
ಕಬ್ಬನ್‌ಪಾರ್ಕ್‌ನಲ್ಲಿ ಹೆಚ್ಚಿದ ಭಿಕ್ಷುಕರ ಕಾಟ
Team Udayavani, Jun 1, 2023, 1:07 PM IST

ಬೆಂಗಳೂರು: ಹೊಟ್ಟೆಪಾಡಿಗಾಗಿ ಬೇಡುತ್ತಿದ್ದ ಭಿಕ್ಷಾಟನೆ ಇದೀಗ ಒಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಜನರ ಅನುಕಂಪ, ಮುಗ್ಧತೆಯ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಭಿಕ್ಷುಕರ ಕಾಟ ಹೆಚ್ಚಾಗುತ್ತಿದೆ.
ಮೊದಲೆಲ್ಲಾ ಬಸ್ಸು, ರೈಲು ನಿಲ್ದಾಣ ಸೇರಿದಂತೆ ಧಾರ್ಮಿಕ ಕೇಂದ್ರಗಳ ಮುಂದೆ ಭಿಕ್ಷೆ ಬೇಡುತ್ತಿ ದ್ದರು. ಇದೀಗ ಸಿಗ್ನಲ್, ರಸ್ತೆ ಬದಿಗಳು ಮಾತ್ರವಲ್ಲ, ಉದ್ಯಾನವನಗಳಿಗೂ ಭಿಕ್ಷುಕರು ಲಗ್ಗೆ ಇಟ್ಟಿದ್ದಾರೆ. ವಾರಾಂತ್ಯ ಹಾಗೂ ಸಾರ್ವಜನಿಕ ರಜೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಿಕ್ಷುಕರು ಕಾಣಿಸಿಕೊಳ್ಳುತ್ತಾರೆ. ಉದ್ಯಾನ ನಗರಿ ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ಒಂದಾದ ಹಾಗೂ ನಗರದ ಅತೀ ದೊಡ್ಡ ಉದ್ಯಾನವನ ಕಬ್ಬನ್‌ಪಾರ್ಕ್ ಎಲ್ಲೆಡೆಯಿಂದ ಆಗಮಿಸುವ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಅಲ್ಲದೆ, ನಗರ ವಾಸಿಗಳಲ್ಲಿ ತಣ್ಣನೆಯ ಶುದ್ಧ ಗಾಳಿ ಸೇವನೆಗಾಗಿ ಆಗಮಿಸುವ ವಾಯುವಿಹಾರಿಗಳು, ತಮ್ಮ ಮಕ್ಕಳೊಂದಿಗೆ ಕುಟುಂಬ ಸಮೇತ ಹಚ್ಚಹಸಿರಿನ ಗಿಡ-ಮರಗಳ ನಡುವೆ ಸಮಯ ಕಳೆಯಲೆಂದು ಮತ್ತು ಕಾಲೇಜು ವಿದ್ಯಾರ್ಥಿಗಳು, ಪ್ರೇಮಿಗಳು ಸೇರಿದಂತೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಈ ಕಬ್ಬನ್ ಪಾರ್ಕಿಗೆ ಸುಮಾರು 8 ಗೇಟ್‌ಗಳು ಇದ್ದು, ಪ್ರತಿ ಗೇಟ್‌ನಲ್ಲೂ ಸೆಕ್ಯೂರಿಟಿ ಗಾರ್ಡ್ ನೇಮಿಸಲಾಗಿದೆ. ಇವರಲ್ಲದೆ, ಇನ್ನೂ 8-10 ಜನ ಸೆಕ್ಯುರಿಟಿ ಗಾರ್ಡ್‌ಗಳು ಉದ್ಯಾನದ ಒಳಗಡೆ ಜನರಿಗೆ ಮತ್ತು ಗಿಡ-ಮರಗಳಿಗೆ ಯಾವುದೇ ತೊಂದರೆಗಳಾಗದಂತೆ ಎಚ್ಚರ ವಹಿಸಲು ನಿಯೋಜಿಸಲಾಗಿದೆ.
ಒಟ್ಟು 15 ರಿಂದ 20 ಸೆಕ್ಯೂರಿಟಿ ಗಾರ್ಡ್‌ಗಳಿದ್ದರೂ ಚಿಕ್ಕದೊಂದು ದೇವರ ಮೂರ್ತಿಯನ್ನು ಹಿಡಿದು ನಿತ್ಯ 10 ರಿಂದ 15 ಮಹಿಳಾ ಭಿಕ್ಷುಕಿಯರು ಹಾಗೂ ಮಂಗಳಮುಖಿಯರು ಉದ್ಯಾನದ ಒಳಗೆ ಬರುತ್ತಾರೆ. ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಸ್ವಾತಂತ್ರ್ಯವಾಗಿ ಕಾಲಕಳೆಯುವ ಸಂದರ್ಭಗಳಲ್ಲಿ ಭಿಕ್ಷುಕಿಯರು(ಕಣಿ ಹೇಳುವವರು) ಹಾಗೂ ಮಂಗಳಮುಖೀಯರು ಮಧ್ಯೆ ಪ್ರವೇಶಿಸಿ, ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಕೆಲವು ಮಕ್ಕಳು ಅವರನ್ನು ನೋಡಿ ಭಯ ಪಡುತ್ತಾರೆ ಎಂದು ಪ್ರವಾಸಿಗರು ದೂರಿದ್ದಾರೆ.
ನಿರ್ವಹಣೆಯಲ್ಲಿ ವೈಫಲ್ಯ: ಕಬ್ಬನ್ ಪಾರ್ಕ್ ನಿರ್ವಹಣೆಗೆಂದು 10-15 ಜನ ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಿಸಿದ್ದರೂ, ಭಿಕ್ಷುಕರ ಕಾಟ ತಪ್ಪಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸೆಕ್ಯುರಿಟಿಗಳ ಕಣ್ಣು ಮುಂದೆಯೇ ಪ್ರವಾಸಿಗರಿಗೆ ಕಣಿ ಹೇಳುವವರು, ಮಂಗಳಮುಖೀಯರು ಕಿರಿಕಿರಿ ಮಾಡುತ್ತಿದ್ದರೂ ಅವರ ನೆರವಿಗೆ ಧಾವಿಸುವುದಿಲ್ಲ. ಕೆಲವೊಮ್ಮೆ ಪ್ರವಾಸಿಗರಿಗೂ ಭಿಕ್ಷುಕ ಅಥವಾ ಮಂಗಳಮುಖೀಯರ ನಡುವೆ ಜಗಳವಾದರು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.
ಜಗಳಕ್ಕೆ ಬರುವ ಮಂಗಳಮುಖಿಯರು: ಪಾರ್ಕಿನ ಎಲ್ಲಾ ಗೇಟ್‌ಗಳಲ್ಲಿಯೂ ಸೆಕ್ಯುರಿಟಿ ಗಾರ್ಡ್‌ಗಳು ಇರುತ್ತಾರೆ. ಆದರೂ, ಕಣ್ಣು ತಪ್ಪಿಸಿ ಪಾರ್ಕ್ ಒಳಗೆ ಬರುತ್ತಾರೆ. ಪ್ರವಾಸಿಗರಿಗೆ ತೊಂದರೆ ಕೊಡುತ್ತಿರುವುದು ಕಂಡುಬಂದಲ್ಲಿ, ಭಿಕ್ಷುಕರನ್ನು ಪಾರ್ಕಿನಿಂದ ಆಚೆ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಮಂಗಳಮುಖಿಯರು ನಮ್ಮ ಮೇಲೆ ಜಗಳಕ್ಕೆ ಬರುತ್ತಾರೆ. ಏನಾದರೂ ಹೇಳಿದರೆ ಪೊಲೀಸ್ ಕಂಪ್ಲೆಂಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಾರೆ ಎಂದು ಕಬ್ಬನ್ ಪಾರ್ಕಿನ ಸೆಕ್ಯುರಿಟಿ ಗಾರ್ಡ್ ಅಳಲು ತೋಡಿಕೊಂಡಿದ್ದಾರೆ.
ಹಣಕ್ಕೆ ಒತ್ತಾಯಿಸುವ ಮಹಿಳೆಯರ ಗ್ಯಾಂಗ್: ಯಾವುದೇ ದೈಹಿಕ ಊನ, ಅಂಗವಿಕಲತೆಗೆ ಒಳಗಾಗದ ಐದಾರು ಮಹಿಳೆಯರ ಗ್ಯಾಂಗ್‌ವೊಂದು ಇಲ್ಲಿ ಭಿಕ್ಷೆಗೆ ಇಳಿದಿದ್ದು, ಹಣಕ್ಕಾಗಿ ಪೀಡಿಸುತ್ತಾರೆ. ಹಣ ನೀಡದಿದ್ದರೆ ಒತ್ತಾಯಿಸಿಯಾದರೂ ಹಣವನ್ನು ಪಡೆಯುತ್ತಾರೆ. ಇದರಿಂದ ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಭಿಕ್ಷೆ ಕೇಳುತ್ತಿದ್ದಾರೆ ಎಂದು ನಾವು ತಂದ ತಿಂಡಿಯನ್ನು ನೀಡಲು ಹೋದರೆ ನಿರಾಕರಿಸುವ ಈ ಮಹಿಳೆಯರ ಗ್ಯಾಂಗ್ ಹಣವನ್ನೇ ನೀಡಬೇಕೆಂದು ಒತ್ತಾಯಿಸುತ್ತಾರೆ. ಈ ವಿಚಾರವಾಗಿ ಕಬ್ಬನ್ ಪಾರ್ಕ್ ನಿರ್ವಹಣಾ ಘಟಕ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ ವಾಯುವಿಹಾರಿಗಳಿಗೆ ಬಹಳ ಅನುಕೂಲವಾಗುತ್ತದೆ ಎಂದು ವಾಯುವಿಹಾರಿ ಲೋಕೇಶ್ ತಿಳಿಸುತ್ತಾರೆ.
ಪ್ರೇಮಿಗಳೇ ಟಾರ್ಗೆಟ್: ಕಬ್ಬನ್ ಪಾರ್ಕ್ ಪ್ರೇಮಿಗಳ ನೆಚ್ಚಿನ ಸ್ಥಳವೆಂದೂ ಕರೆಯುತ್ತಾರೆ. ಪ್ರತಿದಿನ ನೂರಾರು ಯುವಕ-ಯುವತಿಯರು ಭೇಟಿ ನೀಡುತ್ತಾರೆ. ಸಾರ್ವಜನಿಕ ಸ್ಥಳವೆಂದು ತಿಳಿಯದೇ, ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ ಭಿಕ್ಷುಕರು ಹಾಗೂ ಮಂಗಳಮುಖಿಯರು ಅವರ ಬಳಿ ಹೋಗಿ ಹಣ ಕೇಳುತ್ತಾರೆ. ಹಣ ಇಲ್ಲವೆಂದರೆ, ಭಾವನಾತ್ಮಕ ಮಾತುಗಳನ್ನಾಡಿ ಹಣ ದೋಚುತ್ತಾರೆ. ಕೆಲವರಂತೂ ಹಣ ಕೊಡುವವರೆಗೂ ಎದ್ದು ಹೋಗೋದೆ ಇಲ್ಲ.
ಕಬ್ಬನ್‌ಪಾರ್ಕ್‌ನಲ್ಲಿ ಮೊದಲು ಮಹಿಳಾ ಭಿಕ್ಷುಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಪ್ರವಾಸಿ ಗರಿಗೆ ಹಾಗೂ ವಾಯುವಿಹಾರಿಗಳಿಗೆ ತೊಂದರೆಯುಂಟು ಮಾಡುತ್ತಿದ್ದರಿಂದ “ಹೊಯ್ಸಳ’ ಪೊಲೀಸ್ ಅವರಿಗೆ ಕಂಪ್ಲೇಟ್ ಮಾಡಲಾಗಿದ್ದು, ಅವರ ವಿರುದ್ಧ ಎಫ್ ಐಆರ್ ಹಾಕಲು ತಿಳಿಸಲಾಗಿದೆ. ಆದ್ದರಿಂದ ಇತ್ತೀಚೆಗೆ ಭಿಕ್ಷುಕಿಯರ ಕಾಟ ಕಡಿಮೆಯಾಗಿದೆ. -ಎಸ್.ಟಿ. ಬಾಲಕೃಷ್ಣ, ತೋಟಗಾರಿಕೆ ಇಲಾಖೆ (ಕಬ್ಬನ್ ಪಾರ್ಕ್) ಉಪನಿರ್ದೇಶಕರು
-ಭಾರತಿ ಸಜ್ಜನ್
ಟಾಪ್ ನ್ಯೂಸ್
