ರಾಜ್ಯದ ಏಳು ನದಿಗಳಲ್ಲಿ ಅಟಲ್‌ ಅಸ್ಥಿ ವಿಸರ್ಜನೆ

Team Udayavani, Aug 22, 2018, 6:00 AM IST

ಬೆಂಗಳೂರು: ಕೃಷ್ಣಾ , ಕಾವೇರಿ, ತುಂಗಾ, ಶರಾವತಿ ಸೇರಿ ರಾಜ್ಯದ ಏಳು ನದಿಗಳಲ್ಲಿ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ದೆಹಲಿಗೆ ತೆರಳಿದ್ದು, ಬುಧವಾರ ಮಧ್ಯಾಹ್ನ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಅವರ ಅಸ್ಥಿ ಕಳಸ ತರಲಿದ್ದಾರೆ. ನಂತರ ಆ.25 ರವರೆಗೆ ರಾಜ್ಯದ ಎಲ್ಲ ನದಿಗಳಲ್ಲಿ ವಿಸರ್ಜನೆ ನಡೆಯಲಿದೆ. 

ಆ.26 ರಂದು  ಬೆಂಗಳೂರಿನಲ್ಲಿ ವಾಜಪೇಯಿ ಶ್ರದ್ದಾಂಜಲಿ ಸಭೆ ಆಯೋಜಿಸಲಾಗಿದೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ವಾಜಪೇಯಿ ಅವರ ಅಸ್ಥಿ ಕಳಸವನ್ನು ನಾನೇ ದೆಹಲಿಗೆ ಹೋಗಿ ಖುದ್ದಾಗಿ ತರಲಿದ್ದು ರಾಜ್ಯದ ನದಿಗಳಲ್ಲಿ ವಿಸರ್ಜನೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಬುಧವಾರ ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೇಂದ್ರ ಸಚಿವ ಸದಾನಂದಗೌಡ, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ಸಹಸ್ರಾರು ಕಾರ್ಯಕರ್ತರು ಅಸ್ಥಿ ಕಳಸ ಸ್ವಾಗತಿಸಲಿದ್ದಾರೆ. ನಂತರ ಅದನ್ನು ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ಮೆರವಣಿಗೆಯಲ್ಲಿ ಕರೆತರಲಾಗುವುದು. ಕಾರ್ಯಾಲಯದ ಮುಂಭಾಗದಲ್ಲಿ ಪುಷ್ಪಾರ್ಚನೆ ಆಯೋಜಿಸಲಾಗಿದೆ ಎಂದರು. ಗುರುವಾರ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಿಂದ ಬೆಳಗ್ಗೆ 9 ಗಂಟೆಗೆ ಅಸ್ಥಿ ಕಳಸವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ರಾಮನಗರ, ಚನ್ನಪಟ್ಟಣ, ಮದ್ದೂರು,
ಮಂಡ್ಯ ಮೂಲಕ ಶ್ರೀರಂಗಪಟ್ಟಣ ತಲುಪಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಗುವುದು. ಕೇಂದ್ರ ಸಚಿವ ಅನಂತಕುಮಾರ್‌, ಸಂಸದ ಪ್ರತಾಪ್‌ಸಿಂಹ, ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಭಾಗವಹಿಸಲಿದ್ದಾರೆ. 

ಆ.25 ರಂದು ಐದು ಕಡೆ ಅಸ್ಥಿ ವಿಸರ್ಜನೆ ನಡೆಯಲಿದ್ದು, ಮಂಗಳೂರು-ಉಡುಪಿ ಜಿಲ್ಲೆಯ ನೇತ್ರಾವತಿ ನದಿಯಲ್ಲಿ ಉಪ್ಪಿನಂಗಡಿ ಬಳಿ ಅಸ್ಥಿ ವಿಸರ್ಜನೆ ಮಾಡಲಾಗುವುದು. ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್‌ ಕಟೀಲ್‌, ಶಾಸಕ ಸಿ.ಟಿ.ರವಿ ಹಾಗೂ ಧಾರವಾಡ-ಹುಬ್ಬಳ್ಳಿ, ಗದಗ, ಹಾವೇರಿ ಜಿಲ್ಲೆಯ ವ್ಯಾಪ್ತಿಯ ಮಲಪ್ರಭಾ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಶಾಸಕರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. 

ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ, ಸಂಸದ ಗದ್ದೀಗೌಡರ್‌, ಶಾಸಕ ಗೋವಿಂದ ಕಾರಜೋಳ ಹಾಗೂ ಬೀದರ್‌, ಕಲಬುರಗಿಯ ಕಾರಂಜಾ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಭಗವಂತ ಕೂಬಾ ಭಾಗವಹಿಸಲಿದ್ದಾರೆ. ಬಳ್ಳಾರಿ -ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಸಂಸದ ಕರಡಿ ಸಂಗಣ್ಣ, ಶಾಸಕ ಶ್ರೀರಾಮುಲು ಭಾಗವಹಿಸಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯಲ್ಲಿ ಹೊನ್ನಾವರ ಬಳಿ ಅಸ್ಥಿ ವಿಸರ್ಜನೆಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜಿ.ನಾಯ್ಕ ಹಾಗೂ ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆಗೆ ಶಾಸಕ ಆಯನೂರು ಮಂಜುನಾಥ್‌, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ