಕೆ ಮುಂಭಾಗ ಕುಳಿತಿದ್ದ ಕೆಲವರು ನಿರಂತರವಾಗಿ ಬಾದಾಮಿಗೆ ಬರ್ರಿ, ಬಾದಾಮಿಗೆ ಬರ್ರಿ ಎಂದು ಕೂಗುತ್ತಲೇ ಇದ್ದರು. ಇದರಿಂದ ಕೊಂಚ ಗರಂ ಆದ ಸಿದ್ದರಾಮಯ್ಯ, ಸುಮ್ಮನಿರಿ. ಏ ಪೊಲೀಸರೇ ನೋಡ್ರಿ ಅಲ್ಲಿ ಎಂದು ಹೇಳುತ್ತಿದ್ದರು. ಸುಮಾರು ಎರಡು ನಿಮಿಷಗಳ ಕಾಲ ಭಾಷಣ ಮಾಡದೇ ಸುಮ್ಮನೇ ನಿಂತರು. ಬಳಿಕ ನಾನು ನಿಮ್ಮವನು, ಬಾದಾಮಿ ಕ್ಷೇತ್ರದ ಜನರನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಋಣ ತೀರಿಸಲೂ ಆಗಲ್ಲ ಎಂದರು.
ಐದು ವರ್ಷ ಸಹಕಾರಕ್ಕೆ ಕೃತಜ್ಞತೆ:
ಒಟ್ಟಾರೆ, ಕ್ಷೇತ್ರದ ಶಾಸಕರಾಗಿ ಐದು ವರ್ಷ ಪೂರೈಸುತ್ತಿರುವ ಸಿದ್ದರಾಮಯ್ಯ, ಈ ವೇಳೆ ತಮಗೆ ಸಹಕಾರ ನೀಡಿದ ಬಾದಾಮಿಯ ಪಕ್ಷದ ಎಲ್ಲ ನಾಯಕರು, ಪ್ರಮುಖರು, ಕಾರ್ಯಕರ್ತರು ಹಾಗೂ ಅವರ ಅವಧಿಯಲ್ಲಿ ಕೆಲಸ ಮಾಡಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಭಾಷಣ ಮುಗಿದು ತೆರಳುತ್ತಿರುವ ವೇಳೆ, ಮುಸ್ಲಿಂ ಸಮುದಾಯ ಪ್ರಮುಖರು ಟೋಪಿ ಹಾಕಿ ಸನ್ಮಾನಿಸಿದರು. ಆಗ ಮತ್ತೆ ಮೈಕ್ ಕೈಗೆ ತೆಗೆದುಕೊಂಡ ಸಿದ್ದು, ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ರಂಜಾನ್ ಆರಂಭವಾಗಿದೆ. ರಾಜ್ಯದ ಸಮಸ್ತ ಮುಸ್ಲಿಂ ಬಂಧುಗಳಿಗೆ ನಾನು ಶುಭ ಕೋರುವೆ ಎಂದು ತೆರಳಿದರು.
ಆತ್ಮಹತ್ಯೆ ಬೆದರಿಕೆ, ರಕ್ತದಲ್ಲಿ ಸಿದ್ದುಗೆ ಪತ್ರ
ಕೆಲವು ಅಭಿಮಾನಿಗಳು, ಬೆಳ್ಳಿ ಗದೆ ನೀಡಿ ಸನ್ಮಾನಿಸಿದರೆ, ಗುಳೇದಗುಡ್ಡ ಪುರಸಭೆ ಸದಸ್ಯೆ ಪತಿ ಗೋಪಾಲ ಬಟ್ಟಡ ಎಂಬುವವರು, ನೀವು ಮತ್ತೆ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಇಲ್ಲದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ರಕ್ತದಲ್ಲಿ ಬರೆದ ಪತ್ರವನ್ನು ಸಿದ್ದರಾಮಯ್ಯಗೆ ಅರ್ಪಿಸಿದರು. ಅದನ್ನು ಓದಿದ ಸಿದ್ದು ಮುಗು°ಳನಕ್ಕು ಸುಮ್ಮನಾದರು. ಇನ್ನು ಸಿದ್ದರಾಮಯ್ಯ ಭಾಷಣ ಮಾಡುವಾಗಲೇ ಸೀಮೆಎಣ್ಣೆ ಜತೆಗೆ ಬಂದಿದ್ದ ಮತ್ತೊಬ್ಬ ಅಭಿಮಾನಿ, ನೀವು ಬಾದಾಮಿಗೆ ಬರದಿದ್ದರೆ ನಾನು ಸಾಯುವೆ ಎಂದು ಹೇಳುತ್ತಿದ್ದ. ಆಗ ಪೊಲೀಸರು ಆತನ ಕೈಯಿಂದ ಸೀಮೆ ಎಣ್ಣೆ ಬಾಟಲ್ ಕಸಿದುಕೊಂಡರು. ಈ ದೃಶ್ಯ ಕಂಡ ಸಿದ್ದು, ಏ ಹೋಗಪ್ಪ. ಪೊಲೀಸರೆ ಕಂಪ್ಲೇಟ್ ಮಾಡಿ ಅವರ ವಿರುದ್ಧ ಎಂದರು. ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಪುನಃ 2023ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದಲೇ ಸ್ಪರ್ಧೆಗೆ ಆಗ್ರಹಿಸಿ ತಮಿನಾಳ ಗ್ರಾಮದ ಅಭಿಮಾನಿ ಬಸವರಾಜ ಬಸರಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಬ್ಲೇಡ್‌ನಿಂದ ತಮ್ಮ ಕೈ ಕೊಯ್ದುಕೊಂಡರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
